ನಿಮಗೆ ಗೊತ್ತಾ ಮಧುಮೇಹದ ಅಪಾಯ ಈ ರಕ್ತದ ಗುಂಪಿನವರಿಗೇ ಜಾಸ್ತಿಯಂತೆ? ನಿಮ್ಮ ಬ್ಲಡ್ ಗ್ರೂಪ್ ಯಾವುದು ನೋಡಿಕೊಳ್ಳಿ !
ಒಟ್ಟಿನಲ್ಲಿ ಯಾವುದೇ ಕಾರಣಕ್ಕೆ, ಯಾವುದೇ ವಯಸ್ಸಿನಲ್ಲಿ ಯಾರಿಗಾದರೂ ಈ ಮಧುಮೇಹ ಬರಬಹುದು. ಬಾರದಂತೆ ಮುನ್ನೆಚ್ಚರಿಕೆ ವಹಿಸಿ. ಹಾಗೂ ಒಮ್ಮೆ ನಿಮ್ಮಲ್ಲಿ ಡಯಾಬಿಟಿಸ್ ಕಾಣಿಸಿಕೊಂಡರೆ ಜೀವನವೇ ಮುಗಿದುಹೋಯಿತು ಎಂದು ಯಾವ ಕಾರಣಕ್ಕೂ ಭಾವಿಸಬೇಡಿ.
ನಮ್ಮ ದೇಶದಲ್ಲಿ ಸುಮಾರು 70 ಮಿಲಿಯನ್ (7 ಕೋಟಿ) ಜನರು ಮಧುಮೇಹ (Diabetes)ದಿಂದ ಬಳಲುತ್ತಿದ್ದಾರೆ. ಒಂದು ಸಲ ಮಧುಮೇಹ ಬಂದರೆ ಅದು ಜೀವನಪರ್ಯಂತ ಇರುವ ಕಾಯಿಲೆ. ಇದು ನಮ್ಮ ಜೀವನಶೈಲಿ, ಆಹಾರ ಪದ್ಧತಿಯಿಂದಲೇ ಬರುವ ಆರೋಗ್ಯ ಸಮಸ್ಯೆಯಾಗಿದೆ. ಹಾಗೇ, ಒಮ್ಮೆ ಡಯಾಬಿಟಿಸ್ ಬಂತೆಂದರೆ ಅದನ್ನು ನಿಯಂತ್ರಣದಲ್ಲಿ ಇಡಲು ನಮ್ಮ ಲೈಫ್ಸ್ಟೈಲ್ ಬದಲಿಸಿಕೊಳ್ಳಬೇಕು ಎನ್ನುತ್ತಾರೆ ವೈದ್ಯರು.
ಆದರೆ ಅಧ್ಯಯನವೊಂದು ಇಂಟರೆಸ್ಟಿಂಗ್ ವಿಷಯವನ್ನು ಹೊರಹಾಕಿದೆ. 2014ರಲ್ಲಿ ಮಧುಮೇಹಕ್ಕೆ ಸಂಬಂಧಪಟ್ಟ ಅಧ್ಯಯನ ವರದಿಯೊಂದು ದಿ ಯುರೋಪಿಯನ್ ಅಸೋಸಿಯೇಟ್ ಆಫ್ ಜರ್ನಲ್ ಮ್ಯಾಗಜಿನ್ನಲ್ಲಿ ಪ್ರಕಟವಾಗಿತ್ತು. ಈ ಅಧ್ಯಯನದ ಪ್ರಕಾರ ಒ (0) ರಕ್ತದ ಗುಂಪಿನ ಜನರಿಗೆ ಮಧುಮೇಹದ ಅಪಾಯ ಕಡಿಮೆಯಂತೆ. ಒ ಹೊರತಾದ ಬೇರೆ ರಕ್ತದ ಗುಂಪು ಹೊಂದಿರುವವರಿಗೆ ಡಯಾಬಿಟಿಸ್ ರಿಸ್ಕ್ ಜಾಸ್ತಿ ಎಂದು ಹೇಳಲಾಗಿದೆ.
ರಕ್ತದ ಗುಂಪು ಮತ್ತು ಟೈಪ್ 2 ಡಯಾಬಿಟಿಸ್ ಒಂದಕ್ಕೊಂದು ಹೇಗೆ ತಳುಕು ಹಾಕಿಕೊಂಡಿವೆ ಎಂಬುದನ್ನು ಪತ್ತೆಹಚ್ಚಲು ಸುಮಾರು 80ಸಾವಿರ ಮಹಿಳೆಯರನ್ನು ಅಧ್ಯಯನದಲ್ಲಿ ಒಳಪಡಿಸಿಕೊಳ್ಳಲಾಗಿತ್ತು. ಇವರೆಲ್ಲರೂ ಬೇರೆಬೇರೆ ರಕ್ತದ ಗುಂಪಿನವರಾಗಿದರು. ಇವರಲ್ಲಿ 3553 ಮಹಿಳೆಯರಲ್ಲಿ ಟೈಪ್ 2 ಡಯಾಬಿಟಿಸ್ ಇರುವುದು ಪತ್ತೆಯಾಯಿತು ಮತ್ತು ಹೀಗೆ ಡಯಾಬಿಟಿಸ್ ಹೊಂದಿರುವವರಲ್ಲಿ ಹೆಚ್ಚಿನ ಪಾಲು ಒ ಹೊರತಾದ ರಕ್ತದ ಗುಂಪು ಹೊಂದಿರುವವರು ಎಂಬುದು ಅಧ್ಯಯನದಲ್ಲಿ ಸಾಬೀತಾಗಿದೆ.
0 ಬ್ಲಡ್ ಗ್ರುಪ್ ಹೊಂದಿರುವ ಮಹಿಳೆಯರಿಗಿಂದ ಎ ರಕ್ತದ ಗುಂಪಿನ ಮಹಿಳೆಯರಲ್ಲಿ ಡಯಾಬಿಟಿಸ್ ಅಪಾಯ ಶೇ.10ರಷ್ಟು ಜಾಸ್ತಿ ಇರುತ್ತದೆ. ಹಾಗೇ, ಬಿ ರಕ್ತದ ಗುಂಪಿನವರಲ್ಲಿ ಡಯಾಬಿಟಿಸ್ ರಿಸ್ಕ್ ಶೇ.21ರಷ್ಟು ಜಾಸ್ತಿ ಎಂದು ಸಂಶೋಧನೆಯಲ್ಲಿ ಗೊತ್ತಾಗಿದೆ. ಹಾಗೇ, ಇದನ್ನು ಒ ನೆಗೆಟಿವ್ ಬ್ಲಡ್ ಗ್ರೂಪ್ನೊಂದಿಗೂ ಹೋಲಿಕೆ ಮಾಡಿ ನೋಡಲಾಯಿತು. ಕೊನೆಗೂ ಬಿ ಪಾಸಿಟಿವ್ ಬ್ಲಡ್ ಗ್ರುಪ್ನ ಮಹಿಳೆಯರಲ್ಲೇ ಟೈಪ್ 2 ಡಯಾಬಿಟಿಸ್ ರಿಸ್ಕ್ ಜಾಸ್ತಿ ಎಂಬುದು ಸ್ಪಷ್ಟವಾಗಿದೆ ಎಂದು ಜರ್ನಲ್ ವರದಿ ಮಾಡಿದೆ.
ಬಿ ರಕ್ತದ ಗುಂಪಿನವರಿಗೇ ಅಪಾಯ ಹೆಚ್ಚೇಕೆ? ರಕ್ತದ ಗುಂಪು ಮತ್ತು ಮಧುಮೇಹಕ್ಕೆ ಇರುವ ಸಂಬಂಧ ಏನು ಎಂಬುದು ಸ್ಪಷ್ಟವಾಗಿ ಇನ್ನೂ ಗೊತ್ತಾಗಿಲ್ಲ. ಆದರೂ ಅಧ್ಯಯನಕಾರರು ಕೆಲವು ಸಾಧ್ಯತೆಗಳನ್ನು ವಿವರಿಸಿದ್ದಾರೆ. ಒ ರಕ್ತದ ಗುಂಪಿಗೆ ಹೋಲಿಸಿದರೆ ಉಳಿದ ಗುಂಪುಗಳ ರಕ್ತದಲ್ಲಿ ಪ್ರೊಟೀನ್ ಪ್ರಮಾಣ ಜಾಸ್ತಿ ಇರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹಜವಾಗಿ ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಬಹುಶಃ ಒ ಅಲ್ಲದ ರಕ್ತದ ಗುಂಪಿನವರಲ್ಲಿ ಟೈಪ್ 2 ಮಧುಮೇಹದ ಅಪಾಯ ಜಾಸ್ತಿ ಇರಬಹುದು ಎಂದು ಅಂದಾಜಿಸಿದ್ದಾರೆ.
ಒಟ್ಟಿನಲ್ಲಿ ಯಾವುದೇ ಕಾರಣಕ್ಕೆ, ಯಾವುದೇ ವಯಸ್ಸಿನಲ್ಲಿ ಯಾರಿಗಾದರೂ ಈ ಮಧುಮೇಹ ಬರಬಹುದು. ಬಾರದಂತೆ ಮುನ್ನೆಚ್ಚರಿಕೆ ವಹಿಸಿ. ಹಾಗೂ ಒಮ್ಮೆ ನಿಮ್ಮಲ್ಲಿ ಡಯಾಬಿಟಿಸ್ ಕಾಣಿಸಿಕೊಂಡರೆ ಜೀವನವೇ ಮುಗಿದುಹೋಯಿತು ಎಂದು ಭಾವಿಸದೆ, ಸರಿಯಾದ ಆಹಾರ, ನಿಯಮಿತ ವ್ಯಾಯಾಮಗಳನ್ನು ಅಳವಡಿಸಿಕೊಂಡು ಆರೋಗ್ಯವಾಗಿರಿ.
ಇದನ್ನೂ ಓದಿ: ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮಧುಮೇಹದಿಂದ ದೂರ ಇರಲು ಈ ಆಹಾರ ಪದ್ಧತಿಯೇ ಸಾಕು
Published On - 11:31 am, Thu, 18 March 21