Duologue with Barun Das: ಸುತ್ತಲಿನವರ ಖುಷಿಯೇ ನಮ್ಮ ಪರಮ ಸಂತೋಷ; ಬರುಣ್ ದಾಸ್ ಜೊತೆ ಆರೋಗ್ಯ ವ್ಯವಸ್ಥೆ ಬಗ್ಗೆ ಡಾ. ದೇವಿ ಶೆಟ್ಟಿ ಮನ ಬಿಚ್ಚಿ ಮಾತು

|

Updated on: Oct 02, 2023 | 7:42 PM

ಸಂತೋಷವೆಂಬುದು ನಾನು ಅಥವಾ ನೀವು ಖುಷಿಯಾಗಿರುವುದಲ್ಲ. ನಮ್ಮ ಸುತ್ತಮುತ್ತಲೂ ಇರುವವರು ಖುಷಿಯಾಗಿದ್ದಾರಾ? ಎಂಬುದನ್ನು ನಾವು ನೋಡಬೇಕು. ಅವರು ಖುಷಿಯಾಗಿ, ನೆಮ್ಮದಿಯಾಗಿದ್ದರೆ ನಾವೂ ಖುಷಿಯಾಗಿರುತ್ತೇವೆ. ನನ್ನ ಪ್ರಕಾರ ಅದೇ ಪರಮ ಸಂತೋಷ ಎಂದು ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಹೇಳಿದ್ದಾರೆ.

Duologue with Barun Das: ಸುತ್ತಲಿನವರ ಖುಷಿಯೇ ನಮ್ಮ ಪರಮ ಸಂತೋಷ; ಬರುಣ್ ದಾಸ್ ಜೊತೆ ಆರೋಗ್ಯ ವ್ಯವಸ್ಥೆ ಬಗ್ಗೆ ಡಾ. ದೇವಿ ಶೆಟ್ಟಿ ಮನ ಬಿಚ್ಚಿ ಮಾತು
ಟಿವಿ9 ನೆಟ್​ವರ್ಕ್ ಸಿಇಓ ಬರುಣ್ ದಾಸ್- ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ
Follow us on

ನವದೆಹಲಿ: ಅನುಭೂತಿ, ಸಹಾನುಭೂತಿ ಮತ್ತು ಸ್ಪರ್ಶದ ಮೂಲಕ ರೋಗವನ್ನು ಗುಣಪಡಿಸಬಹುದಾಗಿದೆ ಎಂದು ನಾರಾಯಣ ಹೆಲ್ತ್ ಕೇರ್ ಸಂಸ್ಥಾಪಕ ಡಾ. ದೇವಿ ಶೆಟ್ಟಿ (Chairman, Founder of Narayana Health Dr. Devi Shetty) ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಹೃದಯ ದಿನದ ಹಿನ್ನೆಲೆಯಲ್ಲಿ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಓ ಬರುಣ್ ದಾಸ್  (MD and CEO of TV9 Network Barun Das) ಅವರೊಂದಿಗೆ ‘ಡ್ಯುಲೋಗ್ ವಿತ್ ಬರುನ್ ದಾಸ್’ (Duologue with Barun Das) ಸರಣಿಯ ಸಂವಾದದಲ್ಲಿ ಮಾತನಾಡಿದ ಡಾ. ದೇವಿ ಶೆಟ್ಟಿ, ಅನುಭೂತಿ ಮತ್ತು ಸಹಾನುಭೂತಿ ವೈದ್ಯ- ರೋಗಿಯ ನಡುವಿನ ಸಂಬಂಧವನ್ನು ಉತ್ತಮವಾಗಿರಿಸುತ್ತದೆ ಎಂದಿದ್ದಾರೆ.

ಒಬ್ಬ ರೋಗಿಗೆ ವೈದ್ಯರು ಹೇಗೆ ಭರವಸೆಯ ಕಿರಣವನ್ನು ನೀಡಬಹುದು ಎಂಬ ಬಗ್ಗೆ ಬರುಣ್ ದಾಸ್ ಅವರೊಂದಿಗೆ ಡಾ. ದೇವಿ ಶೆಟ್ಟಿ ವಿಸ್ತಾರವಾಗಿ ಮಾತನಾಡಿದ್ದಾರೆ. ರೋಗಿಗಳ ನಿರೀಕ್ಷೆಗಳನ್ನು ವೈದ್ಯರು ಹೇಗೆ ನಿಭಾಯಿಸುತ್ತಾರೆ? ಎಂಬುದು ಮುಖ್ಯ. ರೋಗಿಯ ಬಗ್ಗೆ ವೈದ್ಯರಿಗೆ ಮೊದಲನೆಯದಾಗಿ ಇರಬೇಕಾದುದು ಅನುಭೂತಿ, ಸಹಾನುಭೂತಿ ಮತ್ತು ಸ್ಪರ್ಶವಾಗಿರಬೇಕು. ನಮ್ಮ ಒಂದು ಸ್ಪರ್ಶ ಅಥವಾ ಅನುಭೂತಿಯ ಮಾತು ರೋಗಿಯಲ್ಲಿ ಮತ್ತೆ ಚೈತನ್ಯ ತುಂಬಬಹುದು ಎಂದು ಡಾ. ದೇವಿ ಶೆಟ್ಟಿ ವಿವರಿಸಿದ್ದಾರೆ.

ಇದನ್ನೂ ಓದಿ: World Heart Day 2023:: ಹೃದಯವನ್ನು ಆರೋಗ್ಯಕರವಾಗಿಡಲು ಪ್ರತಿನಿತ್ಯ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

“ಸಹಾನುಭೂತಿ ಮತ್ತು ಸ್ಪರ್ಶ ಓರ್ವ ರೋಗಿಯನ್ನು ಗುಣಪಡಿಸಲು ಬಹಳ ಶಕ್ತಿಯುತವಾದ ಸಾಧನಗಳಾಗಿವೆ. ಆದರೆ, ಅನೇಕ ವೈದ್ಯರು ಇವುಗಳನ್ನು ನಿರ್ಲಕ್ಷಿಸುತ್ತಾರೆ. ನಮ್ಮಲ್ಲಿ ಕೆಲವರು ನಮ್ಮ ಇಂದ್ರಿಯಗಳನ್ನು ನಂಬುತ್ತಾರೆ. ಏಕೆಂದರೆ ನಾವು ವೈದ್ಯರಾಗಿ ಹೀಲಿಂಗ್ ಮತ್ತು ಚಿಕಿತ್ಸೆಯ ಬಗ್ಗೆ ಬಹಳ ಕಡಿಮೆ ತಿಳಿದಿದ್ದೇವೆ. ಗುಣಪಡಿಸುವಿಕೆಯಲ್ಲಿ ಪ್ರಕೃತಿಯೇ ಹೆಚ್ಚಿನ ಕೆಲಸವನ್ನು ಮಾಡುತ್ತದೆ. ನಾವು ಕೇವಲ ನಮ್ಮ ಕೆಲಸವನ್ನಷ್ಟೇ ಮಾಡುತ್ತೇವೆ” ಎಂದು ದೇವಿ ಶೆಟ್ಟಿ ಹೇಳಿದ್ದಾರೆ.

ಸಂತೋಷವೆಂಬುದು ನಾನು ಅಥವಾ ನೀವು ಖುಷಿಯಾಗಿರುವುದಲ್ಲ. ನಮ್ಮ ಸುತ್ತಮುತ್ತಲೂ ಇರುವವರು ಖುಷಿಯಾಗಿದ್ದಾರಾ? ಎಂಬುದನ್ನು ನಾವು ನೋಡಬೇಕು. ಅವರು ಖುಷಿಯಾಗಿ, ನೆಮ್ಮದಿಯಾಗಿದ್ದರೆ ನಾವೂ ಖುಷಿಯಾಗಿರುತ್ತೇವೆ. ನನ್ನ ಪ್ರಕಾರ ಅದೇ ಪರಮ ಸಂತೋಷ ಎಂದು ಡಾ. ದೇವಿ ಶೆಟ್ಟಿ ಹೇಳಿದ್ದಾರೆ.

ಭಾರತೀಯರಿಗೆ ಆರೋಗ್ಯ ಸೇವೆಯನ್ನು ಕೈಗೆಟುಕುವಂತೆ ಮಾಡಿರುವುದಕ್ಕಾಗಿ ಟಿವಿ9 ನೆಟ್​ವರ್ಕ್​ ಸಿಇಓ ಬರುಣ್ ದಾಸ್ ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಅವರನ್ನು ಶ್ಲಾಘಿಸಿದ್ದಾರೆ. “ನೀವು ಆರೋಗ್ಯ ಮತ್ತು ಹಣಕಾಸನ್ನು ಬೇರೆ ಬೇರೆಯಾಗಿ ನೋಡಲು ಬಯಸಿದ್ದೀರಿ. ಸದ್ಯಕ್ಕೆ ನಮ್ಮ ಮುಂದಿರುವ ದಾರಿ ಯಾವುದು?” ಎಂದು ಬರುಣ್ ದಾಸ್ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಡಾ. ದೇವಿ ಶೆಟ್ಟಿ, ಮುಂದಿನ ದಿನಗಳಲ್ಲಿ ಭಾರತ ಆರೋಗ್ಯವನ್ನು ಶ್ರೀಮಂತಿಕೆಯಿಂದ ಬೇರ್ಪಡಿಸುವ ವಿಶ್ವದ ಮೊದಲ ದೇಶವಾಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Devi Shetty: ಕಡಿಮೆ ಬೆಲೆಗೆ ವೈದ್ಯಕೀಯ ಚಿಕಿತ್ಸೆ ಕೊಡುವ ಡಾ. ದೇವಿಶೆಟ್ಟಿ ಆಸ್ತಿ ರೂ 11,000 ಕೋಟಿಗೂ ಹೆಚ್ಚು; ಅಷ್ಟು ಸಂಪಾದನೆ ಸಾಧ್ಯವಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ

ಈ ನಡುವೆ ಬರುಣ್ ದಾಸ್ ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2 ಕ್ಷೇತ್ರಗಳ ಬಗ್ಗೆ ಸಂಬಂಧಿತ ಪ್ರಶ್ನೆಗಳನ್ನು ಎತ್ತಿದ್ದಾರೆ. ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಭಾರತದಲ್ಲಿನ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ಬರುಣ್ ದಾಸ್ ಡಾ. ದೇವಿ ಶೆಟ್ಟಿ ಅವರ ಬಳಿ ಪ್ರಶ್ನೆ ಕೇಳಿದ್ದಾರೆ. ನಮ್ಮ ಜನಸಂಖ್ಯೆಯು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದ್ದರಿಂದ, ರೋಗಿಯ ಮತ್ತು ವೈದ್ಯರ ಅನುಪಾತವು ಕೆಲವು ಸಮಯದ ನಂತರ ವಿಸ್ತರಿಸಲಿದೆ ಎಂದು ಡಾ. ದೇವಿ ಶೆಟ್ಟಿ ಹೇಳಿದ್ದಾರೆ.

ವೈದ್ಯಕೀಯ ಶಿಕ್ಷಣ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮಾತನಾಡಿದ ಡಾ. ದೇವಿ ಶೆಟ್ಟಿ, ಪ್ರಸ್ತುತ ಸಮಸ್ಯೆಯು ವೈದ್ಯಕೀಯ ಸೀಟುಗಳ ಲಭ್ಯತೆ ಅಥವಾ ತರಬೇತಿಯದಲ್ಲ. ಎಲ್ಲರಿಗೂ ಆರೋಗ್ಯ ಸೇವೆಯನ್ನು ಹೆಚ್ಚು ಸುಲಭವಾಗಿಸುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಟೆಲಿಕಾಂ ಉದ್ಯಮವು ಸ್ಮಾರ್ಟ್‌ಫೋನ್‌ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯುತ್ತಿದೆ. ಎಲ್ಲರಿಗೂ ಇಂಟರ್ನೆಟ್ ಅನ್ನು ಸುಲಭಗೊಳಿಸುವಂತೆ ಆರೋಗ್ಯ ವ್ಯವಸ್ಥೆ ಕೂಡ ತಳಮಟ್ಟವನ್ನು ತಲುಪಬೇಕೆಂದು ನಾವು ನಿರೀಕ್ಷಿಸುತ್ತೇವೆ ಎಂದಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಸರ್ಕಾರವು ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. ನಾವು ಪ್ರಪಂಚದಲ್ಲಿ ಅತಿ ಹೆಚ್ಚು ಸಂಖ್ಯೆಯ ನರ್ಸ್​ಗಳನ್ನು ಸಿದ್ಧಪಡಿಸುತ್ತಿದ್ದೇವೆ, ವಿಶ್ವದಲ್ಲೇ ಅತಿ ಹೆಚ್ಚು ವೈದ್ಯಕೀಯ ತಜ್ಞರನ್ನು ಉತ್ಪಾದಿಸುತ್ತಿದ್ದೇವೆ. ನಮಗೆ ಎಲ್ಲವೂ ಇದೆ. ಆರೋಗ್ಯ ಸೇವೆಯನ್ನು ಖರೀದಿಸಲು ಕೈಗೆಟುಕುವ ಬೆಲೆ ಮಾತ್ರ ನಮ್ಮ ಮಿಸ್ಸಿಂಗ್ ಲಿಂಕ್ ಆಗಿದೆ. ಆರೋಗ್ಯ ವಿಮೆಯ ಕಡೆಗೆ ಸರ್ಕಾರ ತನ್ನ ವಿಧಾನವನ್ನು ಬದಲಾಯಿಸಿದಾಗ ಮಾತ್ರ ಇದು ಬದಲಾಗಲಿದೆ ಎಂದು ಡಾ. ದೇವಿ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ