ರಾಶಿ ಭವಿಷ್ಯ
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಫೆಬ್ರವರಿ 02 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಮಾಘ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ವೈಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 30 ನಿಮಿಷಕ್ಕೆ. ರಾಹು ಕಾಲ ಮಧ್ಯಾಹ್ನ 02:13 – 03:39, ಯಮಘಂಡ ಕಾಲ ಬೆಳಗ್ಗೆ 07:02 – 08:28, ಗುಳಿಕ ಕಾಲ 09:54 – 11:20ರವರೆಗೆ.
- ಮೇಷ: ಇಂದು ನಿಮ್ಮ ಕೆಲಸ ಕಾರ್ಯಗಳು ಆಗಲೇಬೇಕಾಗಿದ್ದು ಅದಕ್ಕೋಸ್ಕರ ಅಲೆದಾಟವನ್ನು ಮಾಡಲಿದ್ದೀರಿ. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ಸೋಲನ್ನು ಅನುಭವಿಸಬೇಕಾಗಬಹುದು. ನಿಮ್ಮ ಬುದ್ಧಿಯಿಂದ ನಿಮಗೆ ಆಗಬೇಕಾದ ಕೆಲಸಗಳನ್ನು ಮಾಡಿಕೊಳ್ಳುವಿರಿ. ಹಿರಿಯರನ್ನು ಗೌರವಿಸುವುದು ನಿಮ್ಮ ಸ್ವಭಾವವಾಗಿರುತ್ತದೆ. ಅನಿರೀಕ್ಷಿತ ಸುದ್ದಿಗಳನ್ನು ನೀವು ಕೇಳುವಿರಿ. ಆಪ್ತರ ಭೇಟಿಯು ನಿಮಗೆ ನೆಮ್ಮದಿಯನ್ನು ನೀಡುವುದು. ಆರೋಗ್ಯವು ಸ್ವಲ್ಪ ಕೆಡುವುದು.
- ವೃಷಭ: ಬಹುದಿನಗಳಿಂದ ಇರುವ ಸಾಲದಿಂದ ನಿಮಗೆ ಮುಕ್ತಿಯು ಸಿಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಅಡಚಣೆಗಳು ಇರಲಿವೆ. ವಾಹನದಲ್ಲಿ ಸಂಚಾರವನ್ನು ಮಾಡುವುದರಿಂದ ನಿಮಗೆ ಕೆಲವು ಅನಾನುಕೂಲತೆಗಳು ಆಗಬಹುದು. ನಿಮ್ಮ ಅಜ್ಞಾನದಿಂದ ಆದ ಕೆಲಸಕ್ಕೆ ನೀವೇ ಹೊಣೆಗಾರರಾಗಬೇಕಾಗಿಬರಬಹುದು. ಮನಸ್ಸಿನಲ್ಲಿಯೇ ಸಂಕಟಪಟ್ಟುಕೊಳ್ಳುವಿರಿ. ಆಪದತರೊಂದಿಗೆ ಹಂಚಿಕೊಳ್ಳಿ. ಸಮಾಧಾನವಾಗಲಿದೆ. ನೂತನ ವಸ್ತ್ರವನ್ನು ಧರಿಸುವಿರಿ.
- ಮಿಥುನ: ನಿಮ್ಮ ಆಪ್ತರೇ ನಿಮಗೆ ಶತ್ರುಗಳಾಗಬಹುದು. ನಿಮಗೆ ಬರಬೇಕಾದ ಹಣವು ಬರಲಿದೆ. ಮನಸ್ಸಿನಲ್ಲಿ ತುಂಬಾ ಗೊಂದಲವು ಇರಲಿದೆ. ಹಿರಿಯರ ಸಲಹೆಯನ್ನು ಪಡೆಯಿರಿ. ಸುಮ್ಮನೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಮನಸ್ಸು ಶಾಂತವಾಗುವುದು. ಒತ್ತಡದಲ್ಲಿ ಸಿಲುಕಿಕೊಳ್ಳಬೇಡಿ. ಸಾರ್ವಜನಿಕಾಗಿ ಗೌರವಗಳು ಸಿಗಲಿವೆ. ನಿಮ್ಮ ಮಾತನ್ನು ಮನೆಯವರು ಒಪ್ಪುವರು. ಸಂತಸ ವಾತಾವರಣವು ಮನೆಯಲ್ಲಿ ಇರುವುದು. ಯಾರ ಮೇಲೂ ಅನುಮಾನವನ್ನು ಪಡಬೇಡಿ. ಪ್ರಯಾಣವನ್ನು ಬೆಳೆಸುವ ಸಾಧ್ಯತೆ ಇರಲಿದೆ.
- ಕಟಕ: ನಿಮ್ಮವರಿಗೆ ಅಥವಾ ಅಪರಿಚಿತರಿಗೆ ಧನಸಹಾಯವನ್ನು ಮಾಡಲಿದ್ದೀರಿ. ವಿವಾಹಕ್ಕೆ ವರನ ಕಡೆಯಿಂದ ವಿಘ್ನಗಳು ಬರಬಹುದು. ಅಧರ್ಮ ಮಾರ್ಗದಲ್ಲಿ ನಡೆಯುವ ಮನಸ್ಸು ಮಾಡುವಿರಿ. ಖರ್ಚು ಹೆಚ್ಚಾಗಬಹುದು. ವಿಷಮಶೀತಜ್ವರವು ಕಾಣಿಸಿಕೊಳ್ಳಬಹುದು. ಯಾರನ್ನಾದರೂ ನಿಂದಿಸುವ ಕೆಲಸವನ್ನು ಮಾಡುವಿರಿ. ನಿಮ್ಮ ಅಂತರಂಗವು ಸರಿಯಾಗಿ ಇನ್ನೊಬ್ಬರಿಗೆ ತಿಳಿಯುವುದು. ನಿಮ್ಮ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋಗಬಹುದು. ಅಂದುಕೊಂಡ ಯೋಜನೆಯನ್ನು ಮುಂದಕ್ಕೆ ಹಾಕಲಿದ್ದೀರಿ.
- ಸಿಂಹ: ನಂಬಿ ಮೋಸ ಹೋಗುವ ಸಾಧ್ಯತೆ ಇದೆ. ಧನದ ವ್ಯವಹಾರದಲ್ಲಿ ನೀವು ಇಂದು ತುಂಬಾ ನಿಪುಣತೆಯನ್ನು ತೋರಿಸುವಿರಿ. ವ್ಯಕ್ತಿಗಳ ನಿಂದನೆಯನ್ನು ಮಾಡುವ ಕೆಲಸಕ್ಕೆ ವಿರಾಮವನ್ನು ಹೇಳಿ. ಇಲ್ಲವಾದರೆ ನಿಮಗೇ ಕಂಟಕವಾದೀತು. ನಿರಂತರವಾದ ಶ್ರಮದಿಂದ ಬಳಲಲಿದ್ದೀರಿ. ಪಿತ್ರಾರ್ಜಿತ ಆಸ್ತಿಯ ಅನುಭವಿಸುವ ಬಯಕೆಯನ್ನು ಇಟ್ಟಿಕೊಂಡಿದ್ದೀರಿ. ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳಿ. ನಿಮ್ಮ ಸುತ್ತಲಿನ ವಾತಾವರಣವನ್ನು ನೋಡಿಕೊಂಡು ಮಾತನಾಡಿ.
- ಕನ್ಯಾ: ಪುಣ್ಯವನ್ನು ಸಂಪಾದಿಸುವ ಕೆಲಸವನ್ನು ಮಾಡುವಿರಿ. ಅತಿಯಾದ ಆತ್ಮವಿಶ್ವಾಸವು ನಿಮ್ಮನ್ನು ತಗ್ಗಿಸೀತು. ಮಹತ್ತ್ವಪೂರ್ಣಗ್ರಂಥವನ್ನು ರಚಿಸಲು ಇಂದು ಮುಂದಾಗಬಹುದು. ನಿಮ್ಮನ್ನು ಇಷ್ಟಪಡುವವರ ಜೊತೆ ನೀವು ಕೆಲವು ಸಮಯವಿರಬೇಕಾಗುತ್ತದೆ. ರಾಜಕೀಯ ವ್ಯಕ್ತಿಗಳಿಂದ ಪ್ರೇರಿತರಾಗಿ ಕಾರ್ಯವನ್ನು ಮಾಡುವಿರಿ. ಸರಳ ಸಮಾರಂಭದಲ್ಲಿ ಭಾಗಿಯಾಗಬಹುದು. ಆಹಾರದ ವ್ಯತ್ಯಾಸದಿಂದ ರೋಗಗಳು ಬರಬಹುದು. ಸಮಯವನ್ನು ಕಳೆಯಲು ಬಹಳ ಪ್ರಯಾಸಪಡಲಿದ್ದೀರಿ. ಕರ್ತವ್ಯಗಳನ್ನು ಮಾಡಿ ಮುಗಿಸಿ.
- ತುಲಾ: ಕ್ರೀಡಾಸಕ್ತರಾದ ನೀವು ಸ್ಪರ್ಧೆಯಲ್ಲಿ ಭಾಗವಹಿಸುವಿರಿ. ಬಂಧುಗಳಿಂದ ನಿಮಗೆ ಧನಸಹಾಯವು ಸಿಗಲಿದೆ. ಪ್ರೀತಿಪಾತ್ರರ ಭೇಟಿಯಾಗಲಿದೆ. ವಿನಾಕಾರಣ ವಾಗ್ವಾದಗಳು ನಡೆಯಬಹುದು. ನ್ಯಾಯಾಲಯದಲ್ಲಿ ನಿಮಗೆ ಜಯವು ಸಿಗಲಿದೆ. ಭೂಮಿಯ ವ್ಯವಹಾರದಲ್ಲಿ ನೀವು ಹಣವನ್ನು ಸಂಪಾದಿಸಲಿದ್ದೀರಿ. ನಿಮಗೆ ಇಷ್ಟಾವದ ನಗರಕ್ಕೆ ಹೋಗಲು ತಯಾರಿ ನಡೆಸುವಿರಿ. ವ್ಯಾಪಾರವನ್ನು ಬಹಳ ಜಾಣ್ಮೆಯಿಂದ ಮಾಡುವಿರಿ. ಕೈಯ್ಯಲ್ಲಿರುವ ಹಣವನ್ನು ಪೂರ್ತಿಯಾಗಿ ಖಾಲಿ ಮಾಡಿಕೊಳ್ಳುವಿರಿ. ಹೊಸ ಕೆಲಸವನ್ನು ಮಾಡುವಿರಿ.
- ವೃಶ್ಚಿಕ: ಭೂಮಿಯ ವಿಚಾರದಲ್ಲಿ ನಿಮಗೆ ಅಕ್ಕ ಪಕ್ಕದವರು ತೊಂದರೆ ಕೊಡಬಹುದು. ವಾಹನಚಾಲನೆ ಮಾಡುವಾಗ ಜಾಗರೂಕರಾಗಿರಿ. ಇನ್ನೊಬ್ಬರಿಂದ ಅಪಘಾತವಾಗಬಹುದು. ಭಯದ ವಾತಾವರಣದಲ್ಲಿ ಇಂದು ಇರಲಿದ್ದೀರಿ. ವೈದ್ಯಕೀಯ ಕ್ಷೇತ್ರಕ್ಕೆ ಹೋಗಲು ಬಯಸುವವರು ತಮ್ಮ ನಿರ್ಧಾರವನ್ನು ಗಟ್ಟಿ ಮಾಡಳ್ಳಬೇಕಿದೆ. ವಿನಾಕಾರಣ ಸಂತೋಷವಾಗಿ ಇರುವಿರಿ. ಕೆಲಸವು ನಿಧಾನವಾದುದರಿಂದ ನಿಮಗೆ ನಿರಾಸೆಯಾಗಬಹುದು. ಆಧಕಾರಿಗಳಾಗಿದ್ದರೆ ನಿಮ್ಮ ಉದ್ಯೋಗಗಿಗಳ ಜೊತೆ ಕೆಲಸದ ನಿಮಿತ್ತ ಕಲಹವಾಡುವಿರಿ.
- ಧನು: ಗೃಹಬಳಕೆಯ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ಆಪ್ತರಿಗೆ ಅಮೂಲ್ಯವಾದ ಉಡುಗೊರೆಯನ್ನು ನೀಡುವಿರಿ. ಮಾತನ್ನು ಆಡುವಾಗ ಪದಗಳ ಮೇಲೆ ಗಮನವಿರಲಿ. ಕೆಲವು ಪದಗಳೂ ನಿಮ್ಮ ಜೊತೆ ವೈಮನಸ್ಯವನ್ನು ತರುವುದು. ಆಪ್ತರ ಅಗಲಿಕೆಯ ವಾರ್ತೆಯು ನಿಮಗೆ ಬೇಸರವನ್ನು ತರಿಸಬಹುದು. ಭವಿಷ್ಯದ ಕುರಿತು ಆಲೋಚನೆಯಲ್ಲಿ ಮಗ್ನರಾಗಿರುತ್ತೀರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ನಿಮ್ಮಲ್ಲಿ ಒಂದಿಷ್ಟು ಗೊಂದಲಗಳು ಇರಬಹುದು. ಬೇಗ ಪರಿಹರಿಸಿಕೊಂಡು ಮುನ್ನಡೆಯುವುದು ಉತ್ತಮ.
- ಮಕರ: ಆಲೋಚನೆಗಳು ಬುಡಮೇಲಾಗಿ ಹತಾಶೆಯ ಭಾವವು ಮೂಡುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಇಂದು ವಾಹನದ ಸಮಯವು ವ್ಯತ್ಯಾಸವಾದ್ದರಿಂದ ನಡೆಯಬೇಕಾಗ ಸ್ಥಿತಿ ಬರಬಹುದು. ಹದಗೆಟ್ಟ ಆರೋಗ್ಯದಲ್ಲಿ ಅಲ್ಪ ಮಟ್ಟಿನ ಚೇತರಿಗೆ ಇರಲಿದೆ. ಮಾತುಗಾರರಾಗಿದ್ದರೆ ಒಳ್ಳೆಯ ಅವಕಾಶಗಳು ಸಿಗಲಿವೆ. ಮೋಸದಿಂದ ನಿಮ್ಮ ಹಣವು ಕಳೆದುಹೋಗುವುದು. ರಾಜಕೀಯ ಕ್ಷೇತ್ರದಲ್ಲಿ ನಿಮಗೆ ಗೌರವಗಳು ಸಿಗಲಿವೆ. ನಿಮ್ಮ ಯೋಜನೆಗಳನ್ನು ಮೆಚ್ಚಲಿದ್ದಾರೆ. ಸಮಯಕ್ಕೆ ಬೆಲೆ ಕೊಡುವುದು ಉತ್ತಮ.
- ಕುಂಭ: ಎಲ್ಲವನ್ನೂ ಶಕ್ತಿಯಿಂದ ಸಾಧ್ಯ ಎನ್ನುವುದನ್ನು ಮರೆತು ಯುಕ್ತಿಯಿಂದ ಎಂಬುದನ್ನು ಅರಿತುಕೊಳ್ಳುವಿರಿ. ಹತ್ತಾರು ವಿಚಾರಗಳಲ್ಲಿ ಆಸಕ್ತಿಯನ್ನು ಹೊಂದುವಿರಿ. ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ಬಯಸಿದ್ದನ್ನು ಪಡೆಯಬೇಕು ಎನ್ನುವ ಆತುರದಲ್ಲಿ ಅನಾಹುತವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಭೋಜನಪ್ರಿಯರಿಗೆ ಒಳ್ಳೆಯ ಭೋಜನ ಸಿಗಲಿದೆ. ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಹಿರಿಯರ ವಿರೋಧದ ನಡುವೆಯೂ ನೀವು ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ.
- ಮೀನ: ಆಶಾಗೋಪುರವು ಇಂದು ಬೀಳುವ ದಿನ. ನೀವು ಅಂದುಕೊಂಡ ರೀತಿಯಲ್ಲಿ ನಡೆಯದೇ ವಿರುದ್ಧವಾಗಿ ನಡೆಯುವುದನ್ನು ಕಂಡು ನಿರಾಸೆಗೊಳ್ಳುವಿರಿ. ಧನಪ್ರಾಪ್ತಿಯು ಆಗುವಂತೆ ಇದ್ದರೂ ಆಗದೇ ಕೈತಪ್ಪಿ ಹೋಗಬಹುದು. ವಿವಾಹ ಸಮಾರಂಭದಲ್ಲಿ ನಿಮ್ಮ ಉಪಸ್ಥಿತಿಯು ಇರಲಿದೆ. ನಿಮ್ಮ ಆಶೀರ್ವಾದವನ್ನು ಪಡೆಯಲು ಮೊಮ್ಮಕ್ಕಳು ಬರಬಹುದು. ಮಕ್ಕಳಿಂದ ಪ್ರಶಂಸೆಯು ಸಿಗಲಿದೆ. ಎಂತಹ ಸಂದರ್ಭದಲ್ಲಿಯೂ ನೀವು ನಿಮ್ಮ ಮಾರ್ಗವನ್ನು ಬಿಡಲಾರಿರಿ.
-ಲೋಹಿತಶರ್ಮಾ ಇಡುವಾಣಿ