Health Tips: ನೀವು ಟೊಮ್ಯಾಟೊ ಪ್ರಿಯರಾ?- ಮಿತಿಮೀರಿ ತಿನ್ನುತ್ತಿದ್ದರೆ ಎಚ್ಚರ.. ನಿಮ್ಮ ಆರೋಗ್ಯವನ್ನೇ ಹಾಳುಗೆಡವಬಹುದು ಈ ಕೆಂಪುಹಣ್ಣು

|

Updated on: Mar 25, 2021 | 8:13 PM

ಟೊಮ್ಯಾಟೋದ ಸಿಪ್ಪೆ ಮತ್ತು ಬೀಜಗಳು ಕರುಳಿನ ಉರಿಯೂತಕ್ಕೆ ಕಾರಣವಾಗುತ್ತವೆ. ಹಾಗಾಗಿ ತುಂಬ ಸೇವನೆ ಒಳ್ಳೆಯದಲ್ಲ. ಇನ್ನು ನೀವು ಈಗಾಗಲೇ ಐಬಿಎಸ್​ನಿಂದ ಬಳಲುತ್ತಿದ್ದರೆ ಟೊಮ್ಯಾಟೊ ಬೇಡ.

Health Tips: ನೀವು ಟೊಮ್ಯಾಟೊ ಪ್ರಿಯರಾ?- ಮಿತಿಮೀರಿ ತಿನ್ನುತ್ತಿದ್ದರೆ ಎಚ್ಚರ.. ನಿಮ್ಮ ಆರೋಗ್ಯವನ್ನೇ ಹಾಳುಗೆಡವಬಹುದು ಈ ಕೆಂಪುಹಣ್ಣು
ಟೊಮ್ಯಾಟೊ
Follow us on

ಟೊಮ್ಯಾಟೊ.. ಈ ಕೆಂಪು ಹಣ್ಣಿಗೆ ಅಡುಗೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ಇದೆ. ಈರುಳ್ಳಿ ಬಿಟ್ಟರೆ ತುಂಬ ಜನರು ಇಷ್ಟಪಟ್ಟು ಖರೀದಿಸುವ ತರಕಾರಿಯೆಂದರೆ ಟೊಮ್ಯಾಟೊವೇ ಇರಬಹುದು. ಇದರಿಂದ ಆರೋಗ್ಯಕ್ಕೆ ಒಂದಷ್ಟು ಉಪಯೋಗಗಳು ಖಂಡಿತ ಇವೆ. ಹಾಗಂತ ಅತಿಯಾದ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಬರೀ ಟೊಮ್ಯಾಟೊ ಅಷ್ಟೇ ಅಲ್ಲ, ಯಾವುದನ್ನಾದರೂ ಅತಿಯಾಗಿ ಸೇವನೆ ಮಾಡಿದರೆ ಖಂಡಿತ ಒಂದಲ್ಲ-ಒಂದು ವಿಧದಲ್ಲಿ ಆರೋಗ್ಯಕ್ಕೆ ಮಾರಕವೇ ಹೌದು. ಹಾಗಿದ್ದರೆ ಟೊಮ್ಯಾಟೊ ಬಳಕೆಯನ್ನು ಅಧಿಕವಾಗಿ ಮಾಡುವುದರಿಂದ ಆರೋಗ್ಯದಲ್ಲಿ ಏನೇನೆಲ್ಲ ಸಮಸ್ಯೆ ಕಾಣಿಸಿಕೊಳ್ಳಬಹುದು? ಇಲ್ಲಿದೆ ನೋಡಿ ಮಾಹಿತಿ:-

ದೇಹದಲ್ಲಿ ಆ್ಯಸಿಡ್ ರಿಫ್ಲಕ್ಸ್ (ಆಮ್ಲದ ಹಿಮ್ಮುಖ ಹರಿವು)​
ಟೊಮ್ಯಾಟೊದಲ್ಲಿ ಆಮ್ಲೀಯ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ತುಂಬ, ಅಗತ್ಯಕ್ಕಿಂತಲೂ ಹೆಚ್ಚು ಟೊಮ್ಯಾಟೊ ಸೇವನೆ ಮಾಡುವುದರಿಂದ ನಮ್ಮ ದೇಹದೊಳಗೆ ಗ್ಯಾಸ್ಟ್ರಿಕ್ ಆಮ್ಲದ ಪ್ರಮಾಣ ಹೆಚ್ಚಬಹುದು. ಇದರಿಂದ ಆಮ್ಲದ ಹಿಮ್ಮುಖ ಹರಿವು (ಆ್ಯಸಿಡ್ ರಿಫ್ಲಕ್ಸ್) ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂದರೆ ಹೊಟ್ಟೆಯಲ್ಲಿರುವ ಆಮ್ಲದ ಅಂಶಗಳು ತಿರುಗಿ ಅನ್ನನಾಳಕ್ಕೆ ಬಂದು, ಎದೆಯುರಿ ಸಮಸ್ಯೆ ಉಂಟಾಗುತ್ತದೆ.

ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆ
ಯುಎಸ್​ನ ಹೆಲ್ತ್​ ಮತ್ತು ಹ್ಯೂಮನ್​ ಸರ್ವೀಸ್​ ಡಿಪಾರ್ಟ್​ಮೆಂಟ್​ನ ಸಂಶೋಧನೆ ಪ್ರಕಾರ ಟೊಮ್ಯಾಟೊದ ವಿಪರೀತ ಸೇವನೆ ಮೂತ್ರಪಿಂಡದ ಸಮಸ್ಯೆಯನ್ನು ಉಂಟು ಮಾಡಬಹುದು. ಟೊಮ್ಯಾಟೊದಲ್ಲಿ ಹೇರಳವಾಗಿ ಇರುವ ಪೋಟ್ಯಾಷಿಯಂ ಅಂಶವೇ ಇದಕ್ಕೆ ಕಾರಣ. ಇನ್ನು ಕಿಡ್ನಿಗೆ ಸಂಬಂಧಪಟ್ಟ ಯಾವುದೇ ಕಾಯಿಲೆ ಇರುವವರು ಟೊಮ್ಯಾಟೊವನ್ನು ದೂರವೇ ಇಡಿ ಇನ್ನುತ್ತಾರೆ ತಜ್ಞರು.

ಕರುಳಿನ ಉರಿಯೂತ(ಇರಿಟೇಬಲ್ ಬೌಲ್​ ಸಿಂಡ್ರೋಮ್​-IBS)
ಟೊಮ್ಯಾಟೋದ ಸಿಪ್ಪೆ ಮತ್ತು ಬೀಜಗಳು ಕರುಳಿನ ಉರಿಯೂತಕ್ಕೆ ಕಾರಣವಾಗುತ್ತವೆ. ಹಾಗಾಗಿ ತುಂಬ ಸೇವನೆ ಒಳ್ಳೆಯದಲ್ಲ. ಇನ್ನು ನೀವು ಈಗಾಗಲೇ ಐಬಿಎಸ್​ನಿಂದ ಬಳಲುತ್ತಿದ್ದರೆ ಟೊಮ್ಯಾಟೊ ಬೇಡ. ಇದರಿಂದ ಅದು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಐಬಿಎಸ್​ ಎಂಬುದು ದೊಡ್ಡ ಕರುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, ಇದರಿಂದ ಹೊಟ್ಟೆ ನೋವು, ಗ್ಯಾಸ್ಟ್ರಿಕ್​, ಹೊಟ್ಟೆ ಉಬ್ಬರಿಸುವುದು, ವಾಯು, ಅತಿಸಾರಗಳಂತ ಸಮಸ್ಯೆಗಳು ಉದ್ಭವಿಸುತ್ತವೆ.

ಸಂಧುನೋವು
ಟೊಮ್ಯಾಟೊ ಅಧಿಕ ಸೇವನೆ ಸಂಧುನೋವು, ಸಂಧು ಊತಕ್ಕೆ ಕಾರಣವಾಗಬಹುದು ಎಂಬುದನ್ನು ಸಂಶೋಧನೆಯೊಂದು ಸ್ಪಷ್ಟಪಡಿಸಿದೆ. ಟೊಮ್ಯಾಟೊದಲ್ಲಿರುವ ಸೊಲಾನೈನ್​ ಎಂಬ ಅಲ್ಕಲೈಡ್​ಗಳು ಈ ಸಂಧು ನೋವಿಗೆ ಕಾರಣವಾಗುವ ಅಂಶಗಳು. ಸೊಲನೈನ್​ ಅಗತ್ಯಕ್ಕಿಂತ ಹೆಚ್ಚಾಗಿ ದೇಹದೊಳಗೆ ಸೇರಿದರೆ, ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಸಂಧುಗಳಲ್ಲಿ ಉರಿಯೂತ ಉಂಟಾಗುತ್ತದೆ.

ಅಲರ್ಜಿ ಮತ್ತು ಸೋಂಕು
ಟೊಮ್ಯಾಟೊ ಎಲ್ಲರ ದೇಹಕ್ಕೂ ಆಗಿ ಬರುವುದಿಲ್ಲ. ಹಾಗೇ ವಿಪರೀತ ಬಳಕೆಯಿಂದ ಚರ್ಮದ ಮೇಲೆ ದದ್ದು, ಅಲರ್ಜಿ ಉಂಟಾಗಿ ತುರಿಕೆ ಆಗಬಹುದು. ಅಷ್ಟೇ ಅಲ್ಲ, ಬಾಯಿ, ನಾಲಿಗೆ, ಮುಖ ಕೂಡ ಊದಿಕೊಳ್ಳಬಹುದು. ಸೀನು, ಗಂಟಲು ಸೊಂಕುಗಳೂ ಕಾಣಿಸಿಕೊಳ್ಳಬಹುದು. ಕೆಲವರಿಗೆ ಕೇವಲ ಹಣ್ಣನ್ನು ಮುಟ್ಟಿದರೂ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ.

ಲೈಕೋಪೆನೊಡರ್ಮಿಯಾ
ಇದೊಂದು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆ. ಟೊಮ್ಯಾಟೊ ಮಿತಿಮೀರಿ ಬಳಕೆ ಮಾಡುವುದರಿಂದ ರಕ್ತದಲ್ಲಿ ಲೈಕೋಪಿನ್​ ಅಂಶ ಹೆಚ್ಚಾಗಿ, ಚರ್ಮದ ಬಣ್ಣ ಬದಲಾಗುತ್ತದೆ. ಲೈಕೊಪಿನ್​ ದೇಹಕ್ಕೆ ಒಳ್ಳೆಯದಾದರೂ ಅದು ತುಂಬ ಹೆಚ್ಚಾಗುವಂತಿಲ್ಲ.

ಇದನ್ನೂ ಓದಿ: Health Tips: ತುಂಬ ಒತ್ತಡದಿಂದ ಬಳಲುತ್ತಿದ್ದೀರಾ.. ನಿದ್ದೆಯೂ ಬರುತ್ತಿಲ್ಲವಾ?- ಅಶ್ವಗಂಧ ಬಳಕೆ ಮಾಡಿ ನೋಡಿ..

Health Tips: ಹೊತ್ತುಗೊತ್ತು ಇಲ್ಲದೆ ತಿನ್ಬೇಡಿ- ರಾತ್ರಿ ಹೊಟ್ಟೆ ತುಂಬ ಊಟ ಮಾಡಿ ತಕ್ಷಣ ನಿದ್ದೆಗೆ ಜಾರುವ ಅಭ್ಯಾಸವಿದ್ದರೆ ಇಂದೇ ಬಿಟ್ಬಿಡಿ