
ಪಾದಗಳಲ್ಲಿ ಉರಿ (Burning Feet): ರಾತ್ರಿ ಮಲಗುವ ಸಮಯದಲ್ಲಿ ಪಾದಗಳ ಅಡಿಭಾಗದಲ್ಲಿ ಉರಿ, ಅತಿಯಾದ ಬಿಸಿ, ಜುಮ್ಮೆನಿಸುವಿಕೆ ಅಥವಾ ಸೂಜಿಯಿಂದ ಚುಚ್ಚಿದಂತಹ ನೋವು ಕಾಣಿಸಿಕೊಳ್ಳುತ್ತಿದೆಯೇ ಹಾಗಾದರೆ ನೀವು ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಅನೇಕರು ಇದನ್ನು ದೇಹದ ಉಷ್ಣತೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಪದೇಪದೇ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಎಚ್ಚರಿಕೆ ವಹಿಸಬೇಕು. ವೈದ್ಯಕೀಯವಾಗಿ ಇದನ್ನು ಬರ್ನಿಂಗ್ ಫೀಟ್ ಸಿಂಡ್ರೋಮ್ (Burning Feet Syndrome) ಎಂದು ಕರೆಯಲಾಗುತ್ತದೆ. ಮಧುಮೇಹ, ನರಗಳ ಸಮಸ್ಯೆ ಹಾಗೂ ಪೌಷ್ಟಿಕಾಂಶದ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಈ ಸಮಸ್ಯೆ ಉಂಟಾಗಬಹುದು.
ಪಾದಗಳಲ್ಲಿ ಉರಿ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳಲ್ಲಿ ಮಧುಮೇಹವೂ ಒಂದು. ರಕ್ತದಲ್ಲಿನ ಸಕ್ಕರೆ ಪ್ರಮಾಣ ದೀರ್ಘಕಾಲ ಹೆಚ್ಚಾಗಿದ್ದರೆ ನರಗಳಿಗೆ ಹಾನಿಯಾಗಬಹುದು. ಇದನ್ನು ಡಯಾಬಿಟಿಕ್ ನ್ಯೂರೋಪತಿ (Diabetic Neuropathy) ಎಂದು ಕರೆಯುತ್ತಾರೆ. ಇದರಿಂದ ಪಾದಗಳಲ್ಲಿ ಉರಿ, ಮರಗಟ್ಟುವಿಕೆ, ಜುಮ್ಮೆನಿಸುವಿಕೆ ಮತ್ತು ನೋವು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ರಾತ್ರಿ ಸಮಯದಲ್ಲಿ ಈ ಲಕ್ಷಣಗಳು ಹೆಚ್ಚು ಕಾಡಬಹುದು.
ದೇಹದ ನರಗಳ ಆರೋಗ್ಯ ಮತ್ತು ಕಾರ್ಯನಿರ್ವಹಣೆಗೆ ವಿಟಮಿನ್ ಬಿ12 ಅತ್ಯಗತ್ಯ. ಈ ಜೀವಸತ್ವದ ಕೊರತೆಯಿಂದ ನರಗಳಿಗೆ ಹಾನಿಯಾಗಿ ಪಾದಗಳಲ್ಲಿ ಉರಿ, ಮರಗಟ್ಟುವಿಕೆ ಮತ್ತು ಸೂಜಿ ಚುಚ್ಚಿದಂತಹ ಅನುಭವ ಉಂಟಾಗಬಹುದು. ಆದ್ದರಿಂದ ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರ ಸಲಹೆಯಂತೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ.
ಮಧುಮೇಹ ಮತ್ತು ವಿಟಮಿನ್ ಬಿ12 ಕೊರತೆಯಲ್ಲದೆ, ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆ ಕಡಿಮೆಯಾಗುವುದು, ಮೂತ್ರಪಿಂಡಗಳ ಕಾಯಿಲೆಗಳು ಹಾಗೂ ಅತಿಯಾದ ಮದ್ಯಪಾನ ಕೂಡ ನರಗಳ ಮೇಲೆ ಪರಿಣಾಮ ಬೀರಬಹುದು. ವಿಶೇಷವಾಗಿ ದೀರ್ಘಕಾಲ ಮದ್ಯಪಾನ ಮಾಡುವುದರಿಂದ ನರಗಳಿಗೆ ಹಾನಿಯಾಗಿ ಪಾದಗಳಲ್ಲಿ ಉರಿ ಮತ್ತು ನೋವು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಪಾದಗಳಲ್ಲಿ ಉರಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದರೆ ನಿರ್ಲಕ್ಷಿಸಬಾರದು. ಸ್ವಯಂ ಔಷಧಿ ತೆಗೆದುಕೊಳ್ಳುವ ಬದಲು ವೈದ್ಯರನ್ನು ಸಂಪರ್ಕಿಸಬೇಕು. ಅಗತ್ಯಕ್ಕೆ ಅನುಗುಣವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ, ವಿಟಮಿನ್ ಬಿ12, ಥೈರಾಯ್ಡ್ ಮತ್ತು ಮೂತ್ರಪಿಂಡಗಳ ಕಾರ್ಯಕ್ಷಮತೆಯ ಪರೀಕ್ಷೆಗಳನ್ನು ಮಾಡಿಸಬಹುದು. ನರಗಳ ಕಾರ್ಯನಿರ್ವಹಣೆಯನ್ನು ತಿಳಿಯಲು ವಿಶೇಷ ಪರೀಕ್ಷೆಗಳನ್ನೂ ಸೂಚಿಸಬಹುದು. ಪಾದಗಳಲ್ಲಿ ಗಾಯ, ಊತ ಅಥವಾ ಸೋಂಕಿನ ಲಕ್ಷಣಗಳಿದ್ದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಒಟ್ಟಿನಲ್ಲಿ, ರಾತ್ರಿ ಪಾದಗಳಲ್ಲಿ ಉರಿ ಕಾಣಿಸಿಕೊಳ್ಳುವುದನ್ನು ಕೇವಲ ದೇಹದ ಉಷ್ಣತೆ ಎಂದು ಭಾವಿಸಬಾರದು. ಅದರ ಹಿಂದಿನ ನಿಖರ ಕಾರಣವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ