ಮಿದುಳಿನ ಆರೋಗ್ಯಕ್ಕೆ ಗಾಢ ನಿದ್ದೆ ಅತ್ಯಗತ್ಯ ಎಂಬುದನ್ನು ಅಮೆರಿಕದ ನಾರ್ತ್ವೆಸ್ಟರ್ನ್ ಯೂನಿವರ್ಸಿಟಿಯ ಅಧ್ಯಯನಕಾರರ ತಂಡ ಹೇಳಿದೆ. ಮಾನವರಂತೆ ನಿದ್ದೆಯ ಗುಣಲಕ್ಷಣಗಳನ್ನು ಹೊಂದಿರುವ ಹಣ್ಣಿನ ನೊಣಗಳ ಮಿದುಳಿನ ಚಟುವಟಿಕೆ ಮತ್ತು ವರ್ತನೆಯನ್ನು ಈ ಯೂನಿವರ್ಸಿಟಿಯ ಸಂಶೋಧಕರು ಅಧ್ಯಯನ ಮಾಡಿದ್ದರು. ಇದರ ವರದಿ ಸೈನ್ಸ್ ಅಡ್ವಾನ್ಸಸ್ ಜರ್ನಲ್ನಲ್ಲಿ ಪ್ರಕಟವಾಗಿದೆ. ಮಿದುಳಿನಲ್ಲಿ ಸಂಗ್ರಹವಾಗುವ ಅಪ್ರಯೋಜಕ ಅಂಶಗಳು ತೊಡೆದುಹಾಕಬೇಕು ಎಂದರೆ ಆಳವಾದ ನಿದ್ದೆ ಅಗತ್ಯವಿದೆ. ಮಿದುಳಿನ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸಿ, ಪುನಶ್ಚೇತನಗೊಳಿಸಲು ಆಳ ನಿದ್ದೆಯಿಂದ ಮಾತ್ರ ಸಾಧ್ಯ ಎಂದು ಸ್ಟಡಿಯಲ್ಲಿ ಉಲ್ಲೇಖಿಸಲಾಗಿದೆ.
ಮಿದುಳಲ್ಲಿರುವ ನಿಷ್ಪ್ರಯೋಜಕ ಅಂಶಗಳಲ್ಲಿ ವಿಷಕಾರಿ ಪ್ರೊಟೀನ್ ಇರುತ್ತದೆ. ಇದು ನ್ಯೂರೋ ಡಿಜೆನೆರೆಟಿವ್ ಕಾಯಿಲೆಗೆ ಕಾರಣವಾಗುತ್ತದೆ. ಹಾಗಾಗಿ ಅದನ್ನು ತೊಡೆದುಕೊಳ್ಳುವುದು ಅತ್ಯಂತ ಮುಖ್ಯ ಎಂದು ಸಂಶೋಧನಾ ತಂಡದ ಡಾ. ರವಿ ಅಲ್ಲಾಡಾ ತಿಳಿಸಿದ್ದಾರೆ. ಹಣ್ಣಿನ ನೊಣಗಳಿಗೂ-ಮನುಷ್ಯರಿಗೂ ಹೋಲಿಕೆ ಸಾಧ್ಯವಿಲ್ಲ. ಆದರೆ ನಿದ್ದೆ ಹಾಗೂ ಎಚ್ಚರ ಸ್ಥಿತಿಯ ಚಕ್ರವನ್ನು ನಿಯಂತ್ರಿಸುವ ನರಕೋಶ ವ್ಯವಸ್ಥೆ ಮಾನವರಂತೆಯೇ ಅವುಗಳಲ್ಲಿ ಇರುತ್ತದೆ. ಹಾಗಾಗಿ ಮನುಷ್ಯರ ನಿದ್ದೆ, ನ್ಯೂರೋ ಡಿಜೆನೆರೆಟಿವ್ ಕಾಯಿಲೆ ಅಥವಾ ಸಿರ್ಕಾಡಿಯನ್ ಲಯ (ನಿದ್ದೆ-ಎಚ್ಚರ ಸ್ಥಿತಿ ಚಕ್ರವನ್ನು ನಿಯಂತ್ರಿಸುವ ನೈಸರ್ಗಿಕ ಪ್ರಕ್ರಿಯೆ) ಸಂಬಂಧಪಟ್ಟಂತೆ ಯಾವುದೇ ಅಧ್ಯಯನವಿದ್ದರೂ ಹಣ್ಣಿನನೊಣಗಳ ಮೇಲೆ ಪ್ರಯೋಗ ನಡೆಸಬಹುದು. ಅಧ್ಯಯನಕ್ಕೆ ಒಳಪಡಿಸಬಹುದು ಎಂದು ಡಾ. ಅಲ್ಲಾಡಾ ತಿಳಿಸಿದ್ದಾರೆ.
ಪ್ರಸ್ತುತ ಸಂಶೋಧನೆಯಲ್ಲಿ ಹಣ್ಣಿನ ನೊಣಗಳ ಪ್ರೊಬೊಸ್ಕಿಸ್ ಎಕ್ಸ್ಟೆನ್ಷನ್ ಸ್ಲೀಪ್ (ಗಾಢ ನಿದ್ರಾವಸ್ಥೆ)ನ್ನು ಅಧ್ಯಯನ ಮಾಡಲಾಗಿತ್ತು. ಇದು ಮನುಷ್ಯರ ಮೂರನೇ ಹಂತದ ಅಂದರೆ ನಿಧಾನ ತರಂಗ ನಿದ್ದೆಗೆ (ಮನುಷ್ಯರಲ್ಲಿನ ಆಳವಾದ ನಿದ್ದೆ) ಸಮ. ಹೀಗೆ ನಿದ್ದೆಯಲ್ಲಿರುವ ನೊಣಗಳನ್ನು ಒಮ್ಮೆಲೆ ಎಬ್ಬಿಸಿದಾಗ ಅವು ಕಂಗಾಲಾದವು. ಅವುಗಳಲ್ಲಿ ಯಾವುದೇ ಸಾಮರ್ಥ್ಯವೂ ಇರಲಿಲ್ಲ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಅಲ್ಲದೆ, ಪ್ರತಿ ಜೀವಿಗಳಿಗೂ ನಿದ್ದೆ ಯಾಕೆ ಬೇಕು ಎಂಬುದು ಅಧ್ಯಯನದಿಂದ ಇನ್ನಷ್ಟು ಸ್ಪಷ್ಟವಾಯಿತು. ಈ ಗಾಢ ನಿದ್ದೆ ಮಿದುಳನ್ನು ಉತ್ತೇಜಿಸುತ್ತದೆ. ಅದರಲ್ಲಿರುವ ಅನಗತ್ಯ ಅಂಶಗಳನ್ನು ಹೋಗಲಾಡಿಸುತ್ತದೆ. ಹಾಗಾಗಿ ಮಿದುಳಿನ ಆರೋಗ್ಯಕ್ಕೆ ಗಾಢ ನಿದ್ದೆ ತುಂಬ ಅವಶ್ಯಕ ಎಂದು ಅಧ್ಯಯನ ವರದಿಯ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Viral Video: ಅಪ್ಪ-ಅಮ್ಮನ ವಾಟರ್ ಮ್ಯಾಜಿಕ್ ನೋಡಿ ಬಿದ್ದುಬಿದ್ದು ನಕ್ಕ ಮುದ್ದು ಬಾಲಕ; ಅವನ ನಗುವಿಗೆ ಮನಸೋತ ನೆಟ್ಟಿಗರು
ನಿಮಗೆ ಗೊತ್ತಾ ಮಧುಮೇಹದ ಅಪಾಯ ಈ ರಕ್ತದ ಗುಂಪಿನವರಿಗೇ ಜಾಸ್ತಿಯಂತೆ? ನಿಮ್ಮ ಬ್ಲಡ್ ಗ್ರೂಪ್ ಯಾವುದು ನೋಡಿಕೊಳ್ಳಿ !