ಸದಾ ನೆಲದ ಸ್ಪರ್ಶದಲ್ಲಿರುವ ಪಾದಗಳಿಗೆ ಧೂಳು, ಕೊಳಕಾಗುವುದು ಸಾಮಾನ್ಯ. ಹಾಗೆಂದು ಅದನ್ನು ಯಾವಾಗಲೂ ನಿರ್ಲಕ್ಶ್ಯ ಮಾಡುವ ಹಾಗಿಲ್ಲ. ಅದರ ಆರೋಗ್ಯದ ಕಡೆಯೂ ಗಮನಹರಿಸಬೇಕಾಗುತ್ತದೆ. ಪಾದಗಳಲ್ಲಿ ಬಿರುಕು ಹಾಗೂ ನೋವು ಉಂಟಾದಾಗ ಅದನ್ನು ಅಸಡ್ಡೆ ಮಾಡುವುದರ ಬದಲು ಅದಕ್ಕೆ ಅಗತ್ಯ ಇರುವಂತಹ ಚಿಕಿತ್ಸೆ ಮಾಡುವುದು ಒಳಿತು. ಈ ನೋವಿಗೆ ವೈದ್ಯರ ಬಳಿ ಓಡುವ ಬದಲು ಸರಳವಾಗಿ ಮನೆಯಲ್ಲಿಯೇ ಮದ್ದನ್ನು ಅರೆಯುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬಹುದು. ಹೇಗೆ? ಯಾವ ರೀತಿಯ ಮನೆಮದ್ದನ್ನು ಮಾಡಬೇಕು? ಇಲ್ಲಿದೆ ಸರಳ ಮಾಹಿತಿ.
*ಬಾಳೆಹಣ್ಣು ನೈಸರ್ಗಿಕವಾದ ಮಾಯ್ಚುರೈಸ್ ಗುಣವನ್ನು ಹೊಂದಿದ್ದು ಇದರಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಇದೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹಿಮ್ಮಡಿ ಒಡೆಯದಂತೆ ರಕ್ಷಣೆ ನೀಡುತ್ತದೆ. ಹಣ್ಣಾದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಪಾದಗಳಿಗೆ, ಬೆರಳುಗಳ ಮಧ್ಯೆ ಹಾಗೂ ಹಿಮ್ಮಡಿ ಸೇರಿದಂತೆ ಎಲ್ಲಾ ಭಾಗಗಳಿಗೆ ಸರಿಯಾಗಿ ಅನ್ವಯಿಸಿ. 20 ನಿಮಿಷದ ಬಳಿಕ ಶುದ್ಧವಾದ ನೀರಿನಲ್ಲಿ ತೊಳೆಯಿರಿ. ಪ್ರತಿ ದಿನ ರಾತ್ರಿ ಈ ರೀತಿ ಮಾಡುವುದರಿಂದ ಬಿರುಕು ಮೂಡಿದ ಹಿಮ್ಮಡಿಯಿಂದ ಮುಕ್ತಿ ಪಡೆಯಬಹುದಾಗಿದೆ.
*ಜೇನುತುಪ್ಪ ಚರ್ಮದ ಒಳ ಹಾಗೂ ಹೊರ ಪ್ರದೇಶಗಳಿಗೆ ಹೆಚ್ಚಿನ ತೇವಾಂಶ ಒದಗಿಸುತ್ತದೆ. ಒಂದು ಟಬ್ ಅಲ್ಲಿ ಬೆಚ್ಚಗಿನ ನೀರಿಗೆ ಒಂದು ಕಪ್ ಜೇನುತುಪ್ಪವನ್ನು ಸೇರಿಸಿ. 10 ನಿಮಿಷಗಳ ಕಾಲ ಹಿಮ್ಮಡಿಯನ್ನು ಸರಿಯಾಗಿ ನೀರಿನಲ್ಲಿ ನೆನೆಸಿ. ಬಳಿಕ ಆ ಜಾಗವನ್ನು ಸರಿಯಾಗಿ ಮಸಾಜ್ ಮಾಡಿ. ಕಾಲು ಸರಿಯಾಗಿ ಒಣಗಿದ ಬಳಿಕ ಮಾಯ್ಚುರೈಸ್ ಹಾಕಿ ಮಸಾಜ್ ಮಾಡಿ. ಪ್ರತಿದಿನ ಈ ರೀತಿ ಮಾಡಿ, ಉತ್ತಮ ಫಲಿತಾಂಶವನ್ನು ನೀವೇ ನೋಡುವಿರಿ.
*ಒಣ ಚರ್ಮಕ್ಕೆ ತೆಂಗಿನ ಎಣ್ಣೆಯನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಇದು ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಾಲನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಗಂಟೆ ಇಟ್ಟು ಬಳಿಕ ಒಡೆದ ಹಿಮ್ಮಡಿಗಳಿಗೆ ತೆಂಗಿನ ಎಣ್ಣೆಯನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ.
*ವ್ಯಾಸಲಿನ್ ಮಾಯ್ಚುರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಂಬೆ ರಸವು ಚರ್ಮದ ಕೋಶಗಳ ಪುನಃ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ ಹಾಗಾಗಿ ಇವೆರಡರ ಮಿಶ್ರಣ ತುಂಬಾ ಒಳ್ಳೆಯದು. ಮೊದಲು ಬೆಚ್ಚಗಿನ ನೀರಿನಲ್ಲಿ ನಿಮ್ಮ ಪಾದವನ್ನು 20 ನಿಮಿಷಗಳ ಕಾಲ ಇಟ್ಟುಕೊಳ್ಳಿ. ನಂತರ ಒಣಗಿದ ಬಟ್ಟೆಯಲ್ಲಿ ಒರೆಸಿ. 3- 4 ಹನಿಯಷ್ಟು ನಿಂಬೆ ರಸಕ್ಕೆ 1 ಟೀ ಚಮಚ ವ್ಯಾಸಲೀನ್ ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ ಪಾದ ಹಾಗೂ ಹಿಮ್ಮಡಿಯ ಜಾಗಕ್ಕೆ ಹಚ್ಚಿಕೊಳ್ಳಿ, ಮುಂಜಾನೆ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.ಈ ರೀತಿ ಮಾಡುವುದರಿಂದ ಒಡೆದ ಹಿಮ್ಮಡಿ ನೋವಿನಿಂದ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: ಬಾಣಂತಿಯರಿಗೆ ಸಬ್ಬಸಿಗೆ ಸೊಪ್ಪು ದೇವರು ಕೊಟ್ಟ ವರದಾನ!
*ಪ್ರತಿ ದಿನ ಬೆಳಗ್ಗೆ ಹುಲ್ಲಿರುವ ಕಡೆ ಕೊಂಚ ಕಾಲ ನಡೆಯುವುದು ಒಳ್ಳೆದು. ಹಾಗೆಯೇ ಆರಾಮದಾಯಕವಾಗಿರುವ ಚಪ್ಪಲಿಗಳನ್ನು ಧರಿಸಿ. ಹೆಚ್ಚು ಟೈಟ್ ಅಥವಾ ಕಾಲಿಗೆ ಕಿರಿಕಿರಿಯಾಗುವಂತಹ ಶೂ ಮತ್ತು ಚಪ್ಪಲಿಗಳಿಂದ ದೂರವಿರಿ. ಅದಲ್ಲದೆ ಪ್ಲಾಸ್ಟಿಕ್ ಚಪ್ಪಲಿಗಳನ್ನು ಹೆಚ್ಚಾಗಿ ಬಳಸಬೇಡಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ