Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 17ರ ದಿನಭವಿಷ್ಯ

|

Updated on: Mar 17, 2023 | 5:53 AM

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 17ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 17ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 17ರ ದಿನಭವಿಷ್ಯ
Image Credit source: istockphoto
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 17ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಈ ದಿನ ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವುದು ಕಷ್ಟವಾಗುತ್ತದೆ. ನಿಮ್ಮ ಜನಪ್ರಿಯತೆ ಹೆಚ್ಚಾಗುವ ಅವಕಾಶ ಇದೆ. ಸಂಗಾತಿಯ ಅಗತ್ಯಗಳೇನು ಎಂದು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸಿ ಹಾಗೂ ಅದನ್ನು ಪೂರೈಸುವುದಕ್ಕೆ ಕೂಡ ಯತ್ನಿಸಿ. ಬಹಳ ಕಾಲದಿಂದ ಕಾರು ಅಥವಾ ಸ್ಕೂಟರ್ ಖರೀದಿ ಮಾಡಬೇಕು ಎಂದಿರುವವರಿಗೆ ಈಗ ಅದಕ್ಕೆ ಅವಕಾಶ ಹಾಗೂ ಹಣಕಾಸಿನ ಹರಿವು ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಕ್ರಿಯೇಟಿವಿಟಿಗೆ ಗೌರವ ದೊರೆಯುವ ದಿನ ಇದೆ. ಮೇಲಧಿಕಾರಿಗಳು ಅಥವಾ ಯಾವುದಾದರೂ ನಿರ್ದಿಷ್ಟ ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿದ್ದಲ್ಲಿ ಅದರ ಮುಖ್ಯಸ್ಥರಿಗೆ ನಿಮ್ಮ ಶ್ರಮ ಅರ್ಥ ಆಗಲಿದೆ. ಹೊಸದಾಗಿ ಗ್ಯಾಜೆಟ್, ಮೊಬೈಲ್ ಫೋನ್ ಖರೀದಿ ಮಾಡುವಂಥ ಯೋಗ ಇದೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಸ್ನೇಹಿತರು ನಿಮ್ಮ ಸಹಾಯವನ್ನು ಕೇಳಿಕೊಂಡು ಬರಲಿದ್ದಾರೆ. ಉದ್ಯೋಗಾವಕಾಶ ದೊರೆಯುವ ಅವಕಾಶ ಇದ್ದು, ಸರಿಯಾದ ನಿರ್ಧಾರ ಮಾಡಬೇಕಾಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹಳೇ ನೆನಪುಗಳು ವಿಪರೀತವಾಗಿ ಕಾಡಲಿದೆ. ಧೈರ್ಯದಿಂದ ಕೆಲವು ನಿರ್ಧಾರಗಳನ್ನು ಮಾಡಬೇಕಾಗುತ್ತದೆ. ಇತರರ ಸಲಹೆಯನ್ನು ಕೇಳಿಕೊಂಡು ಮಾಡಿದ ಕೆಲಸದಲ್ಲಿ ಸ್ವಲ್ಪ ಮಟ್ಟಿಗೆ ನಷ್ಟವಾಗುವಂಥ ಸಾಧ್ಯತೆ ಇದೆ. ಭವಿಷ್ಯದಲ್ಲಿ ಅನುಕೂಲ ಆಗಬಹುದು ಎಂಬ ಗುರಿಯೊಂದಿಗೆ ಸಾಲ ಮಾಡಿಯಾದರೂ ಹೂಡಿಕೆ ಮಾಡಲಿದ್ದೀರಿ. ಇತರರ ವೈಯಕ್ತಿಕ ವಿಚಾರಗಳಿಗೆ ಮೂಗು ತೂರಿಸಬೇಡಿ. ನಿಮಗಿಂತ ಚಿಕ್ಕ ವಯಸ್ಸಿನವರ ಜತೆ ಮಾತುಕತೆ ಆಡುವಾಗ ಎಚ್ಚರಿಕೆ ಅಗತ್ಯ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಹೊಸದಾಗಿ ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದಿರುವವರಿಗೆ ಸೂಕ್ತ ಸ್ಥಳ, ಮನೆ ದೊರೆಯುವಂಥ ಸಾಧ್ಯತೆ ಇದೆ. ಪಾರ್ಟಿ ಅಥವಾ ಗೆಟ್ ಟು ಗೆದರ್ ಗೆ ಆಹ್ವಾನ ಬರುವಂಥ ಯೋಗ ಇದೆ. ಕುಟುಂಬ ಸದಸ್ಯರ ಅನಾರೋಗ್ಯ ಸಮಸ್ಯೆಯು ಚಿಂತೆಗೆ ಗುರಿ ಮಾಡುವಂಥ ಸಾಧ್ಯತೆ ಇದೆ. ಅಡ್ವರ್ಟೈಸಿಂಗ್ ಏಜೆನ್ಸಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಹೊಸ ಅವಕಾಶಗಳು ದೊರೆಯಲಿವೆ. ನಿಮ್ಮದಲ್ಲದ ವಸ್ತುಗಳಿಗೆ ಆಸೆ ಪಡಲು ಹೋಗದಿರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಧಾನಕ್ಕೆ ಎಲ್ಲವೂ ಸರಿಹೋಗುತ್ತದೆ ಎಂಬ ಭಾವನೆ ಮೂಡಲಿದೆ. ಸಣ್ಣ- ಪುಟ್ಟ ಯೋಜನೆಗಳು ರೂಪಿಸುವುದಕ್ಕೆ ಅಗತ್ಯ ಸಂಪನ್ಮೂಲಗಳನ್ನು ಒಟ್ಟುಗೂಡಿಸುವುದಕ್ಕೆ ಶುರು ಮಾಡುತ್ತೀರಿ. ಊಟ- ತಿಂಡಿ ವಿಚಾರದಲ್ಲಿ ಪೊಗದಸ್ತಾದ ಆತಿಥ್ಯ ಸವಿಯುವಂಥ ಯೋಗ ಇದೆ. ದೂರದ ಊರಿನಿಂದ ಶುಭ ಸುದ್ದಿ ಕೇಳಿಬರುವಂಥ ಯೋಗ ಇದೆ. ನಿಮ್ಮ ಕೈಯಿಂದ ಹಣ ಹಾಕಿ, ಇತರರಿಗೆ ಅನುಕೂಲ ಮಾಡಿಕೊಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ದೂರ ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸರ್ಕಾರಿ ಉದ್ಯೋಗಗಳಿಗೆ ಪ್ರಯತ್ನ ಮಾಡುತ್ತಿರುವವರಿಗೆ ಬಹಳ ಒತ್ತಡ ಸೃಷ್ಟಿಯಾಗಲಿದೆ. ಪ್ರೇಮಿಗಳಿಗೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ. ಮನೆಯಲ್ಲಿ ಈ ಬಗ್ಗೆ ಹಿರಿಯರಿಗೆ ವಿಚಾರ ತಿಳಿಸುವ ಸಾಧ್ಯತೆ ಇದೆ. ಸಿನಿಮಾದ ತಾಂತ್ರಿಕ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ಹೊಸದಾದ ದೊಡ್ಡ ಪ್ರಾಜೆಕ್ಟ್ ಗಳನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಇದರಿಂದ ಹೆಸರು, ಕೀರ್ತಿ ಹಾಗೂ ಹಣ ದೊರೆಯುವ ಯೋಗ ಇದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ವಾಹನ ಚಾಲನೆ ಮಾಡುವವರಿಗೆ ಆಯಾಸ ಹೆಚ್ಚಾಗಲಿದೆ. ಕೆಲವರಿಗೆ ಕಣ್ಣು ಮಂಜಾಗುವಂತೆ ಆಗಬಹುದು. ರಕ್ತದೊತ್ತಡದಂಥ ಸಮಸ್ಯೆಗಳು ಇರುವವರು ಸೂಕ್ತ ವೈದ್ಯೋಪಚಾರಗಳನ್ನು ಮಾಡಿಕೊಳ್ಳುವುದು ಮುಖ್ಯ. ಸ್ವಂತ ವ್ಯಾಪಾರ- ವ್ಯವಹಾರ ಮಾಡುವಂಥವರಿಗೆ ಸಾಲದ ಅಗತ್ಯ ಕಂಡುಬರಲಿದೆ. ನಿಮಗೆ ತೀರಾ ಅಗತ್ಯ ಇಲ್ಲ ಎಂದಾದಲ್ಲಿ ಈ ದಿನ ಪ್ರಯಾಣ ಮಾಡದಿರುವುದು ಉತ್ತಮ. ವಿನಾಕಾರಣವಾಗಿ ವ್ಯಾಜ್ಯಗಳು ಆಗಬಹುದು, ಎಚ್ಚರ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಶುಭ ಕಾರ್ಯಗಳಲ್ಲಿ ಭಾಗವಹಿಸುವ ಸಲುವಾಗಿ ದೂರದ ಪ್ರದೇಶಗಳಿಗೆ ತೆರಳುವ ಯೋಗ ಇದೆ. ಈ ಸಂದರ್ಭದಲ್ಲಿ ಬಂಧು- ಬಾಂಧವರು, ಸ್ನೇಹಿತರ ಜತೆಗೆ ಉತ್ತಮವಾದ ಸಮಯವನ್ನು ಕಳೆಯಲಿದ್ದೀರಿ. ಹೊಸ ವಸ್ತ್ರಾಭರಣ ಖರೀದಿಗಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಡಿಜಿಟಲ್ ಆಸ್ತಿಗಳಲ್ಲಿ ಹಣ ತೊಡಗಿಸಿದವರು ಹೂಡಿಕೆಯನ್ನು ಹಿಂಪಡೆದುಕೊಳ್ಳಲಿದ್ದೀರಿ. ಪುಷ್ಕಳವಾದ ಊಟ- ತಿಂಡಿ ಸವಿಯುವಂಥ ಸಾಧ್ಯತೆ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಕೆಲಸದ ವಿಚಾರದಲ್ಲಿ ವೇಗ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ. ಸ್ನೇಹಿತರು- ಸಂಬಂಧಿಗಳ ಮೂಲಕ ಕೆಲವು ಸಲಹೆ- ಸೂಚನೆಗಳು ಬರಬಹುದು. ಇದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಬಗ್ಗೆ ಆಲೋಚಿಸಿ. ಮಕ್ಕಳ ಬೆಳವಣಿಗೆಗೆ, ಭವಿಷ್ಯಕ್ಕಾಗಿ ತುಂಬ ದೊಡ್ಡದಾದ ಯೋಜನೆಯನ್ನು ಹಾಕಿಕೊಳ್ಳಲಿದ್ದೀರಿ. ಸಂಗಾತಿಯ ಮಾತಿಗೂ ಮನ್ನಣೆಯನ್ನು ನೀಡಿ. ಕೃಷಿ ವಲಯದಲ್ಲಿ ಇರುವವರಿಗೆ ಸಂಭ್ರಮದ ವಾತಾವರಣ ಇರುತ್ತದೆ.

ಲೇಖನ- ಎನ್‌.ಕೆ.ಸ್ವಾತಿ