ಕ್ರೋಧಿನಾಮ ಸಂವತ್ಸರದ ವರ್ಷ ಫಲ ಹೇಗಿದೆ ಎಂಬುದನ್ನು ವಿವರಿಸುವಂಥ ಲೇಖನ ಇಲ್ಲಿದೆ. ಏಪ್ರಿಲ್ 9ನೇ ತಾರೀಕು ಸಂವತ್ಸರದ ಆರಂಭ. ಇದನ್ನು ಯುಗಾದಿ ಎನ್ನಲಾಗುತ್ತದೆ. ಇಲ್ಲಿಂದ ಹೆಚ್ಚು-ಕಡಿಮೆ ಒಂದು ವರ್ಷ, ಮಾರ್ಚ್ 29, 2025ರ ತನಕದ ಗೋಚಾರ ಫಲಾಫಲ ಇಲ್ಲಿದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುವುದಕ್ಕೆ ದೀರ್ಘಾವಧಿಯನ್ನು ತೆಗೆದುಕೊಳ್ಳುವ ಶನಿ, ಗುರು ಮತ್ತು ರಾಹು- ಕೇತುಗಳನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಂಡು, ಈ ಫಲವನ್ನು ತಿಳಿಸಲಾಗುತ್ತಿದೆ.
ಬಹುತೇಕ ಈ ಸಂವತ್ಸರಾದ್ಯಂತ ಗುರು ವೃಷಭ ರಾಶಿಯಲ್ಲಿ, ಶನಿ ಕುಂಭ ರಾಶಿಯಲ್ಲಿ, ರಾಹು ಮೀನ ರಾಶಿಯಲ್ಲಿ ಹಾಗೂ ಕೇತು ಕನ್ಯಾ ರಾಶಿಯಲ್ಲಿ ಸಂಚರಿಸುತ್ತದೆ. ಅಂದ ಹಾಗೆ ಇಲ್ಲಿ ನೀಡುತ್ತಿರುವುದು ಗೋಚಾರ ಫಲ ಮಾತ್ರ. ಮನೆ ನಿರ್ಮಾಣ, ಮದುವೆ, ಉನ್ನತ ವ್ಯಾಸಂಗ, ವಿದೇಶ ಪ್ರಯಾಣ, ಆರೋಗ್ಯ ಸೇರಿದಂತೆ ಯಾವುದೇ ಅತಿ ಮುಖ್ಯ ವಿಚಾರದ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳು ಇದ್ದಲ್ಲಿ ಜ್ಯೋತಿಷಿಗಳ ಬಳಿ ಜನ್ಮ ಜಾತಕವನ್ನು ಪರಿಶೀಲನೆ ಮಾಡಿಸಿಕೊಳ್ಳಿ. ಅವರ ಮಾರ್ಗದರ್ಶನದ ಮೇಲೆ ತೀರ್ಮಾನಗಳನ್ನು ತೆಗೆದುಕೊಳ್ಳಿ.
ಇದನ್ನೂ ಓದಿ: Ugadi Horoscope 2024: ವೃಷಭ ರಾಶಿಯ ಕ್ರೋಧಿನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ
ಕರ್ಕಾಟಕ ರಾಶಿಯವರಿಗೆ ಸಂವತ್ಸರ ಫಲ ಹೇಗಿದೆ ಎಂಬ ಮಾಹಿತಿ ನೀಡಲಾಗುತ್ತಿದೆ. ಪುನರ್ವಸು ನಕ್ಷತ್ರ ನಾಲ್ಕನೇ ಪಾದ ಹಾಗೂ ಪುಷ್ಯ ನಕ್ಷತ್ರದ ನಾಲ್ಕೂ ಪಾದ ಮತ್ತು ಆಶ್ಲೇಷಾ ನಕ್ಷತ್ರದ ನಾಲ್ಕೂ ಪಾದ ಸೇರಿ ಕರ್ಕಾಟಕ ರಾಶಿ ಆಗುತ್ತದೆ. ಈ ರಾಶಿಯು ಚರಸ್ವಭಾವದ, ಜಲ ತತ್ವದ್ದಾಗಿದೆ. ಈ ರಾಶಿಯ ಅಧಿಪತಿ ಚಂದ್ರ.
ಗುಣ- ಸ್ವಭಾವ
ದ್ವಾದಶ ರಾಶಿಗಳ ಪೈಕಿ ಬಹಳ ಭಾವನಾತ್ಕವಾಗಿ ಆಲೋಚಿಸುವಂಥ, ಚಿಂತಿಸುವಂಥ ಹಾಗೂ ನಡೆದುಕೊಳ್ಳುವಂಥ ರಾಶಿ ಅಂದರೆ ಅದು ಕರ್ಕಾಟಕ. ಸ್ನೇಹಿತರು, ಸಂಬಂಧಿಗಳು ಹಾಗೂ ಆಪ್ತರಿಂದ ಇವರು ನಿರೀಕ್ಷೆ ತುಂಬ ಜಾಸ್ತಿ ಇರಿಸಿಕೊಂಡಿರುತ್ತಾರೆ. ಮತ್ತೊಬ್ಬರಿಗೆ ಸಹಾಯ ಮಾಡಬೇಕು ಎಂದಾದರೂ ಮುಕ್ತ ಮನಸ್ಸಿನಿಂದ ನೆರವಾಗುತ್ತಾರೆ. ಯಾರನ್ನಾದರೂ ಬಹಳ ಬೇಗ ಹಚ್ಚಿಕೊಳ್ಳುವ ಕರ್ಕಾಟಕ ರಾಶಿಯವರಿಗೆ ಸಿಟ್ಟು ಜಾಸ್ತಿ ಎಂದೆನಿಸುತ್ತದೆ. ಬ್ಯಾಂಕಿಂಗ್, ವೈದ್ಯಕೀಯ ಸೇರಿದಂತೆ ಸೇವಾ ಕ್ಷೇತ್ರದಲ್ಲಿ ಅಥವಾ ವಲಯದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ. ಆಸ್ತಮಾ, ಕಫ, ಕೆಮ್ಮು, ಶೀತ, ರಕ್ತಹೀನತೆ ಈ ರೀತಿಯ ಅನಾರೋಗ್ಯ ಸಮಸ್ಯೆಗಳು ಇವರನ್ನು ಕಾಡುತ್ತವೆ. ಚೀಟಿ ವ್ಯವಹಾರವೂ ಸೇರಿದಂತೆ ಹಣಕಾಸಿನ ವಿಚಾರದಲ್ಲಿ ತಾವು ಸಿಕ್ಕಿಹಾಕಿಕೊಳ್ಳುವ ಜತೆಗೆ ಸ್ನೇಹಿತರು, ಸಂಬಂಧಿಕರನ್ನು ಸಹ ಇಂಥ ವ್ಯವಹಾರಗಳಲ್ಲಿ ಪರಿಚಯಿಸಿ, ಬಹುಪಾಲು ಸಮಯದಲ್ಲಿ ತಮ್ಮ ಕೈಯಿಂದ ಕೂಡ ಹಣ ಕಳೆದುಕೊಳ್ಳುತ್ತಾರೆ. ಒಂದಲ್ಲ ಒಂದು ಹಂತದಲ್ಲಿ ಇವರಿಗೆ ಶಿಕ್ಷಣವು ತಡೆಯಾಗಿ, ಆ ನಂತರ ಮುಂದುವರಿಸಿಕೊಂಡು ಹೋಗುವಂತಾಗುತ್ತದೆ. ಹಲವರಿಗೆ ಕೌಟುಂಬಿಕ ಕಾರಣಕ್ಕಾಗಿ ಶಿಕ್ಷಣ ಮುಂದುವರಿಸಲು ಆಗಲ್ಲ.
ಲಾಭವನ್ನು ಜಾಸ್ತಿ ನಿರೀಕ್ಷೆ ಮಾಡಬಹುದು. ಶತ್ರುಗಳ ಮಾತ್ಸರ್ಯ, ಆಕ್ರೋಶದಿಂದ ವ್ಯವಹಾರ, ವ್ಯಾಪಾರದಲ್ಲಿ ನಷ್ಟ- ಅಡೆತಡೆಗಳನ್ನು ಎದುರಿಸುತ್ತಿರುವವರಿಗೆ ಅವುಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇನ್ನು ಆಗುವುದೇ ಇಲ್ಲ ಎಂದುಕೊಂಡು ಅದರ ಆಸೆಯೇ ಬಿಟ್ಟಂಥ ಕೆಲಸಗಳು ಅಚಾನಕ್ ಎಂಬಂತೆ ಮುಗಿಯುತ್ತವೆ. ನಿಮ್ಮಲ್ಲಿ ಕೆಲವರು ಹೊಸ ವಾಹನಗಳನ್ನು ಖರೀದಿಸಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಕಾಣುವುದಕ್ಕೆ ಸೂಕ್ತ ವೈದ್ಯೋಪಚಾರ ದೊರೆಯಲಿವೆ. ನಿಮಗೆ ಬಾಕಿ ಬರಬೇಕಾದ ಹಣ ಏನಾದರೂ ಇದ್ದಲ್ಲಿ ಅದನ್ನು ವಸೂಲು ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ. ಇನ್ನು ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ದಿಢೀರ್ ಆಗಿ ಆದಾಯ ಮೂಲಗಳು- ಹರಿವು ಜಾಸ್ತಿ ಆಗುತ್ತದೆ.ನಿಮ್ಮ ವೃತ್ತಿವಿರೋಧಿಗಳು ಹಾಗೂ ವೈರಿಗಳು ತೊಂದರೆ ನೀಡಬೇಕು ಎಂದೇನಾದರೂ ಪ್ರಯತ್ನಿಸಿದಲ್ಲಿ ಅದು ಅನುಕೂಲವಾಗಿ ಮಾರ್ಪಡುತ್ತದೆ. ನಿಮ್ಮಲ್ಲಿ ಯಾರು ವಿದೇಶ ಪ್ರಯಾಣಕ್ಕಾಗಿ ವೀಸಾ ಪಡೆಯುವುದಕ್ಕೆ ಪ್ರಯತ್ನಿಸುತ್ತಾ ಅದಕ್ಕೆ ನಾನಾ ರೀತಿಯ ಅಡೆ-ತಡೆಗಳು ಎದುರಾಗುತ್ತಿದ್ದಲ್ಲಿ ಅದು ನಿವಾರಣೆ ಆಗಲಿದೆ. ಮದುವೆ ವಯಸ್ಕರಾಗಿದ್ದು, ವಿವಾಹಕ್ಕೆ ಪ್ರಯತ್ನಿಸುತ್ತಾ ಇದ್ದರೆ ಮನಸ್ಸಿಗೆ ಒಪ್ಪುವಂಥ ಸಂಬಂಧಗಳು ದೊರೆಯಲಿವೆ. ಸಂತಾನ ಅಪೇಕ್ಷಿತರು ಶುಭ ಸುದ್ದಿ ಕೇಳಲಿದ್ದೀರಿ.
ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು. ನರಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿದ್ದಲ್ಲಿ ಸೂಕ್ತ ವೈದ್ಯೋಪಚಾರವನ್ನು ಪಡೆದುಕೊಳ್ಳುವುದು ಉತ್ತಮ. ಇನ್ನು ನಿಮ್ಮಲ್ಲಿ ಯಾರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೀರಿ, ಅಂಥವರಿಗೆ ಅಜೀರ್ಣದ ಸಮಸ್ಯೆಗಳಾಗಬಹುದು. ಅಥವಾ ಜಠರಕ್ಕೆ, ಪ್ಯಾಂಕ್ರಿಯಾಸ್ ಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ವೃತ್ತಿ- ಉದ್ಯೋಗ ಬದುಕಿನಲ್ಲಿ ಹಲವು ರೀತಿಯ ಅವಮಾನಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ಬೇಡದ ಸ್ಥಳಗಳಿಗೆ ವರ್ಗಾವಣೆ ಆಗಬಹುದು ಅಥವಾ ಮನಸ್ಸಿಗೆ ಇಷ್ಟವಿಲ್ಲದ ಜವಾಬ್ದಾರಿಗಳನ್ನು ವಹಿಸಬಹುದು. ಆ ಕಾರಣಕ್ಕಾಗಿ ನಿಮ್ಮಲ್ಲಿ ಹಲವರಿಗೆ ಕೆಲಸ ಬಿಡೋಣ ಎನಿಸುತ್ತದೆ. ಸಣ್ಣ- ಪುಟ್ಟದಾದರೂ ಅಪಘಾತಗಳಾಗಬಹುದು. ಶನಿ ಶಾಂತಿ ಮಾಡಿಸಿಕೊಳ್ಳುವುದು ಕ್ಷೇಮ. ಒಂದು ವೇಳೆ ಈಗಾಗಲೇ ಮಾಡಿಸಿಯಾಗಿದೆ ಅಂತಾದಲ್ಲಿ ಮತ್ತೆ ಶಾಂತಿ ಮಾಡಿಸುವ ಅಗತ್ಯವಿಲ್ಲ.
ಯಾವುದೇ ವಿಚಾರ ಇರಲಿ, ಅದರ ಬಗ್ಗೆ ನಿಮಗೆ ಇರುವುದೇ ಅರೆಬರೆ ಮಾಹಿತಿ ಅಂತಾದಲ್ಲಿ ಅಂಥ ಕೆಲಸಗಳನ್ನು ಮಾಡಲಿಕ್ಕೆ ಹೋಗಬೇಡಿ. ಕಣ್ಣಿನ ವೈದ್ಯರು, ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿ ಇರುವವರು ಇಲಾಖೆ ವಿಚಾರಣೆಗಳನ್ನು ಎದುರಿಸಬೇಕಾಗಬಹುದು. ಅದೆಷ್ಟೇ ಸುಲಭದ್ದಾಗಿರಲಿ ಅಥವಾ ಇತರರು ಮಾಡಬಹುದು ಎಂಬುದಾಗಿರಲಿ ನಿಮ್ಮ ಕೆಲಸ ಅಥವಾ ಜವಾಬ್ದಾರಿಗಳನ್ನು ಬೇರೆಯವರಿಗೆ ವರ್ಗಾಯಿಸುವುದಕ್ಕೆ ಹೋಗಬೇಡಿ. ಜತೆಗೆ ಇದು ಸಣ್ಣ ಕೆಲಸ, ಆ ಮೇಲೆ ಮಾಡಿದರಾಯಿತು ಎಂಬ ಧೋರಣೆ ಖಂಡಿತವಾಗಿಯೂ ಬೇಡ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ಇದ್ದಲ್ಲಿ ಸಾಧ್ಯವಾದಷ್ಟೂ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಕೋರ್ಟ್- ಕಚೇರಿ ಮೆಟ್ಟಿಲೇರಿದಲ್ಲಿ ಹೆಚ್ಚಿನ ನಷ್ಟವನ್ನು ಅನುಭವಿಸುತ್ತೀರಿ. ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.
ಆಧ್ಯಾತ್ಮಿಕ ಜೀವನದಲ್ಲಿ ಇರುವಂಥವರಿಗೆ ಉತ್ತಮವಾದ ಸಾಧನೆ ಆಗುತ್ತದೆ. ತೀರ್ಥಕ್ಷೇತ್ರಗಳ ದರ್ಶನ, ದೇವತಾ ಆರಾಧನೆ, ಧರ್ಮ ಕಾರ್ಯಗಳಲ್ಲಿ ಭಾಗೀ ಆಗುವ ಅವಕಾಶ ಇತ್ಯಾದಿ ಫಲಗಳನ್ನು ಕಾಣಲಿದ್ದೀರಿ. ಧಾರ್ಮಿಕ ಪ್ರವಚನಕಾರರು, ಜ್ಯೋತಿಷಿಗಳು, ಪೌರೋಹಿತ್ಯ ವೃತ್ತಿಯಲ್ಲಿ ಇರುವಂಥವರು ಜ್ಞಾನಾರ್ಜನೆ ಹೆಚ್ಚು ಮಾಡಿಕೊಳ್ಳುವ ಸಂದರ್ಭ ಇದು. ನಿಮ್ಮಲ್ಲಿ ಕೆಲವರಿಗೆ ವೈರಾಗ್ಯ ಹೆಚ್ಚಾಗಲಿದೆ. ಖ್ಯಾತಿ- ಜನಪ್ರಿಯತೆ ಹೆಚ್ಚಾಗಲಿದೆ. ಆದರೆ ಸಾರ್ವಜನಿಕವಾಗಿ ನಿಮ್ಮ ಮಾತುಕತೆ, ವರ್ತನೆ, ನಡವಳಿಕೆ ಬಗ್ಗೆ ಜಾಗ್ರತೆಯನ್ನು ವಹಿಸಿ. ಅಭಿಪ್ರಾಯ ಮಾಡಿಸುವಾಗ, ಪದಗಳನ್ನು ಬಳಸುವಾಗ ಅದರ ಪರಿಣಾಮ ಏನಾಗಲಿದೆ ಎಂಬ ವಿವೇಚನೆಯನ್ನು ಇಟ್ಟುಕೊಳ್ಳಿ.
ಎನ್.ಕೆ. ಸ್ವಾತಿ