
ಮರು ಮಾತನಾಡದೆ ಕೆಲವು ಕಾರ್ಯಗಳನ್ನು ಮಾಡಿಕೊಡಬೇಕು ಎಂಬ ಸ್ಥಿತಿ ಉದ್ಭವಿಸಲಿದೆ. ಉದ್ಯೋಗವೋ ವೃತ್ತಿಯೋ ನಿಮ್ಮ ನಿರ್ಧಾರಗಳಿಗೆ ಮನ್ನಣೆ ಇಲ್ಲ ಎಂಬ ಭಾವ ಬಲವಾಗಿ ಬೇರೂರಲಿದೆ. ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿನ ಕಾರಣಕ್ಕೆ ಶಿಕ್ಷೆಗೆ ತಲೆ ಕೊಡುವಂತೆ ಆಗುತ್ತದೆ. ಜೊತೆಯಲ್ಲಿ ಇರುವ ಸ್ನೇಹಿತರ ವರ್ತನೆ ಇಷ್ಟವಾಗದಿದ್ದಲ್ಲಿ ಅಂತರ ಕಾಯ್ದಕೊಳ್ಳುವುದು ಒಳ್ಳೆಯದು. ಮನೆಗೆ ರೂಮ್ ಹೀಟರ್ ನಂಥ ಎಲೆಕ್ಟ್ರಿಕಲ್ ಉಪಕರಣ ಖರೀದಿಸುವ ಸಾಧ್ಯತೆ ಇದೆ. ನೆರೆಹೊರೆಯವರ ಜತೆಗಿನ ಅಭಿಪ್ರಾಯ ಭೇದಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಸಿಗಲಿದೆ. ಸರ್ಕಾರಿ ಇಲಾಖೆಯ ಖರೀದಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಮೇಲಧಿಕಾರಿ ಜೊತೆ ತಿಕ್ಕಾಟ ಆಗಲಿದೆ. ಆಸ್ತಮಾ ಸಮಸ್ಯೆ ಇರುವವರಿಗೆ ಪರಿಸ್ಥಿತಿ ಉಲ್ಬಣಗೊಂಡು, ವೈದ್ಯಕೀಯ ವೆಚ್ಚಗಳು ಹೆಚ್ಚಾಗಲಿವೆ. ಸಂಜೆಯ ನಂತರ ನಿರೀಕ್ಷೆ ಮಾಡುತ್ತಿರುವಂತೆ ಶುಭ ಸುದ್ದಿ ಬರಲಿದೆ.
ಗುರಿ ಇರಿಸಿಕೊಂಡ ರೀತಿಯಲ್ಲಿಯೇ ಎಲ್ಲ ಅಚ್ಚುಕಟ್ಟಾಗಿ ಮಾಡಿ ಮುಗಿಸಲಿದ್ದೀರಿ. ಇಡೀ ದಿನ ಉತ್ಸಾಹ ಹಾಗೂ ಆತ್ಮವಿಶ್ವಾಸ ಇರುತ್ತದೆ. ತಾವು ನಿರ್ವಹಿಸುವ ಕೆಲಸದಲ್ಲಿ ಅಪಾರ ಪ್ರಮಾಣದ ಅನುಭವ ಇರುವವರಿಗೆ ತುಂಬ ದೊಡ್ಡ ಮೊತ್ತದ ಉದ್ಯೋಗದ ಆಫರ್ ವೊಂದು ಪ್ರತಿಷ್ಠಿತ ಸಂಸ್ಥೆಯಿಂದ ಬರಲಿದೆ. ಮಕ್ಕಳ ಮದುವೆಗೆ ಪ್ರಯತ್ನ ಮಾಡುತ್ತಾ ಇರುವವರಿಗೆ ಸ್ನೇಹಿತರಿಂದ ರೆಫರೆನ್ಸ್ ದೊರೆಯಲಿದೆ. ತಂದೆ ಅಥವಾ ತಾಯಿ ತಾವು ಉಳಿತಾಯ ಮಾಡಿದ್ದ ಹಣವನ್ನು ನಿಮಗೆ ನೀಡುವುದಾಗಿ ಹೇಳಲಿದ್ದಾರೆ. ಈಗಾಗಲೇ ಸೈಟು ಇದೆ ಎಂದಾದಲ್ಲಿ ಅಲ್ಲಿ ಮನೆ ನಿರ್ಮಾಣ ಮಾಡುವುದಕ್ಕೆ ಕುಟುಂಬದ ಎಲ್ಲರೂ ಏಕಾಭಿಪ್ರಾಯಕ್ಕೆ ಬರಲಿದ್ದೀರಿ. ಎಂಎನ್ ಸಿ ಕಂಪನಿಗಳಲ್ಲಿ ಉದ್ಯೋಗ ಮಾಡುವವರಿಗೆ ಬಡ್ತಿ, ವೇತನ ಹೆಚ್ಚಳ ಅಥವಾ ಬೆಳವಣಿಗೆಗೆ ಅವಕಾಶ ಇರುವಂಥ ವಿಭಾಗಕ್ಕೆ ವರ್ಗಾವಣೆ ಆಗಿರುವ ಸುದ್ದಿ ಕೇಳಿಬರಲಿದೆ.
ಕುದುರೆ ರೇಸ್ ಗೆ ತಯಾರಾದ ರೀತಿಯಲ್ಲಿ ಇಂದು ನಿಮ್ಮ ಮನಸ್ಸು ಚುರುಕಾಗಿರುತ್ತದೆ. ಆದರೆ ಕೆಲಸದ ಜಂಜಾಟದಿಂದ ಹೊರಬರುವುದಕ್ಕೆ ಆಗುವುದಿಲ್ಲ. ಸಮಯಕ್ಕೆ ಪೂರ್ಣಗೊಳಿಸಲು ಎಷ್ಟು ಪ್ರಯತ್ನಿಸಿದರೂ ಯಾರಾದರೂ ನಡುವೆ ಮಾತು ಹಾಕಿ ತಡ ಆಗುವುದರಿಂದ ಬೇಸರ ಹೆಚ್ಚಾಗುತ್ತದೆ. ಸರ್ಕಾರಿ ಕಚೇರಿಯ ಕಾರ್ಯಗಳನ್ನು ಪೂರ್ತಿ ಮಾಡುವುದಕ್ಕೆ ಓಡಾಡುತ್ತಿರುವವರು “ಇನ್ನೂ ಎರಡು ದಿನ” ಎಂಬ ಉತ್ತರ ಕೇಳಿಸಿಕೊಂಡು ಸಿಟ್ಟು ಮಾಡಿಕೊಳ್ಳುತ್ತೀರಿ. ವ್ಯಾಪಾರ ಮಾಡುತ್ತಿರುವವರಿಗೆ ಬೆಳಗ್ಗೆಯೇ ಬಂದ ಗ್ರಾಹಕರ ಮಾತೇ ಇಡೀ ದಿನದ ದಿಕ್ಕು ತೋರಿಸುತ್ತದೆ. ಕ್ರಿಯೇಟಿವ್ ಕ್ಷೇತ್ರದವರು ಹೊಸ ಆಲೋಚನೆಗೆ ಚಪ್ಪಾಳೆ ಪಡೆಯುತ್ತೀರಿ. ಮನೆಯೊಳಗೆ ಮಕ್ಕಳ ಜಗಳ–ಗಲಾಟೆ ಕೇಳಿಸಿಕೊಂಡರೂ ಸಂಜೆ ವೇಳೆಗೆ ಎಲ್ಲರೂ ಒಂದೇ ತಟ್ಟೆಯಲ್ಲಿ ಕೂತು ಊಟ ಮಾಡುವಷ್ಟು ಪ್ರಶಾಂತತೆ ಸಿಗುತ್ತದೆ. ಹಣಕಾಸಿನ ಹಳೆಯ ಬಾಕಿ ತೀರಿಸಲು ಯೋಚನೆ ಬರುತ್ತದೆ. ಆರೋಗ್ಯದಲ್ಲಿ ಸಣ್ಣ ಜ್ವರ–ಬೆನ್ನು ನೋವು ಕಾಣಿಸಿಕೊಳ್ಳಬಹುದು.
ಈ ದಿನ ‘ಒಂದೇ ಏಟಿಗೆ ಎರಡು ಹಕ್ಕಿ’ ಹೊಡೆದಂತೆ ಆಗಲಿದೆ. ದಿನದ ಮೊದಲಾರ್ಧ ಯೋಜಿಸಿದ ಕೆಲಸಗಳು ಅಡಚಣೆಯಿಲ್ಲದೆ ಮುಂದೆ ಸಾಗುತ್ತವೆ, ಆದರೆ ಮಧ್ಯೆ ಯಾರಾದರೂ ಸಲಹೆ ಕೊಡುವ ನೆಪದಲ್ಲಿ ಗೊಂದಲ ಮೂಡಿಸಬಹುದು—ಗಾಳಿ ಮಾತಿಗೆ ಕಿವಿಗೊಡಬೇಡಿ. ಕಚೇರಿಯಲ್ಲಿ ದಾಖಲೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ನಿಮಗೆ ಬೇಕಿದ್ದ ಸ್ಪಷ್ಟನೆ ದೊರೆತು ತಡವಾಗಿದ್ದ ಕೆಲಸ ಸರಾಗವಾಗಿ ಸಾಗುತ್ತದೆ. ಬರವಣಿಗೆ, ಸಂಶೋಧನೆ, ತಾಂತ್ರಿಕ ಕಾರ್ಯಗಳಲ್ಲಿ ತೊಡಗಿರುವವರಿಗೆ ಹೊಸ ಸೂಚನೆ–ಮಾಹಿತಿ ಲಭ್ಯವಾಗಿ ಕೆಲಸ ಹಗುರವಾಗುತ್ತದೆ. ಮನೆಯೊಳಗೆ ಹಿರಿಯರ ಒಂದು ಮಾತೇ ಪರಿಸ್ಥಿತಿಯನ್ನು ಸುಧಾರಿಸುವಂತೆ ಮಾಡುತ್ತದೆ. ವ್ಯವಹಾರಸ್ಥರಿಗೆ ಹಳೆಯ ಗ್ರಾಹಕರೇ ಮತ್ತೆ ಹೊಸ ಆರ್ಡರ್ ನೀಡುವ ಸೂಚನೆ ಇದೆ. ಹಣಕಾಸಿನಲ್ಲಿ ಅಗತ್ಯ ಖರ್ಚನ್ನು ಮಾತ್ರ ಮಾಡುವುದು ಒಳಿತು. ಕೈ ನೋವು ವಿಪರೀತ ಕಂಡುಬಂದರೆ ಅಲ್ಪ ವಿರಾಮ ತೆಗೆದುಕೊಳ್ಳಿ. ಸಂಜೆಯ ಹೊತ್ತಿಗೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
ಸರಳವಾಗಿ ಅರ್ಥವಾಗುವ ವಿಷಯಗಳು ಸಹ ಕಠಿಣವಾದಂತೆ ಭಾಸವಾಗುತ್ತವೆ. ನಿಮ್ಮ ಜೊತೆಗೆ ಉದ್ಯೋಗ ಮಾಡುವವರು ಕೇಳುವ ಪ್ರಶ್ನೆಗಳಿಗೆ ಉತ್ತರ ತೋಚದೆ ಕಕ್ಕಾಬಿಕ್ಕಿ ಆಗುವಂಥ ಸ್ಥಿತಿ ಉದ್ಭವಿಸುತ್ತದೆ. ಈ ದಿನ ಯಾವುದನ್ನೂ ಪ್ರತಿಷ್ಠೆ- ಗೌರವ ಎಂದು ಅಂದುಕೊಳ್ಳಬೇಡಿ. ವಿದ್ಯಾರ್ಥಿಗಳೇ ಇರಲಿ, ವೃತ್ತಿಪರರು, ವ್ಯವಹಾರಸ್ಥರೇ ಆಗಲಿ ಕಲಿಯುವುದು ನಿರಂತರ ಪ್ರಕ್ರಿಯೆ ಎಂಬ ಅರಿವು ಇಟ್ಟುಕೊಳ್ಳಿ. ಸಂಗಾತಿಗೆ ಚಿನ್ನ ಅಥವಾ ಬೆಳ್ಳಿಯ ಒಡವೆ ಉಡುಗೊರೆಯಾಗಿ ನೀಡುವ ಯೋಗ ಇದೆ. ಸಮತೋಲನದ ಆಹಾರ ಸೇವನೆಗೆ ಆದ್ಯತೆ ನೀಡಿ, ಮನೆಗೆ ತರುವಂಥ ದಿನಸಿ ಪದಾರ್ಥಗಳ ಆಯ್ಕೆಯಲ್ಲೇ ಬದಲಾವಣೆ ಮಾಡಿಕೊಳ್ಳಲಿದ್ದೀರಿ. ಶೀತ- ಕೆಮ್ಮು- ಕಫದಿಂದ ಬಳಲುತ್ತಾ ಇರುವವರು ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಔಷಧೋಪಚಾರ ಪಡೆಯುವುದಕ್ಕೆ ಆದ್ಯತೆ ನೀಡಿ. ನಿಮಗೆ ಬರಬೇಕಾದ ಬಾಕಿ ಹಣ ವಸೂಲಿಗೆ ಈ ದಿನ ಗಟ್ಟಿಯಾಗಿ ಪ್ರಯತ್ನಿಸಿ.
ನಿಮ್ಮ ಈ ದಿನ ಹೊಸ ಸಾಧ್ಯತೆಗಳಿಂದ ತುಂಬಿರುತ್ತದೆ. ಉದ್ಯೋಗಸ್ಥರಿಗೆ ಹೊಸ ಯೋಜನೆಗಳಿಗೆ ಅವಕಾಶ ಸಿಗುತ್ತದೆ; ಮೇಲಧಿಕಾರಿಗಳ ಬೆಂಬಲ ದೊರೆತು ಕೆಲಸ- ಕಾರ್ಯಗಳು ಸುಗಮವಾಗಿ ಆಗಲಿವೆ. ವ್ಯಾಪಾರಸ್ಥರು ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ಆರ್ಡರ್ ಗಳನ್ನು ಪೂರ್ತಿ ಮಾಡಿಕೊಡುತ್ತೀರಿ. ರೈತರಿಗೆ ಬೆಳೆಯ ಮಾರಾಟ ಸುಲಭವಾಗಿ ಆಗುತ್ತದೆ. ನಾಟಕ, ಇತರೆ ಬರಹ ಅಥವಾ ಕ್ರಿಯೇಟಿವ್ ಕೆಲಸಗಳಲ್ಲಿ ತೊಡಗಿರುವವರು ಹೊಸ ಚಿಂತನೆಗಳಿಂದ ಪ್ರೋತ್ಸಾಹ ಪಡೆಯುತ್ತೀರಿ. ಮನೆಯವರು, ಹಿರಿಯರು ನಿಮ್ಮ ಸಲಹೆ ಮತ್ತು ಸಹಕಾರದಿಂದ ಸಂತೋಷ ಪಡುತ್ತಾರೆ. ಪ್ರೀತಿಯಲ್ಲಿ ಇರುವವರಿಗೆ ಪರಸ್ಪರ ಮಾತುಕತೆಯಿಂದ ಬಾಂಧವ್ಯ ಬಲವಾಗುತ್ತದೆ. ಖರ್ಚು–ಉಳಿತಾಯ ಸಮತೋಲನ ಸಾಧಿಸುವ ಕಡೆಗೆ ಗಮನವನ್ನು ವಹಿಸಿ. ನಿಮ್ಮ ದೇಹಕ್ಕೆ ಒಗ್ಗುವ ಆಹಾರ ಮತ್ತು ಸರಿಯಾದ ಪ್ರಮಾಣದ ನಿದ್ರೆ ಮುಖ್ಯ. ದಿನಾಂತ್ಯಕ್ಕೆ ಸಾಧನೆಗಳ ಅನುಭವದಿಂದ ಮನಸ್ಸು ಹಿಗ್ಗುತ್ತದೆ.
ಇಂದು ನಿಮ್ಮಲ್ಲಿ ಮೂಡುವಂಥ ಹೊಸ ಆಶಯಗಳು ಮನಸ್ಸನ್ನು ಉತ್ಸಾಹದಿಂದ ಪ್ರೇರೇಪಿಸುತ್ತವೆ. ಪೊಲೀಸರು ಅಥವಾ ಸೇನೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಇಲ್ಲಿಯ ತನಕ ಸಿಗದೇ ಇದ್ದ ಕೆಲವು ಸವಲತ್ತುಗಳು ದೊರೆಯಲಿವೆ. ಶಾಲಾ ಶಿಕ್ಷಕರು ಮಕ್ಕಳಿಗೆ ಹೊಸ ವಿಧಾನದಲ್ಲಿ ಹೇಳಿಕೊಡುವ ಮೂಲಕ ಕಲಿಕೆ ಸುಗಮಗೊಳಿಸುತ್ತೀರಿ. ಲೇಖಕರು, ಕವಿ, ನಾಟಕ ಕಲಾವಿದರು ಹೊಸ ಸೃಜನಾತ್ಮಕ ಕಾರ್ಯಗಳಿಗೆ ಗುರುಗಳ ಸಮಾನರಾದ ವ್ಯಕ್ತಿಗಳಿಂದ ಪ್ರೇರಣೆ ಪಡೆಯುತ್ತೀರಿ. ಕ್ರೀಡಾಪಟುಗಳು ಸ್ಪರ್ಧಾ ತಯಾರಿ ತೀವ್ರವಾಗಿ ಮುಂದುವರಿಸುತ್ತೀರಿ. ದಿನಸಿ ಅಂಗಡಿ, ಸಲೂನ್ ಮಾಲೀಕರು ಗ್ರಾಹಕರು ನೀಡುವ ಫೀಡ್ ಬ್ಯಾಕ್ ನಿಂದ ಸೇವಾ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದೀರಿ. ಹಣಕಾಸು ವಿಚಾರದಲ್ಲಿ ಯೋಜಿತವಾದ ಖರ್ಚು, ಉಳಿತಾಯವನ್ನು ಮಾಡುವ ಕಡೆಗೆ ಲಕ್ಷ್ಯವನ್ನು ನೀಡಿ. ಕುಟುಂಬ ಸದಸ್ಯರ ಬೆಂಬಲದಿಂದ ನಿಮ್ಮ ಮೇಲಿನ ಒತ್ತಡದಲ್ಲಿ ಬಹಳ ಕಡಿಮೆಯಾಗುತ್ತದೆ.
ಬಾಡಿಗೆ ಮನೆಗಾಗಿ ಹುಡುಕಾಟ ನಡೆಸುತ್ತಾ ಇರುವವರು ಈ ದಿನ ಅಡ್ವಾನ್ಸ್ ಮಾಡುವಂಥ ಯೋಗ ಇದೆ. ಆದಾಯ ಹೆಚ್ಚು ಮಾಡಿಕೊಳ್ಳಲು ವಿವಿಧ ಯೋಜನೆಗಳನ್ನು ರೂಪಿಸಲಿದ್ದೀರಿ. ನಿಮ್ಮದೇ ಅಸ್ತಿಯೊಂದನ್ನು ಮಾರುವ ಆಲೋಚನೆ ಸಹ ಬರಬಹುದು. ಹೂಡಿಕೆಗೆ ಆ ಹಣದ ಬಳಕೆ ಮಾಡುವ ಚಿಂತನೆ ಇರಲಿದೆ. ಇಷ್ಟು ಸಮಯ ನಿಮ್ಮ ಜೊತೆಗೆ ಸ್ನೇಹ- ಸೌಹಾರ್ದದಿಂದ ಇರುವ ವ್ಯಕ್ತಿ ಕೆಲವು ವಿಷಯಗಳಲ್ಲಿ ತೆಗೆದುಕೊಳ್ಳುವ ನಿರ್ಧಾರ ಕಿರಿಕಿರಿ ಮಾಡಲಿದೆ. ದೂರ ಪ್ರಯಾಣಕ್ಕೆ ಹೊರಡಲು ಎಲ್ಲ ಸಿದ್ಧತೆ ಮಾಡಿಕೊಂಡು, ಕೊನೆ ಕ್ಷಣದಲ್ಲಿ ಅದನ್ನು ರದ್ದು ಮಾಡಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ಹೊಸ ಸ್ನೇಹಿತರ ಜತೆಗೆ ಸಲುಗೆ ಬೇಡ. ಪಾರಂಪರಿಕ ವೈದ್ಯ ವೃತ್ತಿ ಮಾಡಿಕೊಂಡು ಬಂದಿರುವವರು ಕೆಲವು ಸಮಯ ಬಿಡುವು ತೆಗೆದುಕೊಳ್ಳುವ ತೀರ್ಮಾನ ಮಾಡುವಂತೆ ಆಗಲಿದೆ. ಇತರರ ತಪ್ಪುಗಳು ಕಂಡುಬಂದಲ್ಲಿ ಸಿಟ್ಟಿನಿಂದ ಕೂಗಾಡುವುದು- ಕಿರುಚಾಡುವುದು ಮಾಡಬೇಡಿ. ಸಾಧ್ಯವಾದಷ್ಟೂ ಸಮಾಧಾನದಿಂದ ತಿಳಿಹೇಳಿ.
ಖರ್ಚಿನ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ಬಹಳ ಮುಖ್ಯವಾಗಿರುತ್ತದೆ. ಕುಟುಂಬದ ಪರಿಸ್ಥಿತಿ ಹಾಗೂ ನೀವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸ್ನೇಹಿತರ ಜತೆಗೆ ಮಾತುಕತೆ ಬೇಡ. ಫ್ರೀಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುವವರಿಗೆ ಒಂದೇ ಸಮಯಕ್ಕೆ ಹಲವು ಕೆಲಸಗಳು ಏಕ ಕಾಲಕ್ಕೆ ಮಾಡಬೇಕಾದ ಒತ್ತಡ ಸೃಷ್ಟಿ ಆಗುತ್ತದೆ. ದೂರದ ಸ್ಥಳದಲ್ಲಿ ಬಿಟ್ಟು ಓದಿಸುತ್ತಿರುವ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮುಖ್ಯ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರೀತಿ- ಪ್ರೇಮ, ಮದುವೆಗೆ ಸಂಬಂಧಿಸಿದಂತೆ ಭಾವನಾತ್ಮಕ ಕ್ಷಣಗಳಲ್ಲಿ ಸಮಾಧಾನದಿಂದ ನಿರ್ಧಾರ ಮಾಡುವುದು ಸವಾಲಾಗಿರುತ್ತದೆ. ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನ ಮಾಡಿದಲ್ಲಿ ಅದರ ಅಡ್ಡ ಪರಿಣಾಮ ನಿಮ್ಮ ಮೇಲೇ ಆಗಲಿದೆ. ಜಂಕ್ ಫುಡ್ ಗಳಿಂದ ಈ ದಿನ ಸಾಧ್ಯವಾದಷ್ಟೂ ದೂರ ಇರುವುದು ಒಳ್ಳೆಯದು. ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಉದ್ಯೋಗದ ಆಫರ್ ಬರಬಹುದು.
ಲೇಖನ- ಎನ್.ಕೆ.ಸ್ವಾತಿ