
ಬಾಯಿಯಲ್ಲಿ ಹುಣ್ಣುಗಳು ಕಾಣಿಸಿಕೊಂಡಾಗ ಮಾತನಾಡಲು, ಆಹಾರ ಸೇವಿಸಲು ಮತ್ತು ನೀರು ಕುಡಿಯಲೂ ಕಷ್ಟವಾಗುತ್ತದೆ. ಕೆಲವೊಮ್ಮೆ ಹುಣ್ಣುಗಳಿಂದ ಉರಿ, ನೋವು ಮತ್ತು ಅಸ್ವಸ್ಥತೆ ಉಂಟಾಗುತ್ತದೆ. ಇಂತಹ ಸಮಸ್ಯೆಗಳಿಗೆ ಸರಿಯಾದ ಆಹಾರ ಪದ್ಧತಿ ಮತ್ತು ಬಾಯಿಯ ಸ್ವಚ್ಛತೆಯ ಜೊತೆಗೆ ಕೆಲವು ಮನೆಮದ್ದುಗಳ ಬಗ್ಗೆಯೂ ಜನರು ಆಸಕ್ತಿ ತೋರಿಸುತ್ತಾರೆ. ಅವುಗಳಲ್ಲಿ ವೀಳ್ಯದೆಲೆಯೂ ಒಂದು. ಆಯುರ್ವೇದದಲ್ಲಿ ಮಹತ್ವ ಪಡೆದಿರುವ ವೀಳ್ಯದೆಲೆಗೆ ಕೆಲವು ನೈಸರ್ಗಿಕ ಔಷಧೀಯ ಗುಣಗಳಿವೆ. ಹಾಗಾದರೆ ಇದರ ಪ್ರಯೋಜನಗಳ ಕುರಿತ ಮಾಹಿತಿ ಸ್ಟೋರಿಯಲ್ಲಿದೆ.
ಸಾಮಾನ್ಯವಾಗಿ ವೀಳ್ಯದೆಲೆಯಲ್ಲಿ ವಿವಿಧ ನೈಸರ್ಗಿಕ ಸಸ್ಯ ಸಂಯುಕ್ತಗಳು ಕಂಡುಬರುತ್ತವೆ. ಇವುಗಳಲ್ಲಿ ಕೆಲವು ಸಂಯುಕ್ತಗಳು ಪ್ರಯೋಗಾಲಯದ ಅಧ್ಯಯನಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿರೋಧಕ ಗುಣಗಳನ್ನು ತೋರಿಸಿವೆ. ಹೀಗಾಗಿ ಬಾಯಿಯ ಆರೋಗ್ಯಕ್ಕೆ ವೀಳ್ಯದೆಲೆ ಹೇಗೆ ಸಹಾಯ ಮಾಡಬಹುದು ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಕೆಲವರಿಗೆ ಇದು ಬಾಯಿ ಹಣ್ಣು ಕಡಿಮೆ ಮಾಡಲು ಸಹಾಯ ಮಾಡಬಹುದು.
ವೀಳ್ಯದೆಲೆಯಲ್ಲಿರುವ ಕೆಲವು ಸಸ್ಯ ಸಂಯುಕ್ತಗಳು ಸೂಕ್ಷ್ಮಜೀವಿಗಳ ವಿರುದ್ಧ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಅಲ್ಲದೆ, ಉರಿಯೂತಕ್ಕೆ ಸಂಬಂಧಿಸಿದ ಕೆಲವು ಪ್ರಕ್ರಿಯೆಗಳ ಮೇಲೂ ಪರಿಣಾಮ ಬೀರಬಹುದು. ಆದರೆ ಬಾಯಿಹುಣ್ಣಿನಿಂದ ಉಂಟಾಗುವ ನೋವು ಮತ್ತು ಉರಿಯನ್ನು ಕಡಿಮೆ ಮಾಡುವಲ್ಲಿ ಇದರ ಪರಿಣಾಮಕಾರಿತ್ವ ಇನ್ನೂ ಸ್ಪಷ್ಟವಾಗಿ ಸಾಬೀತಾಗಿಲ್ಲ. ತಾಜಾ ವೀಳ್ಯದೆಲೆ ಬಾಯಿಯ ದುರ್ವಾಸನೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿ ತಾಜಾತನದ ಅನುಭವ ನೀಡಬಹುದು. ಆದರೂ ಬಾಯಿಯ ಸ್ವಚ್ಛತೆಯನ್ನು ಕಾಪಾಡಲು ಹಲ್ಲುಜ್ಜುವುದು ಮತ್ತು ನಾಲಿಗೆಯನ್ನು ಸ್ವಚ್ಛಗೊಳಿಸುವುದು ಮುಖ್ಯ.
ಇದನ್ನೂ ಓದಿ: ಚಳಿಗಾಲದಲ್ಲಿ ಸೀತಾಫಲ ತಿನ್ನುತ್ತಿದ್ದೀರಾ? ಹೃದಯದಿಂದ ರೋಗನಿರೋಧಕ ಶಕ್ತಿವರೆಗೆ ಹಲವು ಪ್ರಯೋಜನಗಳು!
ವೀಳ್ಯದೆಲೆಯನ್ನು ಬಳಸುವುದಾದರೆ ಸ್ವಚ್ಛವಾಗಿ ತೊಳೆದ ತಾಜಾ ಎಲೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ತಂಬಾಕು, ಸುಣ್ಣ, ಅಡಿಕೆ ಅಥವಾ ಇತರ ರಾಸಾಯನಿಕ ಪದಾರ್ಥಗಳನ್ನು ಸೇರಿಸಿದ ಪಾನ್ ಸೇವಿಸಬಾರದು. ಇವು ಬಾಯಿಯ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಕೆಲವರು ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ ತಣ್ಣಗಾದ ನಂತರ ಆ ನೀರಿನಿಂದ ಬಾಯಿ ಮುಕ್ಕಳಿಸುತ್ತಾರೆ. ಇದು ಕೆಲವರಿಗೆ ಹುಣ್ಣು ಕಡಿಮೆ ಮಾಡುವುದಕ್ಕೆ ಸಹಾಯ ಮಾಡಬಹುದು ಆದರೆ ಇದು ಬಾಯಿಹುಣ್ಣಿಗೆ ಸಾಬೀತಾದ ಚಿಕಿತ್ಸೆಯಲ್ಲ. ಕಿರಿಕಿರಿ ಉಂಟಾದರೆ ಬಳಸುವುದನ್ನು ನಿಲ್ಲಿಸಬೇಕು.
ಸಾಮಾನ್ಯವಾಗಿ ಬಾಯಿಹುಣ್ಣುಗಳು ಒಂದರಿಂದ ಎರಡು ವಾರಗಳಲ್ಲಿ ಕಡಿಮೆಯಾಗಬಹುದು. ಆದರೆ ಎರಡು ವಾರಗಳಿಗೂ ಹೆಚ್ಚು ಕಾಲ ಹುಣ್ಣು ಉಳಿದರೆ, ಪದೇಪದೇ ಕಾಣಿಸಿಕೊಂಡರೆ, ತೀವ್ರ ನೋವು ಅಥವಾ ಜ್ವರ ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ವೀಳ್ಯದೆಲೆಯನ್ನು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಿ ಬಳಸಬಾರದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ