ಶಂಖಪುಷ್ಪ ಹೂವಿನ ಚಹಾ ಕುಡಿಯುವ ಅಭ್ಯಾಸ ನಿಮಗಿದೆಯೇ? ಇಲ್ಲಿವೆ ಕೆಲವು ಆರೋಗ್ಯ ಮಾಹಿತಿ

ಶಂಖಪುಷ್ಪ ಹೂವು ತನ್ನ ಆಕರ್ಷಕ ನೀಲಿ ಬಣ್ಣದ ಜೊತೆಗೆ ಉತ್ಕರ್ಷಣ ನಿರೋಧಕ ಗುಣಗಳಿಂದಲೂ ಗಮನ ಸೆಳೆಯುತ್ತದೆ. ಇದರಲ್ಲಿ ಆಂಥೋಸಯಾನಿನ್‌ಗಳಂತಹ ನೈಸರ್ಗಿಕ ಸಂಯುಕ್ತಗಳಿವೆ. ತೂಕ ನಿಯಂತ್ರಣ, ಕೊಬ್ಬಿನ ಚಯಾಪಚಯ ಮತ್ತು ಕ್ಯಾನ್ಸರ್ ಕೋಶಗಳ ಕುರಿತು ಕೆಲವು ಸಂಶೋಧನೆಗಳು ನಡೆದಿವೆ. ಆದರೆ ಇವುಗಳ ಆರೋಗ್ಯ ಪ್ರಯೋಜನಗಳಿಗೆ ಮಾನವರಲ್ಲಿ ಇನ್ನಷ್ಟು ವೈಜ್ಞಾನಿಕ ಅಧ್ಯಯನಗಳ ಅಗತ್ಯವಿದೆ. ಶಂಖು ಹೂವಿನ ಚಹಾವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಶಂಖಪುಷ್ಪ ಹೂವಿನ ಚಹಾ ಕುಡಿಯುವ ಅಭ್ಯಾಸ ನಿಮಗಿದೆಯೇ? ಇಲ್ಲಿವೆ ಕೆಲವು ಆರೋಗ್ಯ ಮಾಹಿತಿ
Butterfly Pea Tea Benefits
Image Credit source: Getty Images

Updated on: Nov 10, 2026 | 5:56 PM

ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ. ದೇಹದಲ್ಲಿ ಅತಿಯಾದ ಕೊಬ್ಬು ಸಂಗ್ರಹವಾಗುವುದು ಮಾತ್ರವಲ್ಲದೆ, ಯಕೃತ್ತಿನಲ್ಲಿ ಕೊಬ್ಬು ಹೆಚ್ಚಾಗುವುದು ಮತ್ತು ಕೊಲೆಸ್ಟ್ರಾಲ್ ಮಟ್ಟದಲ್ಲಿ ಬದಲಾವಣೆ ಉಂಟಾಗುವುದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ಪ್ರಕೃತಿಯಲ್ಲಿ ದೊರೆಯುವ ಕೆಲವು ಹೂವುಗಳು ಮತ್ತು ಸಸ್ಯಗಳ ಆರೋಗ್ಯ ಗುಣಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ. ಅವುಗಳಲ್ಲಿ ಪ್ರಮುಖವಾದದ್ದು ನೀಲಿ ಬಣ್ಣದ ಶಂಖಪುಷ್ಪ ಹೂವು. ಇವುಗಳಿಂದ ಯಾವ ರೀತಿ ಪ್ರಯೋಜನಗಳಿವೆ ಮತ್ತು ಯಾರಿಗೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಶಂಖಪುಷ್ಪ ಹೂವಿನಲ್ಲಿರುವ ಪೋಷಕಾಂಶಗಳು;

ಸಾಮಾನ್ಯವಾಗಿ ಶಂಖಪುಷ್ಪ ಹೂವನ್ನು ಇಂಗ್ಲಿಷ್‌ನಲ್ಲಿ ಬಟರ್‌ಫ್ಲೈ ಪೀ ಫ್ಲವರ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಆಂಥೋಸಯಾನಿನ್‌ಗಳು ಎಂಬ ನೈಸರ್ಗಿಕ ಸಸ್ಯ ವರ್ಣದ್ರವ್ಯಗಳಿವೆ. ಇವು ಹೂವಿಗೆ ಆಕರ್ಷಕ ನೀಲಿ ಬಣ್ಣವನ್ನು ನೀಡುತ್ತವೆ. ಜೊತೆಗೆ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ದೇಹದ ಜೀವಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡಬಹುದು.

Loading...

ತೂಕ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆಯೇ?

ಕೆಲವು ಪ್ರಯೋಗಾಲಯ ಮತ್ತು ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನಗಳಲ್ಲಿ ಶಂಖಪುಷ್ಪ ಹೂವಿನಲ್ಲಿರುವ ಸಂಯುಕ್ತಗಳು ಕೊಬ್ಬಿನ ಚಯಾಪಚಯ ಕ್ರಿಯೆ ಮತ್ತು ಕೊಲೆಸ್ಟ್ರಾಲ್‌ಗೆ ಸಂಬಂಧಿಸಿದ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಬಹುದು ಎಂಬ ಅಂಶ ಕಂಡುಬಂದಿದೆ. ಆದರೆ ಮನುಷ್ಯರಲ್ಲಿ ತೂಕ ಇಳಿಸುವಲ್ಲಿ ಇದು ನೇರವಾಗಿ ಪರಿಣಾಮಕಾರಿ ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ. ಆದ್ದರಿಂದ ಇದನ್ನು ಬೊಜ್ಜು ನಿವಾರಣೆಯ ಔಷಧವೆಂದು ಪರಿಗಣಿಸಬಾರದು.

ಇದನ್ನೂ ಓದಿ: ಫೈಬರ್ ಅಂಶದ ಕೊರತೆ ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವೇ? ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ

ಕ್ಯಾನ್ಸರ್ ತಡೆಗಟ್ಟುವಲ್ಲಿ ಪಾತ್ರವೇನು?

ಶಂಖಪುಷ್ಪ ಹೂವಿನಲ್ಲಿರುವ ಕೆಲವು ನೈಸರ್ಗಿಕ ಸಂಯುಕ್ತಗಳ ಕುರಿತು ಕ್ಯಾನ್ಸರ್ ಕೋಶಗಳ ಮೇಲೆ ಪ್ರಯೋಗಾಲಯ ಮಟ್ಟದಲ್ಲಿ ಸಂಶೋಧನೆಗಳು ನಡೆದಿವೆ. ಕೆಲವು ಅಧ್ಯಯನಗಳಲ್ಲಿ ಕೋಶಗಳ ಬೆಳವಣಿಗೆಯ ಮೇಲೆ ಪರಿಣಾಮ ಕಂಡುಬಂದಿದೆ. ಆದರೆ ಈ ಫಲಿತಾಂಶಗಳು ಮನುಷ್ಯರಲ್ಲಿ ಕ್ಯಾನ್ಸರ್ ತಡೆಗಟ್ಟುತ್ತದೆ ಅಥವಾ ಗುಣಪಡಿಸುತ್ತದೆ ಎಂಬುದನ್ನು ಸಾಬೀತುಪಡಿಸುವುದಿಲ್ಲ.

ಶಂಖಪುಷ್ಪ ಹೂವಿನ ನೀರನ್ನು ತಯಾರಿಸುವ ವಿಧಾನ

ನಾಲ್ಕರಿಂದ ಐದು ಸ್ವಚ್ಛವಾದ ಶಂಖಪುಷ್ಪ ಹೂವುಗಳನ್ನು ತೆಗೆದುಕೊಳ್ಳಿ. ಒಂದು ಲೋಟ ನೀರನ್ನು ಕುದಿಸಿ, ಒಲೆಯಿಂದ ಕೆಳಗಿಳಿಸಿ. ಅದಕ್ಕೆ ಹೂವುಗಳನ್ನು ಹಾಕಿ ಸುಮಾರು 10ರಿಂದ 15 ನಿಮಿಷ ಮುಚ್ಚಿಡಿ. ನೀರು ನೀಲಿ ಬಣ್ಣಕ್ಕೆ ತಿರುಗಿದ ನಂತರ ಹೂವುಗಳನ್ನು ತೆಗೆದು ಸೋಸಿಕೊಳ್ಳಿ. ಬೇಕಿದ್ದರೆ ಸ್ವಲ್ಪ ನಿಂಬೆ ರಸ ಸೇರಿಸಬಹುದು. ಇದರಿಂದ ನೀರಿನ ಬಣ್ಣ ನೇರಳೆ ಬಣ್ಣಕ್ಕೆ ಬದಲಾಗಬಹುದು.

ಶಂಖಪುಷ್ಪ ಹೂವಿನ ಚಹಾವನ್ನು ಮಿತವಾಗಿ ಸೇವಿಸಬಹುದು. ಆದರೆ ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಔಷಧಗಳನ್ನು ಸೇವಿಸುತ್ತಿರುವವರು ಅಥವಾ ಆರೋಗ್ಯ ಸಮಸ್ಯೆ ಹೊಂದಿರುವವರು ವೈದ್ಯರ ಸಲಹೆ ಪಡೆಯುವುದು ಉತ್ತಮ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಉತ್ತಮ ಜೀವನಶೈಲಿಯೇ ತೂಕ ನಿಯಂತ್ರಣಕ್ಕೆ ಪ್ರಮುಖ ಮಾರ್ಗಗಳಾಗಿವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us