
ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಎರಡು ಬಾರಿ ಹಲ್ಲುಜ್ಜುವುದು ಎಷ್ಟು ಮುಖ್ಯವೋ, ಬಳಸುವ ಟೂತ್‌ಬ್ರಷ್ ಅನ್ನು ಸರಿಯಾದ ಸಮಯಕ್ಕೆ ಬದಲಾಯಿಸುವುದೂ ಅಷ್ಟೇ ಮುಖ್ಯ. ಹಳೆಯದಾದ ಅಥವಾ ಸವೆದ ಬ್ರಷ್ ಬಳಸಿ ಹಲ್ಲುಜ್ಜುವುದರಿಂದ ಹಲ್ಲುಗಳ ಮೇಲಿರುವ ಪ್ಲಾಕ್ ಮತ್ತು ಆಹಾರದ ಕಣಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕಲು ಸಾಧ್ಯವಾಗದಿರಬಹುದು. ಹಾಗಾದರೆ ಟೂತ್‌ಬ್ರಷ್ ಅನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಅಮೆರಿಕನ್ ಡೆಂಟಲ್ ಅಸೋಸಿಯೇಷನ್ (ADA) ಶಿಫಾರಸಿನ ಪ್ರಕಾರ, ಸಾಮಾನ್ಯವಾಗಿ ಪ್ರತಿ ಮೂರುರಿಂದ ನಾಲ್ಕು ತಿಂಗಳಿಗೊಮ್ಮೆ ಟೂತ್‌ಬ್ರಷ್ ಬದಲಾಯಿಸುವುದು ಉತ್ತಮ. ಈ ನಿಯಮ ಸಾಮಾನ್ಯ ಮತ್ತು ಎಲೆಕ್ಟ್ರಿಕ್ ಟೂತ್‌ಬ್ರಷ್‌ಗಳಿಗೂ ಅನ್ವಯಿಸುತ್ತದೆ. ಎಲೆಕ್ಟ್ರಿಕ್ ಬ್ರಷ್ ಬಳಸುವವರು ಸಂಪೂರ್ಣ ಸಾಧನವನ್ನು ಬದಲಾಯಿಸುವ ಅಗತ್ಯವಿಲ್ಲ. ಅದರ ಬ್ರಷ್ ಹೆಡ್ ಬದಲಾಯಿಸಿದರೆ ಸಾಕು. ಕಾಲ ಕಳೆದಂತೆ ಬ್ರಷ್‌ನಲ್ಲಿರುವ ನಾರುಗಳು ಸವೆದು, ಬಾಗಿಕೊಂಡು ತಮ್ಮ ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ.
ಇದನ್ನೂ ಓದಿ: ಚಳಿಗಾಲದಲ್ಲಿ ಸೀತಾಫಲ ತಿನ್ನುತ್ತಿದ್ದೀರಾ? ಹೃದಯದಿಂದ ರೋಗನಿರೋಧಕ ಶಕ್ತಿವರೆಗೆ ಹಲವು ಪ್ರಯೋಜನಗಳು!
ಹಲ್ಲುಗಳ ಆರೋಗ್ಯಕ್ಕಾಗಿ ದಿನಕ್ಕೆ ಎರಡು ಬಾರಿ ಫ್ಲೋರೈಡ್ ಇರುವ ಟೂತ್‌ಪೇಸ್ಟ್ ಬಳಸಿ ಕನಿಷ್ಠ ಎರಡು ನಿಮಿಷ ಹಲ್ಲುಜ್ಜಬೇಕು. ಹಲ್ಲುಜ್ಜಿದ ನಂತರ ಬ್ರಷ್ ಅನ್ನು ಸ್ವಚ್ಛ ನೀರಿನಿಂದ ತೊಳೆದು, ನೇರವಾಗಿ ನಿಲ್ಲಿಸಿ ಗಾಳಿ ಆಡುವ ಸ್ಥಳದಲ್ಲಿ ಒಣಗಲು ಬಿಡಬೇಕು.
ಟೂತ್‌ಬ್ರಷ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು. ಬ್ರಷ್‌ಗಳನ್ನು ಒಂದಕ್ಕೊಂದು ತಾಗದಂತೆ ಪ್ರತ್ಯೇಕವಾಗಿ ಇಡುವುದು ಉತ್ತಮ. ಅನಾರೋಗ್ಯದ ನಂತರ ಪ್ರತಿಯೊಬ್ಬರೂ ಕಡ್ಡಾಯವಾಗಿ ಬ್ರಷ್ ಬದಲಾಯಿಸಬೇಕೆಂಬುದಕ್ಕೆ ಸ್ಪಷ್ಟವಾದ ವೈಜ್ಞಾನಿಕ ಆಧಾರವಿಲ್ಲ. ಆದರೆ ಬ್ರಷ್ ಹಾಳಾಗಿದ್ದರೆ ಬದಲಾಯಿಸಬಹುದು. ಸರಿಯಾದ ಸಮಯಕ್ಕೆ ಟೂತ್‌ಬ್ರಷ್ ಬದಲಾಯಿಸುವುದು ಮತ್ತು ಪ್ರತಿದಿನ ಸರಿಯಾದ ವಿಧಾನದಲ್ಲಿ ಹಲ್ಲುಜ್ಜುವುದು ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ