
ಕೆಲವರಿಗೆ ಗಂಟಲು ನೋವು (Throat Pain) ಪದೇ ಪದೇ ಕಂಡುಬರುತ್ತದೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿ ಇದರಿಂದ ಮುಕ್ತಿ ಪಡೆಯುವುದಕ್ಕಿಂತ ನಿರ್ಲಕ್ಷಿಸುವವರ ಸಂಖ್ಯೆಯೇ ಜಾಸ್ತಿ. ಆದರೆ ಆರೋಗ್ಯ ತಜ್ಞರು ಈ ಸಮಸ್ಯೆಯನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು ಎನ್ನುತ್ತಾರೆ. ಏಕೆಂದರೆ ಇದು ಕೆಲವೊಮ್ಮೆ ರೋಗದ ಲಕ್ಷಣವಾಗಿರಬಹುದು. ಗಂಟಲು ನೋವು ಅಥವಾ ತುರಿಕೆ ಹಲವಾರು ಕಾರಣಗಳಿಂದ ಉಂಟಾಗಬಹುದು. ಶೀತ, ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕಿನ ಜೊತೆಗೆ, ಅಲರ್ಜಿ, ಧೂಳು, ಹೊಗೆ, ಮಾಲಿನ್ಯ, ತುಂಬಾ ಬಿಸಿ ಅಥವಾ ತಣ್ಣನೆಯ ವಸ್ತುಗಳ ಸೇವನೆ ಮಾಡುವುದು ಅಥವಾ ಕುಡಿಯುವುದು, ಅದಲ್ಲದೆ ತುಂಬಾ ಜೋರಾಗಿ ಮಾತನಾಡುವುದು ಅಥವಾ ಕೂಗುವುದು ಸಹ ಗಂಟಲು ನೋವಿಗೆ ಕಾರಣವಾಗಬಹುದು. ಗಂಟಲು ನೋವು 3 ರಿಂದ 7 ದಿನಗಳಲ್ಲಿ ಗುಣವಾಗುತ್ತದೆ, ಆದರೆ ಅದು ಮುಂದುವರಿದರೆ ಅಥವಾ ಮತ್ತೆ ಮತ್ತೆ ಬರುತ್ತಿದ್ದರೆ, ಅದನ್ನು ನಿರ್ಲಕ್ಷಿಸಬಾರದು. ಬದಲಾಗಿ ಅದನ್ನು ಸರಿಯಾಗಿ ಗುರುತಿಸಿ ತಡೆಯುವುದು ಬಹಳ ಮುಖ್ಯ.
ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ರವಿ ಮಹಾರ್ ಹೇಳುವ ಪ್ರಕಾರ, ಗಂಟಲು ನೋವು ಗಂಭೀರ ಕಾಯಿಲೆಯಲ್ಲ, ಆದರೆ ಇದು ವಿವಿಧ ಸೋಂಕುಗಳು ಅಥವಾ ಸಮಸ್ಯೆಗಳ ಸೂಚಕವಾಗಿರಬಹುದು. ಶೀತ, ಜ್ವರ ಅಥವಾ ಮಾನೋನ್ಯೂಕ್ಲಿಯೊಸಿಸ್‌ನಂತಹ ವೈರಲ್ ಸೋಂಕುಗಳು ಈ ಸಮಸ್ಯೆಗೆ ಕಾರಣವಾಗಿರಬಹುದು. ಕೆಲವೊಮ್ಮೆ ಬ್ಯಾಕ್ಟೀರಿಯಾ ಕೂಡ ಗಂಟಲು ನೋವು ಜ್ವರಕ್ಕೆ ಕಾರಣವಾಗಬಹುದು. ಅಷ್ಟೇ ಅಲ್ಲ, ಗಂಟಲು ನೋವು ಅಲರ್ಜಿ, ಧೂಳು, ಹೊಗೆ, ಧೂಮಪಾನ ಅಥವಾ ಗಂಟಲಿನ ಆಯಾಸದಿಂದ ಕೂಡ ಉಂಟಾಗಬಹುದು. ನುಂಗಲು ತೊಂದರೆ, ಜ್ವರ, ಕುತ್ತಿಗೆ ಊತ ಅಥವಾ ಗಂಟಲಿನಲ್ಲಿ ಕೆಂಪು ಕಲೆ, ನೋವು ಇದ್ದಲ್ಲಿ ಅದು ಸೋಂಕು ಅಥವಾ ರೋಗದ ಮುನ್ಸೂಚನೆಯಾಗಿರಬಹುದು. ಈ ರೀತಿ ಕಂಡುಬರುವ ನಿರಂತರ ನೋವು ಅಥವಾ ಕೆಲವು ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಇದನ್ನೂ ಓದಿ: ನಿಮ್ಮ ದೇಹದಲ್ಲಿ ಪ್ರೋಟೀನ್ ಕಡಿಮೆ ಇದೆ ಎಂಬುದನ್ನು ದೇಹ ನೀಡುವ ಈ 6 ಲಕ್ಷಣಗಳ ಮೂಲಕ ತಿಳಿಯಬಹುದು!
ಸಾಮಾನ್ಯವಾಗಿ ಗಂಟಲು ನೋವನ್ನು ತಡೆಗಟ್ಟಲು ಕೆಲವು ಸರಳ ಕ್ರಮಗಳನ್ನು ಪಾಲಿಸುವುದು ಒಳ್ಳೆಯದು. ಮೊದಲು, ನಿಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ಕೊಳಕು, ಧೂಳು ಮತ್ತು ಹೊಗೆಯಿಂದ ದೂರವಿರಿ. ತುಂಬಾ ತಣ್ಣನೆಯ ಅಥವಾ ತುಂಬಾ ಬಿಸಿಯಾದ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಿ, ಜೊತೆಗೆ ತುಂಬಾ ಜೋರಾಗಿ ಮಾತನಾಡುವುದರಿಂದ ಅಥವಾ ಕೂಗುವುದನ್ನು ಕಡಿಮೆ ಮಾಡಿ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಪ್ರತಿನಿತ್ಯ ಹಣ್ಣು, ತರಕಾರಿ ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿರುವ ಸಮತೋಲಿತ ಆಹಾರ ಸೇವನೆ ಮಾಡಿ. ನಿಮಗೆ ಅಲರ್ಜಿ ಅಥವಾ ಉಸಿರಾಟ ಸಂಬಂಧಿ ಸಮಸ್ಯೆಗಳಿದ್ದಲ್ಲಿ ಈ ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ಗಂಟಲು ನೋವು ಮತ್ತು ಸೋಂಕುಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ