8 ಗಂಟೆ ನಿದ್ದೆ ಮಾಡಿದರೂ ಫ್ರೆಶ್ ಮೂಡ್ ನಲ್ಲಿ ಏಳುವುದಕ್ಕೆ ಆಗುತ್ತಿಲ್ಲವೇ? ಕಾರಣ ತಿಳಿಯಿರಿ

8 ಗಂಟೆ ನಿದ್ದೆ ಮಾಡಿದರೂ ಬೆಳಗ್ಗೆ ಎದ್ದ ಕೂಡಲೇ ಸುಸ್ತಾಗುತ್ತಿದೆಯೇ? ನಿದ್ದೆ ಮಾಡುವ ಅವಧಿಗಿಂತ ಅದರ ಗುಣಮಟ್ಟ ಮುಖ್ಯವಾಗಿರಬಹುದು. ಪದೇಪದೇ ಎಚ್ಚರವಾಗುವುದು, ಸ್ಲೀಪ್ ಅಪ್ನಿಯಾ, ಜೀವನಶೈಲಿ ಸೇರಿದಂತೆ ಹಲವು ಕಾರಣಗಳು ಆಯಾಸಕ್ಕೆ ಕಾರಣವಾಗಬಹುದು. ಹಾಗಾಗಿ ಚೆನ್ನಾಗಿ ನಿದ್ರೆ ಬರುವುದಕ್ಕೆ ಏನು ಮಾಡಬಹುದು ಮತ್ತು ಈ ರೀತಿ ಸಮಸ್ಯೆ ಕಂಡುಬಂದಾಗ ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

8 ಗಂಟೆ ನಿದ್ದೆ ಮಾಡಿದರೂ ಫ್ರೆಶ್ ಮೂಡ್ ನಲ್ಲಿ ಏಳುವುದಕ್ಕೆ ಆಗುತ್ತಿಲ್ಲವೇ? ಕಾರಣ ತಿಳಿಯಿರಿ
Healthy Sleep
Image Credit source: Getty Images

Updated on: Sep 04, 2026 | 9:06 PM

ಪ್ರತಿದಿನ 7ರಿಂದ 8 ಗಂಟೆ ನಿದ್ದೆ ಮಾಡಿ ಬೆಳಗ್ಗೆ ಎದ್ದಾಗ ಸಂಪೂರ್ಣ ಫ್ರೆಶ್ ಆಗಿರಬೇಕು ಎಂದು ಹಲವರು ಭಾವಿಸುತ್ತಾರೆ. ಆದರೆ ನಿದ್ದೆಯ ಅವಧಿ ಮಾತ್ರವಲ್ಲ, ನಿದ್ದೆಯ ಗುಣಮಟ್ಟವೂ ಆರೋಗ್ಯಕ್ಕೆ ಬಹಳ ಮುಖ್ಯವಾಗುತ್ತದೆ. ಸಾಕಷ್ಟು ಗಂಟೆ ಹಾಸಿಗೆಯಲ್ಲಿದ್ದ ಮಾತ್ರಕ್ಕೆ ನಿದ್ರೆ ಸರಿಯಾಗಿ ಆಗಿದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಬೆಳಗ್ಗೆ ಆಯಾಸ, ದಿನವಿಡೀ ನಿದ್ದೆ ಅಥವಾ ಏಕಾಗ್ರತೆಯ ಕೊರತೆ ಕಂಡುಬಂದರೆ ಅದಕ್ಕೆ ಸರಿಯಾದ ಕಾರಣ ಗಮನಿಸುವುದು ಅಗತ್ಯ. ಅದರಲ್ಲಿಯೂ ವಯಸ್ಸು, ಜೀವನಶೈಲಿ, ದೈಹಿಕ ಚಟುವಟಿಕೆ ಮತ್ತು ಆರೋಗ್ಯ ಸ್ಥಿತಿಯ ಆಧಾರದ ಮೇಲೆ ನಿದ್ದೆಯ ಅವಶ್ಯಕತೆ ಬದಲಾಗಬಹುದು.

ಹೆಚ್ಚು ನಿದ್ದೆ ಮಾಡಿದರೂ ಏಕೆ ಸುಸ್ತಾಗುತ್ತದೆ?

ರಾತ್ರಿ ಪದೇಪದೇ ಎಚ್ಚರವಾಗುವುದು, ನಿದ್ದೆ ಸರಿಯಾಗಿ ಬರದಿರುವುದು ಅಥವಾ ನಿದ್ದೆಯ ಗುಣಮಟ್ಟ ಕಡಿಮೆಯಾಗುವುದು ಬೆಳಗ್ಗೆ ಆಯಾಸಕ್ಕೆ ಕಾರಣವಾಗಬಹುದು. ಸ್ಲೀಪ್ ಅಪ್ನಿಯಾ, ಖಿನ್ನತೆ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳಲ್ಲಿಯೂ ಅತಿಯಾದ ನಿದ್ದೆ ಅಥವಾ ಹಗಲಿನ ನಿದ್ದೆ ಕಾಣಿಸಿಕೊಳ್ಳಬಹುದು. ಆದರೆ ಹೆಚ್ಚು ನಿದ್ದೆ ಮಾಡುವ ಪ್ರತಿಯೊಬ್ಬರಿಗೂ ಆರೋಗ್ಯ ಸಮಸ್ಯೆ ಇದೆ ಎಂದರ್ಥವಲ್ಲ.

ನಿದ್ದೆಯ ಗುಣಮಟ್ಟವನ್ನು ಹೇಗೆ ಗುರುತಿಸುವುದು?

ಬೆಳಗ್ಗೆ ಎದ್ದಾಗ ಫ್ರೆಶ್ ಆಗಿರುವುದು, ದಿನವಿಡೀ ಚುರುಕಾಗಿರುವುದು, ಏಕಾಗ್ರತೆ ಚೆನ್ನಾಗಿರುವುದು ಮತ್ತು ಅತಿಯಾದ ನಿದ್ದೆ ಬಾರದಿರುವುದು ಉತ್ತಮ ನಿದ್ದೆಯ ಕೆಲವು ಸೂಚನೆಗಳು. ಗಟ್ಟಿಯಾಗಿ ಗೊರಕೆ ಹೊಡೆಯುವುದು, ನಿದ್ದೆಯಲ್ಲಿ ಉಸಿರಾಟಕ್ಕೆ ಅಡ್ಡಿಯಾಗುವುದು, ಬೆಳಗ್ಗೆ ನಿರಂತರ ತಲೆನೋವು ಅಥವಾ ದಿನವಿಡೀ ತೀವ್ರ ನಿದ್ದೆ ಬರುವುದು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ನಿದ್ದೆ ಎಷ್ಟು ಗಂಟೆ ಮಾಡಿದ್ದೇವೆ ಎನ್ನುವುದಕ್ಕಿಂತ ನಿಯಮಿತ ಮತ್ತು ಗುಣಮಟ್ಟದ ನಿದ್ದೆಗೆ ಆದ್ಯತೆ ನೀಡಿ. ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು, ಮಲಗುವ ಮುನ್ನ ಮೊಬೈಲ್ ಬಳಕೆ ಕಡಿಮೆ ಮಾಡುವುದು ಮತ್ತು ಆರೋಗ್ಯಕರ ಜೀವನಶೈಲಿ ಉತ್ತಮ ನಿದ್ದೆಗೆ ಸಹಾಯ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us