
ಮನೆಯ ಅಂಗಳದಲ್ಲಿ ಸಾಮಾನ್ಯವಾಗಿ ಕಾಣಸಿಗುವ ನಿತ್ಯಪುಷ್ಪ ಅಥವಾ ಸದಾಪುಷ್ಪ ಅಥವಾ ಬಿಳ್ಳೆ ಗನ್ನೇರು ಹೂವು ನೋಡಲು ಸುಂದರವಾಗಿರುತ್ತದೆ. ಆದರೆ ಇದೇ ಸಸ್ಯವನ್ನು ಆಯುರ್ವೇದದಲ್ಲಿ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತದೆ. ವಿಶೇಷವಾಗಿ ಮಧುಮೇಹ, ರಕ್ತದೊತ್ತಡ ಮತ್ತು ಚರ್ಮದ ಸಮಸ್ಯೆಗಳಿಗೆ ಇದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ನಿತ್ಯಪುಷ್ಪ ಎಲೆ ಅಥವಾ ಹೂವನ್ನು ಕಷಾಯ ಮಾಡಿ ಕುಡಿದರೆ ಶುಗರ್, ಬಿಪಿ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆಯೇ, ಈ ಕುರಿತ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.
ಸಾಮಾನ್ಯವಾಗಿ ನಿತ್ಯಪುಷ್ಪ ಸಸ್ಯವನ್ನು ವೈಜ್ಞಾನಿಕವಾಗಿ Catharanthus roseus ಎಂದು ಕರೆಯಲಾಗುತ್ತದೆ. ಇದರ ವಿವಿಧ ಭಾಗಗಳಲ್ಲಿ ವಿಂಕ್ರಿಸ್ಟಿನ್ ಮತ್ತು ವಿನ್‌ಬ್ಲಾಸ್ಟಿನ್ ಸೇರಿದಂತೆ ಹಲವು ಆಲ್ಕಲಾಯ್ಡ್‌ಗಳು ಕಂಡುಬರುತ್ತವೆ. ಈ ಸಂಯುಕ್ತಗಳಿಗೆ ಔಷಧೀಯ ಮಹತ್ವವಿದೆ. ಆದರೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಶುದ್ಧೀಕರಿಸಿದ ಔಷಧೀಯ ಸಂಯುಕ್ತಗಳನ್ನು ಮನೆಯಲ್ಲಿ ಸಸ್ಯದ ಎಲೆ ಅಥವಾ ಹೂವನ್ನು ಸೇವಿಸುವುದಕ್ಕೆ ಹೋಲಿಕೆ ಮಾಡಬಾರದು.
ನಿತ್ಯಪುಷ್ಪ ಸಸ್ಯದ ಕೆಲವು ಸಂಯುಕ್ತಗಳು ರಕ್ತದಲ್ಲಿನ ಗ್ಲೂಕೋಸ್ ಮೇಲೆ ಪರಿಣಾಮ ಬೀರಬಹುದು. ಆದರೆ ಮಧುಮೇಹಕ್ಕೆ ಔಷಧಿಯಲ್ಲ. ಎಲೆ ಅಥವಾ ಹೂವನ್ನು ಕಷಾಯ ಮಾಡಿ ಕುಡಿಯುವುದರಿಂದ ಇನ್ಸುಲಿನ್ ಉತ್ಪಾದನೆ ಹೆಚ್ಚುತ್ತದೆ ಮತ್ತು ಶುಗರ್ ಖಚಿತವಾಗಿ ನಿಯಂತ್ರಣವಾಗುತ್ತದೆ ಎಂದು ಹೇಳಲು ಸಾಕಷ್ಟು ಪುರಾವೆ ಇಲ್ಲ. ಆದ್ದರಿಂದ ವೈದ್ಯರು ಸೂಚಿಸಿರುವ ಮಧುಮೇಹದ ಔಷಧಿಗಳನ್ನು ಈ ಹೂವನ್ನು ಪರ್ಯಾಯವಾಗಿ ಬಳಸಬಾರದು.
ಇದನ್ನೂ ಓದಿ: ಪಾಲಕ್ ಸೊಪ್ಪಿನ ಆರೋಗ್ಯ ಪ್ರಯೋಜನಗಳು: ರಕ್ತಹೀನತೆ ಇರುವವರು ಈ ತಪ್ಪು ಮಾಡಬೇಡಿ
ನಿತ್ಯಪುಷ್ಪ ಹೂವು ರಕ್ತದೊತ್ತಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಕುರಿತು ಕೆಲವು ಅಧ್ಯಯನಗಳಿವೆ. ಆದರೆ ಇದನ್ನು ಬಿಪಿ ಕಡಿಮೆ ಮಾಡಲು ಮನೆಮದ್ದಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಬಿಪಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವವರು ಸ್ವಯಂಪ್ರೇರಿತವಾಗಿ ಈ ಹೂವನ್ನು ಸೇವಿಸುವುದರಿಂದ ರಕ್ತದೊತ್ತಡದಲ್ಲಿ ಅನಿರೀಕ್ಷಿತ ಬದಲಾವಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ.
ನಿತ್ಯಪುಷ್ಪ ಹೂವಿನಲ್ಲಿ ಕೆಲವು ಸಸ್ಯ ಸಂಯುಕ್ತಗಳಿಗೆ ಉತ್ಕರ್ಷಣ ನಿರೋಧಕ ಮತ್ತು ಇತರ ಜೈವಿಕ ಗುಣಗಳಿವೆ ಎಂದು ಅಧ್ಯಯನಗಳು ಸೂಚಿಸಿವೆ. ಆದರೆ ಮೊಡವೆ, ಕಪ್ಪು ಕಲೆ ಅಥವಾ ಚರ್ಮದ ಸಮಸ್ಯೆಗಳಿಗೆ ಇದರ ಎಲೆ ಅಥವಾ ಹೂವಿನ ಪೇಸ್ಟ್‌ನ್ನು ನೇರವಾಗಿ ಹಚ್ಚುವುದು ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನ ಎಂದು ಹೇಳಲು ಸಾಧ್ಯವಿಲ್ಲ. ಇದರ ಪೇಸ್ಟ್‌ನ್ನು ಮುಖಕ್ಕೆ ಹಚ್ಚುವುದರಿಂದ ಕೆಲವರಲ್ಲಿ ಚರ್ಮದ ಕಿರಿಕಿರಿ ಅಥವಾ ಅಲರ್ಜಿ ಉಂಟಾಗಬಹುದು.
ನಿತ್ಯಪುಷ್ಪ ಔಷಧೀಯ ಸಾಮರ್ಥ್ಯ ಹೊಂದಿರುವ ಸಸ್ಯವಾಗಿದ್ದರೂ, ಎಲ್ಲರಿಗೂ ಸುರಕ್ಷಿತ ಎಂದು ಭಾವಿಸಬಾರದು. ಮಧುಮೇಹ ಅಥವಾ ಬಿಪಿ ನಿಯಂತ್ರಣಕ್ಕೆ ವೈದ್ಯರು ಸೂಚಿಸಿದ ಔಷಧಿ, ಆಹಾರ ಕ್ರಮ, ವ್ಯಾಯಾಮ ಮತ್ತು ನಿಯಮಿತ ತಪಾಸಣೆಗಳೇ ಮುಖ್ಯ. ನಿತ್ಯಪುಷ್ಪವನ್ನು ಔಷಧಿಯಾಗಿ ಬಳಸುವ ಯೋಚನೆ ಇದ್ದರೆ ಅರ್ಹ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಗಮನಿಸಿ: ಈ ಲೇಖನದಲ್ಲಿರುವ ವಿಷಯಗಳು ಸಾಮಾನ್ಯ ಆರೋಗ್ಯ ಮಾಹಿತಿಯಾಗಿದ್ದು, ಯಾವುದೇ ಸಸ್ಯ ಅಥವಾ ಮನೆಮದ್ದನ್ನು ವೈದ್ಯರ ಸಲಹೆಯಿಲ್ಲದೆ ಚಿಕಿತ್ಸೆಗೆ ಪರ್ಯಾಯವಾಗಿ ಬಳಸಬೇಡಿ.