ಇತ್ತೀಚಿನ ವರ್ಷಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಯಿಲೆಯನ್ನು ಪೂರ್ವದಲ್ಲಿಯೇ ಪತ್ತೆ ಹಚ್ಚದಿರುವುದು ಕೂಡ ಈ ರೋಗದ ಹೆಚ್ಚಳ ಮತ್ತು ಸಾವಿಗೆ ಕಾರಣವಾಗಿದೆ. ಆದರೆ ಕೇವಲ ಮೂತ್ರ ಪರೀಕ್ಷೆ ಮಾಡುವುದರ ಮೂಲಕ ಸುಲಭವಾಗಿ ಈ ರೋಗವನ್ನು ಪತ್ತೆ ಹಚ್ಚಬಹುದು ಎಂದರೆ ನಂಬುತ್ತೀರಾ? ಹೌದು. ತಜ್ಞರ ಪ್ರಕಾರ ಶ್ವಾಸಕೋಶದ ಕ್ಯಾನ್ಸರ್ ಜಾಗತಿಕವಾಗಿ ಹೆಚ್ಚಾಗುತ್ತಿದ್ದು, ಪ್ರಮುಖ ಕ್ಯಾನ್ಸರ್ ಸಂಬಂಧಿತ ಸಾವುಗಳಲ್ಲಿ ಒಂದಾಗಿದೆ ಜೊತೆಗೆ ಸುಮಾರು 85% ಪ್ರಕರಣಗಳಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಇದರ ಆರಂಭಿಕ ರೋಗಲಕ್ಷಣಗಳೆಂದರೆ ನಿರಂತರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಎದೆ ನೋವಿನಿಂದ ಪ್ರಾರಂಭವಾಗುತ್ತಿದ್ದರೆ, ಈಗ ವಿಶ್ವದಲ್ಲಿಯೇ ಮೊದಲು ನಮ್ಮ ವಿಜ್ಞಾನಿಗಳು ಶ್ವಾಸಕೋಶದ ಕ್ಯಾನ್ಸರ್ ಸಾಧ್ಯತೆಗಳನ್ನು ಸೂಚಿಸುವ ಮೂತ್ರ ಪರೀಕ್ಷೆಯನ್ನು ಕಂಡು ಹಿಡಿದಿದ್ದಾರೆ.
ಈ ಪ್ರಯೋಗದಿಂದ ರೋಗಿಗಳಿಗೆ ಬೇಗನೆ ಚಿಕಿತ್ಸೆ ಕೊಡಿಸಬಹುದು. ಜೊತೆಗೆ ಆರಂಭಿಕ ಹಂತ ತಿಳಿದರೆ ಅದರ ಅಪಾಯವೂ ಕಡಿಮೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಹಾಗಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ರಾಸಾಯನಿಕ ಎಂಜಿನಿಯರಿಂಗ್ ಮತ್ತು ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ಅರ್ಲಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ ವಿಜ್ಞಾನಿಗಳು ಈ ಪರೀಕ್ಷೆಯನ್ನು ಕಂಡುಹಿಡಿದಿದ್ದಾರೆ. ಇದನ್ನು ಇಲಿಗಳ ಮೇಲೆ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಮಾನವರ ಜೊತೆಗಿನ ಸಂಶೋಧನೆ ಮತ್ತು ಅಧ್ಯಯನ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇದಾದ ನಂತರ, ಪರೀಕ್ಷೆಯನ್ನು ಪೂರ್ವಭಾವಿ ಹಂತಗಳಿಗಾಗಿ ಶೀಘ್ರದಲ್ಲೇ ಪ್ರಯೋಗಗಳಿಗೆ ಒಳಪಡಿಸಲಾಗುವುದು ಎಂದು ಸಂಶೋಧನಾ ತಂಡ ತಿಳಿಸಿದೆ.
ಪ್ರೊಫೆಸರ್ ಫ್ರುಕ್ ಎನ್ನುವವರು ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ಹೇಳಿರುವಂತೆ, “ಶ್ವಾಸಕೋಶದ ಅಂಗಾಂಶದಲ್ಲಿ ಈ ಜೀವಕೋಶಗಳು ಬಿಡುಗಡೆ ಮಾಡುವ ನಿರ್ದಿಷ್ಟ ಪ್ರೋಟೀನ್ ಅನ್ನು ನಾವು ಗುರುತಿಸಿದ್ದು, ಎರಡು ತುಂಡುಗಳಾಗಿ ಕತ್ತರಿಸುವ ಪ್ರೋಬ್ ಅನ್ನು ವಿನ್ಯಾಸಗೊಳಿಸಿದ್ದು, ಈ ಪ್ರೋಬ್ ಎರಡು ಭಾಗಗಳಿಂದ ಕೂಡಿದ್ದು ಸಣ್ಣ ಇರುವುದನ್ನು ಮೂತ್ರಪಿಂಡಗಳ ಮೂಲಕ ಮೂತ್ರಕ್ಕೆ ಬಿಡುಗಡೆ ಮಾಡಲಾಗುತ್ತದೆ. ಪ್ರೋಬ್ನ ಈ ಭಾಗವು ಪತ್ತೆಹಚ್ಚಲು ತುಂಬಾ ಚಿಕ್ಕದಾಗಿರುತ್ತದೆ ಆದರೆ ಅದಕ್ಕೆ ಸ್ವಲ್ಪ ಬೆಳ್ಳಿ ದ್ರಾವಣವನ್ನು ಸೇರಿಸುವ ಮೂಲಕ ಅದನ್ನು ಗೋಚರಿಸುವಂತೆ ಮಾಡಬಹುದು. ಚುಚ್ಚು ಮದ್ದಿನ ನಂತರ ಮೂತ್ರದ ಬಣ್ಣವನ್ನು ಮೇಲ್ವಿಚಾರಣೆ ಮಾಡುವುದರಿಂದ ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳನ್ನು ಅಥವಾ ಕ್ಯಾನ್ಸರ್ ಗೆ ಕಾರಣವಾಗಬಹುದಾದ ಬದಲಾವಣೆಗಳನ್ನು ಸೂಚಿಸಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಚಳಿಗಾಲದಲ್ಲಿ ಕಿತ್ತಳೆ ಹಣ್ಣು ಸೇವಿಸುವ ಮುನ್ನ, ಆರೋಗ್ಯ ಪ್ರಯೋಜನ ತಿಳಿಯಿರಿ
ಕ್ಯಾನ್ಸರ್ ರಿಸರ್ಚ್ ಗಳಿಗಾಗಿ ಯುಕೆಯಿಂದ ಧನಸಹಾಯ ಪಡೆದಿದ್ದು, ಈ ಮೂತ್ರ ಪರೀಕ್ಷೆಯು ದುಬಾರಿ ಸ್ಕ್ಯಾನ್ಗಳಿಗೆ ಅಗ್ಗದ ಪರ್ಯಾಯವಾಗಿದೆ ಎಂದು ಹೇಳಲಾಗುತ್ತದೆ ಅಲ್ಲದೆ ಕಾಯಿಲೆಯನ್ನು ಮುಂಚಿತವಾಗಿ ಪತ್ತೆಹಚ್ಚಲು ಸುಲಭ ಮತ್ತು ಸಮಯೋಚಿತ ವಿಧಾನ ಇದಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ