ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 14ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಮನೆ ಸದಸ್ಯರಿಂದ ಆರ್ಥಿಕ ಬೆಂಬಲ ದೊರೆಯಲಿದೆ. ಹೊಸ ಪೀರೋಪಕರಣಗಳು, ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಎಂದಾದರೆ ಖರ್ಚಿನ ಮೇಲೆ ನಿಗಾ ಇಡಿ. ಪರಿಚಯಸ್ಥರ ಮನೆಗೆ ಹೋದಾಗ ವಿಪರೀತ ಸ್ವಾತಂತ್ರ್ಯ ತೆಗೆದುಕೊಂಡು ಎಲ್ಲೆಂದರಲ್ಲಿ ಓಡಾಡಬೇಡಿ. ಏಕೆಂದರೆ ಅಲ್ಲಿ ಏನಾದರೂ ವಸ್ತುಗಳು ಕಾಣೆಯಾದಲ್ಲಿ ನಿಮ್ಮ ಮೇಲೆ ಆರೋಪಗಳು ಬರುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಒಪ್ಪಿಕೊಂಡ ಕೆಲಸ ಮುಗಿಸುವುದರೊಳಗೆ ಬಹಳ ಶ್ರಮ ಪಡಬೇಕಾಗುತ್ತದೆ. ಕೃಷಿ ವೃತ್ತಿಯಲ್ಲಿ ಇರುವವರಿಗೆ ಆಯಾ ವ್ಯಾಪ್ತಿಯಲ್ಲಿ ಮೆಚ್ಚುಗೆ, ಗೌರವ- ಸಮ್ಮಾನಗಳು ದೊರೆಯುವ ಅವಕಾಶಗಳು ಉಂಟು. ಹೊಸ ಕಾರು ಖರೀದಿ ಮಾಡಬೇಕು ಅಂದುಕೊಂಡಿರುವವರಿಗೆ ಹಣಕಾಸಿನ ಅನುಕೂಲ, ಮನೆಯಲ್ಲಿ ಕುಟುಂಬಸ್ಥರ ಬೆಂಬಲ ದೊರೆಯುವ ಸಾಧ್ಯತೆ ಇದೆ. ಕೆಲಸ ಬದಲಾವಣೆ ಮಾಡಬೇಕು ಅಂದುಕೊಂಡಿರುವವರಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಬಹುದು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಈಗಿನ ಕೆಲಸ ಬದಲಾವಣೆ ಮಾಡುವ ಬಗ್ಗೆ ಆಲೋಚಿಸಲಿದ್ದೀರಿ. ಕೆಲವರು ಪ್ರಾಜೆಕ್ಟ್ ಬೇರೆ ಬದಲಾಯಿಸಿಕೊಡುವಂತೆ ಮನವಿ ಮಾಡಬಹುದು. ಈ ಅವಧಿಯಲ್ಲಿ ನಿಮ್ಮ ನೆಮ್ಮದಿ ಯಾವುದರಲ್ಲಿದೆ ಎಂಬುದನ್ನು ಆಲೋಚಿಸಿ. ಏಕೆಂದರೆ ನೀವಾಗಿಯೇ ಕೇಳಿಕೊಂಡ ಹುದ್ದೆ, ಕೆಲಸ ನಿಮಗೇ ಸಮಸ್ಯೆಯಾಗಿ ಕಾಡುವ ಅವಕಾಶಗಳು ಜಾಸ್ತಿ ಇದೆ. ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂದು ಬ್ಯಾಂಕ್ ಲೋನ್ ಅಥವಾ ಬೇರೆ ಪ್ರಯಾಣ ಸಿದ್ಧತೆಯನ್ನು ನಡೆಸುತ್ತಿದ್ದಲ್ಲಿ ಅನುಕೂಲಗಳು ಒದಗಿಬರಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಸಹಕಾರ ಸಂಘಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಪ್ರಭಾವಿಗಳ ಶಿಫಾರಸು ದೊರೆತು, ಶೀಘ್ರ ಸಾಲ ಮಂಜೂರಾಗಲಿದೆ. ವೃತ್ತಿನಿರತರಿಗೆ ನಾನಾ ಸವಾಲುಗಳು ಎದುರಾಗಲಿವೆ. ಈ ಹಿಂದೆ ನೀವೇ ಆಡಿದ್ದ ಮಾತು ಅಥವಾ ಇನ್ನೊಬ್ಬರ ವಿಚಾರವಾಗಿ ಸಾರ್ವಜನಿಕವಾಗಿ ಮಂಡಿಸಿದ್ದ ಅಭಿಪ್ರಾಯಕ್ಕೆ ಈಗ ಆಕ್ಷೇಪಗಳು ವ್ಯಕ್ತ ಆಗುತ್ತವೆ. ದೇವತಾ ಕಾರ್ಯಗಳಿಗೆ ಹಣಕಾಸಿನ ದೇಣಿಗೆ ನೀಡಲಿದ್ದೀರಿ. ಈ ಹಿಂದೆ ಮಾಡಿದ್ದ ಹೂಡಿಕೆಗೆ ಈಗ ಹೆಚ್ಚು ಲಾಭ ದೊರೆಯಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಯಾವುದಾದರೂ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಿದ್ದೀರಿ ಅಂತಾದರೆ ಆ ಕೆಲಸದಲ್ಲಿನ ಸವಾಲುಗಳು ಮತ್ತು ನಿಮ್ಮ ಸಾಮರ್ಥ್ಯ- ಮಿತಿಗಳನ್ನು ಒಮ್ಮೆ ಅಳೆದು, ಆಲೋಚಿಸಿ ಒಪ್ಪಿಕೊಳ್ಳಿ. ಆಹಾರ- ನೀರಿನ ಬಗ್ಗೆ ಗಮನ ವಹಿಸುವುದು ಮುಖ್ಯ ಆಗುತ್ತದೆ. ಬಹಳ ಕಾಲದಿಂದ ಮುಗಿಯದ ಉಳಿದಿದ್ದ ಕೆಲಸಗಳು ಈಗ ವೇಗ ಪಡೆದುಕೊಂಡು, ಪೂರ್ಣಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗುತ್ತವೆ. ನಿಮಗೇ ಗೊತ್ತಿಲ್ಲದಂತೆ ನಿಮ್ಮ ಬಗ್ಗೆ ಒಳ್ಳೆ ಮಾತನಾಡುವ ಮೂಲಕ ವರ್ಚಸ್ಸು ಹೆಚ್ಚಾಗಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಸೋಷಿಯಲ್ ಮೀಡಿಯಾ, ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವವರು ಬಳಸುವ ಭಾಷೆ, ಆರಿಸಿಕೊಳ್ಳುವ ಪದಗಳಲ್ಲಿ ಜಾಗ್ರತೆಯಿಂದ ಇರಬೇಕು. ಇಲ್ಲದಿದ್ದಲ್ಲಿ ವಿವಾದಗಳು ಹೆಗಲೇರಲಿವೆ. ಉದ್ಯೋಗ ಸ್ಥಳದಲ್ಲಿ ನಾನಾ ರೀತಿಯಲ್ಲಿ ಕಿರಿಕಿರಿ ಆಗಬಹುದು. ಕೆಲವು ಸಲಕರಣೆ, ವಾಹನ ಖರೀದಿ ಮಾಡಬೇಕು ಎಂದು ತೀರ್ಮಾನ ಮಾಡಲಿದ್ದೀರಿ. ಬಂಧು- ಬಾಂಧವರು, ಸ್ನೇಹಿತರ ಜತೆಗೆ ಉತ್ತಮವಾದ ಸಮಯವನ್ನು ಕಳೆಯಲಿದ್ದೀರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಸರ್ಕಾರದ ಯೋಜನೆಗಳ ಲಾಭ ದೊರೆಯಲಿದೆ. ಇದರಿಂದ ನಿಮ್ಮ ಹಣಕಾಸಿನ ಹೊರೆ ಇಳಿಯುವುದಕ್ಕೆ ಸಹಾಯ ಆಗಲಿದೆ. ಎಲ್ಲರೂ ಸಾಧ್ಯವಿಲ್ಲ ಎಂದು ಕೈ ಬಿಟ್ಟಿದ್ದ ಕೆಲಸ ನೀವು ಮಾಡಿ, ಮುಗಿಸಿ ಸೈ ಎನಿಸಿಕೊಳ್ಳಲಿದ್ದೀರಿ. ಮನೆಯಲ್ಲಿನ ಶುಭ ಕಾರ್ಯಗಳ ನೇತೃತ್ವವನ್ನು ನೀವೇ ವಹಿಸಿಕೊಳ್ಳಬೇಕಾಗುತ್ತದೆ. ಕೆಲಸದ ಒತ್ತಡದ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ನಿಮ್ಮ ಆರೋಗ್ಯದ ಫಾಲೋ ಅಪ್ ಚೆಕಪ್ ಮಾಡಿಸುವುದಕ್ಕೆ ಸಾಧ್ಯವಾಗದೇ ಇರಬಹುದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮ ತಂತ್ರ, ಯೋಜನೆ ಚೆನ್ನಾಗಿರುತ್ತದೆ. ಈ ಹಿಂದೆ ನಿಮಗೆ ಕೈ ಕೊಟ್ಟಿದ್ದ ನಿರ್ಧಾರಗಳ ಹಿಂದಿನ ಕಾರಣಗಳನ್ನು ಗುರುತಿಸಿ, ತಪ್ಪುಗಳು ಪುನರಾವರ್ತನೆ ಆಗದಂತೆ ಜಾಗ್ರತೆ ವಹಿಸುತ್ತೀರಿ. ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವರರು ವಹಿಸಿದ ಗುರಿಯನ್ನು ತಲುಪಿ, ಹೆಚ್ಚಿನ ಬೋನಸ್ ಗಳಿಸುತ್ತೀರಿ. ಪ್ರತಿಸ್ಪರ್ಧಿಗಳ ವಿರುದ್ಧ ಕೈ ಮೇಲಾಗುವಂಥ ಸಾಧ್ಯತೆ ಇದೆ. ಯಾರಾದರೂ ನಿಮಗೆ ಸವಾಲು ಹಾಕಿದ್ದಲ್ಲಿ ಆ ಸವಾಲುಗಳಲ್ಲಿ ನಿಮ್ಮ ಗೆಲುವು ಪಕ್ಕಾ ಆಗಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಆದಾಯದ ಮೂಲಗಳು ಹೆಚ್ಚು ಮಾಡಿಕೊಳ್ಳುವುದಕ್ಕೆ ದಾರಿ ಗೋಚರ ಆಗಲಿದೆ. ಹೊಸಬರ ಪರಿಚಯ, ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ವಿವಾಹಕ್ಕೆ ಪ್ರಯತ್ನ ಪಡುತ್ತಿದ್ದಲ್ಲಿ ಸೂಕ್ತ ಸಂಬಂಧಗಳು ದೊರೆಯುವ ಸಾಧ್ಯತೆ ಹೆಚ್ಚಿದೆ. ಸಂಬಂಧಿಕರು ತಮ್ಮ ಮನೆಯಲ್ಲಿನ ಶುಭ ಕಾರ್ಯಗಳಿಗೆ ನಿಮಗೆ ಆಹ್ವಾನ ನೀಡಬಹುದು. ಹಳೆಯ ಸಿಟ್ಟು, ದ್ವೇಷ ಸಾಧಿಸುತ್ತಾ ಹೋಗದಿರಿ. ಹೊಸ ವಾಹನವನ್ನೂ ಖರೀದಿಸುವ ಯೋಗ ಇದೆ.
ಲೇಖನ- ಎನ್.ಕೆ.ಸ್ವಾತಿ