ಕೊರೊನಾವೈರಸ್, ಮಂಕಿಪಾಕ್ಸ್ ರೋಗದಿಂದ ತತ್ತರಿಸಿದ ಜಗತ್ತು ಮತ್ತೆ ಸಹಜಸ್ಥಿತಿಗೆ ಬರುತ್ತಿರುವ ಹೊತ್ತಲ್ಲಿ ಇದೀಗ ಸಿಫಿಲಿಸ್ (Syphilis) ರೋಗ ಧುತ್ತನೆ ಎದುರು ಬಂದು ನಿಂತಿದೆ. ಅಮೆರಿಕದಲ್ಲಿ ಸಿಫಿಲಿಸ್ ರೋಗ ಪ್ರಕರಣಗಳ ಸಂಖ್ಯೆ ಮೂವತ್ತು ವರ್ಷಗಳಲ್ಲಿ ಅತ್ಯಧಿಕ ಮಟ್ಟಕ್ಕೆ ಏರಿದ್ದು, ಯುರೋಪ್ನಲ್ಲಿ ರೋಗ ಹರಡುತ್ತಿರುವಾಗ ಬ್ರಿಟನ್ನಲ್ಲಿ (UK) ರೋಗ ಭೀತಿಯಿಂದಾಗಿ ನೀಲಿಚಿತ್ರದ ಹಲವಾರು ತಾರೆಯರು ಚಿತ್ರೀಕರಣದಿಂದ ದೂರ ಸರಿದಿದ್ದಾರೆ . ಲೈಂಗಿಕ ಸಂಪರ್ಕ ಮೂಲಕ ಹರಡುವ ರೋಗವಾಗಿದೆ ಸಿಫಿಲಿಸ್, ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಬಹುದು. ಈ ಸೋಂಕು ಹಂತ ಹಂತಗಳಾಗಿ ಅಂದರೆ ಪ್ರೈಮರಿ, ಸೆಕೆಂಡರಿ, ಲಾಟೆಂಟ್ ಮತ್ತು ಟೆರಿಟಿಯರಿ ಹೀಗೆ ಉಲ್ಬಣವಾಗುತ್ತಾ ಹೋಗುತ್ತದೆ. ಇದು ಚರ್ಮದ ಮೇಲೆ ಗಾಯ ಮತ್ತು ದದ್ದುಗಳನ್ನುಂಟು ಮಾಡುತ್ತದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಾಥಮಿಕ ಮಾಹಿತಿ ಪ್ರಕಾರ, ಲೈಂಗಿಕವಾಗಿ ಹರಡುವ ರೋಗದ ಪ್ರಕರಣಗಳು 2021 ರಲ್ಲಿ ಶೇಕಡಾ 27 ರಷ್ಟು ಏರಿಕೆಯಾಗಿ 1,71,000 ಕ್ಕಿಂತ ಹೆಚ್ಚಾಗಿದೆ. ಈ ಮೂಲಕ ಇದು 30 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ.
ಏನಿದು ಸಿಫಿಲಿಸ್ ರೋಗ? ಹೇಗೆ ಹರಡುತ್ತದೆ?
ಲೈಂಗಿಕ ಸಂಪರ್ಕ ಮೂಲಕ ಹರಡುವ ಸಿಫಿಲಿಸ್, ಟ್ರೆಫಪೊನೆಮ ಪಲ್ಲಿಡುಮ್ (Treponema pallidum) ಎಂಬ ವೈರಸ್ನಿಂದ ಉಂಟಾಗುತ್ತದೆ. ಯೋನಿ, ಗುದ ಮತ್ತು ಓರಲ್ ಸೆಕ್ಸ್ ಮಾಡುವಾಗ ಸಿಫಿಲಿಸ್ ಗಾಯದೊಂದಿಗೆ ನೇರ ಸಂಪರ್ಕವಾದರೆ ರೋಗ ಈ ಮೂಲಕ ಹರಡುತ್ತದೆ. ಈ ರೋಗ ಮಹಿಳೆಯಿಂದ ಆಕೆಯ ಭ್ರೂಣದಲ್ಲಿರುವ ಮಗುವಿಗೂ ಹರಡುತ್ತದೆ. ಆದಾಗ್ಯೂ, ಈ ಸೋಂಕು ಟಾಯ್ಲೆಟ್ ಸೀಟ್ ಬಳಕೆ, ಬಾಗಿಲುಗಳ ಹಿಡಿ, ಸ್ವಿಮ್ಮಿಂಗ್ ಪೂಲ್, ಹಾಟ್ ಟಬ್,ಬಾತ್ ಟಬ್ ,ಬಟ್ಟೆಗಳು ಹಂಚಿಕೊಳ್ಳುವುದರಿಂದ, ಪಾತ್ರೆ ಗಳನ್ನು ಹಂಚಿಕೊಳ್ಳುವುದರಿಂದ ಹರಡುವುದಿಲ್ಲ ಎಂದು ಸಿಡಿಸಿ ಹೇಳಿದೆ.
ರೋಗ ಲಕ್ಷಣಗಳೇನು?
ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ, ಒಂದು ಅಥವಾ ಒಂದಕ್ಕಿಂತ ಹೆಚ್ಚು ಪೊಳ್ಳಾದ ಗಾಯಗಳು ಬಾಯಿ ಅಥವಾ ಜನನಾಂಗದಲ್ಲಿ ಕಾಣಿಸಿಕೊಳ್ಳಬಹುದು. ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕವೇರ್ಪಟ್ಟ ಮೂರು ವಾರಗಳಲ್ಲಿ ಈ ರೋಗಲಕ್ಷಣಗಳು ಕಾಣಿಸುತ್ತವೆ. ಈ ಗಾಯಗಳಿಗೆ ನೋವು ಇರುವುದಿಲ್ಲ. ಇವು ಮೂರರಿಂದ ನಾಲ್ಕುವಾರಗಳವರೆಗೆ ಇದ್ದು ಚಿಕಿತ್ಸೆಯಿಲ್ಲದೇ ವಾಸಿಯಾಗುತ್ತವೆ. ಒಂದು ವೇಳೆ ಇವು ದೊಡ್ಡಾಡಾಗಿ ಚಿಕಿತ್ಸೆ ಕೊಡದೇ ಇದ್ದರೆ ಇವು ಎರಡನೇ ಹಂತಕ್ಕೆ ತಲುಪುತ್ತವೆ .ಅಂದರೆ ಕೈ ಮತ್ತು ಪಾದದಲ್ಲಿ ಗಾಯಗಳು ಕಾಣಿಸಿಕೊಳ್ಳುತ್ತವೆ. ಇದರ ಜತೆಗೆ ಜ್ವರ, ಊದಿದ ದುಗ್ದ ರಸ ಗ್ರಂಥಿ, ಗಂಟಲು ನೋವು , ತಲೆ ನೋವು, ಕೂದಲುಉದುರುವಿಕೆ, ಮಾಂಸಖಂಡಗಳ ನೋಲು ಮತ್ತು ಸುಸ್ತು ಲಕ್ಷಣಗಳೂ ಇರುತ್ತವೆ .
ಸೋಂಕಿತರಿಗೆ ಚಿಕಿತ್ಸೆ ನೀಡದೇ ಇದ್ದರೆ ಮೂರನೇ ಹಂತಕ್ಕೆ ಅಥವಾ ವರ್ಷಗಳ ನಂತರ ಇದು ಅಂಗಾಂಗಳಿಗೆ ಹಾನಿಯುಂಟು ಮಾಡುತ್ತದೆ. ಇವು ನರ ಸಮಸ್ಯೆಗಳು, ಹೃದಯ ಸಮಸ್ಯೆಗಳು, ದೃಷ್ಟಿ ಕಳೆದುಕೊಳ್ಳುವುದು ಮತ್ತು ಸಾವಿಗೆ ಕಾರಣವಾಗುತ್ತದೆ. ಈ ಹಂತದಲ್ಲಿ, ರೋಗವು ಸಾಂಕ್ರಾಮಿಕ ಆಗಿರುವುದಿಲ್ಲ.
ಯಾರಿಗೆ ಅಪಾಯ ಜಾಸ್ತಿ?
ಲೈಂಗಿಕ ಕ್ರಿಯೆಯಲ್ಲಿ ಸಕ್ರಿಯವಾಗಿ ಇರುವವರಿಗೆ ಮತ್ತು ಒಂದಕ್ಕಿಂತ ಹೆಚ್ಚು ಸಂಗಾತಿ ಜತೆ ಲೈಂಗಿಕ ಸಂಪರ್ಕ ಹೊಂದಿರುವವರಿಗೆ ಅಪಾಯ ಹೆಚ್ಚು.
ಪ್ರಕರಣಗಳು ಏರುತ್ತಿರುವುದೇಕೆ?
ಸಿಡಿಸಿ ಮಾಹಿತ ಪ್ರಕಾರ, 2020 ರಿಂದ 2021 ರವರೆಗೆ ಸಿಫಿಲಿಸ್ ಪ್ರಕರಣಗಳು ಶೇಕಡಾ 26 ರಷ್ಟು ಹೆಚ್ಚಾಗಿದೆ. ಗರ್ಭಾಶಯದಲ್ಲಿನ ಭ್ರೂಣಗಳಿಗೆ ಮಾರಣಾಂತಿಕವಾಗಿ ಸೋಂಕು ತಗುಲಿಸುವ ಮತ್ತು ಜನ್ಮದಲ್ಲಿ ದೋಷವನ್ನು ಉಂಟುಮಾಡುವ ಜನ್ಮಜಾತ ಸಿಫಿಲಿಸ್, ಶೇಕಡಾ 24 ರಷ್ಟು ಏರಿಕೆಯಾಗಿದೆ. ಈ ರೋಗವು 2000 ರಲ್ಲಿ ಅಮೆರಿಕದಲ್ಲಿ ಕನಿಷ್ಠ ಮಟ್ಟಕ್ಕೆ ತಲುಪಿತು ಆದರೆ ಈಗ ಇದು ಸಾರ್ವಜನಿಕ ಆರೋಗ್ಯಕ್ಕೆ ನಿಧಿಯ ಕೊರತೆ ಮತ್ತು ಪ್ರಕರಣಗಳ ಹೆಚ್ಚಳದ ಹಿಂದೆ ಲೈಂಗಿಕತೆಗೆ ಸಂಬಂಧಿಸಿದ ನಿಷೇಧವನ್ನು ತಜ್ಞರು ದೂಷಿಸುತ್ತಾರೆ. ಕೋವಿಡ್ -19 ಸಾಂಕ್ರಾಮಿಕವು ಪರಿಸ್ಥಿತಿಯನ್ನು ಹದಗೆಡಿಸಿತು. ಏಕೆಂದರೆ ಕಡಿಮೆ ಸಿಬ್ಬಂದಿಯಿರುವ ಸಾರ್ವಜನಿಕ ಆರೋಗ್ಯ ಚಿಕಿತ್ಸಾಲಯಗಳು ಹೆಚ್ಚಿನ ಸಂಪನ್ಮೂಲಗಳನ್ನು ಹೊಂದುವುದಕ್ಕಾಗಿ ಸಂಪನ್ಮೂಲಗಳನ್ನು ಬೇರೆಡೆಗೆ ತಿರುಗಿಸಿದವು.
ಸಿಫಿಲಿಸ್‌ಗಾಗಿ ನೀವು ಹೇಗೆ ಪರೀಕ್ಷೆಗೆ ಒಳಗಾಗಬಹುದು?
ಸಿಫಿಲಿಸ್ ಅನ್ನು ರಕ್ತ ಪರೀಕ್ಷೆಯೊಂದಿಗೆ ಗುರುತಿಸಲಾಗುತ್ತದೆ.
ಸಿಫಿಲಿಸ್ ಲಸಿಕೆ ಇದೆಯೇ?
ಇನ್ನೂ ಇಲ್ಲ, ಆದರೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮತ್ತು ಗೇಟ್ಸ್ ಫೌಂಡೇಶನ್ ಲಸಿಕೆಗಾಗಿ ಸಂಶೋಧನೆಗೆ ಧನಸಹಾಯ ನೀಡುತ್ತಿವೆ. ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಸಿಫಿಲಿಸ್ ನಿರ್ದಿಷ್ಟವಾಗಿ ಲಸಿಕೆ ಹಾಕಬೇಕಾಗಿರುವ ಕಾಯಿಲೆಯಾಗಿದೆ.