ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 26 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ:ಶ್ರವಣಾ, ಮಾಸ: ಮಾಘ, ಪಕ್ಷ: ಶುಕ್ಲ, ವಾರ: ಬುಧ, ತಿಥಿ:ಪಂಚಮೀ, ನಿತ್ಯನಕ್ಷತ್ರ:ಪೂರ್ವಾಭಾದ್ರ, ಯೋಗ:ಪರಿಘ, ಕರಣ:ವಣಿಜ, ಸೂರ್ಯೋದಯ ಬೆಳಗ್ಗೆ 07-02 ನಿಮಿಷಕ್ಕೆ ಹಾಗೂ ಸೂರ್ಯಾಸ್ತ ಸಂಜೆ 06-27 ನಿಮಿಷಕ್ಕೆ. ರಾಹು ಕಾಲ 02:11 – 03:15, ಯಮಘಂಡ ಕಾಲ 07:03 – 08:29, ಗುಳಿಕ ಕಾಲ 09:54 – 11:20 ನಿಮಿಷದವರೆಗೆ.
ಮೇಷ: ನಿದ್ರೆಯಲ್ಲಿ ಕಂಡ ಕನಸುಗಳೆಲ್ಲ ಸತ್ಯವಾಗದು. ಆತಂಕಪಡುವ ಅವಶ್ಯಕತೆಯಿಲ್ಲ. ನಿಮ್ಮನ್ನು ಕಾಳಜಿ ಮಾಡುವವರು ಯಾರಿಲ್ಲ ಎಂದೆನ್ನಿಸಬಹುದು. ಸುಮ್ಮನೇ ಕುಳಿತಿರುವ ಬದಲು ಏನನ್ನಾದರೂ ಮಾಡಿ. ನಿಮ್ಮ ಬುದ್ಧಿ, ಮನಸ್ಸುಗಳಿಗೆ ಕೆಲಸವನ್ನು ಕೊಡಿ. ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಿರಿ. ಕೊಟ್ಟಿರುವ ಜವಾಬ್ದಾರಿಯನ್ನು ಯೋಗ್ಯರೀತಿಯಲ್ಲಿ ಮಾಡಿ ಮುಗಿಸುವಿರಿ. ಸಂಪತ್ತನ್ನು ಉಳಿಸಲು ಯತ್ನಿಸಿದಷ್ಟೂ ಯಾವುದಾದರೂ ಒಂದು ರೀತಿಯಲ್ಲಿ ಖರ್ಚಾಗುವುದು.
ವೃಷಭ: ಪ್ರೇಮನಿವೇದನೆಯನ್ನು ಮಾಡಲು ಹೋಗಬೇಡಿ. ನಿಮ್ಮ ಯೋಜನೆಗೆ ವಿರುದ್ಧವಾಗಬಹುದು. ದ್ವೇಷವನ್ನು ಸಾಧಿಸುತ್ತ ಕೂರಬೇಡಿ. ಮನಸ್ಸು ಹಾಳಾಗುವುದೇ ವಿನಃ ಮತ್ತೇನೂ ಆಗದು ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳಿ. ಸಾಧ್ಯಾವಾದರೆ ಪ್ರೀತಿಸಿ, ಇಲ್ಲವೇ ತಟಸ್ಥವಾಗಿರಿ. ನಿಮಗೆ ಬರುವ ಹಳವಿದ್ದರೆ ಅದನ್ನು ನಿರೀಕ್ಷಿಸಬಹುದು. ಸಂಗಾತಿಯೊಂದಿಗೆ ಮನಸ್ತಾಪಗಳು ಏಳಬಹುದು. ನಿಮ್ಮ ಮಾತನ್ನು ತಿರಸ್ಕರಿಸಬಹುದು. ಉದ್ಯೋಗದ ಕಾರಣಕ್ಕೆ ದೂರಪ್ರಯಾಣವನ್ನು ಮಾಡುವಿರಿ. ನಿಮ್ಮನ್ನು ಸಮರ್ಥಿಕೊಳ್ಳಲು ಹೆಣಗಾಡುವಿರಿ. ಅಹಂಕರವನ್ನು ಬಿಟ್ಟುಬಿಡಿ.
ಮಿಥುನ: ವಿವಿಧಕ್ಷೇತ್ರದ ಕಲಾವಿದರಿಗೆ ದೊಡ್ಡ ಸಭೆಯಲ್ಲಿ ಕಾರ್ಯಕ್ರಮಕ್ಕೆ ಆಹ್ವಾನ ಬರಬಹುದು. ಎಲ್ಲವೂ ವ್ಯರ್ಥವಾಯಿತು, ಯಾರೂ ಸಹಾಯಕ್ಕೆ ಬಾರರು, ಜೀವನವೇ ಹೀಗಾಯಿತು ಎಂಬ ಭಾವ ನಿಮ್ಮ ಮನಸ್ಸಿನಲ್ಲಿ ಓಡಾಡುತ್ತಿರಬಹುದು. ಹಾಸ್ಯಪ್ರಜ್ಞೆಯನ್ನು ಬೆಳೆಸಿಕೊಳ್ಳಿ. ಋಣಾತ್ಮಕ ಭಾವನೆಗಳೂ ದೂರವಾಗುವವು. ಮಾನಸಿಕ ನೆಮ್ಮದಿಯೂ ಸಿಗುವುದು. ಜೀವನೂ ಸರಳ ಎನಿಸಬಹುದು. ಕುಟುಂಬದವರೊಂದಿಗೆ ನಗುತ್ತಾ ಇರಿ.
ಕಟಕ: ಗೆಲ್ಲಬೇಕು ಎಂದುಕೊಂಡು ಕಾನೂನಿಗೆ ವಿರುದ್ಧವಾಗಿ ಏನನ್ನೂ ಮಾಡಬೇಡಿ. ಸಂಕಷ್ಟದ ಹಾದಿಯಾದೀತು. ವ್ಯಾಪಾರಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುವುದು. ಲಾಭವೂ ಅಧಿಕಗೊಳ್ಳುವುದು. ಗ್ರಾಹಕರಿಂದ ವಂಚಿತರಾಗಬಹುದು. ಕುಟುಂಬಕ್ಕೆ ಸ್ವಲ್ಪ ಸಮಯವನ್ನು ಕೊಡಿ. ಅವರಿಗೆ ಏನು ಬೇಕು? ಏನು ಮಾಡಬೇಕು ಎಂಬುದನ್ನು ಅರಿತು ಕಾರ್ಯಪ್ರವೃತ್ತರಾಗಿ. ಪ್ರೇಮನಿವೇದನೆಗೆಂದು ಹೋಗುವಾಗ ಅವಘಡ ಸಂಭವಿಸಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಯೋಚನೆಗೆ ಅನುಸಾರವಾಗಿ ಏನೂ ನಡೆಯುತ್ತಿಲ್ಲ ಎಂದು ಬೇಸರವೂ ಆಗಬಹುದು.
ಸಿಂಹ: ಕೆಟ್ಟಿರುವ ನಿಮ್ಮ ಅನಾರೋಗ್ಯವನ್ನು ಸರಿಪಡಿಸಿಕೊಳ್ಳುವತ್ತ ಗಮನವಿದ್ದರೆ ಒಳ್ಳೆಯದು. ಅಂತಾರಾಷ್ಟ್ರಿಯ ಸ್ತರದ ಕಾರ್ಯಕ್ರಮದಲ್ಲಿ ಭಾಗವಿಸುವಿರಿ. ಸ್ನೇಹಿತರೊಂದಿಗೆ ಹೆಚ್ಚು ಕಾಲವನ್ನು ಕಳೆದು ನಿಮಗಾದ ನೋವನ್ನು ಹಂಚಿಕೊಳ್ಳುವಿರಿ. ಬಹಳ ದಿನಗಳಿಂದ ಹೋಗಬೇಕು ಎಂದುಕೊಂಡ ಸ್ಥಳಗಳಿಗೆ ಹೋಗಿ ಬರುತ್ತೀರಿ. ನಿಮ್ಮ ಬಗ್ಗೆ ಪೂರ್ವಾಗ್ರಹದಿಂದ ಕೂಡಿರುವವರಿಗೆ ನಿಮ್ಮ ನಿಜಸ್ಥಿತಿಯನ್ನು ತಿಳಿಸುವಿರಿ. ಸಂಪಾದನೆ ಹೆಚ್ಚಾಗುವುದು. ಮನೋರಂಜನೆಯ ಕಾರ್ಯಕ್ರಮಗಳಿಗೆ ಭಾಗವಹಿಸಬಹುದು.
ಕನ್ಯಾ: ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ನಿಮಗೆ ಮಾನಸಿಕವಾಗಿ ಗೊಂದಲವೂ ಉಂಟಾಗುವುದು. ಕಾರ್ಯದ ನಿಮಿತ್ತ ವ್ಯರ್ಥ ಓಡಾಟಗಳು ಆಗಲಿವೆ. ಕೆಲಸವನ್ನು ಮುಗಿಸುವ ವೇಗದಲ್ಲಿ ಕಾರ್ಯಕ್ಕೊಸ್ಕರ ಖರ್ಚನ್ನೂ ಮಾಡಬೇಕಾಗಿಬರಬಹುದು. ಸಂಗಾತಿಯೊಡನೆ ಸಂತೋಷದಿಂದ ಸಲ್ಲಾಪಮಾಡುತ್ತ ಸಮಯ ಸರಿಯುವುದು. ಭೂಮಿಯನ್ನು ಮಾರಾಟ ಮಾಡಲು ಪ್ರಯತ್ನಿಸಿದರೆ ನಿಮ್ಮ ಬೆಲೆಗೆ ಸರಿಹೊಂದುವಂತೆ ಖರೀದಿಯಾಗುವುದು. ಮಕ್ಕಳಿಗೆ ಪ್ರೀತಿ ತೋರಿಸಿ. ಜೊತೆಗೆ ಭೀತಿಯೂ ಇರಲಿ. ಅತಿಯಾದ ಮಾಧುರ್ಯವು ದೇಹವನ್ನು ಹಾಳುಮಾಡುತ್ತದೆ.
ತುಲಾ: ಮನೆಗೆ ಅಗತ್ಯವಿರುವ ಹೊಸ ವಸ್ತುಗಳ ಖರೀದಿಯನ್ನು ಮಾಡಲಿದ್ದೀರಿ. ಇದರಿಂದ ಮನೆಯಲ್ಲಿ ಕಿರಿಕಿರಿಯ ವಾತಾವರಣವೂ ನಿರ್ಮಾಣವಾಗಬಹುದು. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ಔಷಧೀಯ ವಸ್ತುಗಳಿಂದ ಹೆಚ್ಚು ಲಾಭವಿರಲಿದೆ. ಯಾವ ಮಾತನ್ನೂ ಯೋಚಿಸದೇ ಕೊಡಬೇಡಿ. ಅದೇ ಮುಳುವಾದೀತು. ಸಂಗಾತಿಯ ಸೌಂದರ್ಯಕ್ಕೆ ಮಾರುಹೋಗಬೇಡಿ. ಎಲ್ಲರೊಂದಿಗೂ ಸಂವಹನವನ್ನು ಆಗಬೇಕಿರುವ ಕೆಲಸವನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ವಕೀಲವೃತ್ತಿಯವರಿಗೆ ಜಯವಿದೆ.
ವೃಶ್ಚಿಕ: ನೀವು ಇಷ್ಟಪಡುವ ಸುಂದರವಾದ ಪ್ರಕೃತಿಯ ನಡುವೆ ಇರಲು ಇಚ್ಛಿಸುತ್ತೀರಿ. ವ್ಯಾಪಾರದ ಕಾರಣದಿಂದ ದೂರ ಚಲಿಸುವ ಸಾಧ್ಯತೆ ಇದೆ. ನೀವು ವಾಹನವನ್ನು ಚಾಲನೆ ಮಾಡುವುದು ಬೇಡ. ಪರರ ದೃಷ್ಟಿ ನಿಮ್ಮ ಮೇಲೆ ಬೀಳಲಿದೆ. ಎಲ್ಲ ಸೋಲುಗಳನ್ನು ಪಾಠವನ್ನಾಗಿ ಮಾಡಿಕೊಳ್ಳಬೇಕು. ಸಾಧಿಸುವ ಛಲವಿರುವವಗೆ ಯಾವುದು ಸಾಧ್ಯವಿಲ್ಲ? ಪುತ್ರೋತ್ಸವದ ಆನಂದ ನಿಮ್ಮ ಪಾಲಿಗಿದೆ. ನೆರೆ-ಹೊರೆಯವರ ಜೊತೆ ಜಗಳಕ್ಕೆ ಹೋಗಬೇಡಿ.
ಧನು: ಒತ್ತಾಯಕ್ಕೆ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳುವುದು ಶ್ರೇಯಸ್ಕರವಲ್ಲ. ದೀಪದ ಬುಡ ಎಂದಿಗೂ ಕತ್ತಲಾಗಿರುತ್ತದೆ. ಇನ್ನೊಂದು ದೀಪವನ್ನು ಹಚ್ಚಿ. ಕತ್ತಲೆ ದೂರವಾಗುತ್ತದೆ. ಹಿಡಿದ ಕಾರ್ಯವನ್ನು ಬಿಡದೆ ಮುನ್ನಡೆಸುವ ಛಾತಿ ನಿಮ್ಮ ಯಶಸ್ಸಿನ ಗುಟ್ಟುಗಳಲ್ಲೊಂದು. ಗೊತ್ತಿದ್ದೂ ಉದ್ವೇಗಕ್ಕೆ ಒಳಗಾಗಬೇಡಿ. ಎದೆ ನೋವು ಕಾಣಿಸಿಕೊಂಡೀತು. ಶಸ್ತ್ರಚಿಕಿತ್ಸೆಯವರೆಗೂ ಒಯ್ಯಬಹುದು. ನಾಗರಾಜನಿಗೆ ಸುತ್ತು ಬನ್ನಿ. ಇಂದು ಹುಟ್ಟಿದ ಪ್ರೇಮವು ಕೆಲವೇ ದಿನದಲ್ಲಿ ಸಾಯುತ್ತದೆ.
ಮಕರ: ಸ್ನೇಹಿತರ ಜೊತೆ ಸೇರಿ ಹಣವನ್ನು ಖರ್ಚು ಮಾಡಲು ಸಂದರ್ಭವು ಬರಲಿದೆ. ದಾಂಪತ್ಯಜೀವನವು ಜೀವನ್ಮರಣದ ಮಧ್ಯದಲ್ಲಿ ಒದ್ದಾಡುತ್ತಿದೆ. ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಇನ್ನೊಂದು ಜೀವವನ್ನು ಗರ್ಭದಲ್ಲಿ ಹೊತ್ತಿರುವವರು ನಡಿಗೆಯಲ್ಲೂ ಮನಸ್ಸಿನಲ್ಲೂ ಮಾತಿನಲ್ಲೂ ಎಚ್ಚರ, ಸಾವಧಾನತೆಯಿರಲಿ. ನಿಮ್ಮ ನ್ಯೂನತೆಗಳು ಇನ್ನೊಬ್ಬರ ಬಾಯಿಗೆ ಸಿಕ್ಕ ರಸಗವಳದಂತೆ ಚಪ್ಪರಿಸಿ ಸೇವಿಸುತ್ತಿರುತ್ತಾರೆ. ನಿರುದ್ಯೋಗದಲ್ಲಿ ಇದ್ದರೆ, ವಿಘ್ನಗಳನ್ನು ಸಂಹರಿಸುವ ಗಣಪತಿಯನ್ನು ಪೂಜಿಸಿ ಉದ್ಯೋಗದ ಹುಡುಕಾಟಕ್ಕೆ ತೆರಳಿ.
ಕುಂಭ: ದೃಢವಾದ ಸಂಕಲ್ಪವು ನಿಮ್ಮ ಯಶಸ್ಸಿನ ಗುಟ್ಟೂ ಆಗಿದೆ. ದೃಢವೂ ಸುಂದರವೂ ಆದ ನಿಮ್ಮ ಕಾಯಕ್ಕೆ ಸಕ್ಕರೆಯನ್ನು ಇರುವೆಗಳು ಮುತ್ತಿದಂತೆ ಜನರು ಮುತ್ತುತ್ತಾರೆ. ಸಾಲದ ವಿಚಾರ ಬಂದರೆ ಮೌನವಹಿಸಿ, ಎದ್ದು ಹೋಗಿ ಅಥವಾ ವಿಷಯಾಂತರಿಸಿ. ಪಿತ್ರಾರ್ಜಿತ ಸಂಪತ್ತು ನಿಮಗೆ ಉಪಯೋಗವಾಗಬಹುದು. ಸಂಗಾತಿಯೊಡನೆ ಸಲ್ಲಾಪ ಮಾಡುವಿರಿ. ಸಂಪತ್ತು ನಿಮ್ಮ ಶ್ರಮಕ್ಕನುಸಾರ ಸಿಗಲಿದೆ. ಬರೆವಣಿಗೆಯಿಂದ, ಮಾತಿನಿಂದ ನಿಮಗೆ ಕೀರ್ತಿಯು ಲಭ್ಯವಾಗುವುದು. ಆರೋಗ್ಯ ಚೆನ್ನಾಗಿರಲಿದೆ.
ಮೀನ: ಜೀವನದಲ್ಲಿ ನಮಗಾಗಿ ನಾವು ಬದುಕಿ, ಬೇರೆಯವರಿಗೋಸ್ಕರವಲ್ಲ. ಬದುಕು ಒಂದು ಸುಂದರವಾದ ಮನೆಯ ಕಿಟಕಿ ಇದ್ದಂತೆ. ತೆರೆದರೆ ಬೆಳಕು, ತೆರೆಯದಿದ್ದರೆ ಕತ್ತಲು ಇರುತ್ತದೆ. ಆಯ್ಕೆಯು ನಿಮ್ಮ ಕೈಯಲಿದೆ. ಹಾಗೆಯೇ ಶ್ರಮಪಟ್ಟರೆ ಸುಖ, ಶ್ರಮಪಡದಿದ್ದರೆ ಕಷ್ಟ. ಜೀವನದಲ್ಲಿ ಮನುಷ್ಯ ಎಷ್ಟು ನೋವು ಅವಮಾನ ಪಡುತ್ತಾನೋ, ಅಷ್ಟೇ ಚೆನ್ನಾಗಿ ಬದುಕುತ್ತಾನೇ. ಆದರೆ ಅವನಿಗೆ ಛಲವಿರಬೇಕು. ಬದಲಾವಣೆಯೆ ಶಾಶ್ವತ ಎನ್ನುವ ವಾಕ್ಯವನ್ನು ಸ್ಮರಿಸುತ್ತ ಮುಂದಡಿಯಿಡಿ. ನೆಮ್ಮದಿ ನಿಮ್ಮೆದುರು ನಿಲ್ಲುವುದು.
ಲೋಹಿತಶರ್ಮಾ ಇಡುವಾಣಿ