ಬಾದಾಮಿಯನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪೋಷಕಾಂಶಗಳ ಖಜಾನೆಯಾಗಿರುವ ಬಾದಮಿಯನ್ನು ಅನೇಕ ಜನರು ಪ್ರತಿದಿನ ಸೇವನೆ ಮಾಡುತ್ತಾರೆ. ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಬಾದಮಿಯನ್ನು ಪ್ರತಿನಿತ್ಯ ತಿನ್ನುವುದರಿಂದ ಹೃದಯವನ್ನು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದೆ ಮತ್ತು ಇದು ರೋಗ ನಿರೋಧಕಶಕ್ತಿಯನ್ನು ಬಲಪಡಿಸುವ ಮೂಲಕ ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ. ಮಕ್ಕಳ ಮೆದುಳಿನ ಬೆಳವಣಿಗೆಗೂ ಬಾದಮಿ ಸಹಕಾರಿ. ಹೀಗಿದ್ದರೂ ಬಾದಮಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಅಭ್ಯಾಸವು ಆರೋಗ್ಯಕ್ಕೆ ಅಷ್ಟೇನು ಒಳ್ಳೆಯದಲ್ಲ. ಹಾಗಾದರೆ ದಿನಕ್ಕೆ ಎಷ್ಟು ಪ್ರಮಾಣದ ಬಾದಾಮಿ ತಿಂದರೆ ಸೂಕ್ತ ಎಂಬುದನ್ನು ನೋಡೋಣ.
ತಜ್ಞರ ಪ್ರಕಾರ ಒಬ್ಬ ವ್ಯಕ್ತಿಯು ದಿನಕ್ಕೆ 30 ರಿಂದ 50 ಗ್ರಾಂ ಬಾದಮಿ ತಿಂದರೆ ಸಾಕಾಗುತ್ತದೆ. ಅಂದರೆ ಒಂದು ಮುಷ್ಟಿ ಅಥವಾ 8 ರಿಂದ 10 ಬಾದಾಮಿಗಳನ್ನು ತಿಂದರೆ ಸಾಕಾಗುತ್ತದೆ. 4 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ದಿನಕ್ಕೆ 3 ರಿಂದ 4 ಬಾದಾಮಿ ತಿನ್ನಿಸಬಹುದು. ಅದರಲ್ಲೂ ನೆನೆಸಿದ ಬಾದಮಿ ತಿಂದರೆ ಹೆಚ್ಚು ಪ್ರಯೋಜನಗಳನ್ನು ಪಡೆಯಬಹುದು. 50 ಗ್ರಾಂ ಬಾದಾಮಿಯಲ್ಲಿ ಸುಮಾರು 300 ಗ್ರಾಂ ಕ್ಯಾಲೋರಿಗಳಿವೆ. ಮತ್ತು ಇದು 150 ಗ್ರಾಂ ಕಾರ್ಬೋಹೈಡ್ರೇಟ್, 12 ಗ್ರಾಂ ಆರೋಗ್ಯಕರ ಕೊಬ್ಬು ಮತ್ತು 6 ಗ್ರಾಂ ಪ್ರೋಟೀನ್ಗಳನ್ನು ಹೊಂದಿದೆ.
ನೀವು ಯಾವಾಗ ಬೇಕಾದರೂ ಬಾದಮಿ ತಿನ್ನಬಹುದು. ಆದರೆ ಅದರ ಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳಲು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾದಮಿ ತಿನ್ನಲು ಸಲಹೆ ನೀಡಲಾಗುತ್ತದೆ. ಬಾದಾಮಿಯು ಸ್ವಲ್ಪ ಬಿಸಿ ಸ್ವಭಾವವನ್ನು ಹೊಂದಿರುವುದರಿಂದ, ಅದನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ತಿನ್ನುವುದು ಹೆಚ್ಚು ಸೂಕ್ತವಾಗಿದೆ.
ಇದನ್ನೂ ಓದಿ: ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ ಬಾದಾಮಿ ತಿನ್ನಿ
ಮೂತ್ರಪಿಂಡದ ಕಲ್ಲು: ಬಾದಾಮಿಯಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು, ಫೈಬರ್, ವಿಟಮಿನ್ ಇತ್ಯಾದಿ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದೆ. ಜೊತೆಗೆ ಬಾದಾಮಿಯಲ್ಲಿ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುವ ಆಕ್ಸೇಟ್ ಎಂಬ ಸಂಯುಕ್ತವಿದೆ. ಈ ಕಾರಣ ಬಾದಾಮಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದಲ್ಲಿ ಆಕ್ಸಲೇಟ್ ಪ್ರಮಾಣದ ಹೆಚ್ಚಾಗುತ್ತದೆ. ಇದು ಮೂತ್ರಪಿಂಡಗಳಲ್ಲಿ ಸಂಗ್ರಹಗೊಂಡು ಕಿಡ್ನಿ ಸ್ಟೋನ್ ಉಂಂಟಾಗಲು ಕಾರಣವಾಗುತ್ತದೆ.
ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು: ಬಾದಾಮಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ. ಆದರೆ ಅವುಗಳ ಅತಿಯಾದ ಸೇವನೆ ಜೀರ್ಣಾಂಗ ವ್ಯವಸ್ಥೆಗೆ ಹಾನಿಕಾರಕವಾಗಿದೆ. ಬಾದಾಮಿಯಲ್ಲಿ ನಾರಿನಂಶ ಹೆಚ್ಚಿದ್ದು, ಅಧಿಕ ಪ್ರಮಾಣದಲ್ಲಿ ನಾರಿನಂಶವನ್ನು ಸೇವಿಸುವುದರಿಂದ ಗ್ಯಾಸ್, ಹೊಟ್ಟೆ ನೋವು, ಅಜೀರ್ಣದಂತಹ ಹೊಟ್ಟೆ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ ಬಾದಾಮಿಯಲ್ಲಿರುವ ಆಕ್ಸಲೇಟ್ ಅಂಶವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು.
ಬೊಜ್ಜು ಹೆಚ್ಚಾಗಲು ಕಾರಣವಾಗಬಹುದು: ಬಾದಾಮಿಯಲ್ಲಿ ಹೆಚ್ಚಿನ ಕೊಬ್ಬು ಮತ್ತು ಕ್ಯಾಲೋರಿಗಳಿವೆ. ಆದ ಕಾರಣ ಬಾದಾಮಿಯನ್ನು ಹೆಚ್ಚು ಸೇವಿಸಿದಾಗ, ಕ್ಯಾಲೋರಿ ಸೇವನೆಯು ಗಮನಾರ್ಹವಾಗಿ ಹೆಚ್ಚಾಗುತ್ತದೆ, ಕ್ಯಾಲೋರಿ ಸೇವನೆಯು ಹೆಚ್ಚಾದಾಗ, ದೇಹ ತೂಕ ಕೂಡಾ ಹೆಚ್ಚಾಗುತ್ತದೆ. ಹಾಗಾಗಿ ಬಾದಾಮಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ