ಆಲ್ಕೋಹಾಲ್ ಸೇವನೆ ಮಾಡದೇ ಇದ್ರೂ ಲಿವರ್ ಡ್ಯಾಮೇಜ್ ಆಗೋದಕ್ಕೆ ಕಾರಣವೇನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡದವರಲ್ಲಿಯೂ ಲಿವರ್ ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕುವುದು ಅಗತ್ಯವಾಗಿದೆ. ಲಿವರ್ ಸಮಸ್ಯೆಗಳ ಲಕ್ಷಣಗಳು ಪ್ರಾರಂಭಿಕ ಹಂತದಲ್ಲಿ ಸ್ವಲ್ಪಮಟ್ಟಿಗೆ ಮಾತ್ರ ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಹಲವರು ಅದನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಈ ರೀತಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದರೆ ಲಿವರ್ ಡ್ಯಾಮೇಜ್ ಆಗುವುದಕ್ಕೆ ಕಾರಣಗಳೇನು, ಯಾರಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ, ಇದನ್ನು ತಡೆಯಲು ಏನು ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿ. ಮಾಹಿತಿ ಸ್ಟೋರಿಯಲ್ಲಿದೆ.

ಆಲ್ಕೋಹಾಲ್ ಸೇವನೆ ಮಾಡದೇ ಇದ್ರೂ ಲಿವರ್ ಡ್ಯಾಮೇಜ್ ಆಗೋದಕ್ಕೆ ಕಾರಣವೇನು ಗೊತ್ತಾ?
Liver Damage Without Alcohol
Image Credit source: Getty Images

Updated on: Mar 03, 2026 | 7:45 PM

ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡದವರಲ್ಲಿಯೂ ಲಿವರ್ (Liver) ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಆದರೆ ಮದ್ಯ ಸೇವನೆ ಮಾಡದಿದ್ದರೂ ಲಿವರ್ ಗೆ ಹೇಗೆ ಡ್ಯಾಮೇಜ್ (Liver Damage) ಅಥವಾ ಹಾನಿಯಾಗುತ್ತದೆ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಈ ಬಗ್ಗೆ ಆರೋಗ್ಯ ತಜ್ಞರು ಕೆಲವು ಮಾಹಿತಿ ಹಂಚಿಕೊಂಡಿದ್ದು, ಲಿವರ್ ಸಮಸ್ಯೆಗಳ ಲಕ್ಷಣಗಳು ಪ್ರಾರಂಭಿಕ ಹಂತದಲ್ಲಿ ಸ್ವಲ್ಪಮಟ್ಟಿಗೆ ಮಾತ್ರ ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಹಲವರು ಅದನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಇದು ನಿಧಾನವಾಗಿ ದೇಹದಲ್ಲಿ ದೌರ್ಬಲ್ಯ ಹೆಚ್ಚಿಸುತ್ತದೆ, ಹಸಿವು ಕಡಿಮೆಯಾಗುವುದು ಮತ್ತು ಹೊಟ್ಟೆಯ ಬಲಭಾಗದಲ್ಲಿ ಭಾರವಾಗಿರುವ ಅನುಭವವಾಗುತ್ತದೆ. ಕೆಲವರಿಗೆ ಗ್ಯಾಸ್, ಅಜೀರ್ಣ, ತೂಕ ಹೆಕ್ಕಾಗುವುದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರ ಜೊತೆಗೆ ಚರ್ಮ ಮತ್ತು ಕಣ್ಣುಗಳಲ್ಲಿ ಹಳದಿ ಬಣ್ಣ ಕಾಣಿಸಿಕೊಳ್ಳುವುದು, ಮೂತ್ರದ ಬಣ್ಣ ಗಾಢವಾಗುವುದು ಮತ್ತು ಕಾಲುಗಳಲ್ಲಿ ಊತ ಉಂಟಾಗುವುದು ಕೂಡ ಲಿವರ್ ಸರಿಯಾಗಿ ಕಾರ್ಯನಿರ್ವಹಿಸದಿರುವ ಸೂಚನೆಗಳಾಗಿವೆ. ಆದ್ದರಿಂದ ಮದ್ಯಪಾನ ಮಾಡದವರಾದರೂ ಲಿವರ್ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರುವುದು ಅಗತ್ಯವಾಗಿದೆ. ಹಾಗಾದರೆ ಲಿವರ್ ಡ್ಯಾಮೇಜ್ ಆಗುವುದಕ್ಕೆ ಕಾರಣಗಳೇನು, ಯಾರಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ, ಇದನ್ನು ತಡೆಯಲು ಏನು ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿ. ಮಾಹಿತಿ ಸ್ಟೋರಿಯಲ್ಲಿದೆ.

ಮದ್ಯವಿಲ್ಲದೇ ಲಿವರ್ ಡ್ಯಾಮೇಜ್ ಆಗುವುದಕ್ಕೆ ಕಾರಣಗಳು:

ಲೆಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಹಾಗೂ ಮುಖ್ಯಸ್ಥರಾದ ಡಾ. ಎಲ್.ಎಚ್. ಘೋಟೇಕರ್ ಹೇಳುವ ಪ್ರಕಾರ, ಮದ್ಯಪಾನ ಮಾತ್ರವೇ ಲಿವರ್ ಹಾನಿಗೆ ಕಾರಣವಲ್ಲ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಹೆಚ್ಚಾಗಿ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಹಾಗೂ ಜಂಕ್ ಫುಡ್ ಸೇವನೆ ಲಿವರ್ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಜೊತೆಗೆ ಚಟುವಟಿಕೆ ಕೊರತೆ ಮತ್ತು ಅತಿಯಾದ ತೂಕ ಕೂಡ ಲಿವರ್ ಸಮಸ್ಯೆಗಳಿಗೆ ಕಾರಣವಾಗಬಹುದು. ವೈದ್ಯರ ಸಲಹೆಯಿಲ್ಲದೆ ದೀರ್ಘಕಾಲ ಔಷಧಿಗಳನ್ನು ಸೇವಿಸುವುದು ಕೂಡ ಲಿವರ್‌ಗೆ ಹಾನಿ ಮಾಡಬಹುದು.

ಇದರ ಹೊರತಾಗಿ ವೈರಲ್ ಸೋಂಕುಗಳು, ಮಾಲಿನ್ಯಗೊಂಡ ನೀರು ಅಥವಾ ಆಹಾರದಿಂದ ಹರಡುವ ರೋಗಗಳು ಕೂಡ ಲಿವರ್ ಮೇಲೆ ಪರಿಣಾಮ ಬೀರುತ್ತವೆ. ಒತ್ತಡ, ದಿನಚರಿ ಸರಿಯಾಗಿ ಇಲ್ಲದಿರುವುದು ಮತ್ತು ನಿದ್ರೆಯ ಕೊರತೆ ದೇಹದ ಮೆಟಾಬಾಲಿಸಂ ಅನ್ನು ಅಸ್ಥಿರಗೊಳಿಸಿ ಲಿವರ್ ಆರೋಗ್ಯವನ್ನು ಹಾಳುಮಾಡಬಹುದು. ಕೆಲವೊಮ್ಮೆ ಕುಟುಂಬದಲ್ಲಿ ಲಿವರ್ ಕಾಯಿಲೆಯ ಇತಿಹಾಸವಿದ್ದರೂ ಅಪಾಯ ಹೆಚ್ಚಾಗಿರಬಹುದು.

ಇದನ್ನೂ ಓದಿ: ಫ್ಯಾಟಿ ಲಿವರ್‌ ಸಮಸ್ಯೆಯನ್ನು ತಡೆಯಲು ಎಣ್ಣೆ, ತುಪ್ಪ ಸೇವನೆ ಮಾಡುವುದನ್ನು ಬಿಡಬೇಕೇ?

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?

ಅತಿಯಾಗಿ ತೂಕ ಇರುವವರು, ಮಧುಮೇಹ ಅಥವಾ ಥೈರಾಯ್ಡ್ ಸಮಸ್ಯೆ ಹೊಂದಿರುವವರು ಹೆಚ್ಚಿನ ಅಪಾಯದಲ್ಲಿರುತ್ತಾರೆ. ದೈಹಿಕ ಚಟುವಟಿಕೆ ಕಡಿಮೆ ಇರುವವರು ಹಾಗೂ ನಿರಂತರವಾಗಿ ಹೊರಗಿನ ಆಹಾರ ಸೇವಿಸುವವರಲ್ಲೂ ಲಿವರ್ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಹೆಚ್ಚಿರುತ್ತದೆ. ಅಷ್ಟೇಅಲ್ಲ ದೀರ್ಘಕಾಲದಿಂದ ಔಷಧಿ ಸೇವಿಸುವವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವಿವರಲ್ಲಿಯೂ ಲಿವರ್ ಸಮಸ್ಯೆ ಕಂಡುಬರುತ್ತದೆ. ಅದೆಲ್ಲದರ ಜೊತೆಗೆ ಕುಟುಂಬದಲ್ಲಿ ಲಿವರ್ ಕಾಯಿಲೆಯ ಇತಿಹಾಸವಿದ್ದರೆ ವಿಶೇಷ ಎಚ್ಚರಿಕೆ ವಹಿಸುವುದು ಅಗತ್ಯ.

ಹಾಗಾಗಿ ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಸಮತೋಲನಯುತ ಮತ್ತು ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸುವುದು ಬಹಳ ಮುಖ್ಯ. ಎಣ್ಣೆಯಲ್ಲಿ ಕರಿದ ಹಾಗೂ ಪ್ರಾಸೆಸ್ಡ್ ಆಹಾರಗಳಿಂದ ದೂರವಿರಬೇಕು. ಪ್ರತಿದಿನ ಸ್ವಲ್ಪ ವ್ಯಾಯಾಮ ಅಥವಾ ವಾಕಿಂಗ್ ಮಾಡಬೇಕು. ಸಾಕಷ್ಟು ಪ್ರಮಾಣದಲ್ಲಿ ನೀರು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದನ್ನು ಮರೆಯಬಾರದು. ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವನೆ ಮಾಡಬಾರದು. ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಒತ್ತಡ ಕಡಿಮೆ ಮಾಡಲು ಯೋಗ ಮತ್ತು ಧ್ಯಾನ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us