
ಇಂದಿನ ಡಿಜಿಟಲ್ ಯುಗದಲ್ಲಿ ಅನೇಕ ಉದ್ಯೋಗಿಗಳು ದಿನಕ್ಕೆ 8ರಿಂದ 10 ಗಂಟೆಗಳ ಕಾಲ ಲ್ಯಾಪ್‌ಟಾಪ್ ಮುಂದೆ ಕುಳಿತು ಕೆಲಸ ಮಾಡುತ್ತಾರೆ. ಕೆಲಸದ ಒತ್ತಡ, ಡೆಡ್‌ಲೈನ್‌ಗಳು ಮತ್ತು ಹೆಚ್ಚು ಹೊತ್ತು ಕೆಲಸ ಮಾಡುವ ಕಾರಣದಿಂದ ಒಂದೇ ಭಂಗಿಯಲ್ಲಿ ಕುಳಿತಿರುವುದನ್ನೇ ಮರೆತುಬಿಡುತ್ತಾರೆ. ಇದರಿಂದ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದಿರುವುದು ಮತ್ತು ಸಮಯಕ್ಕೆ ಸರಿಯಾಗಿ ವಿರಾಮ ತೆಗೆದುಕೊಳ್ಳದಿರುವುದು ಮೊಣಕಾಲು ಹಾಗೂ ಬೆನ್ನಿನ ಮೇಲೆ ನಿರಂತರ ಒತ್ತಡ ಉಂಟುಮಾಡಬಹುದು. ಇದರಿಂದ ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಇಂತಹ ಸಮಸ್ಯೆಗಳನ್ನು ಸಾಮಾನ್ಯ ನೋವೆಂದು ನಿರ್ಲಕ್ಷಿಸಬಾರದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮೊಣಕಾಲು ಮತ್ತು ಸೊಂಟದ ಮೂಳೆಗಳ ತಜ್ಞ ಶಸ್ತ್ರಚಿಕಿತ್ಸಕ ಡಾ. ಯೋಗೀಶ್ ಕಾಮತ್ ಅವರು ನೀಡಿದ್ದಾರೆ.
ಡಾ. ಯೋಗೀಶ್ ಹೇಳುವ ಪ್ರಕಾರ, ಕೆಲವರಲ್ಲಿ ಹುಟ್ಟಿನಿಂದಲೇ ಮೂಳೆಗಳ ಆಕಾರದಲ್ಲಿ ಸಣ್ಣ ಬದಲಾವಣೆಗಳು ಅಥವಾ ಅಸ್ಥಿರಜ್ಜುಗಳು (ಲಿಗಮೆಂಟ್‌ಗಳು) ಸ್ವಲ್ಪ ಸಡಿಲವಾಗಿರುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಇವುಗಳಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದಿರುವುದು ಮತ್ತು ದೈಹಿಕ ಚಟುವಟಿಕೆ ಕಡಿಮೆಯಾಗುವುದು ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳಲು ಕಾರಣವಾಗಬಹುದು.
ಇತ್ತೀಚಿಗೆ ಸಂಧಿವಾತ ಸೇರಿದಂತೆ ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮುಂದಿನ ಹತ್ತು ವರ್ಷಗಳಲ್ಲಿ ಇಂತಹ ಸಮಸ್ಯೆಗಳು ಎರಡು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ಶೇ. 50ಕ್ಕಿಂತ ಹೆಚ್ಚು ಜನರು ಇವುಗಳಲ್ಲಿ ಯಾವುದಾದರೂ ಒಂದು ಸಮಸ್ಯೆಯಿಂದ ಬಳಲುವ ಸಾಧ್ಯತೆ ಇದೆ. ಮೊಣಕಾಲಿನ ಸಮಸ್ಯೆಗಳು ಸಾಮಾನ್ಯವಾಗಿ ಕೀಲಿನ ಮೇಲ್ಮೈಯಲ್ಲಿರುವ ಕಾರ್ಟಿಲೆಜ್ ಮೃದುವಾಗುವುದರಿಂದ ಉಂಟಾಗಬಹುದು. ಆದರೆ, ಇಂತಹ ನೋವನ್ನು ಕೆಲವೊಮ್ಮೆ ಮೆನಿಸ್ಕಸ್ (ಮೊಣಕಾಲಿನೊಳಗೆ ಕುಶನ್‌ನಂತೆ ಕೆಲಸ ಮಾಡುವ ಅಂಗಾಂಶ) ಹರಿದಿರುವ ಸಮಸ್ಯೆ ಎಂದು ತಪ್ಪಾಗಿ ಭಾವಿಸಲಾಗುತ್ತದೆ. ಇದರಿಂದ ಅಗತ್ಯವಿಲ್ಲದಿದ್ದರೂ ಎಂಆರ್‌ಐ ಸ್ಕ್ಯಾನ್ ಮಾಡಿಸುವ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಂದರ್ಭಗಳೂ ಎದುರಾಗಬಹುದು.
ಇದನ್ನೂ ಓದಿ: ಫೈಬರ್ ಅಂಶದ ಕೊರತೆ ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವೇ? ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ
ಬೆನ್ನಿನ ಕೆಳಭಾಗದಲ್ಲಿ ನರಗಳ ಮೇಲೆ ಒತ್ತಡ ಬೀಳುವುದರಿಂದಲೂ ನೋವು ಕಾಣಿಸಿಕೊಳ್ಳಬಹುದು. ಆದರೆ, ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಇಂತಹ ಹಲವು ಸಮಸ್ಯೆಗಳನ್ನು ಶಸ್ತ್ರಚಿಕಿತ್ಸೆಯಿಲ್ಲದೆ ನಿರ್ವಹಿಸಬಹುದು. ಅದೇ ರೀತಿ, ಕುತ್ತಿಗೆ ನೋವು ಕಾಣಿಸಿಕೊಳ್ಳಲು ಹೆಚ್ಚಿನ ಸಂದರ್ಭಗಳಲ್ಲಿ ಸ್ನಾಯುಗಳ ಸೆಳೆತವೂ ಕಾರಣವಾಗಿರುತ್ತದೆ.
ಡಾ. ಬಿಶ್ವರಾಜನ್ ದಾಸ್ ಅವರ ಸಲಹೆಯಂತೆ ದೇಹದ ಚಲನವಲನ ಸುಧಾರಿಸುವುದು ಮತ್ತು ಸ್ನಾಯುಗಳನ್ನು ಬಲಪಡಿಸುವುದು ಮುಖ್ಯ.
ದಿನವಿಡೀ ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವ ಬದಲು ಆಗಾಗ್ಗೆ ನಿಂತು ನಡೆಯುವುದು ಮತ್ತು ಕುಳಿತುಕೊಳ್ಳುವ ಭಂಗಿಯನ್ನು ಬದಲಾಯಿಸುವುದು ಉತ್ತಮ. ಅಗತ್ಯವಿದ್ದರೆ ಕುಳಿತು ಮತ್ತು ನಿಂತು ಕೆಲಸ ಮಾಡಲು ಅನುಕೂಲವಾಗುವ ಎತ್ತರ ಹೊಂದಿಸಬಹುದಾದ ಡೆಸ್ಕ್ ಬಳಸಬಹುದು. ಒಟ್ಟಿನಲ್ಲಿ, ದೀರ್ಘಕಾಲ ಕುಳಿತು ಕೆಲಸ ಮಾಡುವವರು ತಮ್ಮ ದೈಹಿಕ ಚಟುವಟಿಕೆಗೆ ಆದ್ಯತೆ ನೀಡಬೇಕು. ಸಣ್ಣ ವಿರಾಮಗಳು, ಸರಿಯಾದ ಕುಳಿತುಕೊಳ್ಳುವ ಭಂಗಿ ಮತ್ತು ನಿಯಮಿತ ವ್ಯಾಯಾಮದಿಂದ ಮೊಣಕಾಲು ಹಾಗೂ ಬೆನ್ನಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ