ಕಣ್ಣಿನ ದೃಷ್ಟಿಯಿಂದ ನಾವು ಸಮಸ್ತ ಜಗತ್ತನ್ನೇ ನೋಡಬಹುದು. ಇದು ಮಾನವನ ದೇಹದ ಅತೀ ಮುಖ್ಯವಾದ ಅಂಗ. ಕಣ್ಣಿಲ್ಲದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳುವುದು ಬಹಳ ಕಷ್ಟ. ಕತ್ತಲೆ ಹೊರತುಪಡಿಸಿದರೆ ಎಲ್ಲಾ ಸಮಯದಲ್ಲೂ ಎಲ್ಲವನ್ನು ವೀಕ್ಷಿಸುವ ಸಾಮರ್ಥ್ಯ ಕಣ್ಣಿಗಿದೆ. ಇದು ಸರಿ ಇದ್ದರೆ ಅದಕ್ಕಿಂತ ಒಳ್ಳೆಯ ವರದಾನ ಮತ್ತೊಂದಿಲ್ಲ. ಆದರೆ ಕೆಲವರಿಗೆ ದೃಷ್ಟಿ ಸಾಮರ್ಥ್ಯದ ಕೊರತೆಯಿರುತ್ತದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಕೆ ನಮ್ಮ ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಕಣ್ಣಿನ ಪೊರೆ, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ಇತರ ದೀರ್ಘಕಾಲದ ಕಣ್ಣಿನ ಅಸ್ವಸ್ಥತೆಗಳು ಹೆಚ್ಚಾಗುತ್ತಿದೆ. ಹಾಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು, ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಅರಿವು ಮೂಡಿಸಲು ಹಾಗೂ ಕಣ್ಣು ದಾನದ ಮೂಲಕ ದೃಷ್ಟಿವಿಕಲಚೇತನರ ಜೀವನದಲ್ಲಿ ಭರವಸೆ ಮೂಡಿಸುವುದರ ಜೊತೆಗೆ ಕಣ್ಣಿನ ಆರೋಗ್ಯದ ಮಹತ್ವವನ್ನು ಸಾರಲು ಪ್ರತಿವರ್ಷ ಅಕ್ಟೋಬರ್ ತಿಂಗಳ ಎರಡನೇ ಗುರುವಾರವನ್ನು ವಿಶ್ವ ದೃಷ್ಟಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 10 ರಂದು ವಿಶ್ವ ದೃಷ್ಟಿ ದಿನ ಅಥವಾ ವರ್ಲ್ಡ್ ಸೈಟ್ ಡೇಯನ್ನಾಗಿ ಆಚರಿಸಲಾಗುತ್ತದೆ.
ಅಕ್ಟೋಬರ್ 8, 1998 ರಂದು ಮೊದಲ ಬಾರಿಗೆ ದೃಷ್ಟಿ ದಿನವನ್ನು ಆಚರಿಸಲಾಯಿತು. ಈ ದಿನವನ್ನು ಮೊದಲು ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಸಂಸ್ಥೆಯು “ಸೈಟ್ ಫಸ್ಟ್ ಕ್ಯಾಂಪೇನ್” ಎಂಬ ಅಭಿಯಾನದ ಮೂಲಕ ಆಚರಿಸಿತು. ನಂತರ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇಂಟನ್ಯಾಷನಲ್ ಏಜನ್ಸಿ ಫಾರ್ ಪ್ರಿವೆನ್ಶನ ಆಫ್ ಬ್ಲೈಂಡ್ನೆಸ್ (IAPB) ಜಾಗತಿಕ ಮಟ್ಟದಲ್ಲಿ ಅಕ್ಟೋಬರ್ ಎರಡನೇ ಗುರುವಾರದಂದು ಈ ದಿನವನ್ನು ಆಚರಿಸಲು ನಿರ್ಧರಿಸಿತು. ಕಣ್ಣಿನ ಆರೋಗ್ಯ ಸಮಸ್ಯೆಗಳ ತಡೆಗಟ್ಟುವಿಕೆ ಮತ್ತು ಅದರ ಸೂಕ್ತ ಚಿಕಿತ್ಸೆಯ ಬಗ್ಗೆ ಶಿಕ್ಷಣ ನೀಡುವುದು ವಿಶ್ವ ದೃಷ್ಟಿ ದಿನವನ್ನು ಆಚರಿಸುವ ಮುಖ್ಯ ಗುರಿಯಾಗಿದೆ.
ಇದನ್ನೂ ಓದಿ: ಇಂದು ವಿಶ್ವ ಮಾನಸಿಕ ಆರೋಗ್ಯ ದಿನ; ಇತಿಹಾಸ, ಥೀಮ್ ಕುರಿತ ಮಾಹಿತಿ ಇಲ್ಲಿದೆ
ಈ ದಿನವನ್ನು ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಮುಖ್ಯವಾಗಿ ಅಂಧತ್ವ ಮತ್ತು ಕಡಿಮೆ ದೃಷ್ಟಿ ಸಾಮರ್ಥ್ಯದ ಸಮಸ್ಯೆಯ ಕುರಿತು ಜಾಗೃತಿ ಮೂಡಿಸಲು ಇಂತಹ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ. ಅಲ್ಲದೆ ಇತ್ತೀಚಿಗೆ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿದ್ದು ಇವುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಅಮೂಲ್ಯವಾದ ದೃಷ್ಟಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುವುದರಿಂದ, ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಹಾಗಾಗಿ ಇದೆಲ್ಲಾ ಕಾರಣಗಳಿಂದಾಗಿ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ. ಅಮೂಲ್ಯವಾದ ದೃಷ್ಟಿ ಕಳೆದುಕೊಂಡರೆ ಅದು ಜೀವನದ ಗುಣಮಟ್ಟ, ದೈನಂದಿನ ಚಟುವಟಿಕೆಗಳು, ಉದ್ಯೋಗ ಸೇರಿದಂತೆ ಪ್ರತಿಯೊಂದು ವಿಷಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಾಗಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಮುಖ್ಯ ಎಂಬುದರ ಬಗ್ಗೆ ಈ ದಿನ ಜನರಿಗೆ ಅರಿವು ಮೂಡಿಸುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ