
ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ಸಮೃದ್ಧ ಆಹಾರಗಳು ಬಹಳ ಮುಖ್ಯ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಕಂಪ್ಯೂಟರ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಹೆಚ್ಚಾಗಿದೆ. ಇದರಿಂದ ಹಲವರಲ್ಲಿ ಕಣ್ಣಿನ ಆಯಾಸ, ಒಣಗುವಿಕೆ, ತಲೆನೋವು ಮತ್ತು ದೃಷ್ಟಿ ಮಂಜಾಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಪದ್ಧತಿ, ನಿದ್ರೆ ಮತ್ತು ದೈನಂದಿನ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ.
ದೀರ್ಘಕಾಲ ಮೊಬೈಲ್ ಅಥವಾ ಕಂಪ್ಯೂಟರ್ ಪರದೆಯನ್ನು ನೋಡುವುದರಿಂದ ಕಣ್ಣುಗಳಲ್ಲಿ ಆಯಾಸ ಮತ್ತು ಕಣ್ಣು ಒಣಗಬಹುದು. ವಿಶೇಷವಾಗಿ ಕಡಿಮೆ ಬೆಳಕಿನಲ್ಲಿ ಸಣ್ಣ ಅಕ್ಷರಗಳನ್ನು ಹೆಚ್ಚು ಹೊತ್ತು ಓದುವುದು ಕಣ್ಣುಗಳಿಗೆ ತೊಂದರೆ ಉಂಟುಮಾಡಬಹುದು. ಆದ್ದರಿಂದ ಅನಗತ್ಯ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು. ಕಂಪ್ಯೂಟರ್ ಬಳಸುವಾಗ ಪ್ರತಿ 20 ನಿಮಿಷಗಳಿಗೊಮ್ಮೆ 20 ಅಡಿ ದೂರದಲ್ಲಿರುವ ವಸ್ತುವನ್ನು ಕನಿಷ್ಠ 20 ಸೆಕೆಂಡುಗಳ ಕಾಲ ನೋಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದನ್ನು 20-20-20 ನಿಯಮ ಎಂದು ಕರೆಯುತ್ತಾರೆ.
ಕಣ್ಣಿನ ಆರೋಗ್ಯಕ್ಕೆ ಉತ್ತಮ ನಿದ್ರೆ ಕೂಡ ಮುಖ್ಯವಾಗಿದೆ. ನಿದ್ರೆಯ ಕೊರತೆಯಿಂದ ಕಣ್ಣುಗಳಲ್ಲಿ ಉರಿ, ಒಣಗುವಿಕೆ ಮತ್ತು ಆಯಾಸ ಕಾಣಿಸಿಕೊಳ್ಳಬಹುದು. ಪ್ರತಿದಿನ ಕನಿಷ್ಠ 7ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಲು ಪ್ರಯತ್ನಿಸಬೇಕು. ಮಕ್ಕಳಿಗೂ ವಯಸ್ಸಿಗೆ ಅನುಗುಣವಾಗಿ ಸಾಕಷ್ಟು ನಿದ್ರೆ ದೊರೆಯುವಂತೆ ನೋಡಿಕೊಳ್ಳಬೇಕು.
ಇದನ್ನೂ ಓದಿ: ಚಳಿಗಾಲದಲ್ಲಿ ಸೀತಾಫಲ ತಿನ್ನುತ್ತಿದ್ದೀರಾ? ಹೃದಯದಿಂದ ರೋಗನಿರೋಧಕ ಶಕ್ತಿವರೆಗೆ ಹಲವು ಪ್ರಯೋಜನಗಳು!
ಕಣ್ಣಿನ ಆರೋಗ್ಯ ಕಾಪಾಡಲು ವಿಟಮಿನ್ ಎ ಪ್ರಮುಖ ಪೋಷಕಾಂಶವಾಗಿದೆ. ಇದು ಕಣ್ಣಿನ ರೆಟಿನಾದ ಸಾಮಾನ್ಯ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಕ್ಯಾರೆಟ್, ನುಗ್ಗೆ ಸೊಪ್ಪು, ಕರಿಬೇವು, ಪಾಲಕ್ ಸೊಪ್ಪು, ಸಿಹಿ ಗೆಣಸು ಮತ್ತು ಕುಂಬಳಕಾಯಿಯಲ್ಲಿ ಬೀಟಾ ಕ್ಯಾರೋಟಿನ್ ದೊರೆಯುತ್ತದೆ. ದೇಹವು ಇದನ್ನು ವಿಟಮಿನ್ ಎ ಆಗಿ ಪರಿವರ್ತಿಸಿಕೊಳ್ಳುತ್ತದೆ. ನುಗ್ಗೆ ಸೊಪ್ಪು ಇಷ್ಟವಿಲ್ಲದವರು ಅದನ್ನು ಬೇಳೆ, ಪಲ್ಯ ಅಥವಾ ಚಪಾತಿ ಹಿಟ್ಟಿನಲ್ಲಿ ಸೇರಿಸಿಕೊಂಡು ಸೇವಿಸಬಹುದು. ಪ್ರತಿದಿನದ ಆಹಾರದಲ್ಲಿ ವಿವಿಧ ಬಗೆಯ ಸೊಪ್ಪು ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳುವುದು ಉತ್ತಮ.
ಕಿತ್ತಳೆ, ಪಪ್ಪಾಯಿ, ಬೆರ್ರಿ ಹಣ್ಣುಗಳು, ಬಾದಾಮಿ ಮತ್ತು ವಾಲ್ನಟ್‌ಗಳಂತಹ ಆಹಾರಗಳಲ್ಲಿ ವಿವಿಧ ಜೀವಸತ್ವಗಳು ಹಾಗೂ ಉತ್ಕರ್ಷಣ ನಿರೋಧಕಗಳು ದೊರೆಯುತ್ತವೆ. ಇವು ಒಟ್ಟಾರೆ ಆರೋಗ್ಯಕ್ಕೆ ಸಹಕಾರಿಯಾಗುತ್ತವೆ. ಸಮತೋಲಿತ ಆಹಾರ ಪದ್ಧತಿಯನ್ನು ಅನುಸರಿಸುವುದು ಮುಖ್ಯ.
ಗಮನಿಸಬೇಕಾದ ವಿಷಯ: ಪೌಷ್ಟಿಕ ಆಹಾರ ಸೇವನೆಯಿಂದ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ದೃಷ್ಟಿ ದೋಷವನ್ನು ಆಹಾರದಿಂದ ಮಾತ್ರ ಸಂಪೂರ್ಣವಾಗಿ ಸರಿಪಡಿಸಲು ಸಾಧ್ಯವಿಲ್ಲ. ಕನ್ನಡಕದ ಅಗತ್ಯವಿದ್ದರೆ ಅದನ್ನು ವೈದ್ಯರ ಸಲಹೆಯಂತೆ ಬಳಸಬೇಕು. ದೃಷ್ಟಿ ಮಂಜಾಗುತ್ತಿದ್ದರೆ ನೇತ್ರ ತಜ್ಞರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ