ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 26ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನೀವು ಎಷ್ಟೇ ಶ್ರಮ ಹಾಕಿದರೂ ಕೆಲವು ಕೆಲಸಗಳನ್ನು ಈ ದಿನ ಪೂರ್ಣ ಮಾಡುವುದಕ್ಕೆ ಸಾಧ್ಯ ಆಗುವುದೇ ಇಲ್ಲ. ಇತರರ ಸಾಮರ್ಥ್ಯವನ್ನು ಈ ಕಾರಣದಿಂದ ನಿಮ್ಮ ಜತೆಗೆ ಹೋಲಿಕೆ ಮಾಡಿಕೊಳ್ಳದಿರಿ. ಹಣ- ಸಮಯ, ಶಿಫಾರಸು ಎಂದು ಹಠಕ್ಕೆ ಬಿದ್ದು, ಕೆಲಸ ಮುಗಿಸಲೇ ಬೇಕು ಎಂದು ಹೊರಟರೆ ನಿಮಗೆ ನಷ್ಟವಾದೀತು. ಹೊಂದಾಣಿಕೆ ಮಾಡಿಕೊಂಡಲ್ಲಿ ಉದ್ಯೋಗ ಸ್ಥಳದಲ್ಲಿ ನೆಮ್ಮದಿಯಿಂದ ಇರಬಹುದು. ಅನಿಸಿದ್ದನ್ನು ನೇರಾನೇರ ಹೇಳಿಬಿಡ್ತೀನಿ ಎಂದುಕೊಳ್ಳದಿರಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಕೆಲವು ಮೆಚ್ಚುಗೆ ಮಾತುಗಳನ್ನು ಕೇಳಿಸಿಕೊಳ್ಳಲಿದ್ದೀರಿ. ಹಿಮ್ಮಡಿ, ಮೀನಖಂಡದ ಮೇಲೆ ಒತ್ತಡ ಬೀಳುವಂಥ ಕೆಲಸ ಮಾಡದಿರುವುದು ಉತ್ತಮ. ಪ್ರವಾಸಕ್ಕೆ ತೆರಳಬೇಕು ಎಂದುಕೊಂಡಿದ್ದಲ್ಲಿ ಹಣಕಾಸಿನ ಲೆಕ್ಕಾಚಾರವನ್ನು ಸರಿಯಾಗಿ ಹಾಕಿಕೊಳ್ಳಿ. ಕೃಷಿಕರಿಗೆ ಹೂಡಿಕೆ ಮಾಡಬೇಕಾದ ಅನಿವಾರ್ಯ ಕಂಡುಬರಲಿದೆ. ಇದಕ್ಕಾಗಿ ಹಣ ಸಾಲ ಮಾಡಬೇಕಾದಂಥ ಸನ್ನಿವೇಶ ಸೃಷ್ಟಿ ಆಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಕೆಲಸ ಬಿಡುವಂಥ ಅಥವಾ ಹೊಸ ವ್ಯವಹಾರ ಶುರು ಮಾಡುವಂಥ ಆಲೋಚನೆಯೇನಾದರೂ ಉದ್ಯೋಗಸ್ಥರಿಗೆ ಬಂತು ಅಂತಾದರೆ ಈ ದಿನ ಆ ವಿಚಾರವನ್ನು ಮಾಡುವುದು ನಿಲ್ಲಿಸಿಬಿಡುವುದು ಉತ್ತಮ. ಏಕೆಂದರೆ ಇದರ ಪರಿಣಾಮವಾಗಿ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡು, ತಪ್ಪುಗಳಾಗುವ ಸಾಧ್ಯತೆ ಇದೆ. ಎಲೆಕ್ಟ್ರಿಕಲ್ ಕಾಂಟ್ರಾಕ್ಟ್, ಕಟ್ಟಡ ನಿರ್ಮಾಣ ಕಾಮಗಾರಿಯ ವ್ಯವಹಾರದಲ್ಲಿ ಇರುವವರಿಗೆ ಹೊಸ ಕೆಲಸ ಬರುವಂಥ ಅವಕಾಶಗಳಿವೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮ ಮಾತಿಗೆ ಮನ್ನಣೆ, ಗೌರವ ದೊರೆಯಲಿದೆ. ಇತರರಿಗೆ ನಿಮ್ಮ ನೆರವಿನ ಅನಿವಾರ್ಯ ಸೃಷ್ಟಿ ಆಗಲಿದೆ. ಇಷ್ಟು ಸಮಯ ಹವ್ಯಾಸ ಅಂತಾಗಿದ್ದದ್ದು ಆದಾಯ ತರುವಂಥ ವೃತ್ತಿ ಆಗುವುದಕ್ಕೆ ಈ ದಿನವೇ ಮುನ್ನುಡಿ ಆಗಬಹುದು. ಪ್ರೀತಿ- ಪ್ರೇಮದ ವಿಚಾರಗಳಲ್ಲಿ ಖುಷಿ ತರುವಂಥ ಬೆಳವಣಿಗೆಗಳು ಆಗಲಿವೆ. ರುಚಿಕಟ್ಟಾದ ಊಟ- ತಿಂಡಿ ಮಾಡುವಂಥ ಯೋಗ ಇದೆ. ಜತೆಗೆ ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಗಳು ಹೆಚ್ಚಾಗುವಂಥ ಅವಕಾಶಗಳಿವೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಯಾರದಾದರೂ ಸಲಹೆ ಕೇಳಬೇಕಲ್ಲ ಎಂದು ಚಡಪಡಿಸುವಂಥ ದಿನ ಇದಾಗಿರುತ್ತದೆ. ಪೂರ್ಣ ಪ್ರಮಾಣದಲ್ಲಿ ನಂಬಿಕೆ ಇಲ್ಲ ಅಂತಾದಲ್ಲಿ ಅಂಥ ವಿಚಾರಗಳಲ್ಲಿ ಖಂಡಿತಾ ಪರಿಣತರ ಸಲಹೆಯನ್ನು ತೆಗೆದುಕೊಳ್ಳಿ. ಮುಖಕ್ಕೆ ಹೊಡೆದಂತೆ ಮಾತನಾಡುತ್ತೇನೆ ಎಂಬ ಧೋರಣೆ ಬೇಡ. ಹಳೇ ಪ್ರೇಮ ಪ್ರಕರಣಗಳು ಇದ್ದಲ್ಲಿ, ಈ ದಿನ ಅದು ನೆನಪಾಗುವ, ಆ ವ್ಯಕ್ತಿಯ ಜತೆಗೆ ಸಮಯ ಕಳೆಯುವಂಥ ಯೋಗಗಳು ಕಂಡುಬರುತ್ತಿವೆ. ವೈಯಕ್ತಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ಎಚ್ಚರ ವಹಿಸಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಹಲವರು ಬೇಡ ಅಂದಾಗಲೂ ನೀವು ಪಟ್ಟು ಹಿಡಿದು ಮಾಡಿದ ಕೆಲಸದ ಶುಭ ಫಲವನ್ನು ಈ ದಿನ ನೀವು ಕಾಣಲಿದ್ದೀರಿ. ವೃತ್ತಿಪರರು, ಉದ್ಯೋಗಸ್ಥರಿಗೆ ದೊಡ್ಡ ದೊಡ್ಡ ಜವಾಬ್ದಾರಿಗಳು ಹೆಗಲಿಗೆ ಬೀಳುವಂಥ ಸಮಯ ಇದು. ಮನೆ ಬದಲಾವಣೆಗೆ ಅಥವಾ ಮಕ್ಕಳ ಶಾಲೆಯನ್ನು ಬದಲಾಯಿಸಬೇಕು ಎಂದುಕೊಳ್ಳುತ್ತಿರುವವರಿಗೆ ನಿಮ್ಮ ನಿರೀಕ್ಷೆಯಂತೆಯೇ ಬೆಳವಣಿಗೆಗಳು ಕಾಣಲಿವೆ. ದ್ವಿಚಕ್ರ ವಾಹನ ಖರೀದಿ ಮಾಡುವುದಕ್ಕೆ ಹಣಕಾಸು ಹೊಂದಿಸಲು ಪ್ರಯತ್ನಿಸುತ್ತಿದ್ದಲ್ಲಿ ಅನುಕೂಲ ಆಗಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಶುಭ ಕಾರ್ಯಗಳಿಗೆ ಓಡಾಟ ಮಾಡಬೇಕಾದ ಸನ್ನಿವೇಶ ಇದೆ. ಹಣಕಾಸು ಹರಿವು ನಿಮ್ಮ ಇಂದಿನ ಆದ್ಯತೆ ಆಗಲಿದೆ. ಸ್ವಂತ ವ್ಯವಹಾರ ಮಾಡುತ್ತಿರುವವರಿಗೆ ಹಾಕುತ್ತಿರುವ ಶ್ರಮ ಏನೇನೂ ಸಾಲುತ್ತಿಲ್ಲ ಎಂದು ಬಲವಾಗಿ ಅನಿಸುತ್ತದೆ. ಯಾವುದೇ ಲಾಭಾಪೇಕ್ಷೆ ಇಲ್ಲದೆ ನೀವು ಮಾಡಿದ ಕೆಲಸದಿಂದ ಅನುಕೂಲ ಆಗುವಂಥ ಸಾಧ್ಯತೆ ಇದೆ. ಸಂಗಾತಿ ಜತೆಗೆ ಮಾತುಕತೆ ಆಡುವಾಗ ಪಾರದರ್ಶಕವಾಗಿ ನಡೆದುಕೊಳ್ಳಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮ ಧ್ವನಿ, ಬಾಡಿ ಲಾಂಗ್ವೇಜ್ ಮೇಲೆ ಲಕ್ಷ್ಯ ಇರಲಿ. ಇದರ ಆಧಾರದ ಮೇಲೆ ನಿಮ್ಮ ನಡವಳಿಕೆ ಹಾಗೂ ಸ್ವಭಾವದ ಬಗ್ಗೆ ತೀರ್ಪು ನೀಡುವುದಕ್ಕೆ ಅವಕಾಶ ನೀಡದಿರಿ. ಉಳಿತಾಯ ಮಾಡಬೇಕು ಎಂಬುದು ನಿಮ್ಮ ಉದ್ದೇಶವೇ ಆಗಿದ್ದಲ್ಲಿ ದುಡಿಮೆಯ ಹಣವನ್ನು ಉಳಿಸಿ. ಅದನ್ನು ಬಿಟ್ಟು ಕೊಡಬೇಕಾದ ಸಾಲವನ್ನು ಉಳಿಸಿಕೊಂಡು, ಅದನ್ನು ಉಳಿತಾಯ ಅಂತ ಮಾಡದಿರಿ. ಸಣ್ಣ-ಪುಟ್ಟ ಕೆಲಸಗಳನ್ನೂ ಶ್ರದ್ಧೆಯಿಂದ ಮಾಡಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ನೆನಪಿನ ಶಕ್ತಿ ಈ ದಿನ ಬಹಳ ಮುಖ್ಯವಾಗುತ್ತದೆ. ಯಾವುದಾದರೂ ಕೆಲಸ ಬಾಕಿ ಉಳಿಸಿ, ಮರೆತೆ ಕ್ಷಮಿಸಿ ಎಂದೆಲ್ಲ ಹೇಳುವ ಸನ್ನಿವೇಶ ಎದುರಾಗದಂತೆ ನೋಡಿಕೊಳ್ಳಿ. ಲೇವಾದೇವಿ ವ್ಯವಹಾರ ಮಾಡುವವರಿಗೆ ಮುಖ್ಯ ದಾಖಲೆ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಹಣಕಾಸಿನ ತುರ್ತು ಪರಿಸ್ಥಿತಿಗಾಗಿ ಸ್ನೇಹಿತರಿಂದ ಸಾಲ ಪಡೆಯುವಂಥ ಅಗತ್ಯ ಕಂಡುಬರುತ್ತದೆ. ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಮಾಡುವ ಕಡೆಗೂ ಲಕ್ಷ್ಯ ಇರಲಿ.
ಲೇಖನ- ಎನ್.ಕೆ.ಸ್ವಾತಿ