ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 4ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮಗಿಂತ ಮೇಲಿನ ಹುದ್ದೆಯಲ್ಲಿ ಇರುವವರ ಜೊತೆ ಮಾತನಾಡುವಾಗ ಹಾಗೂ ಪ್ರಬಲರಾಗಿರುವವರ ಜೊತೆಗೆ ಚರ್ಚಿಸುವಾಗ ನೀವು ಆಡುವ ಮಾತುಗಳ ಬಗ್ಗೆ ಬಹಳ ಜಾಗ್ರತೆಯನ್ನು ವಹಿಸಿ. ಮೊದಮೊದಲಿಗೆ ನಿಮಗನಿಸಿದ್ದನ್ನು ನೇರವಾಗಿ ಹೇಳಬಹುದು ಎಂದು ಎದುರಿನವರು ಹೇಳಿದರೂ ಅಪ್ರಿಯವಾದ ಸತ್ಯಗಳನ್ನು ಒಪ್ಪುವ ಮನಸ್ಥಿತಿಯಲ್ಲಿ ಅವರು ಇದ್ದಾರೆಯೇ ಎಂಬುದನ್ನು ಪರಾಂಬರಿಸಿ. ನೀವು ಬಹಳ ಕಷ್ಟಪಟ್ಟು ಮಾಡಿದ ಕೆಲಸವೊಂದಕ್ಕೆ ಬೇರೆಯವರು ಹೆಸರು ಗಳಿಸಲಿದ್ದಾರೆ. ಈ ಹಿಂದೆ ಯಾವಾಗಲೂ ನಿಮ್ಮ ವಿಭಾಗದಲ್ಲಿ ಆಗಿರುವ ತಪ್ಪನ್ನು ಮುಂದು ಮಾಡಿಕೊಂಡು, ನಿಮ್ಮ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಮಾಡಲಿದ್ದಾರೆ.
ಯಾರು ಮನೆಯನ್ನೋ ಅಥವಾ ಜಮೀನನ್ನೋ ಮಾರಾಟಕ್ಕೆ ಇಟ್ಟಿದ್ದೀರಿ ಅಂಥವರಿಗೆ ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ಕೆಲವರು ಬಂದು ಈ ಕೂಡಲೇ ಮಾರಿದರೆ ನಿಮಗೆ ಲಾಭ ದೊರೆಯಲಿದೆ ಅಂದರೆ, ಮತ್ತೆ ಕೆಲವರು ಇನ್ನೊಂದಿಷ್ಟು ಸಮಯ ಕಾಯ್ದು ಮಾರಿದರೆ ಒಳ್ಳೆಯ ಲಾಭ ನಿಮ್ಮದಾಗಲಿದೆ ಎಂದು ತಲೆ ಕೆಡಿಸಲಿದ್ದಾರೆ. ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವಂಥವರು ದೂರದ ಸ್ಥಳಗಳಿಗೆ ತೆಗೆದುಕೊಂಡು ಹೋಗದಿರುವುದು ಕ್ಷೇಮ. ಮಾಧ್ಯಮ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಈ ದಿನ ಸವಾಲಿನಿಂದ ಕೂಡಿರುತ್ತದೆ. ಕೆಲವರು ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ದೂರು ಹೇಳುವ ಸಾಧ್ಯತೆಗಳಿವೆ. ಯಾವುದೇ ಅನುಮಾನಗಳ ಪ್ರಶ್ನೆಗಳನ್ನು ಕೇಳಿದರೂ ಸಮಾಧಾನದಿಂದ ಉತ್ತರಿಸಿ.
ಉದ್ಯೋಗ ಬದಲಾವಣೆ ಮಾಡಬೇಕು ಎಂದಿರುವವರಿಗೆ ಏಕಾಏಕಿ ಹಲವು ಅವಕಾಶಗಳು ತೆರೆದುಕೊಳ್ಳಲಿವೆ. ಯಾರು ಸ್ವಂತ ವ್ಯಾಪಾರ, ವ್ಯವಹಾರ ಅಥವಾ ಉದ್ಯಮವನ್ನು ಆರಂಭಿಸಬೇಕು ಎಂದಿರುವರೋ ಅಂಥವರಿಗೆ ಹಣಕಾಸು ಅನುಕೂಲಗಳು ಹೇಗೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಮಾರ್ಗೋಪಾಯಗಳು ಗೋಚರವಾಗಲಿವೆ. ಷೇರು ಅಥವಾ ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಿದವರಿಗೆ ಅದನ್ನು ಹಿಂತೆಗೆದುಕೊಳ್ಳಬೇಕು ಎಂದೆನಿಸಿದಲ್ಲಿ ಉತ್ತಮ ಲಾಭದೊಂದಿಗೆ ವಾಪಸ್ ತೆಗೆದುಕೊಳ್ಳುವುದಕ್ಕೆ ಅವಕಾಶಗಳು ದೊರೆಯಲಿವೆ. ನೀವು ಅಸಲು ಕೂಡ ಬರಲಾರದು ಎಂದುಕೊಂಡಿದ್ದ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗಿನ ಲಾಭವೂ ಬರುವ ದಾರಿ ಕಾಣಿಸಿಕೊಳ್ಳಲಿದೆ.
ನನಗೆ ಯಾಕೆ ಬೇಕಿತ್ತು, ಸುಮ್ಮನಿದ್ದರೆ ಆಗುತ್ತಿತ್ತಲ್ಲ ಎಂದು ಹಲವು ಸಲ ಈ ದಿನ ನಿಮಗೆ ಅನಿಸಲಿದೆ. ಬೇರೆಯವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ನೀವು ಸಹಾಯ ಮಾಡಲು ಮುಂದಾಗಿದ್ದು, ಈಗ ನಿಮ್ಮ ವರ್ಚಸ್ಸಿಗೆ ಪೆಟ್ಟು ಬೀಳುವ ಮಟ್ಟಕ್ಕೆ ಸಮಸ್ಯೆಯಾಗಿ ಬೆಳೆಯಲಿದೆ. ವಿದ್ಯಾರ್ಥಿಗಳಿದ್ದಲ್ಲಿ ಓದಿನಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಕುಟುಂಬದಲ್ಲಿನ ಸಮಸ್ಯೆಗಳ ಕಾರಣಕ್ಕಾಗಿ ಏಕಾಗ್ರತೆಗೆ ಭಂಗವಾಗಲಿದೆ. ಮನೆಯಲ್ಲಿದ್ದ ಮುಖ್ಯ ಕಾಗದ ಪತ್ರಗಳು ಕಾಣೆಯಾಗುವ ಸಾಧ್ಯತೆಗಳಿದ್ದು, ಹಳೆಯ ವಸ್ತುಗಳ ವಿಲೇವಾರಿ ಮಾಡುವುದಕ್ಕೆ ಮುಂದಾಗಿದ್ದೀರಿ ಎಂದಾದರೆ ಯಾವುದೇ ಪತ್ರವನ್ನಾದರೂ ಸರಿ ಒಂದಕ್ಕೆ ನಾಲ್ಕು ಬಾರಿ ಸರಿಯಾಗಿ ಪರಿಶೀಲಿಸಿ, ಆ ನಂತರ ಅದನ್ನು ಬಿಸಾಡಿ.
ಕುಟುಂಬ ಸದಸ್ಯರ ಜೊತೆಗೆ ಸೇರಿ ಸೈಟು, ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡುವ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಒಂದು ವೇಳೆ ನಿಮ್ಮ ಬಳಿ ಇರುವ ಸೈಟು ಅಥವಾ ಜಮೀನನ್ನು ಮಾರಿ ಅದನ್ನು ಬೇರೆ ಕಡೆ ಹೂಡಿಕೆ ಮಾಡಬೇಕು ಎಂದಿದ್ದಲ್ಲಿ ನೀವು ನಿರೀಕ್ಷೆ ಮಾಡಿದಂತಹ ಬೆಲೆಗೆ ಅದರ ವಿಕ್ರಯ ಆಗುವಂತಹ ಯೋಗ ಸೃಷ್ಟಿಯಾಗಲಿದೆ. ಇಷ್ಟು ಸಮಯ ನಿಮ್ಮ ಜೊತೆಗೆ ಸ್ನೇಹಿತರಂತೆಯೇ ಇದ್ದು, ನಿಮ್ಮ ವಿರುದ್ಧವೇ ಅಪಪ್ರಚಾರ ಮಾಡುತ್ತಿರುವವರು ಯಾರು ಎಂಬುದು ಈ ದಿನ ನಿಮಗೆ ತಿಳಿದು ಬರಲಿದೆ. ವ್ಯಾಪಾರದಲ್ಲಿ ನಿಮ್ಮದೇ ಆದ ರಹಸ್ಯಗಳು ಇರುತ್ತವೆಯಲ್ಲಾ ಅದನ್ನು ಯಾರೊಂದಿಗೂ ಹಂಚಿಕೊಳ್ಳಲು ಹೋಗಬೇಡಿ.
ನೀವು ಬಹಳ ನಂಬಿದ ವ್ಯಕ್ತಿಗಳು ಅಥವಾ ಸಂಸ್ಥೆಗಳೇ ವಂಚನೆಯ ಮಾಡುವ ಸಾಧ್ಯತೆಗಳಿವೆ ಎಚ್ಚರ. ಹೆತ್ತದರ ಸಾಲಕ್ಕಾಗಿ ಯಾವುದೇ ಕಾರಣಕ್ಕೂ ಈ ದಿನ ಜಾಮೀನಾಗಿ ನಿಲ್ಲಬೇಡಿ. ನಾಲ್ಕು ಜನರ ಮಧ್ಯೆ ಇರುವಾಗ ಅತ್ಯುತ್ಸಾಹದಲ್ಲಿ ನೀವು ಆಡಿದ ಮಾತುಗಳೇ ಸಮಸ್ಯೆಯಾಗಿ ಪರಿಣಮಿಸಬಹುದು. ಏನನ್ನಾದರೂ ಸರಿ ನಾನು ದಕ್ಕಿಸಿಕೊಳ್ಳಬಲ್ಲೆ ಎಂಬ ಧೋರಣೆ ಈ ದಿನ ಯಾವುದೇ ಕಾರಣಕ್ಕೂ ಬೇಡ. ನೀವು ಯಾರಿಂದ ಅಂತರ ಕಾಯ್ದುಕೊಳ್ಳಬೇಕು ಎಂದುಕೊಳ್ಳುತ್ತೀರೋ ಅವರ ಜೊತೆಗೆ ಕೆಲಸ ಮಾಡುವಂತಹ ಸನ್ನಿವೇಶ ಎದುರಾಗಲಿದೆ. ಹಣಕಾಸಿನ ಸಾಮರ್ಥ್ಯಕ್ಕೆ ಮೀರಿದಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಹೋಗದಿರಿ.
ಇತರರು ಪುಸಲಾಯಿಸಿದರು ಎಂಬ ಕಾರಣಕ್ಕೋಸ್ಕರ ಒಂದು ವೇಳೆ ನೀವೇನಾದರೂ ಸಿಟ್ಟು ಮಾಡಿದರೆ ಆ ನಂತರ ಪರಿತಪಿಸುವಂತಾಗುತ್ತದೆ. ಸಂಬಂಧಿಗಳು, ಸ್ನೇಹಿತರ ಜೊತೆಗೆ ಇರುವಾಗ ಎಲ್ಲರೂ ನಮ್ಮವರೇ ಎಂದುಕೊಂಡು ತಮಾಷೆಗಾದರೂ ಏನಾದರೂ ಮಾತನಾಡಿ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ದೈನಂದಿನ ಕೆಲಸಗಳನ್ನು ಎಂದಿಗಿಂತ ಹೆಚ್ಚು ಆಸ್ಥೆಯಿಂದ ಮಾಡುವುದಕ್ಕೆ ಪ್ರಯತ್ನಿಸಿ. ಹೂವು ಹಣ್ಣಿನ ವ್ಯಾಪಾರ ಮಾಡುತ್ತಿರುವವರಿಗೆ ಯಾವುದಾದರು ದೊಡ್ಡ ಆರ್ಡರ್ ಬಂದಲ್ಲಿ ಅಡ್ವಾನ್ಸ್ ಅಥವಾ ಮುಂಗಡವನ್ನು ಪಡೆದುಕೊಳ್ಳದೆ ಒಪ್ಪಿಕೊಳ್ಳಲು ಹೋಗಬೇಡಿ. ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸಲು ನಿರ್ಧರಿಸಬೇಡಿ.
ಈ ದಿನ ಎಷ್ಟು ತಾಳ್ಮೆ ಸಂಯಮದಿಂದ ಇರುತ್ತೀರೋ ಅಷ್ಟು ಉತ್ತಮ ಫಲಗಳನ್ನು ಕಾಣುತ್ತೀರಿ. ನಿಮ್ಮ ಥರ ಆಲೋಚನೆ ಮಾಡುವಂಥವರು, ಅಂದರೆ ಸಮಾನ ಮನಸ್ಕರೊಬ್ಬರ ಪರಿಚಯ ಈ ದಿನ ಆಗಲಿದೆ. ಗಾಯಕರು, ಪ್ರವಚನಕಾರರು ಹಾಗೂ ಶಿಕ್ಷಣ ತಜ್ಞರಿಗೆ ಸಮಾಜದ ಪ್ರಮುಖ ಸಂಘ- ಸಂಸ್ಥೆಗಳಿಂದ ಸನ್ಮಾನ ಆಗುವ ಯೋಗ ಇದೆ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅಲ್ಪಾವಧಿಗಾದರೂ ವಿದೇಶಗಳಿಗೆ ತೆರಳ ಬೇಕಾದ ಅವಕಾಶ ದೊರೆಯಲಿದೆ. ನೀವು ಬರಲಾರದು ಎಂದುಕೊಂಡಿದ್ದ ಹಣ ಹಿಂದಕ್ಕೆ ಪಡೆಯುವುದಕ್ಕೆ ಯಾವ ಮಾರ್ಗ ಅನುಸರಿಸಬೇಕು ಎಂದು ವ್ಯಕ್ತಿಯೊಬ್ಬರು ಮಾರ್ಗದರ್ಶನ ನೀಡಲಿದ್ದಾರೆ.
ಉದ್ಯೋಗ ಬದುಕಿನಲ್ಲಿ ಈ ದಿನ ಪ್ರಮುಖವಾದ ಬೆಳವಣಿಗೆಯೊಂದು ಆಗಲಿದೆ. ಯಾವುದೇ ದೊಡ್ಡ ಮಟ್ಟದ ಸವಾಲುಗಳು ನಿಮಗೆ ಎದುರಾದಲ್ಲಿ ಅದನ್ನು ಧೈರ್ಯವಾಗಿ ಸ್ವೀಕರಿಸಿ. ಮೇಲುನೋಟಕ್ಕೆ ತುಂಬಾ ಕಷ್ಟವಾಗುತ್ತದೆ ಎಂದು ನೀವು ಅಂದುಕೊಂಡರೂ ಭವಿಷ್ಯದಲ್ಲಿ ಇದರಿಂದ ದೊಡ್ಡ ಮಟ್ಟದ ಅನುಕೂಲ ಆಗಲಿದೆ. ವಿದೇಶಗಳಲ್ಲಿ ವ್ಯಾಸಂಗವೋ ಅಥವಾ ಕೆಲಸವನ್ನು ಮಾಡುತ್ತಿರುವವರಿಗೆ ಉತ್ತಮ ಸಂಸ್ಥೆಗಳಿಂದ ಆಹ್ವಾನ ಬರಬಹುದು, ಅಂದರೆ ಕೆಲಸಕ್ಕೆ ಅವಕಾಶಗಳು ದೊರೆಯಬಹುದು. ಹೊಸ ಕಾರು ಅಥವಾ ದುಬಾರಿ ಸ್ಕೂಟರ್ ಅಥವಾ ಬೈಕ್ ಗಳನ್ನು ಖರೀದಿ ಮಾಡುವುದಕ್ಕೆ ಹಣಕಾಸನ್ನು ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಈ ದಿನ ಅನುಕೂಲ ಒದಗಿಬರಲಿದೆ.
ಲೇಖನ- ಎನ್.ಕೆ.ಸ್ವಾತಿ