ಮಹಿಳೆಯರಲ್ಲಿ ಕಾಡುವ ಗರ್ಭಕಂಠದ ಕ್ಯಾನ್ಸರ್​ಗೆ ಕಾರಣಗಳೇನು? ಯಾವ ರೀತಿ ಚಿಕಿತ್ಸೆ ಅಗತ್ಯ? ಇಲ್ಲಿದೆ ಮಾಹಿತಿ

| Updated By: Pavitra Bhat Jigalemane

Updated on: Jan 19, 2022 | 1:42 PM

ಗರ್ಭಕಂಠದ ಕ್ಯಾನ್ಸರ್​ಗೆ ಶಸ್ತ್ರಚಿಕಿತ್ಸೆ, ಕಿಮೋಥೆರಪಿ, ರೇಡಿಯೋ ಥೆರಫಿಗಳಂತಹ ಚಿಕಿತ್ಸಾ ವಿಧಾಗಳಿವೆ. ಆದರೆ ಈ ಚಿಕಿತ್ಸೆಗಳು ವಯಸ್ಯ, ಕ್ಯಾನ್ಸರ್​ನ ಹಂತ ಮತ್ತು ಮಹಿಳೆಯ ಆರೋಗ್ಯದ ಮೇಲೆ ನಿರ್ಧಾರವಾಗುತ್ತದೆ

ಮಹಿಳೆಯರಲ್ಲಿ ಕಾಡುವ ಗರ್ಭಕಂಠದ ಕ್ಯಾನ್ಸರ್​ಗೆ ಕಾರಣಗಳೇನು? ಯಾವ ರೀತಿ ಚಿಕಿತ್ಸೆ ಅಗತ್ಯ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us on

ಕ್ಯಾನ್ಸರ್​ ಹೆಸರು ಕೇಳಿದರೇ ಒಂದು ರೀತಿಯ ಭಯ ಆರಂಭವಾಗುತ್ತದೆ. ಜೀವವನ್ನೇ ಕಿತ್ತು ತಿನ್ನುವ ಕ್ಯಾನ್ಸರ್​ಗಳಲ್ಲಿ ಹಲವು ವಿಧಗಳಿವೆ. ಅದರಲ್ಲಿ ಒಂದು ಗರ್ಭಕಂಠದ ಕ್ಯಾನ್ಸರ್​ (Cervical Cancer)  ಮಹಿಳೆಯರಲ್ಲಿ ಕಾಡುವ ಈ ಕಾಯಿಲೆ​ ಗರ್ಭಾಶಯ ಮತ್ತು ಯೋನಿಯನ್ನು ಸಂಪರ್ಕಿಸುವ ಗರ್ಭಕಂಠದಲ್ಲಿ ಜೀವಕೋಶಗಳು ಬದಲಾದಾಗ ಗರ್ಭಕಂಠದ ಕ್ಯಾನ್ಸರ್ ಸಂಭವಿಸುತ್ತದೆ. ಹ್ಯುಮನ್​ ಪ್ಯಾಪಿಲೋಮವೈರಸ್ (HPV -human papillomavirus) ಸೋಂಕಿನಿಂದ ಗರ್ಭಕಂಠದ ಕ್ಯಾನ್ಸರ್​ ಉಂಟಾಗುತ್ತವೆ, ಇದನ್ನು ಲಸಿಕೆಯಿಂದ ತಡೆಗಟ್ಟಬಹುದಾಗಿದೆ. ಆದರೆ ಈ ಕಾಯಿಲೆ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಆದ್ದರಿಂದ ದೇಹದಲ್ಲಿ ಆಗುವ ಸಣ್ಣ ಬದಲಾವಣೆಯನ್ನೂ ಎಚ್ಚರಿಕೆಯಿಂದ ಗಮನಿಸುವುದು ಅಗತ್ಯವಾಗಿದೆ. ಸೆಂಟರ್​ ಫಾರ್​ ಡಿಸೀಸ್​ ಕಂಟ್ರೋಲ್ ಆ್ಯಂಡ್​ ಪ್ರಿವೆನ್ಷನ್ (Centers for Disease Control and Prevention (CDC))​ ಸಂಸ್ಥೆ ಗರ್ಭಕಂಠದ ಕ್ಯಾನ್ಸರ್​ಗೆ 9-26 ವರ್ಷದ ಎಲ್ಲಾ ಮಹಿಳೆಯರಿಗೆ ಚುಚ್ಚುಮದ್ದನ್ನು ಸಲಹೆ ನೀಡಿದೆ. ಇದೀಗ 26-45 ವರ್ಷದ ಮಹಿಳೆಯರಿಗೂ ಚುಚ್ಚುಮದ್ದನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದೆ. 

ಗರ್ಭಕಂಠದ ಕ್ಯಾನ್ಸರ್​ನ ಸಾಮಾನ್ಯ ಲಕ್ಷಣಗಳು
ಮೆಡಿಕಲ್​ ನ್ಯೂಸ್​ ಟುಡೆ ವರದಿಯ ಪ್ರಕಾರ,  ಸಾಮಾನ್ಯವಾಗಿ ಗರ್ಭಕಂಠದ ಕ್ಯಾನ್ಸರ್​ ರೋಗವು ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಈ ಲಕ್ಷಣಗಳು ನಿಮಗೆ ಮುನ್ಸೂಚನೆಯನ್ನು ನೀಡುತ್ತವೆ.

ಮಾಸಿಕ ದಿನಗಳ ನಡುವೆ ರಕ್ತಸಾವ
ಲೈಂಗಿಕ ಸಂಭೋಗದ ಬಳಿಕ ರಕ್ತಸ್ರಾವವಾಗುವುದು
ಸಂಭೋಗದ ನಡುವೆ ಅಸ್ವಸ್ಥತೆ ಕಾಡುವುದು
ಯೋನಿಯಲ್ಲಿ ಅನಗತ್ಯ ರಕ್ತಸ್ರಾವ
ಯೋನಿಯಲ್ಲಿ ಆಗಾಗ ನೋವು ಕಾಣಿಸಿಕೊಳ್ಳುವುದು.

ಗರ್ಭಕಂಠ ಕ್ಯಾನ್ಸರ್​ನ ಹಂತಗಳು
ಕ್ಯಾನ್ಸರ್​ ಯಾವ ಹಂತದಲ್ಲಿದೆ ಎಂದು ತಿಳಿದುಕೊಂಡರೆ ವೈದ್ಯರಿಗೂ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಹೀಗಾಗಿ ಕ್ಯಾನ್ಸರ್​ನ 4 ಹಂತಗಳ ಬಗ್ಗೆ ತಿಳಿದುಕೊಳ್ಳಿ.

ಮೊದಲು ದೇಹದಲ್ಲಿ ಕೇವಲ ಕ್ಯಾನ್ಸರ್​ಗೆ ಕಾರಣವಾದ ಜೀವಕೋಶಗಳು ಇರುತ್ತವೆ.
ಮೊದಲನೇ ಹಂತದಲ್ಲಿ ಕ್ಯಾನ್ಸರ್​ ಕೋಶಗಳು ಬೆಳೆದು ಗರ್ಭಕಂಠಕ್ಕೆ ಹೋಗುತ್ತವೆ. ಕೆಲವೊಮ್ಮ ಗರ್ಭಾಶಯಕ್ಕೂ ತಗುಲುವ ಸಾಧ್ಯತೆಗಳಿರುತ್ತದೆ. ಎರಡನೇ ಹಂತದಲ್ಲಿ  ಗರ್ಭಕಂಠ ಮತ್ತು ಗರ್ಭಾಶಯದ ಬಳಿ ಇರುವ ಈ ಜೀವಕೋಶಗಳು ದುಗ್ಧರಸ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ.
ಮೂರನೇ ಹಂತದಲ್ಲಿ ಕ್ಯಾನ್ಸರ್​ ಕೋಶಗಳು ಯೋನಿ ಮತ್ತು ಸೊಂಟದ ಗೋಡೆಗಳಲ್ಲಿ ಸೇರಿಕೊಂಡು ಮೂತ್ರನಾಳಗಳನ್ನು ನಿರ್ಬಂಧಿಸುತ್ತವೆ, ಮೂತ್ರಕೋಶದಿಂದ ಮೂತ್ರವನ್ನು ಸಾಗಿಸುವ ನಾಳಗಳ ಮೇಲೆ ಪರಿಣಾಮ ಬೀರಬಹುದು ಅಥವಾ ಬೀರದೆಯೂ ಇರಬಹುದು. ಇನ್ನು ನಾಲ್ಕನೇ ಹಂತದಲ್ಲಿ ಕ್ಯಾನ್ಸರ್​ ಕೋಶಗಳು ಗುದನಾಳ, ಮೂತ್ರಕೋಶಗಳಿಗೆ ಹರಡಿ ನಂತರ ಯಕೃತ್ತು, ಮೂಳೆಗಳು, ಶ್ವಾಸಕೋಶ, ದುಗ್ಥ ಗ್ರಂಥಿಗಳು ಸೇರದಂತೆ ದೇಹದ ಇತರ ಭಾಗಗಳಿಗೂ ಹರಡುತ್ತದೆ.

ಗರ್ಭಕಂಠದ ಕ್ಯಾನ್ಸರ್​ಗೆ ಕಾರಣಗಳೇನು? 
ಅನಿಯಂತ್ರಿತ ಕ್ಯಾನ್ಸರ್​ ಕೋಶಗಳ ಉತ್ಪಾದನೆ ಮತ್ತು ಅಸಹಜ ಬೆಳವಣಿಗೆ ಅಪಾಯಕಾರಿ ಗರ್ಭಕಂಠದ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಕ್ರಮೇಣ ಇದು ಗಡ್ಡೆಗಳಾಗಿ ಮಾರ್ಪಾಡಾಗುತ್ತದೆ.

HPV (human papillomavirus)
ಇದು ಅಸುರಕ್ಷಿತ ಲೈಂಗಕತೆಯಿಂದ ಹರಡುವ  ವೈರಸ್​ ಆಗಿದೆ.  100 ಕ್ಕೂ ಹೆಚ್ಚು ವಿವಿಧ ರೀತಿಯ ಈ ವೈರಸ್​ಗಳಲ್ಲಿ 13  ವೈರಸ್​ಗಳು ಗರ್ಭಕಂಠದ ಕ್ಯಾನ್ಸರ್​ಗೆ ಕಾರಣವಾಗಿದೆ.

ಅಸುರಕ್ಷಿತ ಲೈಂಗಿಕತೆ ಮತ್ತು ಜನನ ನಿಯಂತ್ರಣ ಮಾತ್ರೆ ಸೇವನೆ
HPV ಸೋಂಕಿರುವ ಪುರುಷರೊಂದಿಗೆ ಲೈಂಗಿಕತೆಗೆ ಒಳಪಟ್ಟಾಗ  ಸೋಂಕು ಮಹಿಳೆಯರಿಗೆ ತಗುಲುತ್ತದೆ. ಇದರಿಂದ ವೈರಸ್​ ದೇಹದಲ್ಲಿ ಬೆಳವಣಿಗೆಯಾಗಿ ಗರ್ಭಕಂಠದ ಕ್ಯಾನ್ಸರ್​ಗೆ ಕಾರಣವಾಗುತ್ತದೆ.  ಇದರ ಜತೆಗೆ ಮುಖ್ಯವಾಗಿ ಜನನ ನಿಯಂತ್ರಣ ಮಾತ್ರೆಗಳನ್ನು ಹೆಚ್ಚು ಸೇವಿಸಿದಾಗ  ಗರ್ಭಕಂಠದ ಕ್ಯಾನ್ಸರ್​ ತಗುಲುತ್ತದೆ ಎನ್ನುತ್ತಾರೆ ತಜ್ಞರು

ಧೂಮಪಾನ ಮತ್ತು ರೋಗ ನಿರೋಧಕ ಶಕ್ತಿಯ ಕೊರತೆ
ಧೂಮಪಾನದಿಂದ ಗರ್ಭಕಂಠದ ಕ್ಯಾನ್ಸರ್​ ಉಂಟಾಗುತ್ತದೆ. ಅದೇ ರೀತಿ ಎಚ್​ಐವಿ, ಏಡ್ಸ್​ನಂತಹ ಕಾಯಿಲೆಯಿರುವವವರಲ್ಲಿ ರೋಗ ನಿರೋಧಕ ಶಕ್ತಿ  ಕೂಡ ಕಡಿಮೆ ಇರುತ್ತದೆ. ಆದ್ದರಿಂದ ಈ ರೋಗ ಸುಲಭವಾಗಿ ದೇಹವನ್ನು ಆಕ್ರಮಿಸಿಕೊಳ್ಳುತ್ತದೆ.

 ಚಿಕಿತ್ಸೆಗಳೇನು?

ಗರ್ಭಕಂಠದ ಕ್ಯಾನ್ಸರ್​ಗೆ ಶಸ್ತ್ರಚಿಕಿತ್ಸೆ, ಕಿಮೋಥೆರಪಿ, ರೇಡಿಯೋ ಥೆರಫಿಗಳಂತಹ ಚಿಕಿತ್ಸಾ ವಿಧಾಗಳಿವೆ. ಆದರೆ ಈ ಚಿಕಿತ್ಸೆಗಳು ವಯಸ್ಯ, ಕ್ಯಾನ್ಸರ್​ನ ಹಂತ ಮತ್ತು ಮಹಿಳೆಯ ಆರೋಗ್ಯದ ಮೇಲೆ ನಿರ್ಧಾರವಾಗುತ್ತದೆ. ಕ್ಯಾನ್ಸರ್​ ಗರ್ಭಕಂಠಕ್ಕೆ ಹರಡದಿದ್ದಾಗ ಶಸ್ತ್ರಚಿಕಿತ್ಸೆಯ ಮೂಲಕ ಗುಣಮುಖರನ್ನಾಗಿಸಬಹುದು. ಆದರೆ ಮುಂದುವರೆದ ಹಂತಕ್ಕೆ ಹೋದರೆ ಕೀಮೋಥೆರಪಿ ಅಥವಾ ರೇಡಿಯೋ ಥೆರಪಿ ಚಿಕಿತ್ಸೆ ನೀಡಬೇಕಾಗುತ್ತದೆ. ರೇಡಿಯೋ ಥೆರಪಿ ಕ್ಯಾನ್ಸರ್​ ಮತ್ತೆಂದೂ ಕಾಡದ ರೀತಿಯಲ್ಲಿ ಪರಿಹಾರ ನೀಡುತ್ತದೆ ಎನ್ನುವುದು  ತಜ್ಞರ  ಸಲಹೆ.

ಗರ್ಭಕಂಠದ ಕ್ಯಾನ್ಸರ್​ ತಡೆಗಟ್ಟುವಿಕೆ ಹೇಗೆ?

ಲಸಿಕೆ ತೆಗೆದುಕೊಳ್ಳುವುದು
ಗರ್ಭಕಂಠದ ಕ್ಯಾನ್ಸರ್​ ತಡೆಗಟ್ಟಲು ಕ್ಯಾನ್ಸರ್​ಗೆ ಕಾರಣವಾಗಿರುವ Human papillomavirus (HPV) ಸೋಂಕಿನ ವಿರುದ್ದ ಲಸಿಕೆಯನ್ನು ಪಡೆದುಕೊಳ್ಳಬೇಕು. ಈಗಾಗಲೇ  9 ವರ್ಷ ಮೇಲ್ಪಟ್ಟ ಎಲ್ಲಾ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲು ಅಮೆರಿಕದ  ಸೆಂಟರ್​ ಫಾರ್​ ಡಿಸೀಸ್​ ಕಂಟ್ರೋಲ್ ಆ್ಯಂಡ್​ ಪ್ರಿವೆನ್ಷನ್ ಸೂಚಿಸಿದೆ.

ಸುರಕ್ಷಿತ ಲೈಂಗಿಕ ಕ್ರಿಯೆ ಮತ್ತು ಧೂಮಪಾನದಿಂದ ದೂರವಿರುವುದು
ರೋಗದಿಂದ ದೂರಉಳಿಯಲು ಸುರಕ್ಷಿತ ಲೈಂಗಿಕ ಕ್ರಿಯೆಯನ್ನು ರೂಢಿಸಿಕೊಳ್ಳಬೇಕು. ಸ್ವಚ್ಛತೆಯೆಡೆಗೆ ಹೆಚ್ಚು ಗಮನ ನೀಡಬೇಕು. ಜತೆಗೆ ಧೂಮಪಾನದಿಂದ ದೂರುಳಿಯಬೇಕು. ಇದರ ಜತೆಗೆ ಆದಷ್ಟು ಲೈಂಗಿಕ ಸಂಭೋಗಕ್ಕೆ ಒಳಪಡುವುದನ್ನು ಮುಂದೂಡಿ.

ಸ್ಕ್ರೀನಿಂಗ್​
ಗರ್ಭಕಂಠದ ಕ್ಯಾನ್ಸರ್​ನ ಲಕ್ಷಣಗಳು ಕಾಣಿಸಿಕೊಂಡರೆ ಸ್ಕ್ರೀನಿಂಗ್​ ಅಥವಾ ಎಕ್ಸರೆ ಮಾಡಿಸಿಕೊಳ್ಳಿ.ಆದಗ ದೇಹದಲ್ಲಾದ ಬದಲಾವಣೆ ಗೊತ್ತಾಗುತ್ತದೆ.

ಇದನ್ನೂ ಓದಿ:

ಡಿಯೋಡರೆಂಟ್ ಬಳಕೆ ಕ್ಯಾನ್ಸರ್​ಗೆ ಕಾರಣವಾಗುತ್ತದೆಯೇ? ಇಲ್ಲಿದೆ ಮಾಹಿತಿ ಪರಿಶೀಲಿಸಿ