
ರಾತ್ರಿ ಮಲಗಿದ ಬಳಿಕ ಮಧ್ಯದಲ್ಲಿ ಒಮ್ಮೆ ಎಚ್ಚರವಾಗುವುದು ಸಾಮಾನ್ಯ. ಆದರೆ ಪ್ರತಿದಿನ ಅಥವಾ ಪದೇಪದೇ ನಿದ್ರೆ ಭಂಗವಾಗಿ, ಎಚ್ಚರವಾದ ನಂತರ ಮತ್ತೆ ನಿದ್ರೆ ಬರದೆ ಪರದಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಬೆಳಗ್ಗೆ ಎದ್ದಾಗಲೂ ದಣಿವು, ಹಗಲಿನಲ್ಲಿ ನಿದ್ರಾಹೀನತೆ, ಕಿರಿಕಿರಿ ಅಥವಾ ಏಕಾಗ್ರತೆ ಕಡಿಮೆಯಾಗುತ್ತಿದ್ದರೆ ನಿದ್ರೆಗೆ ಅಡ್ಡಿಯಾಗುತ್ತಿರುವ ಕಾರಣವನ್ನು ಪತ್ತೆಹಚ್ಚುವುದು ಅಗತ್ಯ. ಈ ರೀತಿಯಾಗುವುದಕ್ಕೆ ನಾನಾ ರೀತಿಯ ಕಾರಣಗಳಿರುತ್ತವೆ. ಹಾಗಾಗಿ ಅದನ್ನು ಸರಿಯಾಗಿ ಪತ್ತೆ ಹೆಚ್ಚಿ, ಗೊರಕೆ ಹೊಡೆಯುವ ಅಭ್ಯಾಸಕ್ಕೆ ನಿಯಂತ್ರಣ ತರುವುದು ಬಹಳ ಮುಖ್ಯ. ಅದೆಲ್ಲದರ ಜೊತೆಗೆ ನಿದ್ರೆ ಸರಿಯಾಗಿ ಬರಲು ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳಬೇಕಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.
ಸಾಮಾನ್ಯವಾಗಿ ರಾತ್ರಿ ನಿದ್ರೆಯಿಂದ ಪದೇಪದೇ ಎಚ್ಚರವಾಗಲು ಹಲವು ಕಾರಣಗಳಿರಬಹುದು. ಒತ್ತಡ ಮತ್ತು ಆತಂಕ ಪ್ರಮುಖ ಕಾರಣಗಳಲ್ಲಿ ಒಂದಾಗಿವೆ. ದಿನವಿಡೀ ಇರುವ ಚಿಂತೆಗಳು ಮಲಗುವ ಸಮಯದಲ್ಲೂ ಮುಂದುವರಿದರೆ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಇದರ ಜೊತೆಗೆ ಮಲಗುವ ಕೋಣೆಯಲ್ಲಿ ಹೆಚ್ಚು ಬೆಳಕು ಅಥವಾ ಶಬ್ದ ಇರುವುದು, ಅತಿಯಾದ ಬಿಸಿ ಅಥವಾ ಚಳಿ, ಹಾಸಿಗೆ ಅಥವಾ ದಿಂಬು ಕೂಡ ನಿದ್ರೆಗೆ ತೊಂದರೆ ಉಂಟುಮಾಡಬಹುದು.
ಸಂಜೆ ಅಥವಾ ರಾತ್ರಿ ಹೆಚ್ಚು ಚಹಾ, ಕಾಫಿ ಸೇರಿದಂತೆ ಕೆಫೀನ್ ಹೊಂದಿರುವ ಪಾನೀಯಗಳನ್ನು ಸೇವಿಸುವುದು ಕೆಲವರಲ್ಲಿ ನಿದ್ರೆಗೆ ಅಡ್ಡಿಯಾಗಬಹುದು. ಆಲ್ಕೋಹಾಲ್ ಸೇವನೆಯೂ ನಿದ್ರೆಯ ನಿರಂತರತೆಯನ್ನು ಹಾಳುಮಾಡಬಹುದು. ಪದೇಪದೇ ಮೂತ್ರವಿಸರ್ಜನೆ, ನೋವು, ಕೆಲವು ಔಷಧಿಗಳು ಅಥವಾ ಇತರ ಆರೋಗ್ಯ ಸಮಸ್ಯೆಗಳೂ ಕಾರಣವಾಗಬಹುದು.
ಇದನ್ನೂ ಓದಿ: 8 ಗಂಟೆ ನಿದ್ದೆ ಮಾಡಿದರೂ ಫ್ರೆಶ್ ಮೂಡ್ ನಲ್ಲಿ ಏಳುವುದಕ್ಕೆ ಆಗುತ್ತಿಲ್ಲವೇ? ಕಾರಣ ತಿಳಿಯಿರಿ
ಸಾಮಾನ್ಯವಾಗಿ ಇನ್ಸೋಮ್ನಿಯಾ ಅಥವಾ ನಿದ್ರಾಹೀನತೆ ಎಂದರೆ ನಿದ್ರೆ ಆರಂಭಿಸಲು ಕಷ್ಟವಾಗುವುದು ಮಾತ್ರವಲ್ಲ. ರಾತ್ರಿ ಪದೇಪದೇ ಎಚ್ಚರವಾಗುವುದು, ಎಚ್ಚರವಾದ ಬಳಿಕ ಮತ್ತೆ ನಿದ್ರೆ ಬರದಿರುವುದು ಅಥವಾ ತುಂಬಾ ಬೇಗ ಎಚ್ಚರವಾಗಿ ಮತ್ತೆ ನಿದ್ರೆ ಮಾಡಲು ಸಾಧ್ಯವಾಗದಿರುವುದೂ ಇದರ ಭಾಗವಾಗಬಹುದು. ಈ ಸಮಸ್ಯೆ ನಿರಂತರವಾದರೆ ಹಗಲಿನಲ್ಲಿ ದಣಿವು, ಕಿರಿಕಿರಿ, ನೆನಪಿನ ಶಕ್ತಿ ಅಥವಾ ಏಕಾಗ್ರತೆಯಲ್ಲಿ ತೊಂದರೆ ಉಂಟಾಗಬಹುದು.
ರಾತ್ರಿ ಮಲಗಿರುವಾಗ ಜೋರಾಗಿ ಗೊರಕೆ ಹೊಡೆಯುವುದು, ನಿದ್ರೆಯಲ್ಲಿ ಉಸಿರಾಟ ನಿಂತಂತೆ ಕಾಣಿಸುವುದು, ಏಕಾಏಕಿ ಉಸಿರು ತೆಗೆದುಕೊಳ್ಳುವಾಗ ಎಚ್ಚರವಾಗುವುದು, ಬೆಳಗ್ಗೆ ತಲೆನೋವು ಅಥವಾ ಹಗಲಿನಲ್ಲಿ ಅತಿಯಾದ ನಿದ್ರೆ ಕಾಣಿಸಿಕೊಳ್ಳುವುದು ಸ್ಲೀಪ್ ಅಪ್ನಿಯಾದ ಸೂಚನೆಗಳಾಗಿರಬಹುದು. ಸ್ಲೀಪ್ ಅಪ್ನಿಯಾದಲ್ಲಿ ನಿದ್ರೆಯ ಸಮಯದಲ್ಲಿ ಉಸಿರಾಟ ಪದೇಪದೇ ಅಡ್ಡಿಯಾಗುತ್ತದೆ. ಕೆಲವೊಮ್ಮೆ ವ್ಯಕ್ತಿಗಿಂತ ಅವರ ಕುಟುಂಬದವರೇ ಈ ಲಕ್ಷಣಗಳನ್ನು ಮೊದಲು ಗಮನಿಸುತ್ತಾರೆ.
ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಒಂದೇ ಸಮಯಕ್ಕೆ ಏಳುವ ಅಭ್ಯಾಸ ಬೆಳೆಸಿಕೊಳ್ಳಿ. ಹಗಲಿನಲ್ಲಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಮಲಗುವ ಮುನ್ನ ಮೊಬೈಲ್, ಟಿವಿ ಮತ್ತು ಲ್ಯಾಪ್‌ಟಾಪ್ ಬಳಕೆಯನ್ನು ಕಡಿಮೆ ಮಾಡಿ. ಸಂಜೆ ಬಳಿಕ ಕೆಫೀನ್ ಸೇವನೆಯನ್ನು ಮಿತಿಗೊಳಿಸಿ. ಮಲಗುವ ಕೋಣೆ ಶಾಂತ, ಕತ್ತಲೆ ಮತ್ತು ಆರಾಮದಾಯಕ ತಾಪಮಾನದಲ್ಲಿರುವಂತೆ ನೋಡಿಕೊಳ್ಳಿ. ನಿದ್ರೆಯ ಸಮಸ್ಯೆ ನಿರಂತರವಾಗಿ ಮುಂದುವರಿದು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದರೆ ಸ್ವಯಂ ನಿದ್ರೆ ಮಾತ್ರೆ ಸೇವಿಸದೆ ವೈದ್ಯರನ್ನು ಸಂಪರ್ಕಿಸಿ.
ಮುಖ್ಯವಾಗಿ ಗೊರಕೆಯೊಂದಿಗೆ ಉಸಿರಾಟ ನಿಲ್ಲುವುದು ಅಥವಾ ಹಗಲಿನಲ್ಲಿ ತೀವ್ರ ನಿದ್ರೆ ಕಾಣಿಸಿಕೊಳ್ಳುತ್ತಿದ್ದರೆ ಸ್ಲೀಪ್ ಅಪ್ನಿಯಾ ಪರೀಕ್ಷೆಯ ಅಗತ್ಯವಿದೆಯೇ ಎಂಬುದನ್ನು ವೈದ್ಯರಿಂದ ತಿಳಿದುಕೊಳ್ಳುವುದು ಸೂಕ್ತ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ