
ಇತ್ತೀಚಿನ ದಿನಗಳಲ್ಲಿ ಬದಲಾದ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಕಡಿಮೆ ನೀರು ಕುಡಿಯುವ ಅಭ್ಯಾಸದಿಂದ ಹಲವರಲ್ಲಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕೆಲವರು ಇದನ್ನು ಸಾಮಾನ್ಯ ಜೀರ್ಣಕ್ರಿಯೆಯ ತೊಂದರೆ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಆದರೆ ಪದೇಪದೇ ಮಲಬದ್ಧತೆ ಕಾಣಿಸಿಕೊಳ್ಳುವುದು ಅಥವಾ ಮಲವಿಸರ್ಜನೆಯ ಅಭ್ಯಾಸದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಆಗುವುದು ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗಳ ಎಚ್ಚರಿಕೆಯ ಲಕ್ಷಣವಾಗಿರಬಹುದು. ಹಾಗಾದರೆ ಯಾವ ರೀತಿಯ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮಲಬದ್ಧತೆಯ ಜೊತೆಗೆ ತೀವ್ರವಾದ ಅಥವಾ ನಿರಂತರ ಹೊಟ್ಟೆ ನೋವು ಕಾಣಿಸಿಕೊಂಡು ಅದು ಬೆನ್ನಿನವರೆಗೂ ಹರಡುತ್ತಿದ್ದರೆ ಎಚ್ಚರಿಕೆ ಅಗತ್ಯ. ಇಂತಹ ನೋವು ಕೇವಲ ಮಲಬದ್ಧತೆಯಿಂದಲೇ ಉಂಟಾಗಿರಬೇಕೆಂದಿಲ್ಲ. ಇತರ ಜೀರ್ಣಾಂಗ ಸಮಸ್ಯೆಗಳೂ ಕಾರಣವಾಗಿರಬಹುದು. ತೀವ್ರ ನೋವಿದ್ದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.
ಮಲವಿಸರ್ಜನೆ ಆಗದಿರುವುದರ ಜೊತೆಗೆ ಗ್ಯಾಸ್ ಕೂಡ ಹೊರಹೋಗದೆ, ಹೊಟ್ಟೆ ವಿಪರೀತ ಉಬ್ಬರ ಮತ್ತು ವಾಂತಿ ಕಾಣಿಸಿಕೊಂಡರೆ ಕರುಳಿನಲ್ಲಿ ಅಡಚಣೆ (Bowel Obstruction) ಉಂಟಾಗಿರುವ ಸಾಧ್ಯತೆಯಿದೆ. ಇದು ತುರ್ತು ವೈದ್ಯಕೀಯ ಸ್ಥಿತಿಯಾಗಿದ್ದು, ತಕ್ಷಣ ಆಸ್ಪತ್ರೆಗೆ ತೆರಳಬೇಕು.
ಇದನ್ನೂ ಓದಿ: ಫೈಬರ್ ಅಂಶದ ಕೊರತೆ ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವೇ? ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ
ಮಲದಲ್ಲಿ ತಿಳಿ ಕೆಂಪು ರಕ್ತ, ಗಾಢ ಕೆಂಪು ಬಣ್ಣ ಅಥವಾ ಕಪ್ಪು ಬಣ್ಣದ ಜಿಗುಟಾದ ಮಲ ಕಂಡುಬಂದರೆ ನಿರ್ಲಕ್ಷಿಸಬಾರದು. ಮೂಲವ್ಯಾಧಿ ಮಾತ್ರವಲ್ಲದೆ ಕರುಳಿನ ರಕ್ತಸ್ರಾವ ಸೇರಿದಂತೆ ಇತರ ಸಮಸ್ಯೆಗಳೂ ಕಾರಣವಾಗಬಹುದು. ವೈದ್ಯಕೀಯ ಪರೀಕ್ಷೆ ಅಗತ್ಯ.
ಮಲವು ಮೊದಲಿಗಿಂತ ನಿರಂತರವಾಗಿ ತೆಳುವಾಗುವುದು, ಮಲವಿಸರ್ಜನೆಯ ನಂತರವೂ ಹೊಟ್ಟೆ ಸಂಪೂರ್ಣ ಖಾಲಿಯಾಗದ ಅನುಭವ ಉಂಟಾಗುವುದು ಗಮನಿಸಬೇಕಾದ ಲಕ್ಷಣಗಳು. ಇವುಗಳಿಗೆ ಹಲವು ಕಾರಣಗಳಿರಬಹುದು. ಅಗತ್ಯವಿದ್ದರೆ ವೈದ್ಯರು ಕರುಳಿನ ಪರೀಕ್ಷೆಗಳನ್ನು ಸೂಚಿಸಬಹುದು.
ಹಿಂದೆ ಯಾವುದೇ ಸಮಸ್ಯೆಯಿಲ್ಲದೆ ಇದ್ದವರಿಗೆ ಇದ್ದಕ್ಕಿದ್ದಂತೆ ಮಲಬದ್ಧತೆ ಶುರುವಾಗಿ ಒಂದು ವಾರಕ್ಕಿಂತ ಹೆಚ್ಚು ಕಾಲ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ವಿಶೇಷವಾಗಿ ತೂಕ ಕಡಿಮೆಯಾಗುವುದು, ರಕ್ತಸ್ರಾವ ಅಥವಾ ಹೊಟ್ಟೆ ನೋವು ಇದ್ದರೆ ತಡಮಾಡಬಾರದು.
ಮಲಬದ್ಧತೆಗೆ ಆಹಾರ ಪದ್ಧತಿ, ಕೆಲವು ಔಷಧಿಗಳು, ಕರುಳಿನ ಕಾರ್ಯನಿರ್ವಹಣೆಯ ತೊಂದರೆಗಳು ಸೇರಿದಂತೆ ಹಲವು ಕಾರಣಗಳಿರಬಹುದು. ಇದು ಇದ್ದ ತಕ್ಷಣ ಕರುಳಿನ ಕ್ಯಾನ್ಸರ್ ಎಂದರ್ಥವಲ್ಲ. ಆದರೆ ಹೊಸದಾಗಿ ಕಾಣಿಸಿಕೊಂಡು ನಿರಂತರವಾಗಿ ಮುಂದುವರಿಯುವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಗಮನಿಸಿ: ತೀವ್ರ ಹೊಟ್ಟೆ ನೋವು, ವಾಂತಿ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಹೊರಹೋಗದಿರುವ ಲಕ್ಷಣಗಳು ಒಟ್ಟಿಗೆ ಕಂಡುಬಂದರೆ ತಕ್ಷಣ ತುರ್ತು ವೈದ್ಯಕೀಯ ನೆರವು ಪಡೆಯಿರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ