Coronavirus and Pregnancy: ರಕ್ತ ಹೆಪ್ಪುಕಟ್ಟುವ ಸಮಸ್ಯೆಯಿರುವ ಗರ್ಭಿಣಿಗೂ ಲಸಿಕೆ ಸುರಕ್ಷಿತ: ಸ್ತ್ರೀರೋಗ ತಜ್ಞರ ಸಲಹೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 19, 2022 | 4:40 PM

Corona Vaccine: ಲಸಿಕಾಕರಣವು ತಾಯಂದಿರನ್ನು ಕೊರೊನಾ ಸೋಂಕಿನಿಂದ, ಒಮಿಕ್ರಾನ್, ಡೆಲ್ಟಾ ರೂಪಾಂತರಿಗಳ ತೀವ್ರತೆಯಿಂದ ಕಾಪಾಡುವ ಜೊತೆಗೆ, ಅವರ ಹೊಟ್ಟೆಯಲ್ಲಿರುವ ಭ್ರೂಣವನ್ನೂ ಸೋಂಕಿನಿಂದ ರಕ್ಷಿಸುತ್ತದೆ ಎನ್ನುತ್ತಾರೆ ತಜ್ಞರು.

Coronavirus and Pregnancy: ರಕ್ತ ಹೆಪ್ಪುಕಟ್ಟುವ ಸಮಸ್ಯೆಯಿರುವ ಗರ್ಭಿಣಿಗೂ ಲಸಿಕೆ ಸುರಕ್ಷಿತ: ಸ್ತ್ರೀರೋಗ ತಜ್ಞರ ಸಲಹೆ
ಕೊವಿಡ್ ಲಸಿಕೆ ಪಡೆಯುತ್ತಿರುವ ಗರ್ಭಿಣಿ
Follow us on

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು (Coronavirus) ಹೆಚ್ಚಾಗುತ್ತಿದೆ. ಕೊವಿಡ್ ಪಿಡುಗಿಗೆ ಕಡಿವಾಣ ಹಾಕಲು ಲಸಿಕೆ ಪಡೆಯುವುದೊಂದೇ ಪರಿಹಾರ (Covid Vaccine) ಎಂದು ತಜ್ಞರು ಸಾರಿ ಹೇಳಿದ್ದಾರೆ. ಭಾರತದಲ್ಲಿ ಈಗಾಗಲೇ ಎಲ್ಲ ಅರ್ಹ ವಯೋಮಾನದವರಿಗೆ ಲಸಿಕಾಕರಣ (Vaccination) ಅಭಿಯಾನವನ್ನು ವೇಗವಾಗಿ ಅನುಷ್ಠಾನಗೊಳಿಸಲಾಗಿದೆ. ಆದರೂ ದೇಶದ ಸಾಕಷ್ಟು ಜನರಿಗೆ ಈವರೆಗೂ ಒಂದೇಒಂದು ಡೋಸ್ ಲಸಿಕೆಯೂ ಸಿಕ್ಕಿಲ್ಲ. ಇಂಥವರು ಸೋಂಕಿನ ತೀವ್ರ ಅಪಾಯ ಎದುರಿಸುತ್ತಿದ್ದಾರೆ.

ಜನವರಿ 15ರಂದು ಸರ್ಕಾರ ನೀಡಿರುವ ಲೆಕ್ಕದ ಪ್ರಕಾರ 2.78 ಕೋಟಿ ಡೋಸ್​ಗಳನ್ನು ಮಾತ್ರ ಗರ್ಭಿಣಿಯರಿಗೆ (Pregnant Women) ನೀಡಲಾಗಿದೆ. ಈ ಪೈಕಿ 1.59 ಮೊದಲ ಡೋಸ್ ಮತ್ತು 1.19 ಕೋಟಿ ಎರಡನೇ ಡೋಸ್ ನೀಡಲಾಗಿದೆ. ಗರ್ಭಿಣಿಯರಿಗೆ ಲಸಿಕೆ ನೀಡಿರುವ ಬಗ್ಗೆ ಮಾಹಿತಿ ಸಮರ್ಪಕವಾಗಿ ಸಿಗುತ್ತಿಲ್ಲ. ರಾಜ್ಯವಾರು ದತ್ತಾಂಶ ಸೆಪ್ಟೆಂಬರ್-ಅಕ್ಟೋಬರ್ 2021ರವರೆಗೆ ಮಾತ್ರ ಸಾರ್ವಜನಿಕವಾಗಿ ಲಭ್ಯವಿದೆ. ಈ ಗುಂಪಿಗೆ ಶೀಘ್ರ ಲಸಿಕೆ ನೀಡದಿದ್ದರೆ ಅವರು ಮುಂದಿನ ದಿನಗಳಲ್ಲಿ ಸೋಂಕಿತರಾಗಿ ಹಲವು ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ. ಗರ್ಭಿಣಿಯರ ಮೇಲೆ ಒಮಿಕ್ರಾನ್ ಸೋಂಕಿನ ಪರಿಣಾಮದ ಬಗ್ಗೆಯೂ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ನನ್ನ ಕ್ಲಿನಿಕ್​ಗೆ ಬರುವವರ ಸಂಖ್ಯೆ ಮಾತ್ರ ಹೆಚ್ಚಾಗುತ್ತಿದೆ. ನನ್ನ ನಿಗಾವಣೆಯಲ್ಲಿರುವ ಬಹುತೇಕರು ಲಸಿಕೆ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಗರ್ಭದಲ್ಲಿರುವ ಶಿಶುವಿನ ಮೇಲೆ ಲಸಿಕೆಯಿಂದ ದುಷ್ಪರಿಣಾಮ ಆಗಬಹುದು ಎನ್ನುವುದು ಅವರ ಭೀತಿ ಎಂದು ನೊಯ್ಡಾದ ಅಪೊಲೊ ಆಸ್ಪತ್ರೆಯಲ್ಲಿ ಗೈನಕಾಲಜಿಸ್ಟ್ ಅಗಿರುವ ಮಿಥೀ ಬಾನೊಟ್ ವಿವರಿಸಿದರು.

ತಮ್ಮ ಬಳಿ ಚಿಕಿತ್ಸೆ ಪಡೆಯುತ್ತಿರುವ 12 ಗರ್ಭಿಣಿಯರ ಪೈಕಿ ಮೂವರು ಎರಡನೇ ತ್ರೈಮಾಸಿಕದಲ್ಲಿದ್ದಾರೆ. ಅಂದರೆ ಗರ್ಭ ಧರಿಸಿ 6 ತಿಂಗಳು ಆಗಿವೆ. ಇವರಲ್ಲಿ ಕೊವಿಡ್​ನ ಸೂಕ್ಷ್ಮ ಲಕ್ಷಣಗಳು ಕಾಣಿಸಿದವು. ಮನೆಯಲ್ಲಿಯೇ ಐಸೊಲೇಟ್ ಆಗಿದ್ದ ಅವರ ಪರಿಸ್ಥಿತಿಯನ್ನು ಪ್ರತಿದಿನ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿತ್ತು. ಈ ಪೈಕಿ ಮೂವರಲ್ಲಿ ಒಬ್ಬರು ಎರಡೂ ಡೋಸ್ ಲಸಿಕೆ ಪಡೆದವರು. ಆದರೂ ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ. ನನ್ನ ಬಳಿ ಚಿಕಿತ್ಸೆ ಪಡೆಯುತ್ತಿರುವ ಇತರರಿಗೆ ಆದಷ್ಟೂ ಶೀಘ್ರ ಲಸಿಕೆ ಹಾಕಿಸಿಕೊಳ್ಳಲು ಸೂಚಿಸಿದ್ದೇವೆ ಎಂದಿದ್ದಾರೆ.

ದೆಹಲಿಯಲ್ಲಿ ಸುಮಾರು 2 ಲಕ್ಷ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಲಸಿಕೆ ಪಡೆದಿದ್ದಾರೆ. ಈವರೆಗೆ ಲಸಿಕೆ ಪಡೆಯದವರಿಗೆ ಜಾಗೃತಿ ಮೂಡಿಸಲು ದೆಹಲಿ ಸರ್ಕಾರವು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಿಗಿದೆ.

ಮೊದಲ ಡೋಸ್ ತೆಗೆದುಕೊಳ್ಳಲು ಯಾವುದು ಸೂಕ್ತ ಸಮಯ?
ಗರ್ಭಧಾರಣೆ ಮತ್ತು SARS CoV 2 ನಡುವಣ ಸಂಬಂಧದ ಬಗ್ಗೆ ಯಾವುದೇ ಅಧ್ಯಯನಗಳು ನಡೆದಿಲ್ಲ, ದತ್ತಾಂಶಗಳೂ ಲಭ್ಯವಿಲ್ಲ. ಗರ್ಭಿಣಿಯರು ಲಸಿಕೆ ಪಡೆಯುವ ಬಗ್ಗೆ ನಿರ್ದಿಷ್ಟವಾಗಿ ಹೀಗೆ ಎಂದು ಹೇಳಲು ಆಗುವುದಿಲ್ಲ. ಆದರೆ ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಲಸಿಕೆ ಪಡೆಯುವುದು ಸುರಕ್ಷಿತವಲ್ಲ ಎಂದು ಬಹುತೇಕ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ‘ನೀವು ಎರಡೂ ಡೋಸ್ ಲಸಿಕೆ ಪಡೆಯುವುದು ಬಹಳ ಮುಖ್ಯ. ಗರ್ಭಧರಿಸಿ ಇನ್ನೂ ಮೂರು ತಿಂಗಳು ಆಗದಿದ್ದರೆ, ಅಂಥ ಮಹಿಳೆಯರಿಗೆ ಲಸಿಕೆ ಪಡೆಯುವುದನ್ನು ನಿಧಾನಿಸುವಂತೆ ಸಲಹೆ ಮಾಡುತ್ತೇವೆ. ಭ್ರೂಣ ತೀರಾ ಸೂಕ್ಷ್ಮವಾಗಿರುವುದರಿಂದ ಈ ಹಂತದಲ್ಲಿ ಲಸಿಕೆ ತೆಗೆದುಕೊಳ್ಳುವುದು ಬೇಡ ಎಂದೇ ಹೇಳುತ್ತೇವೆ. ಒಂದು ಸಲ ಭ್ರೂಣದ ಬೆಳವಣಿಗೆಯು ತೃಪ್ತಿಕರವಾಗಿದೆ ಎನಿಸಿದರೆ ನಂತರ ಗರ್ಭಿಣಿಯರು ಕೊವಿಡ್ ನಿರೋಧಕ ಲಸಿಕೆ ಪಡೆಯಬಹುದು. ಅದು ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಯಾವುದು ಆದರೂ ಪರವಾಗಿಲ್ಲ.

‘ಈ ಹಿಂದೆ ರಕ್ತ ಹೆಪ್ಪುಕಟ್ಟುವ ಸಮಸ್ಯೆ ಎದುರಿಸಿದ್ದರೆ, ಅಂಥವರು ಕೊವ್ಯಾಕ್ಸಿನ್ ಪಡೆಯಬೇಕು ಎಂದು ಸಲಹೆ ಮಾಡುತ್ತೇವೆ. ಗರ್ಭಿಣಿಯರು ಉಳಿದವರಿಗಿಂತ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಕೈತೊಳೆಯುವುದು, ಸ್ಯಾನಿಟೈಸರ್ ಬಳಸುವುದು, ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲ ರೀತಿಯ ಕೊವಿಡ್ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾಧ್ಯವಾದ ಮಟ್ಟಿಗೂ ಪ್ರತ್ಯೇಕವಾಗಿರುವುದು (ಸೆಲ್ಫ್ ಐಸೊಲೇಶನ್) ಕ್ಷೇಮ. ಕೊರೊನಾ ಅಲೆ ವ್ಯಾಪಕವಾಗಿದ್ದಾಗ ಹೀಗೆ ಪ್ರತ್ಯೇಕವಾಗಿರುವುದು ಅತ್ಯಗತ್ಯ. ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಪ್ರತ್ಯೇಕವಾಸವನ್ನು ಪಾಲಿಸಬೇಕು. ಕೊರೊನಾದ ಒಮಿಕ್ರಾನ್ ರೂಪಾಂತರಿಯು ತೀವ್ರಗತಿಯಲ್ಲಿ ಹರಡುತ್ತದೆ ಎಂಬುದು ನಮಗೆ ಗೊತ್ತಿದೆ. ಹೀಗಾಗಿಯೇ ನಾವು ಗರ್ಭಿಣಿಯರಿಗೆ ಕೊರೊನಾ ಹರಡುವುದನ್ನು ತಡೆಯಲು ಯತ್ನಿಸುತ್ತಿದ್ದೇವೆ. ಸೋಂಕಿನ ತೀವ್ರತೆ ಕಡಿಮೆ ಮಾಡುವುದಕ್ಕಿಂತಲೂ ಗರ್ಭಿಣಿಯರು ಸೋಂಕು ತಗುಲದಂತೆ ಎಚ್ಚರವಹಿಸುವುದು ಅತ್ಯಂತ ಮುಖ್ಯ’ ಎನ್ನುತ್ತಾರೆ ಮುಂಬೈ ವಕ್ಹಾರ್ಟ್ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ.ಗಾಂಧಾಲಿ ದೇವರೂಖರ್.

ಗುರುಗ್ರಾಮದ ಮಣಿಪಾಲ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಾಗಿರುವ ಡಾ.ಶರ್ಮಿಳಾ ಸೋಲಂಕಿ ಅವರದೂ ಇದೇ ಅಭಿಪ್ರಾಯ. ‘ಮೊದಲು ತ್ರೈಮಾಸಿಕ ಮುಗಿದಿದ್ದರೆ ಲಸಿಕೆಯ ಎರಡೂ ಡೋಸ್​ಗಳನ್ನು ಸಾಧ್ಯವಾದಷ್ಟೂ ಬೇಗ ತೆಗೆದುಕೊಳ್ಳಿ. ಲಸಿಕೆಯು ನಿಮಗೆ ಕೊರೊನಾ ಸೋಂಕಿನಿಂದ ನೂರಕ್ಕೆ ನೂರರಷ್ಟು ರಕ್ಷಣೆ ಕೊಡದಿರಬಹುದು. ಆದರೆ ಕೊರೊನಾ ಸೋಂಕು ನಿಮ್ಮ ದೇಹದಲ್ಲಿ ಪ್ರಬಲವಾಗಿ ಬೆಳೆದು, ಮತ್ತೇನಾದರೂ ಗಂಭೀರ ಸಮಸ್ಯೆ ಎದುರಾಗುವುದನ್ನು ಇದು ತಡೆಯುತ್ತದೆ. ಇದು ಮಹಿಳೆ ಮತ್ತು ಭ್ರೂಣಕ್ಕೆ ಕ್ಷೇಮ’ ಎನ್ನುತ್ತಾರೆ ಅವರು.

ಭ್ರೂಣವೂ ಪ್ರತಿಕಾಯಗಳನ್ನು ಸ್ವೀಕರಿಸಬಲ್ಲದೆ?
ಲಸಿಕೆ ಪಡೆಯುವುದರಿಂದ ಭ್ರೂಣಕ್ಕೆ ಯಾವುದೇ ಅಪಾಯವಿಲ್ಲ. ಲಸಿಕೆ ಪಡೆದ ನಂತರ ಬರುವ ಜ್ವರದ ಬಗ್ಗೆಯೂ ಹೆಚ್ಚು ಯೋಚಿಸಬೇಕಾದ ಅಗತ್ಯವಿಲ್ಲ ಎಂದು ಬಹುತೇಕ ಸ್ತ್ರೀರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಲಸಿಕಾಕರಣವು ತಾಯಂದಿರನ್ನು ಕೊರೊನಾ ಸೋಂಕಿನಿಂದ, ಒಮಿಕ್ರಾನ್ / ಡೆಲ್ಟಾ ರೂಪಾಂತರಿಗಳ ತೀವ್ರತೆಯಿಂದ ಕಾಪಾಡುವ ಜೊತೆಗೆ, ಅವರ ಹೊಟ್ಟೆಯಲ್ಲಿರುವ ಭ್ರೂಣವನ್ನೂ ಸೋಂಕಿನಿಂದ ರಕ್ಷಿಸುತ್ತದೆ. ಮೊದಲ ತ್ರೈಮಾಸಿಕ ಮುಗಿದ ನಂತರ ಎರಡೂ ಡೋಸ್ ಲಸಿಕೆ ಪಡೆದುಕೊಳ್ಳುವುದು ಒಳ್ಳೆಯದು’ ಎನ್ನುತ್ತಾರೆ ದೆಹಲಿಯ ಪಿಎಸ್​ಆರ್​ಐ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಾಗಿರುವ ಡಾ.ಬಿರ್​ಬಲ ರೈ. ಅವರಿಂದ ಚಿಕಿತ್ಸೆ ಪಡೆಯುತ್ತಿರುವ ಶೇ 90ರಷ್ಟು ಗರ್ಭಿಣಿಯರು ಈಗಾಗಲೇ ಲಸಿಕೆ ಪಡೆದಿದ್ದಾರೆ. ಉಳಿದವರಿಗೂ ಲಸಿಕೆ ಪಡೆದುಕೊಳ್ಳುವಂತೆ ಮನವೊಲಿಸಲು ಡಾ.ಬಿರ್​ಬಲ ಯತ್ನಿಸುತ್ತಿದ್ದಾರೆ. ‘ಕೌಟುಂಬಿಕ ಒತ್ತಡ ಮತ್ತು ಸಮಾಜದಲ್ಲಿ ಹರಡಿರುವ ತಪ್ಪು ಕಲ್ಪನೆಗಳು, ಲಸಿಕೆಯಿಂದ ಹೆರಿಗೆಗೆ ತೊಂದರೆಯಾಗುತ್ತದೆ, ಭ್ರೂಣಕ್ಕೆ ಅಪಾಯ ಎಂಬ ತಪ್ಪು ಗ್ರಹಿಕೆಗಳ ಕಾರಣದಿಂದ ಹಲವು ಮಹಿಳೆಯರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ’ ಎನ್ನುತ್ತಾರೆ ಅವರು.

ಗರ್ಭ ಧರಿಸಿದ ಮಹಿಳೆಯ ದೇಹದಲ್ಲಿ ಬೆಳೆಯುವ ಎಲ್ಲ ಪ್ರತಿಕಾಯಗಳು ಆಕೆಯ ಹೊಟ್ಟೆಯಲ್ಲಿರುವ ಭ್ರೂಣಕ್ಕೂ ವರ್ಗಾವಣೆಯಾಗುತ್ತವೆ. ಗರ್ಭಿಣಿಯರಿಗೆ ಕೆಲ ಲಸಿಕೆಗಳನ್ನು ನೀಡಲು ಇದೇ ಮುಖ್ಯ ಕಾರಣ. ಭ್ರೂಣವು ಗಂಭೀರ ಆರೋಗ್ಯ ಸಮಸ್ಯೆಗೆ ಸಿಲುಕದಂತೆ ತಡೆಯಲೆಂದು ಗರ್ಭಿಣಿಯರಿಗೆ, ಶಿಶುಗಳ ಆರೋಗ್ಯ ಉತ್ತಮವಾಗಿರಬೇಕೆಂಬ ಕಾರಣಕ್ಕೆ ಹಾಲೂಡಿಸುವ ತಾಯಂದಿರಿಗೆ ಕೆಲ ಲಸಿಕೆಗಳನ್ನು ಕೊಡಲಾಗುತ್ತದೆ. ತಾಯಿಯ ಎದೆಹಾಲಿನ ಮೂಲಕ ಪ್ರತಿಕಾಯಗಳು ಮಗುವಿಗೆ ವರ್ಗಾವಣೆಯಾಗುತ್ತವೆ ಎನ್ನುತ್ತಾರೆ ಸೋಲಂಕಿ.

ಲಸಿಕೆ ಪಡೆಯಲು ಮಹಿಳೆಯರಿಗೆ ಹಿಂಜರಿಕೆ ಏಕೆ?
ಲಸಿಕೆ ಹಾಕಿಸಿಕೊಳ್ಳಲು ಮಹಿಳೆಯರಲ್ಲಿ ಹಿಂಜರಿಕೆ ಇದೆ. ಇದಕ್ಕೆ ಕಾರಣಗಳು ಹಲವು ಎನ್ನುತ್ತಾರೆ ಡಾ.ದೇವರೂಖರ್, ‘ಗರ್ಭಿಣಿಯರ ಮೇಲೆ ಕೊವಿಡ್ ಪರಿಣಾಮದ ಬಗ್ಗೆ ಜಾಗೃತಿ ಕೊರತೆ ವ್ಯಾಪಕವಾಗಿದೆ. ಹಲವು ಪ್ರಶ್ನೆಗಳಿಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಗರ್ಭ ಧರಿಸಿರುವಾಗ ಕೊವಿಡ್ ಲಸಿಕೆ ಪಡೆದುಕೊಂಡರೆ ಗರ್ಭಪಾತ ಆಗಬಹುದು ಎಂಬ ಅಭಿಪ್ರಾಯ ಕೆಲವರಲ್ಲಿ ಇದೆ. ಇದು ಸತ್ಯಕ್ಕೆ ದೂರವಾದುದು. ಲಸಿಕೆಗಳು ಗರ್ಭಪಾತಕ್ಕೆ ಕಾರಣವಾಗುವುದಿಲ್ಲ ಎಂದು ಹಲವು ಅಧ್ಯಯನಗಳು ಸಾರಿಹೇಳಿವೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ತಾಯಿಗೆ ಸೋಂಕು ಬರುವುದನ್ನು ತಡೆಯಬಹುದು. ಪ್ರಸಕ್ತ ಕೊವಿಡ್ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವುದನ್ನೂ ತಪ್ಪಿಸಬಹುದು’ ಎಂದು ಅವರು ಹೇಳುತ್ತಾರೆ.

ಕೊವಿಡ್ ಸೋಂಕಿತ ಮಹಿಳೆ ಗರ್ಭ ಧರಿಸಬಹುದೇ?
ಮಹಿಳೆ ಗರ್ಭ ಧರಿಸುವುದು ಒಂದು ಕೌಟುಂಬಿಕ ನಿರ್ಧಾರವಾಗಿರುತ್ತದೆ. ಕೊವಿಡ್ ಮೊದಲ ಮತ್ತು ಎರಡನೇ ಅಲೆಯ ವೇಳೆ ನಮಗೆ ಈ ಕುರಿತು ಹೆಚ್ಚು ದತ್ತಾಂಶಗಳು ಲಭ್ಯವಿರಲಿಲ್ಲ. ಆದರೆ ಈಗ ಹಾಗಲ್ಲ. ನಾವು ಸವಾಲು ಎದುರಿಸಲು ಸನ್ನದ್ಧರಾಗಿದ್ದೇವೆ. ಕೊವಿಡ್-19ರ ಬಗ್ಗೆಯೂ ಸಾಕಷ್ಟು ಮಾಹಿತಿ ಲಭ್ಯವಿದೆ. ರೋಗದ ಗುಣಲಕ್ಷಣಗಳು ಮತ್ತು ಅದು ತಂದೊಡ್ಡಬಹುದಾದ ಅಪಾಯಗಳ ಬಗ್ಗೆ ಅರಿವಿದೆ. ಲಸಿಕೆ ಹಾಕಿಸಿಕೊಳ್ಳದಿದ್ದರೆ ಆಗುವ ಅಪಾಯಗಳ ಬಗ್ಗೆಯೂ ತಿಳಿದಿದೆ ಎನ್ನುತ್ತಾರೆ ಬಿರ್​ಬಲ. ಕೊರೊನಾ ವೈರಾಣು ಇನ್ನೂ ಕೆಲ ಸಮಯ ಭೂಮಿಯಲ್ಲಿ ಇರುತ್ತದೆ. ನಾವು ವೈರಸ್ ಜೊತೆಗೆ ಬದುಕುವುದನ್ನು ಕಲಿಯಬೇಕಿದೆ ಎನ್ನುವುದು ಬಹುತೇಕ ವೈರಾಲಜಿಸ್ಟ್​ಗಳ ಅಭಿಪ್ರಾಯವಾಗಿದೆ. ಪರಿಸ್ಥಿತಿ ಹೀಗಿರುವಾಗ ಗರ್ಭಧಾರಣೆಯನ್ನು ಮುಂದೂಡುವುದು ಸರಿಯಲ್ಲ. ಹೊಸ ಅತಿಥಿಯ ಆಗಮನಕ್ಕೆ ಕುಟುಂಬ ಸಜ್ಜುಗೊಂಡಿದ್ದರೆ ಯಾವುದೇ ಸಮಯ ಒಳ್ಳೇ ಸಮಯ ಎನ್ನುತ್ತಾರೆ ಅವರು.

‘ನಿಮಗೆ ಒಂದು ವೇಳೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, ನೀವು ಗರ್ಭ ಧರಿಸುವುದನ್ನು ಕನಿಷ್ಠ ಎರಡರಿಂದ ಮೂರು ತಿಂಗಳು ಮುಂದೂಡಬೇಕು. ಒಂದು ವೇಳೆ ನೀವು ಗರ್ಭಧರಿಸಿರುವುದು ದೃಢಪಟ್ಟ ನಂತರ ಸೋಂಕು ದೃಢಪಟ್ಟರೆ, ಗರ್ಭಪಾತ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಖಂಡಿತ ಇಲ್ಲ. ಗರ್ಭಿಣಿಗೆ ಕೊವಿಡ್ ಬಂದರೆ ಏನೂ ಸಮಸ್ಯೆಯಿಲ್ಲ. ವೈದ್ಯರ ಸಲಹೆ ಮೇರೆಗೆ ಪ್ರತಿದಿನ ಔಷಧಿಗಳನ್ನು ತೆಗೆದುಕೊಳ್ಳಬೇಕು. ನ್ಯೂರಲ್ ಟ್ಯೂಬ್ ಡೆಫಿಷಿಯನ್ಸಿ (ಮಗುವಿಗೆ ಜನ್ಮಜಾತವಾಗಿ ಬರಬಹುದಾದ ಬೆನ್ನುಮೂಳೆಯ ಸಮಸ್ಯೆ) ತಡೆಯಲು ಈ ಔಷಧಿಗಳು ನೆರವಾಗುತ್ತವೆ’ ಎನ್ನುತ್ತಾರೆ ಡಾ.ದೇವರೂಖರ್.

(ಸಂಶೋಧನೆ: ಶಾಲಿನಿ ಸಕ್ಸೇನ)

ಇದನ್ನೂ ಓದಿ: Covid-19: ಕೊವಿಡ್​ನಿಂದ ಮೃತಪಟ್ಟವರ ದೇಹದಲ್ಲೂ 9 ದಿನ ಕೊರೊನಾವೈರಸ್ ಜೀವಂತವಾಗಿರುತ್ತದೆ!
ಇದನ್ನೂ ಓದಿ: ಕೊರೊನಾ 3ನೇ ಅಲೆ ಉತ್ತುಂಗದಲ್ಲಿ ಪ್ರತಿದಿನದ ಸೋಂಕು ಪ್ರಕರಣಗಳು 1 ಲಕ್ಷ ದಾಟಬಹುದು: ಆರೋಗ್ಯ ಸಚಿವ ಸುಧಾಕರ

Published On - 4:27 pm, Wed, 19 January 22