
ಹಾಲು ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಒದಗಿಸುವ ಪ್ರಮುಖ ಆಹಾರವಾಗಿದೆ. ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯ ಕಾಪಾಡಲು ಕ್ಯಾಲ್ಸಿಯಂ ಸಹಾಯ ಮಾಡಿದರೆ, ಸ್ನಾಯುಗಳ ಬೆಳವಣಿಗೆ ಮತ್ತು ದೇಹದ ಅಂಗಾಂಶಗಳ ದುರಸ್ತಿಗೆ ಪ್ರೋಟೀನ್ ಅಗತ್ಯ. ಆದರೆ ಹಾಲಿನ ಬೆಲೆ ಹೆಚ್ಚುತ್ತಿರುವುದರಿಂದ ಪ್ರತಿದಿನ ಹಾಲು ಖರೀದಿಸುವುದು ಕೆಲವರಿಗೆ ಕಷ್ಟವಾಗಬಹುದು. ಇಂತಹ ಸಂದರ್ಭದಲ್ಲಿ ಹಾಲಿನ ಜೊತೆಗೆ ಅಥವಾ ಅದರ ಬದಲಾಗಿ ಕೆಲವು ಕಡಿಮೆ ಬೆಲೆಯ ಆಹಾರಗಳನ್ನು ಸೇವಿಸುವ ಮೂಲಕ ಪೋಷಕಾಂಶಗಳ ಅಗತ್ಯವನ್ನು ಪೂರೈಸಿಕೊಳ್ಳಬಹುದು.
ಸಾಮಾನ್ಯವಾಗಿ ಮೊಸರು ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಎರಡನ್ನೂ ಒದಗಿಸುವ ಉತ್ತಮ ಆಹಾರವಾಗಿದೆ. ಮಧ್ಯಾಹ್ನದ ಊಟದೊಂದಿಗೆ ಮೊಸರು ಅಥವಾ ಮಜ್ಜಿಗೆಯನ್ನು ಸೇವಿಸಬಹುದು. ಕೆಲವರಿಗೆ ಹಾಲಿಗಿಂತ ಮೊಸರು ಸುಲಭವಾಗಿ ಜೀರ್ಣವಾಗಬಹುದು. ಸೋಯಾಬೀನ್‌ನಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಇರುತ್ತದೆ. ಇದನ್ನು ನೆನೆಸಿ ಬೇಯಿಸಿ, ಪಲ್ಯ ಅಥವಾ ಸಾಂಬಾರ್ ರೂಪದಲ್ಲಿ ಸೇವಿಸಬಹುದು. ಸೋಯಾ ಹಾಲು ಕೂಡ ಹಾಲಿಗೆ ಪರ್ಯಾಯವಾಗಬಹುದು. ಖರೀದಿಸುವಾಗ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸೇರಿಸಿರುವ ಸೋಯಾ ಹಾಲಿಗೆ ಆದ್ಯತೆ ನೀಡಬಹುದು.
ಕಪ್ಪು ಕಡಲೆ, ಹೆಸರುಬೇಳೆ, ಮಸೂರ ಬೇಳೆ ಮತ್ತು ತೊಗರಿಬೇಳೆ ಪ್ರೋಟೀನ್‌ನ ಉತ್ತಮ ಮೂಲಗಳಾಗಿವೆ. ಇವುಗಳನ್ನು ಪ್ರತಿದಿನದ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಕಪ್ಪು ಕಡಲೆಯನ್ನು ನೆನೆಸಿ ಬೇಯಿಸಿ ತಿನ್ನುವುದು ಉತ್ತಮ ಆಯ್ಕೆ. ಶೇಂಗಾ ಕೂಡ ಕಡಿಮೆ ಬೆಲೆಯಲ್ಲಿ ದೊರೆಯುವ ಪೌಷ್ಟಿಕ ಆಹಾರ. ಇದರಲ್ಲಿ ಪ್ರೋಟೀನ್ ಜೊತೆಗೆ ಆರೋಗ್ಯಕರ ಕೊಬ್ಬುಗಳೂ ಇರುತ್ತವೆ. ಹುರಿದ ಶೇಂಗಾ ಅಥವಾ ಶೇಂಗಾ ಚಟ್ನಿ ರೂಪದಲ್ಲಿ ಸೇವಿಸಬಹುದು.
ಇದನ್ನೂ ಓದಿ: ಪ್ರತಿದಿನ ಸೋಂಪು ನೀರು ಕುಡಿದರೆ ಏನಾಗುತ್ತದೆ? ಜೀರ್ಣಕ್ರಿಯೆಯಿಂದ ಚರ್ಮದ ಆರೋಗ್ಯದವರೆಗೆ ಪ್ರಯೋಜನಗಳು
ಎಳ್ಳಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಚಟ್ನಿ, ಉಂಡೆ ಅಥವಾ ಅಡುಗೆಗಳಲ್ಲಿ ಸೇರಿಸಿಕೊಳ್ಳಬಹುದು. ರಾಗಿಯೂ ಕ್ಯಾಲ್ಸಿಯಂ ಒದಗಿಸುವ ಉತ್ತಮ ಧಾನ್ಯವಾಗಿದೆ. ರಾಗಿ ಮುದ್ದೆ, ರೊಟ್ಟಿ, ದೋಸೆ ಅಥವಾ ರಾಗಿ ಗಂಜಿ ರೂಪದಲ್ಲಿ ಸೇವಿಸಬಹುದು.
ಹಾಲು ಕುಡಿಯದಿದ್ದರೂ ಸಮತೋಲಿತ ಆಹಾರದಿಂದ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಪಡೆಯಬಹುದು. ಮೊಸರು, ಸೋಯಾಬೀನ್, ಬೇಳೆಕಾಳುಗಳು, ಶೇಂಗಾ, ಎಳ್ಳು ಮತ್ತು ರಾಗಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಆದರೆ ಕ್ಯಾಲ್ಸಿಯಂ ದೇಹದಲ್ಲಿ ಸರಿಯಾಗಿ ಹೀರಿಕೊಳ್ಳಲು ವಿಟಮಿನ್ ಡಿ ಕೂಡ ಅಗತ್ಯ. ಆದ್ದರಿಂದ ಅದರ ಲಭ್ಯತೆಯ ಬಗ್ಗೆಯೂ ಗಮನಹರಿಸಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ