
ರಾಜ್ಯದಲ್ಲಿ ಹವಾಮಾನ ವೈಪರೀತ್ಯದ ಪರಿಣಾಮ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿದೆ. ಅದರಲ್ಲಿಯೂ ಮಕ್ಕಳಲ್ಲಿ ತೀವ್ರವಾಗಿ ಹರಡುತ್ತಿರುವ ಕೈ, ಕಾಲು ಮತ್ತು ಬಾಯಿ ರೋಗದ ಬಗ್ಗೆ (Hand, Foot and Mouth Disease) ಪಾಲಕರು ಸರಿಯಾಗಿ ತಿಳಿದುಕೊಂಡು ಮಕ್ಕಳ ಆರೋಗ್ಯ ಕಾಪಾಡುವುದು ಬಹಳ ಮುಖ್ಯವಾಗಿದೆ. ಇದು ಕಾಕ್ಸಾಕಿ ವೈರಸ್ (Coxsackie virus) ಅಥವಾ ಇತರ ಎಂಟರೋವೈರಸ್‌ಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದ್ದು, ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಆದರೆ ಕೆಲವೊಮ್ಮೆ ದೊಡ್ಡ ಮಕ್ಕಳಲ್ಲೂ ಹಾಗೂ ವಯಸ್ಕರಲ್ಲೂ ಕಾಣಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬೆಂಗಳೂರು ಎಸ್.ಡಿ.ಎಂ. ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆಯ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ರೀನಾ ಕುಲಕರ್ಣಿ ಮತ್ತು ಸಹ ಪ್ರಾಧ್ಯಾಪಕರಾಗಿರುವ ಡಾ. ಶ್ರೀಲಕ್ಷ್ಮಿ ಅವರು ಟಿವಿ9 ಕನ್ನಡಕ್ಕೆ ನೀಡಿದ್ದು ಈ ರೋಗ ಹೇಗೆ ಹರಡುತ್ತದೆ, ಇದರ ಲಕ್ಷಣಗಳೇನು, ತಡೆಗಟ್ಟಲು ಏನು ಮಾಡಬೇಕು ಎಂಬುದರ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.
ಡಾ. ರೀನಾ ಕುಲಕರ್ಣಿ ಮತ್ತು ಡಾ. ಶ್ರೀಲಕ್ಷ್ಮಿ ಅವರು ಹೇಳುವ ಪ್ರಕಾರ, ಈ ರೋಗವು ಸೋಂಕಿತ ಮಗುವಿನ ಉಗುಳು, ಮೂಗಿನ ಸ್ರಾವ, ಕೆಮ್ಮು-ಸೀನುವ ಹನಿಗಳು, ಬಾಯಿಯ ಅಥವಾ ಚರ್ಮದ ಗುಳ್ಳೆಗಳಲ್ಲಿರುವ ದ್ರವ ಹಾಗೂ ಮಲದ ಸಂಪರ್ಕದಿಂದ ಮತ್ತೊಬ್ಬರಿಗೆ ಹರಡುತ್ತದೆ. ಮಕ್ಕಳ ಆಟಿಕೆಗಳು, ಪಾತ್ರೆಗಳು ಹಾಗೂ ಆಗಾಗ ಸ್ಪರ್ಶಿಸುವ ವಸ್ತುಗಳ ಮೂಲಕವೂ ಸೋಂಕು ಹರಡಬಹುದು. ಇದು ಸಾಮಾನ್ಯವಾಗಿ ಗಂಭೀರವಾದ ಕಾಯಿಲೆಯಲ್ಲದಿದ್ದರೂ ಅತ್ಯಂತ ಸಾಂಕ್ರಾಮಿಕವಾಗಿದ್ದು, ಶಾಲೆ, ಅಂಗನವಾಡಿಗಳು, ಡೇ-ಕೇರ್ ಕೇಂದ್ರಗಳು ಹಾಗೂ ಆಟದ ಮೈದಾನಗಳಂತಹ ಮಕ್ಕಳ ಗುಂಪು ಸೇರುವ ಸ್ಥಳಗಳಲ್ಲಿ ವೇಗವಾಗಿ ಹರಡುತ್ತದೆ.
ಇದನ್ನೂ ಓದಿ: ಪಾಲಕರೇ ಗಮನಿಸಿ: ಮಕ್ಕಳಲ್ಲಿ ಹೆಚ್ಚುತ್ತಿದೆ ‘ಕೈ, ಕಾಲು, ಬಾಯಿ’ ಸೋಂಕು!
ಈ ರೋಗಕ್ಕೆ ವಿಶೇಷ ವೈರಸ್ ವಿರೋಧಿ ಔಷಧಿ ಇಲ್ಲ. ಹೆಚ್ಚಿನ ಮಕ್ಕಳು 7 ರಿಂದ 10 ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಜ್ವರ ಮತ್ತು ನೋವನ್ನು ಕಡಿಮೆ ಮಾಡುವ ಔಷಧಿಗಳನ್ನು ವೈದ್ಯರ ಸಲಹೆಯಂತೆ ನೀಡಬೇಕು. ಸಾಕಷ್ಟು ದ್ರವ ಆಹಾರ, ನೀರು, ತಂಪಾದ ಮೃದುವಾದ ಆಹಾರವನ್ನು ನೀಡುವುದು ಮುಖ್ಯ. ಮಗು ಸಂಪೂರ್ಣ ಗುಣಮುಖವಾಗುವವರೆಗೆ ಖಾರ, ಹುಳಿ ಹಾಗೂ ಮಸಾಲೆಯುಕ್ತ ಆಹಾರವನ್ನು ನೀಡಬಾರದು.
ಗಮನಿಸಿ: ಹೆಚ್ಚಿನ ಮಕ್ಕಳಲ್ಲಿ ಈ ರೋಗವು 7–10 ದಿನಗಳಲ್ಲಿ ವೈದ್ಯರು ನೀಡುವ ಔಷಧಿಗಳ ಮೂಲಕ ತಾನಾಗಿಯೇ ಗುಣವಾಗುತ್ತದೆ. ಆದರೆ ತೀವ್ರ ಜ್ವರ, ಅತಿಯಾದ ನಿದ್ರೆ, ತೀವ್ರ ಆಯಾಸ, ಉಸಿರಾಟದ ತೊಂದರೆ ಕಂಡುಬಂದರೆ ತಡಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Thu, 16 July 26