ಬದಲಾದ ಜೀವನಶೈಲಿ, ದಿನದಲ್ಲಿ ಹಲವು ಗಂಟೆ ಕುಳಿತಲ್ಲೇ ಕೆಲಸ ಮಾಡುವುದು, ನಿಯಮಿತ ವ್ಯಾಯಾಮ ಮಾಡದೇ ಇರುವುದು ಹೀಗೆ ನೂರಾರು ಕಾರಣಗಳಿಂದ ಹೊಟ್ಟೆಯ ಬೊಜ್ಜು ಹೆಚ್ಚುತ್ತದೆ. ಅಲ್ಲದೆ ಜಂಕ್ ಫುಡ್ ಸೇವನೆ, ದೇಹದ ತೂಕ ನಿರ್ವಹಣೆ ಮಾಡದೇ ಇರುವುದರಿಂದಲೂ ಹೊಟ್ಟೆಯ ಕೊಬ್ಬು ಕಾಣಿಸಿಕೊಳ್ಳುತ್ತದೆ. ಇದು ಹಲವು ರೋಗಗಳಿಗೆ ನಾಂದಿಯಾಗುತ್ತದೆ. ಹೊಟ್ಟೆಯ ಸಮಸ್ಯೆಗಳು ಒಂದೆಡೆ ಕಾಣಿಸಿಕೊಂಡರೆ ದೇಹದ ತೂಕ ಹೆಚ್ಚಾಗಿ ಮೊಣಕಾಲು, ಸ್ನಾಯುಗಳ್ಲೂ ನೋವು ಉಲ್ಬಣವಾಗುತ್ತದೆ. ಹೊಟ್ಟೆಯ ಬೊಜ್ಜು ಕೇವಲ ಆಹಾರದ ಅಸಮತೋಲನದಿಂದ ಮಾತ್ರವಲ್ಲ ಹಾರ್ಮೋನ್ ವ್ಯತ್ಯಾಸದಿಂದಲೂ ಬರುತ್ತದೆ ಎನ್ನುತ್ತಾರೆ ತಜ್ಞರು.
ಈ ಕುರಿತು ಆಯುರ್ವೇದ ವೈದ್ಯೆ ದಿಕ್ಸಾಭವಸರ್ ಎನ್ನುವವರು ಆಯುರ್ವೇದದ ಮೂಲಕ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ ಬಗ್ಗೆ ಕೆಲವು ಟಿಪ್ಸ್ಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಆಯುರ್ವೇದ ಪದ್ಧತಿಯಲ್ಲಿ ದೇಹದ ತೂಕ ಸಮತೋಲನದಲ್ಲಿ ಇರಿಸಿಕೊಳ್ಳುವ ಹಲವು ದಾರಿಗಳಿವೆ. ಅದನ್ನು ಪಾಲಿಸಿದರೆ ಸುಲಭವಾಗಿ ನಿಮ್ಮ ದೇಹದ ತೂಕವನ್ನೂ ಕಾಯ್ದುಕೊಳ್ಳಬಹುದು. ಜತೆಗೆ ಹೊಟ್ಟೆಯ ಕೊಬ್ಬನ್ನೂ ಕರಗಿಸಬಹುದು.
ಸೂರ್ಯನಮಸ್ಕಾರ
ಪ್ರತಿದಿನ ಸೂರ್ಯನಮಸ್ಕಾರದ ಅಭ್ಯಾಸ ಮಾಡಿಕೊಳ್ಳುವುದರಿಂದ ಹಾರ್ಮೋನ್ಅನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಬಹುದು. ಸೂರ್ಯನಮಸ್ಕಾರದಿಂದ ದೇಹದಲ್ಲಿನ ಚಯಾಪಯಗಳೂ ಕೂಡ ಸರಾಗವಾಗಿ ಆಗುತ್ತದೆ. ಹೀಗಾಗಿ ಪ್ರತಿದಿನ 12 ಸೂರ್ಯನಮಸ್ಕಾರವನ್ನು ಮಾಡಿ. ಇದು ನಿಮ್ಮ ಹೊಟ್ಟೆಯ ಬೊಜ್ಜನ್ನು ಕಡಿಮೆಗೊಳಿಸುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯೆ ದಿಕ್ಸಾಭವಸರ್.
ಕಪಾಲಭಾತಿ ಪ್ರಾಣಾಯಾಮ
ಕಪಾಲಭಾತಿ ಪ್ರಾಣಾಯಾಮ ನಿಮ್ಮ ಉಸಿರಾಟದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಪ್ರತಿದಿನ 1 ಸಾವಿರ ಕಪಾಲಭಾತಿ ಮಾಡುವುದಿರಂದ ನಿಮ್ಮ ಹೊಟ್ಟೆಯ ಬೊಜ್ಜನ್ನೂ ಕರಗಿಸುತ್ತದೆ. ಮುಖ್ಯವಾಗಿ ಹೊಟ್ಟೆಯ ಮೇಲೆ ನೇರವಾಗಿ ಕಪಾಲಭಾತಿ ಪರಿಣಾಮ ಬೀರುತ್ತದೆ ಹೀಗಾಗಿ ದೇಹದಲ್ಲಿ ರಕ್ತ ಸಂಚಾರ ಸುಲಲಿತವಾಗಿ ನಡೆಯುತ್ತದೆ. ಕಪಾಲಭಾತಿ ಪ್ರಾಣಾಯಾಮವು ಅನಿಯಮಿತ ಮುಟ್ಟಿನ ಸಮಸ್ಯೆಗೂ ಪರಿಹಾರ ನೀಡುತ್ತದೆ. ನೀವು ಪಿಸಿಒಡಿ ಸಮಸ್ಯೆಯಿಂದ ಬಳಲುತ್ತಿದ್ದರೆ ಕಪಾಲಭಾತಿ ಉತ್ತಮ ಪರಿಹಾರವಾಗಿದೆ. ದೇಹದಲ್ಲಿನ ಅತಿಯಾದ ಕೊಬ್ಬನ್ನು ಕರಗಿಸಲೂ ಕಪಾಲಭಾತಿ ಪ್ರಾಣಾಯಾಮ ಸಹಾಯಕವಾಗಿದೆ.
ಸಿರ್ಕಾಡಿಯನ್ ಇಂಟರ್ಮಿಟೆಂಟ್ ಫಾಸ್ಟಿಂಗ್ (CIF)
ಸಿರ್ಕಾಡಿಯನ್ ಇಂಟರ್ಮಿಟೆಂಟ್ ಫಾಸ್ಟಿಂಗ್ ಎಂದರೆ ಸೂರ್ಯಾಸ್ತದ ನಂತರ ಆಹಾರ ಸೇವಿಸದಿರುವುದು. ಸೂರ್ಯಾಸ್ತದ ನಂತರ ಆಹಾರ ಸೇವನೆ ದೇಹಕ್ಕೆ ಒಳಿತಲ್ಲ. ರಾತ್ರಿ 8 ಗಂಟೆಯೊಳಗೆ ಊಟ ಮಾಡುವುದು ಆರೋಗ್ಯಕ್ಕೆ ಒಳಿತು ಎನ್ನುತ್ತಾರೆ ಆಯುರ್ವೇದ ತಜ್ಞರು.
ಬಿಸಿ ನೀರಿನ ಸೇವನೆ
ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಕೇವಲ ಹೊಟ್ಟೆಯ ಬೊಜ್ಜನ್ನು ಮಾತ್ರವನ್ನು ದೇಹದ ಇತರ ಭಾಗಗಳಲ್ಲೂ ಇರುವ ಬೊಜ್ಜನ್ನು ಕರಗಿಸುತ್ತದೆ, ಅಲ್ಲದೆ ಬಿಸಿ ನೀರಿನ ಸೇವನೆಯಿಂದ ಹೊಟ್ಟೆಯ ಗ್ಯಾಸ್ಟ್ರಿಕ್, ಆಸಿಡಿಟಿ ಸಮಸ್ಯೆಯಿಂದಲೂ ದೂರವಿರಬಹುದು.
ಸರಿಯಾದ ನಿದ್ದೆ
ಆರೋಗ್ಯಯುತ ವಯಸ್ಕ ವ್ಯಕ್ತಿಗೆ ದಿನಕ್ಕೆ 7-8 ಗಂಟೆಯಾದರೂ ನಿದ್ದೆಯ ಅವಶ್ಯಕತೆ ಇರುತ್ತದೆ. ಹೀಗಾಗಿ ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡುವುದು ಒಳಿತು. ನಿದ್ದೆಯ ಕೊರತೆಯಿಂದಲೂ ದೇಹದಲ್ಲಿ ಬೊಜ್ಜು ಸೇರಿಕೊಳ್ಳುತ್ತದೆ. ಹೀಗಾಗಿ ಚೆನ್ನಾಗಿ ನಿದ್ದೆ ಮಾಡುವುದರಿಂದ ಹಾರ್ಮೋನ್ ವ್ಯತ್ಯಾಸದಂತಹ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಉತ್ತಮ ನಿದ್ದೆ ನಿಮ್ಮ ಮಾನಸಿಕ ಆರೋಗ್ಯವನ್ನೂ ಸರಿಪಡಿಸುತ್ತದೆ.
Published On - 12:40 pm, Thu, 30 December 21