ಊಟ ರುಚಿಯಾಗಿದ್ದರೆ ಹೊಟ್ಟೆಗೆ ತುತ್ತು ಹೋದದ್ದೇ ತಿಳಿಯುವುದಿಲ್ಲ. ಭೋಜನವಾದ ಮೇಲೆ ಕುಳಿತಲ್ಲಿಯೇ ನಿದ್ದೆ ಎಳೆಯಲು ಪ್ರಾರಂಭಿಸುತ್ತದೆ. ಆಗ ಒಂದು ಹತ್ತು ನಿಮಿಷ ನಿದ್ರೆ ಮಾಡೋಣ ಎನಿಸುತ್ತದೆ. ಆದರೆ, ಊಟವಾದ ಬಳಿಕ ಹತ್ತು ನಿಮಿಷವಾದರೂ ನಡೆಯಬೇಕು ಎನ್ನುವ ಮಾತನ್ನು ನೀವು ಕೇಳಿರಬಹುದು. ಇದು ನಿಜ, ಚಲನೆಗೆ ಅದರದ್ದೇ ಆದ ಮಹತ್ವವಿದೆ. ಸರಳ ನಡಿಗೆ, ಅಂದರೆ ದಿನಕ್ಕೆ 30 ನಿಮಿಷಗಳು ನಡೆಯುವುದರಿಂದ ಬೊಜ್ಜು, ಟೈಪ್ 2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಹಲವಾರು ಕಾಯಿಲೆಗಳು ಬರುವುದನ್ನು ತಪ್ಪಿಸಬಹುದು ಎಂದು ಅಧ್ಯಯನಗಳಿಂದ ಸಾಬೀತಾಗಿದೆ.
ಊಟವಾದ ಮೇಲೆ ಸಣ್ಣ ನಡಿಗೆ ಮಾಡುವುದರಿಂದ ಮಾಡಿದಂತಹ ಊಟ ಸರಿಯಾಗಿ ಜೀರ್ಣವಾಗುತ್ತದೆ. ಇದರ ಜೊತೆಗೆ ಈ ರೀತಿ ಮಾಡುವುದರಿಂದ ಅನೇಕ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು. ಇಲ್ಲವಾದಲ್ಲಿ ಹೊಟ್ಟೆಯುರಿ, ಆಮ್ಲೀಯತೆ, ಆಲಸಿತನ, ಹುಳಿತೇಗು, ಎದೆಯುರಿ ಸುಸ್ತು ಮೊದಲಾದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಈ ತೊಂದರೆಗಳು ಕಾಣಿಸಿಕೊಳ್ಳದೇ ಇದ್ದರೂ ಕೂಡ ನಡೆಯುವುದರಿಂದ ಯಾವುದೇ ರೀತಿಯ ಅಪಾಯವಿಲ್ಲ. ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನಲ್ಲಿ ಪ್ರಕಟವಾದ 2011 ರ ಅಧ್ಯಯನವು ಊಟದ ನಂತರ 15 ನಿಮಿಷಗಳ ನಡಿಗೆ ಮಾಡಬೇಕು ಇದನ್ನು ದಿನಕ್ಕೆ ಮೂರು ಬಾರಿ ಮಾಡಲೇಬೇಕು ಎಂದು ಹೇಳಿದೆ.
ಊಟವಾದ ನಂತರ ನಡಿಗೆ ಮಾಡಬೇಕೆಂದು ಧಾವಂತದ ನಡಿಗೆ, ನಿಧಾನಗತಿಯ ಓಟ ಅಥವಾ ಜಾಗಿಂಗ್ ಮಾಡಬಾರದು. ವೇಗವೂ ಅಲ್ಲ, ನಿಧಾನವೂ ಅಲ್ಲದ ಮಧ್ಯಮ ಗತಿಯ ಸಾವಕಾಶ ನಡಿಗೆ ಬಲು ಉತ್ತಮವಾಗಿದೆ. ಹಾಗಾಗಿ ಪ್ರಾರಂಭದಲ್ಲಿ ಈ ನಡಿಗೆಯನ್ನು ಐದಾರು ನಿಮಿಷಗಳವರೆಗೆ ಸಾವಕಾಶವಾಗಿ ಮಾಡಿ. ಬಳಿಕ ಈ ವೇಗಕ್ಕೆ ದೇಹ ಹೊಂದಿಕೊಂಡಂತೆ ಕೊಂಚವೇ ಈ ಸಮಯವನ್ನು ಹೆಚ್ಚಿಸುತ್ತಾ ಹೋಗಿ ಆದರೆ ಈ ನಡಿಗೆ ನಿಮ್ಮ ಸ್ನಾಯುಗಳಲ್ಲಿ ನೋವನ್ನು ಉಂಟು ಮಾಡಬಾರದು ಎಂಬುದನ್ನು ಮರೆಯಬೇಡಿ.
ಇದನ್ನೂ ಓದಿ: ಎಕ್ಕದ ಗಿಡದ ಎಲೆಗಳನ್ನು ಈ ರೀತಿ ಬಳಸಿದರೆ ಮಂಡಿ ನೋವು ಮಾಯ
ಈ ರೀತಿ ಮಾಡುವುದರಿಂದ ದೇಹದಲ್ಲಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಊಟದ ಬಳಿಕ ಮಾಡುವ ನಡಿಗೆಯಿಂದ ಸಿಹಿ ಆಹಾರಗಳನ್ನು ತಿನ್ನುವ ಅಥವಾ ಕುಡಿಯುವ ಬಯಕೆ ಇರುವುದಿಲ್ಲ. ಇದರಿಂದ ಧಿಡೀರನೇ ಸಕ್ಕರೆ ಮಟ್ಟ ಏರಿಕೆಯಾಗುವುದನ್ನು ತಪ್ಪಿಸಬಹುದು. ಮಧುಮೇಹಿಗಳಿಗೆ ಊಟದ ಬಳಿಕ ರಕ್ತದಲ್ಲಿ ಸಕ್ಕರೆಯ ಮಟ್ಟ ಶೀಘ್ರವಾಗಿ ಏರುತ್ತದೆ. ಹಾಗಾಗಿ ನಿಧಾನಗತಿಯಲ್ಲಿ ನಡೆದಾಡಿದರೆ ಸಕ್ಕರೆಯ ಮಟ್ಟ ಕಡಿಮೆಯಾಗಿ ಮಧುಮೇಹ ನಿಯಂತ್ರಣದಲ್ಲಿ ಇರುತ್ತದೆ. ಜೊತೆಗೆ ಹೃದಯದ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ