ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 5ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮಗೆ ಎಷ್ಟೇ ಹತ್ತಿರದವರು ಹೇಳಿದರೂ ಹೇಳಿಕೆ ಮಾತುಗಳನ್ನು ಕೇಳಬೇಡಿ. ನಿಮ್ಮ ಮೂಲಕ ಇತರರು ತಮ್ಮ ಗುರಿ ಸಾಧನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ.ಒಂದಲ್ಲಾ ಒಂದು ವಿಷಯಕ್ಕೆ ಸೋದರರು ಅಥವಾ ಸೋದರಿಯರ ಜತೆಗೆ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಇತರರ ವೈಯಕ್ತಿಕ ಜವಾಬ್ದಾರಿಗಳನ್ನು ವಹಿಸಿಕೊಳ್ಳದಿರುವುದು ಉತ್ತಮ. ಹಾಗೊಂದು ವೇಳೆ ವಹಿಸಿಕೊಂಡಲ್ಲಿ ಕೆಲಸ ಮಾಡಿಯೂ ಮಾತು ಕೇಳಿಸಿಕೊಳ್ಳುವಂತಾಗುತ್ತದೆ. ಅದೆಷ್ಟೇ ಸಣ್ಣ ಪ್ರಮಾಣದ, ಸಮಯದ ಪ್ರಯಾಣವಾದರೂ ನೀವು ಯಾರನ್ನು ಭೇಟಿ ಆಗುವುದಕ್ಕೆ ತೆರಳುತ್ತಿದ್ದೀರೋ ಅವರ ಲಭ್ಯತೆಯನ್ನು ಖಾತ್ರಿಪಡಿಸಿಕೊಂಡು ಆ ನಂತರ ತೆರಳುವುದು ಉತ್ತಮ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನೀವು ಬಹಳ ಇಷ್ಟ ಪಡುವಂಥ ವ್ಯಕ್ತಿಗಳನ್ನು ಭೇಟಿ ಆಗಲಿದ್ದೀರಿ. ಅವರು ಸ್ನೇಹಿತರಾಗಿರಬಹುದು ಅಥವಾ ಸಂಬಂಧಿಗಳಾಗಿರಬಹುದು, ಆದರೆ ಅವರ ಜತೆಗೆ ನೀವು ಕಳೆಯುವ ಸಮಯ ಸಂತಸವನ್ನು ನೀಡುತ್ತದೆ. ಆದ್ದರಿಂದ ಬಹಳ ಖುಷಿ ಖುಷಿಯಾದ ಮನಸ್ಥಿತಿಯಲ್ಲಿ ಇರುತ್ತೀರಿ. ಇನ್ನು ನವ ವಿವಾಹಿತರು ಇದ್ದಲ್ಲಿ ಕುಟುಂಬದ ಎಲ್ಲ ಸದಸ್ಯರ ಜತೆಗೆ ಹೆಚ್ಚಿನ ಸಮಯ ಕಳೆಯುವುದಕ್ಕೆ ನಿರ್ಧಾರ ಮಾಡುತ್ತೀರಿ. ರೆಸಾರ್ಟ್, ಸಿನಿಮಾ ಅಥವಾ ರೆಸ್ಟೋರೆಂಟ್ ಗಳಿಗೆ ತೆರಳುವಂಥ ಯೋಗ ಇದೆ. ಇನ್ನು ನಿಮ್ಮಲ್ಲಿ ಕೆಲವರು ಕಿರು ಪ್ರವಾಸಕ್ಕೆ ತೆರಳುವಂಥ ಯೋಗ ಇದೆ. ಆದರೆ ಈ ದಿ ಮಕ್ಕಳ ಅಥವಾ ಮನೆಯಲ್ಲಿ ಇರುವಂಥ ಕಿರಿಯ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ವಹಿಸಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಈ ಹಿಂದೆ ಸಾಕಷ್ಟು ಹಣ ಖರ್ಚು ಮಾಡಿ, ಸರ್ಕಾರಿ ಯೋಜನೆಗಳಿಗಾಗಿ ಅಪ್ಲೈ ಮಾಡಿದವರಿಗೆ ಅದರ ಲಾಭ ದೊರೆಯುವುದು ಇನ್ನಷ್ಟು ತಡವಾಗುವಂಥ ಸೂಚನೆ ದೊರೆಯಲಿದೆ. ಆದರೆ ಯಾವುದೇ ಕಾರಣಕ್ಕೂ ತಾಳ್ಮೆಯನ್ನು ಕಳೆದುಕೊಳ್ಳದಿರಿ. ಲೇವಾದೇವಿ ವ್ಯವಹಾರ ಮಾಡುವಂಥವರು, ಮನೆ ಕಾಂಟ್ರ್ಯಾಕ್ಟ್ ತೆಗೆದುಕೊಳ್ಳುವವರು ಪೊಲೀಸ್ ಠಾಣೆ, ಕೋರ್ಟ್- ಕಚೇರಿ ಎಂದು ಸುತ್ತಾಡುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ನೀವು ಮಾಡುತ್ತಿರುವ ವೃತ್ತಿಯಲ್ಲಿ ಪಾರದರ್ಶಕವಾಗಿ ಇರುವುದಕ್ಕೆ ಪ್ರಯತ್ನಿಸಿ. ನೀವು ನೀಡಿದ ರಸೀದಿಯಲ್ಲಿ ತಪ್ಪುಗಳು ಉಳಿಯದಂತೆ ನೋಡಿಕೊಳ್ಳಿ. ಒಂಚೂರು ನಿರ್ಲಕ್ಷ್ಯ ಮಾಡಿದರೂ ದೊಡ್ಡ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಳ್ಳುವಂತೆ ಆಗುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಮಾಲ್ ಗಳಲ್ಲಿ, ಚಿತ್ರಮಂದಿರಗಳಲ್ಲಿ, ಪಿಜ್ಜಾ ಮಳಿಗೆಗಳಲ್ಲಿ ಕಾರ್ಯ ನಿರ್ವಹಿಸುವವರು ವಾಹನ ಚಲಾಯಿಸುವಾಗ ತುಂಬ ಎಚ್ಚರಿಕೆಯಿಂದ ಇರಬೇಕು. ಚೀಟಿಯಲ್ಲಿ ಹಣ ಹಾಕಿರುವವರು ಅದನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದಕ್ಕೆ ಏನು ಮಾಡಬೇಕೋ ಅದನ್ನು ಮಾಡುವುದಕ್ಕೆ ನಿರ್ಧರಿಸಲಿದ್ದೀರಿ. ಪ್ರಯಾಣದಲ್ಲಿ ಇರುವವರು ಬೆಲೆ ಬಾಳುವ ವಸ್ತುಗಳ ಕಡೆಗೆ ಲಕ್ಷ್ಯ ನೀಡಿ. ಮನೆಯಲ್ಲಿ ಇರುವಂಥ ಪ್ರಮುಖ ಕಾಗದ- ಪತ್ರಗಳು ಇವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಅದರ ನಕಲು ತೆಗೆಸುವುದಕ್ಕೆ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುತ್ತೀರಿ ಎಂದಾದರೆ ಜೋಪಾನವಾಗಿ ವಾಪಸ್ ತಂದು, ಮನೆಯಲ್ಲಿ ಇಟ್ಟುಕೊಳ್ಳುವ ಕಡೆಗೆ ಗಮನವನ್ನು ನೀಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ಸಿದ್ಧತೆ ಬಹಳ ಚೆನ್ನಾಗಿರಲಿದೆ. ಇತರರು ಸಹ ಇದೇ ವಿಚಾರಕ್ಕೆ ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಒಂದು ವೇಳೆ ನೀವೇನಾದರೂ ವಿವಾಹ ವಯಸ್ಕರಾಗಿದ್ದಲ್ಲಿ ಮದುವೆಗೆ ಪ್ರಯತ್ನ ಪಡುತ್ತಿದ್ದರೆ ಮ್ಯಾಟ್ರಿಮೋನಿ ವೆಬ್ ಸೈಟ್ ಗಳು ಅಥವಾ ವಧು-ವರರ ಸಮಾವೇಶಗಳಲ್ಲಿ ಸೂಕ್ತ ಸಂಬಂಧ ದೊರೆಯುವಂಥ ಯೋಗ ಇದೆ. ಯಾವುದೇ ಕಾರಣಕ್ಕೂ ಏಕಾಗ್ರತೆಯನ್ನು ಕಳೆದುಕೊಳ್ಳಬೇಡಿ. ನೆನಪಿನಲ್ಲಿಡಿ, ಗುರಿಯಿಟ್ಟು ಹೊಡೆದರೆ ಬೀಳದೆ ಇರುವುದು ಯಾವುದೂ ಇಲ್ಲ. ಸಿದ್ಧತೆ ಹಾಗೂ ಪ್ರಯತ್ನ ಸರಿಯಿರಲಿ. ನಿಮ್ಮ ಏಕಾಗ್ರತೆ ಬಹಳ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಶಿಸ್ತು, ಸಮಯ ಪಾಲನೆಗೆ ಹೆಚ್ಚಿನ ಒತ್ತು ನೀಡಲಿದ್ದೀರಿ. ನಿಮ್ಮಿಂದ ಏನು ಮಾಡುವುದಕ್ಕೆ ಸಾಧ್ಯ ಹಾಗೂ ಏನನ್ನು ಮಾಡುವುದಕ್ಕೆ ಆಗುವುದಿಲ್ಲ ಎಂಬ ಬಗ್ಗೆ ಸ್ಪಷ್ಟವಾದ ಕಲ್ಪನೆ ನಿಮಗೆ ಇರಲಿದೆ. ಎಲ್ಲರ ಆಕ್ಷೇಪ, ಅನುಮಾನಗಳಿಗೆ ಸರಿಯಾದ ಉತ್ತರವನ್ನು ನಿಮ್ಮ ಕಾರ್ಯ ಚಟುವಟಿಕೆ ನೀಡಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಇಷ್ಟು ದಿನದ ಲೆಕ್ಕ ಬೇರೆ, ಈ ದಿನದಿಂದ ಬೇರೆ ಎಂದು ಆಲೋಚನೆಯನ್ನು ಮಾಡಲಿದ್ದೀರಿ. ಅದಕ್ಕೆ ತಕ್ಕಂತೆ ಕೆಲವು ಯೋಚನೆ ನಿಮಗೆ ಬರಲಿದೆ. ಎಷ್ಟೇ ಪ್ರಯತ್ನ ಮಾಡಿದರೂ ಆದಾಯ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ, ಅಂದುಕೊಂಡ ವೇಗದಲ್ಲಿ ಕೆಲಸ ಸಾಗುತ್ತಿಲ್ಲ ಎಂದು ನಿಮಗೆ ಅನಿಸಲಿದ್ದು, ಇದಕ್ಕೆ ಕಾರಣ ಏನು ಎಂಬುದನ್ನು ಆಲೋಚಿಸಿಕೊಂಡು, ಈ ದಿನ ನಿಮ್ಮ ಸ್ವಂತ ವಿಚಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ನಿರ್ಧರಿಸಲಿದ್ದೀರಿ. ಇಷ್ಟು ಕಾಲ ಕೇಳಿದ ತಕ್ಷಣ ಇತರರಿಗೆ ಕೆಲಸ ಮಾಡಿಕೊಡುತ್ತಿದ್ದವರಿಗೆ ಕೆಲಸ ಆಗುವ ತನಕ ಒಂದು ರೀತಿ ಇದ್ದು, ಆ ನಂತರ ಜನರು ಬದಲಾಗುತ್ತಿದ್ದಾರೆ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ಒಂದೇ ಕಡೆ ಹಾಗೂ ಒಂದೇ ರೀತಿಯಲ್ಲಿ ಆಲೋಚನೆ ಮಾಡುತ್ತಿದ್ದ ನೀವು ಇದೀಗ ನಾಲ್ಕೂ ಕಡೆಯ ಸಾಧ್ಯತೆಗಳನ್ನು ಅಳೆದು- ತೂಗಿ ನೋಡುವುದಕ್ಕೆ ಆರಂಭಿಸುತ್ತೀರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಮಾತಿನ ಮೇಲೆ ಹಾಗೂ ಮನಸ್ಸಿನ ಮೇಲೆ ಈ ದಿನ ನಿಯಂತ್ರಣ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಸಣ್ಣ- ಪುಟ್ಟ ತಪ್ಪುಗಳನ್ನು ಮಾಡಿದಲ್ಲಿ ಅದನ್ನು ವಿಪರೀತ ದೊಡ್ಡದು ಮಾಡಿ, ಕೂಗಾಟ- ರೇಗಾಟ ಮಾಡದಿರಿ. ಸಾರ್ವಜನಿಕ ಇಂಟರ್ ನೆಟ್ ಗಳನ್ನು ಬಳಸುವಂಥವರು ಅಥವಾ ಸುರಕ್ಷಿತವಲ್ಲದ ಕಡೆ ಅನಿವಾರ್ಯವಾಗಿ ಇಂಟರ್ ನೆಟ್ ಬಳಸಬೇಕಾದಲ್ಲಿ ಹ್ಯಾಕರ್ ಗಳಿಂದ ಜಾಗ್ರತೆಯಿಂದ ಇರುವುದು ಮುಖ್ಯವಾಗುತ್ತದೆ. ವ್ಯಾಲೆಟ್ ಬಳಸುತ್ತಿದ್ದಲ್ಲಿ ಅದನ್ನು ಜನ ಹೆಚ್ಚಿರುವ ಕಡೆಗಳಿಗೆ ತೆಗೆದುಕೊಂಡು ಹೋಗದಿರುವುದು ಉತ್ತಮ. ರಾಜಕಾರಣಿಗಳಾಗಿದ್ದಲ್ಲಿ ಶತ್ರುಗಳನ್ನು ಮಣಿಸುವಲ್ಲಿ ಸಫಲರಾಗುತ್ತಾರೆ. ಕೃಷಿ ಭೂಮಿ ಖರೀದಿಸುವ, ಕೆಲಸ ಅಥವಾ ವೃತ್ತಿಗೆ ಬೇಕಾದಂಥ ಸಲಕರಣೆಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇದಕ್ಕಾಗಿ ಸ್ವಲ್ಪ ಪ್ರಮಾಣದಲ್ಲಿ ಸಾಲ ಮಾಡಬೇಕಾದಂಥ ಸನ್ನಿವೇಶ ನಿರ್ಮಾಣ ಆಗಬಹುದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಸೆಕೆಂಡ್ ಹ್ಯಾಂಡ್ ವಾಹನ ಖರೀದಿ- ಮಾರಾಟ ಮಾಡುವವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ರಾಜಕಾರಣಿಗಳಾಗಿದ್ದಲ್ಲಿ ನಿಮ್ಮ ಮಾತಿನ ಪ್ರಭಾವ, ಗೌರವ ಎರಡೂ ಹೆಚ್ಚಾಗಲಿದೆ. ಹೊಸಬರ ಎದುರಿಗೆ ನಿಮ್ಮ ಆದಾಯದ ಬಗ್ಗೆಯಾಗಲೀ ಅಥವಾ ನಿಮ್ಮ ವ್ಯವಹಾರದ ಗುಟ್ಟನ್ನಾಗಲೀ ಹಂಚಿಕೊಳ್ಳಬೇಡಿ. ಬ್ಯಾಂಕಿಂಗ್, ಇನ್ಷೂರೆನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವಂಥವರಿಗೆ ಗೌರವ, ಸನ್ಮಾನ ಹಾಗೂ ಆದಾಯ ಹೆಚ್ಚಳ ಆಗುವಂಥ ಯೋಗ ಇದೆ. ಕಮಿಷನ್ ಆಧಾರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅಲ್ಪ ಪ್ರಮಾಣದಲ್ಲಿ ನಷ್ಟ ಅನುಭವಿಸುವ ಯೋಗ ಇದೆ. ಪೌರೋಹಿತ್ಯ ಮಾಡುತ್ತಿರುವವರು, ದೇವಾಲಯ ಪಾರುಪತ್ತೆದಾರರು ಇತ್ಯಾದಿ ಧಾರ್ಮಿಕ ವೃತ್ತಿಯಲ್ಲಿ ಇರುವವರಿಗೆ ಬಹಳ ಗೊಂದಲ ಏರ್ಪಡಲಿದೆ. ನಿಮಗೆ ಇರುವಂಥ ಅನಾರೋಗ್ಯ ಸಮಸ್ಯೆಗಳಿಗೆ ವೈದ್ಯರ ಬದಲಾವಣೆ ಅಥವಾ ಆಹಾರ ಪಥ್ಯದಲ್ಲಿ ಬದಲಾವಣೆ ಮಾಡಿಕೊಳ್ಳುವ ಮುನ್ನ ಎಚ್ಚರಿಕೆಯಿಂದ ಇರಬೇಕು.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಯಾರಿಗೆ ಅಂತ ಸಮಾಜಾಯಿಷಿ ಹೇಳುವುದು ಎಂಬ ಚಿಂತೆ ಅಥವಾ ಆತಂಕ ನಿಮ್ಮನ್ನು ಕಾಡುವುದಕ್ಕೆ ಆರಂಭವಾಗಲಿದೆ. ಈ ಹಿಂದೆ ನಿಮಗೆ ನಿಧಾನವಾಗಿ ನೀಡಿದರೂ ಪರವಾಗಿಲ್ಲ ಎಂದು ಹೇಳಿ ಸಾಲ ನೀಡಿದ್ದ ಕೆಲವರು ತಮಗೆ ತುರ್ತಾಗಿ ಬೇಕಿದೆ ಎಂದೂ ಹಾಗೂ ಹಣವನ್ನು ಈಗಲೇ ಹಿಂತಿರುಗಿಸುವಂತೆ ಒಂದೇ ಸಮಯಕ್ಕೆ ಈ ದಿನ ಕೇಳಲಿದ್ದಾರೆ. ಈ ಕಾರಣಕ್ಕಾಗಿಯೇ ನಿಮ್ಮಲ್ಲಿ ಕೆಲವರು ಬ್ಯಾಂಕ್ ನಲ್ಲಿ ಸಾಲ ಮಾಡಬೇಕಾಬಹುದು ಅಥವಾ ಚಿನ್ನವನ್ನು ಅಡಮಾನ ಮಾಡಿ, ಹಣವನ್ನು ಪಡೆದುಕೊಳ್ಳಬಹುದು. ಅಥವಾ ಹೆಚ್ಚಿನ ಬಡ್ಡಿ ನೀಡುವುದಾಗಿ ಹೊರಗೆ ಹಣವನ್ನು ಸಾಲ ಮಾಡಲಿದ್ದೀರಿ. ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಸಮಸ್ಯೆ ಉಲ್ಬಣ ಆಗಬಹುದು. ಸ್ವಯಂ ವೈದ್ಯ ಮಾಡಿಕೊಳ್ಳುವುದರ ಬದಲು ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವ ಬಗ್ಗೆ ಲಕ್ಷ್ಯ ನೀಡಿ.
ಲೇಖನ- ಎನ್.ಕೆ.ಸ್ವಾತಿ