
2025ರ ಡಿಸೆಂಬರ್ 5ನೇ ತಾರೀಕಿನಂದು ಗುರು ಗ್ರಹವು ಕರ್ಕಾಟಕ ರಾಶಿಯಿಂದ ಮತ್ತೆ ಮಿಥುನ ರಾಶಿಗೆ ಪ್ರವೇಶ ಮಾಡಲಿದೆ. 2025ರ ಅಕ್ಟೋಬರ್ 18ನೇ ತಾರೀಕು ಕರ್ಕಾಟಕ ರಾಶಿಯಲ್ಲಿ ತನ್ನ ಪರಮೋಚ್ಚ ಸ್ಥಿತಿಯಲ್ಲಿ ಸಂಚಾರ ಆರಂಭಿಸಿದ ಬೃಹಸ್ಪತಿ ಮತ್ತೆ ಮಿಥುನಕ್ಕೆ ಪ್ರವೇಶಿಸಿ, ಮುಂದಿನ ವರ್ಷ, ಅಂದರೆ 2026ನೇ ಇಸವಿಯ ಜೂನ್ 1ನೇ ತಾರೀಕಿನ ತನಕ ಅದೇ ರಾಶಿಯಲ್ಲಿ ಇರಲಿದೆ. ಈ ಮೂಲಕವಾಗಿ ಮತ್ತೆ ಗುರುವಿನ ಬಲವನ್ನು ಪಡೆದುಕೊಳ್ಳುವ ರಾಶಿಗಳು ಅಂದರೆ ವೃಷಭ, ಸಿಂಹ, ತುಲಾ, ಧನುಸ್ಸು ಹಾಗೂ ಕುಂಭ. ಇನ್ನು ಹೀಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ರಾಶಿಗಳು ಅಂದರೆ ಮಿಥುನ, ಕರ್ಕಾಟಕ, ವೃಶ್ಚಿಕ ಹಾಗೂ ಮಕರದವರು.
ಗುರು ಗ್ರಹವು ಸಾಮಾನ್ಯವಾಗಿ ಒಂದು ರಾಶಿಯಲ್ಲಿ ಒಂದು ವರ್ಷಗಳ ಕಾಲ ಸಂಚಾರ ಮಾಡುತ್ತದೆ. ಆದರೆ ಅತಿಚಾರ ಸಂಚಾರದ ಸಮಯದಲ್ಲಿ ವೇಗವಾಗಿ ಅದರ ಮುಂದಿನ ರಾಶಿಗೆ ತೆರಳುತ್ತದೆ. ಇದೇ ರೀತಿಯಲ್ಲಿ ಮುಂದಿನ ವರ್ಷ, 2026ರಲ್ಲೂ ಆಗಲಿದೆ. ಇನ್ನು ಧನುಸ್ಸು ಹಾಗೂ ಮೀನ ರಾಶಿಗಳು ಗುರುವಿನ ಸ್ವಕ್ಷೇತ್ರ ಆಗುತ್ತದೆ. ಕರ್ಕಾಟಕ ರಾಶಿಯು ಉಚ್ಚ ಕ್ಷೇತ್ರವಾಗುತ್ತದೆ. ಮಕರ ರಾಶಿಗೆ ಗುರು ಪ್ರವೇಶ ಮಾಡಿದಲ್ಲಿ ಅದು ನೀಚ ಕ್ಷೇತ್ರವಾಗುತ್ತದೆ.
ಮೇಷ: ಆರೋಗ್ಯದಲ್ಲಿ ಏರುಪೇರು ಆಗಲಿದೆ. ಯಾವುದನ್ನು ನೀವು ಪ್ರತಿಷ್ಠೆಯಾಗಿ ಭಾವಿಸಿರುತ್ತೀರೋ ಅದನ್ನು ಕಾಪಾಡಿಕೊಳ್ಳಲು ಸಾಧ್ಯ ಆಗದೇ ಹೋಗುವುದರಿಂದ ಮಾನಸಿಕವಾಗಿ ಕುಗ್ಗುವಂತೆ ಆಗಲಿದೆ. ಸೋದರ- ಸೋದರಿಯರ ಬದುಕು, ಅವರ ವರ್ತನೆ ನಿಮ್ಮನ್ನು ಚಿಂತೆಗೆ ಈಡು ಮಾಡಲಿದೆ. ಹಣಕಾಸು ಒತ್ತಡ ತೀವ್ರವಾಗಿ, ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಕ್ಕೆ ಶುರು ಆಗುತ್ತದೆ. ಕುಟುಂಬ ಸದಸ್ಯರ ಕಷ್ಟಕ್ಕೆ ಎಂದು ನೀವು ಕೊಡಿಸಿದ್ದ ಸಾಲವನ್ನು ಅವರು ಸರಿಯಾದ ಸಮಯಕ್ಕೆ ಹಿಂತಿರುಗಿಸದೆ ಇದ್ದು, ಅದರ ಜವಾಬ್ದಾರಿ ನಿಮ್ಮ ಮೇಲೆ ಬೀಳಲಿದೆ. ನಿಮ್ಮ ಶ್ರಮದ ಫಲ ಪರರ ಪಾಲಾಗಲಿದೆ.
ವೃಷಭ: ಕಾರು, ಫ್ಲ್ಯಾಟ್, ಮನೆ, ಸೈಟು ಇಂಥವು ಖರೀದಿ ಮಾಡುವಂಥ ಯೋಗ ಇದೆ. ದಂಪತಿ ಮಧ್ಯೆ ಅನ್ಯೋನ್ಯತೆ, ಪ್ರೀತಿ, ಸಾಮರಸ್ಯ ಹೆಚ್ಚಾಗಲಿದೆ. ವಿವಾಹ ವಯಸ್ಕರಾಗಿದ್ದು, ಮದುವೆಗೆ ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇರುವವರಿಗೆ ನಿರೀಕ್ಷೆಯಂತೆ ವಧು/ವರ ಸಿಗುವ ಯೋಗ ಇದೆ. ಹಣಕಾಸಿನ ಹರಿವು ಸರಾಗವಾಗಿ ಆಗಲಿದೆ. ನಿಮ್ಮ ಮಾತಿನ ಮೂಲಕ ಕೆಲಸ- ಕಾರ್ಯಗಳು ಆಗುವಷ್ಟು ಪ್ರಭಾವಿ ಆಗಿರಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಬಹಳ ಉತ್ತಮವಾದ ಸಮಯ ಇದಾಗಿರಲಿದೆ. ವೃತ್ತಿ, ಉದ್ಯೋಗ, ಸಂತಾನ, ವಿದೇಶ ಪ್ರಯಾಣ ಹೀಗೆ ನಾನಾ ವಿಚಾರಗಳಲ್ಲಿ ಯಶಸ್ಸು ನಿಮ್ಮ ಕೈ ಹಿಡಿಯಲಿದೆ.
ಮಿಥುನ: ಸಾಂಸಾರಿಕ ಜೀವನ, ಆರೋಗ್ಯ ಹಾಗೂ ಉದ್ಯೋಗ ನಿಮಗೆ ಆತಂಕವನ್ನು ತಂದೊಡ್ಡಲಿದೆ. ಒಂದು ವೇಳೆ ನಿಶ್ಚಿತಾರ್ಥ ಆಗಿದೆ ಎಂದಾದಲ್ಲಿ ಹೇಳಿಕೆ- ಚಾಡಿ ಮಾತುಗಳಿಗೆ ಕಿವಿಗೊಡಬೇಡಿ. ಏಕೆಂದರೆ ವಿವಾಹ ನಿಶ್ಚಿತಾರ್ಥ ಮುರಿದು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಕಿವಿಗೆ ಸಂಬಂಧಿಸಿದಂತೆ ಕೆಲವು ಅನಾರೋಗ್ಯ ಸಮಸ್ಯೆ ತೀವ್ರವಾಗಿ ಕಾಡಬಹುದು. ಇದರ ಜೊತೆಗೆ ಮಧುಮೇಹ, ದೇಹದ ತೂಕದ ನಿರ್ವಹಣೆ ಸರಿಯಾಗಿ ಮಾಡುವುದು ಮುಖ್ಯ ಆಗುತ್ತದೆ. ದಂಪತಿ ಮಧ್ಯೆ ಕೂಡ ಸಣ್ಣ ಪುಟ್ಟ ವಿಚಾರಕ್ಕೂ ಜಗಳ- ಕದನಗಳು ಆಗುತ್ತವೆ. ಇನ್ನು ಮಕ್ಕಳ ಶಿಕ್ಷಣ, ಮದುವೆ, ಉದ್ಯೋಗ ಈ ವಿಚಾರಗಳು ಸಹ ಅನಿಶ್ಚಿತತೆಗೆ ಸಿಲುಕಿಕೊಂಡು ಮಾನಸಿಕ ನೆಮ್ಮದಿ ಹಾಳಾಗುತ್ತದೆ.
ಕರ್ಕಾಟಕ: ಆರೋಗ್ಯ ಸಮಸ್ಯೆಗಳು ಹಾಗೂ ಶತ್ರುಗಳ ನಿಮ್ಮ ವಿರುದ್ಧ ಮಾಡುವ ಷಡ್ಯಂತ್ರ- ಕಿರಿಕಿರಿಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಅಂತಲೇ ಹೆಚ್ಚಿನ ಸಮಯ ಹೋಗಲಿದೆ. ಖರ್ಚು- ವೆಚ್ಚ ವಿಪರೀತ ಹೆಚ್ಚಾಗಲಿದೆ. ಕೋರ್ಟ್- ಕಚೇರಿಗಳಿಗೆ ಅಲೆದಾಟ, ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಅಂತಲೇ ಹಣದ ಖರ್ಚು ಇಂಥವುಗಳಿಂದ ಮಾನಸಿಕ ನೆಮ್ಮದಿ ಇಲ್ಲದಂತಾಗುತ್ತದೆ. ದೇಹದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಾಗಿ, ಅದರ ಅಡ್ಡ ಪರಿಣಾಮಗಳಿಂದ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸರ್ಕಾರಿ ಉದ್ಯೋಗಿಗಳಾಗಿದ್ದು, ಇಲಾಖೆ ವಿಚಾರಣೆಗಳು ನಿಮ್ಮ ವಿರುದ್ಧ ನಡೆಯುತ್ತಾ ಇದ್ದಲ್ಲಿ ಅದರಲ್ಲಿ ಶಿಕ್ಷೆ ಆಗಬಹುದು. ಅಥವಾ ಹೊಸ ವಿಚಾರಣೆಗಳನ್ನು ಎದುರಿಸುವಂತೆ ಆಗಲಿದೆ.
ಸಿಂಹ: ನಿಮಗೆ ಬರಬೇಕಾದ ಸಾಲ ವಸೂಲಿ ಅಥವಾ ನೀವು ಈಗಾಗಲೇ ಕೆಲಸ ಮಾಡಿಯೂ ಬಾರದಿರುವ ಹಣ ಕೈ ಸೇರುವ ಯೋಗ ಇದೆ. ಈ ಹಿಂದೆ ನೀವು ಮಾಡಿದ್ದ ಹೂಡಿಕೆಗಳು ಒಳ್ಳೆ ಲಾಭ ನೀಡಲಿವೆ. ಈಗಾಗಲೇ ಸೈಟು ಅಥವಾ ಮನೆ ಖರೀದಿಗಾಗಿ ಅಡ್ವಾನ್ಸ್ ನೀಡಿ, ಒಂದಲ್ಲಾ ಒಂದು ಕಾರಣದಿಂದ ಅದರ ನೋಂದಣಿ ಹಾಗೂ ಪೂರ್ತಿ ಹಣವನ್ನು ಚುಕ್ತಾ ಮಾಡುವುದಕ್ಕೆ ಸಮಸ್ಯೆ ಆಗುತ್ತಾ ಇದ್ದಲ್ಲಿ ಆ ತೊಂದರೆಗಳಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗಲಿದೆ. ತೀವ್ರತರದ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಅದಕ್ಕೆ ಸೂಕ್ತ ಔಷಧೋಪಚಾರ ದೊರೆಯಲಿದೆ. ವ್ಯಾಜ್ಯ- ಜಗಳಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶಗಳು ದೊರೆಯಲಿವೆ. ನಾನಾ ರೀತಿಯ ಶುಭ ನಡೆಯಲಿದೆ.
ಕನ್ಯಾ: ನಿಮ್ಮ ಸ್ಥಾನ-ಮಾನಗಳು ಉಳಿಸಿಕೊಳ್ಳುವ ಕಡೆಗೆ ಗಮನವನ್ನು ನೀಡಿ. ನಿಮ್ಮಲ್ಲಿ ಕೆಲವರು ಕೋಲು ಕೊಟ್ಟು ಹೊಡೆಸಿಕೊಂಡರು ಎಂಬ ಮಾತಿನಂತೆ ಸಮಸ್ಯೆಗಳನ್ನು ನೀವಾಗಿಯೇ ಮೈ ಮೇಲೆ ಹಾಕಿಕೊಳ್ಳಲಿದ್ದೀರಿ. ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವಂಥವರು ಮಾತಿನ ಮೇಲೆ, ಪದ ಬಳಕೆ ಮೇಲೆ ನಿಗಾ ಇರಿಸಿಕೊಳ್ಳುವುದು ಮುಖ್ಯ. ನಿಮ್ಮ ವೈರಿಗಳು ಅಥವಾ ಪ್ರತಿಸ್ಪರ್ಧಿಗಳು ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಿದ್ದಾರೆ. ದೇವತಾ ಕಾರ್ಯಗಳಲ್ಲಿ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಮೇಲೆ ಇತರರಿಗೆ ಇರುವ ವಿಶ್ವಾಸಾರ್ಹತೆ, ಗೌರವ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗುತ್ತದೆ. ಉದ್ಯೋಗ, ವೃತ್ತಿ ಜೀವನದಲ್ಲಿ ಭಾರಿ ಏರಿಳಿತ ಅನುಭವಕ್ಕೆ ಬರಲಿದೆ.
ತುಲಾ: ನಿಮಗಿರುವ ವರ್ಚಸ್ಸು ಹಾಗೂ ವಿಶ್ವಾಸಾರ್ಹತೆ ಇವುಗಳನ್ನು ಹೆಚ್ಚು ಮಾಡಿಕೊಳ್ಳಲು ಹಲವು ಅವಕಾಶಗಳು ದೊರೆಯಲಿವೆ. ಏನಾದರೂ ಒಂದು ಕಾರಣದಿಂದ ದಂಪತಿ ಮಧ್ಯೆ ವಿರಸ ಇದ್ದಲ್ಲಿ ಹಾಗೂ ಮಕ್ಕಳಿಂದ ದೂರ ಇರುವಂಥ ಸನ್ನಿವೇಶ ಎದುರಾಗಿದ್ದಲ್ಲಿ ಇದಕ್ಕೆ ಕಾರಣ ಆಗಿರುವ ಅಂಶಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಬ್ರ್ಯಾಂಡ್ ಆಗಿರುವಂಥ ಕೆಲವು ವ್ಯಾಪಾರ- ವ್ಯವಹಾರ ಸಂಸ್ಥೆಗಳನ್ನು ಖರೀದಿ ಮಾಡುವ ಯೋಗ ಸಹ ಇದೆ. ನಿಮ್ಮಲ್ಲಿ ಕೆಲವರಿಗೆ ಸಂಘ- ಸಂಸ್ಥೆಗಳಿಂದ ಗೌರವ, ಸನ್ಮಾನ, ಧಾರ್ಮಿಕ- ಸಾಮಾಜಿಕ ಸಂಘಟನೆಗಳಿಗೆ ಪದಾಧಿಕಾರಿ ಆಗಿ ನೇಮಕ ಆಗುವ ಯೋಗ ಇದೆ. ಒಟ್ಟಾರೆ ನಿಮ್ಮ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಮಯ ಇದಾಗಿರಲಿದೆ.
ವೃಶ್ಚಿಕ: ನಾನಾ ಆರೋಪ- ನಿಂದೆಗಳನ್ನು ಹೊರಬೇಕಾಗುತ್ತದೆ. ಯಾವ ವ್ಯವಹಾರ- ವ್ಯಾಪಾರಗಳು ಲಾಭದಾಯಕ ಆಗಬಹುದು ಎಂಬ ನಿರೀಕ್ಷೆಯಲ್ಲಿ ಇರುತ್ತೀರೋ ಅಂಥವು ಕೋರ್ಟ್-ಕಚೇರಿ ಮೆಟ್ಟಿಲೇರುವಂತೆ ಆಗಬಹುದು. ಅಥವಾ ಸರ್ಕಾರದ ಮಟ್ಟದಲ್ಲಿ ನಾನಾ ಕಿರಿಕಿರಿಗಳನ್ನು ಅನುಭವಿಸುವಂತೆ ಆಗಲಿದೆ. ಯಾವುದೇ ಕಾರಣಕ್ಕೂ ಈ ಅವಧಿಯಲ್ಲಿ ಉದ್ಯೋಗ ಬದಲಾವಣೆಯನ್ನೋ ಅಥವಾ ರಾಜೀನಾಮೆ ನೀಡಿ ವ್ಯಾಪಾರವೋ- ವ್ಯವಹಾರವನ್ನೋ ಶುರು ಮಾಡುವುದಕ್ಕೆ ಮುಂದಾಗಬಾರದು. ಗುರು- ಹಿರಿಯರನ್ನು ಗೌರವದಿಂದ ನೋಡಿ. ಒಂದು ವೇಳೆ ಅವರನ್ನು ತಿರಸ್ಕಾರದಿಂದ ನೋಡುವುದು, ಅವರಿಗೆ ಬೇಸರ ಮಾಡುವುದು ಇಂಥದ್ದು ಮಾಡಿದ್ದು ಆರೋಗ್ಯ, ಉದ್ಯೋಗ, ಹಣಕಾಸು ವಿಚಾರ ಎಲ್ಲದರಲ್ಲೂ ಸಮಸ್ಯೆ ವಿಪರೀತಕ್ಕೆ ಹೋಗುತ್ತದೆ.
ಧನುಸ್ಸು: ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಮದು ನಿಶ್ಚಯ ಆಗುವ ಅಥವಾ ಮದುವೆಯೇ ಆಗಿಬಿಡುವ ಸಾಧ್ಯತೆ ಇದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿರುವವರಿಗೆ ಅದರಲ್ಲಿ ಆದಾಯ- ಲಾಭ ಹೆಚ್ಚಳ ಆಗಲಿದೆ. ಸೈಟು ಖರೀದಿ, ಮನೆ ನಿರ್ಮಾಣ, ಫ್ಲ್ಯಾಟ್ ಕೊಳ್ಳುವುದು, ಕಾರು ಖರೀದಿ ಮಾಡುವುದು, ಕಟ್ಟಿರುವ ಮನೆಯನ್ನೇ ನಿರ್ಮಾಣ ಮಾಡುವುದು ಇಂಥ ಎಲ್ಲ ಪ್ರಯತ್ನಗಳು ಯಶಸ್ಸನ್ನು ಕಾಣುತ್ತವೆ. ನಿಮಗೆ ಆ ಉದ್ದೇಶ ಇಲ್ಲದಿದ್ದರೂ ಅನಾಯಾಸವಾಗಿ ಕೆಲವು ಅನುಕೂಲ ಒದಗಿ ಬಂದು, ದಿಢೀರ್ ಆಗಿ ಸಾಧ್ಯವಾಗಲಿದೆ. ನಿಮ್ಮಲ್ಲಿ ಕೆಲವರಿಗೆ ತಾತ್ಕಾಲಿಕವಾಗಿ ಆದರೂ ವಿದೇಶ ಪ್ರಯಾಣ ಕೈಗೊಳ್ಳುವ ಯೋಗ ಒದಗಿ ಬರಲಿದೆ.
ಮಕರ: ಈ ಅವಧಿಯಲ್ಲಿ ನಿಮ್ಮ ಮೇಲೆ ಕೆಲಸದ ಒತ್ತಡಗಳು ವಿಪರೀತ ಬೀಳಲಿದೆ ಹಾಗೂ ಜವಾಬ್ದಾರಿಗಳು ಸಹ ಹೆಚ್ಚಾಗಲಿದೆ. ಆರೋಗ್ಯದಲ್ಲಿ ಸಮಸ್ಯೆಗಳು, ನಿಮ್ಮ ವೃತ್ತಿಯಲ್ಲಿ ಇರುವವರಿಗೆ ನಾನಾ ರೀತಿಯ ಕಿರಿಕಿರಿಗಳು ಅನುಭವಿಸುವಂತೆ ಆಗಲಿದೆ. ನೀವು ಮಾಡುತ್ತಿರುವ ಕೆಲಸಕ್ಕೆ ತಕ್ಕ ಫಲ ಸಮಯಕ್ಕೆ ಸಿಗದಿರುವುದು ಸಹ ಬೇಸರಕ್ಕೆ ಕಾರಣ ಆಗಲಿದೆ. ಕುಟುಂಬದ ಸದಸ್ಯರ ಬೇಡಿಕೆಗಳು ಹೆಚ್ಚಾಗಿ ಖರ್ಚು ಜಾಸ್ತಿಯಾಗಿ, ಹಣಕಾಸು ಹೊಂದಿಸುವುದಕ್ಕೆ ಅವಸ್ಥೆ ಪಡುವಂತೆ ಆಗಲಿದೆ. ಆರೋಗ್ಯದಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು ತಲೆದೋರಲಿವೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಮಾತು ಕೇಳುವುದು ಮುಖ್ಯ. ಹೊಸ ಹೂಡಿಕೆ, ಹೊಸ ವ್ಯವಹಾರದಲ್ಲಿ ಆತುರದ ನಿರ್ಧಾರವನ್ನು ಕೈಗೊಳ್ಳಬಾರದು.
ಕುಂಭ: ಕಳೆದ ಒಂದೂವರೆ ತಿಂಗಳಿಂದ ಆದ ತೊಂದರೆ, ಹಿಂಸೆ, ಮಾನಸಿಕ ಕಿರಿಕಿರಿ, ಅವಮಾನ, ಆರೋಗ್ಯದಲ್ಲಿನ ಸಮಸ್ಯೆಗಳು ಇವೆಲ್ಲ ದೂರವಾಗಲಿವೆ. ಆತ್ಮವಿಶ್ವಾಸ ಜಾಸ್ತಿ ಆಗಲಿದೆ. ಐದನೇ ಮನೆಯಲ್ಲಿನ ಗುರುವಿನ ಸಂಚಾರ ನಿಮಗೆ ಬಹುಮಟ್ಟಿಗೆ ಅನುಕೂಲ. ನಿಂತು ಹೋಗಿದ್ದ ಕೆಲಸ- ಕಾರ್ಯಗಳು ಮತ್ತೆ ಚಾಲನೆ ಪಡೆದುಕೊಳ್ಳುತ್ತವೆ. ಉದ್ಯೋಗದಲ್ಲಿ ಗೌರವ ಮತ್ತು ಹೊಸ ಜವಾಬ್ದಾರಿಗಳು ದೊರೆಯುತ್ತವೆ. ಹಣಕಾಸಿನ ಸ್ಥಿತಿ ಸುಧಾರಣೆ ಕಾಣುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣ. ಮಕ್ಕಳ ಪ್ರಗತಿ ಹಾಗೂ ಶಿಕ್ಷಣ ಸಂಬಂಧಿತ ವಿಚಾರಗಳಲ್ಲಿ ಸುಧಾರಣೆ ಆಗಲಿದೆ. ಆಧ್ಯಾತ್ಮಿಕ ಚಟುವಟಿಕೆಗಳ ಮೇಲೂ ಆಸಕ್ತಿ ಹೆಚ್ಚಾಗುತ್ತದೆ. ಸಂತಾನಕ್ಕೆ ಪ್ರಯತ್ನಿಸುತ್ತಿರುವವರಿಗೂ ಇದು ಉತ್ತಮ ಸಮಯವಾಗಲಿದೆ.
ಮೀನ: ಸಾಲ ಮಾಡಿಯಾದರೂ ಸೈಟು ಖರೀದಿ, ಮನೆ ಖರೀದಿ, ಕಾರು ಖರೀದಿ ಇಂಥದ್ದನ್ನು ಮಾಡಬೇಕು ಎಂಬ ತಪನೆ ಹೆಚ್ಚಾಗುತ್ತದೆ. ಅದೇ ಕಾರಣಕ್ಕೆ ನಿಮ್ಮ ಸಾಮರ್ಥ್ಯವನ್ನು ಮೀರಿ ಸಾಲ ಮಾಡಿಕೊಳ್ಳುವಂತೆ ಆಗಲಿದೆ. ಸ್ನೇಹಿತರ ಜತೆಗೆ ಒಳ್ಳೆ ಸ್ನೇಹ- ಬಾಂಧವ್ಯ ಉಳಿಸಿಕೊಳ್ಳುವುದು ಬಹಳ ಮುಖ್ಯವಾದ ಸವಾಲಾಗಿ ಪರಿಣಮಿಸಲಿದೆ. ಮಾತಿನ ಮೇಲೆ ನಿಗಾ ಇರಿಸಿಕೊಳ್ಳಿ. ನಿಮ್ಮ ಬಳಿ ಯಾರೇ ಸಹಾಯ ಕೇಳಿಕೊಂಡು ಬಂದರೂ ಹೀಯಾಳಿಸುವುದು, ಮೂದಲಿಸುವುದು ಇಂಥ ಕೆಲಸ ಮಾಡಬೇಡಿ. ನನಗೆ ಎಲ್ಲ ಗೊತ್ತು, ನಾನು ಮಾಡಿದ್ದೇ ಸರಿ ಎಂಬ ಧೋರಣೆ ನಿಮಗೆ ಕೆಲವು ಸಮಸ್ಯೆಗಳನ್ನು ತಂದೊಡ್ಡಲಿದೆ.
– ಗುರುವಾರದಂದು ಹಳದಿ ಬಟ್ಟೆ ಅಥವಾ ಹಳದಿ ತಿಲಕ ಧರಿಸಿ.
– ಬಾಳೆಗಿಡಕ್ಕೆ ಅಥವಾ ತುಳಸಿಗೆ ಪ್ರತಿದಿನ ನೀರು ಹಾಕಿ.
– ಗುರುವಾರದಂದು ಇಡೀ ದಿನ ಲಘು ಉಪಾಹಾರ ಸೇವನೆ ಅಷ್ಟೇ ಮಾಡುವುದು ಅಥವಾ ಸಂಪೂರ್ಣ ಉಪವಾಸ (ನಿಮ್ಮ ಆರೋಗ್ಯ ಹಾಗೂ ದೈಹಿಕ ಸಾಮರ್ಥ್ಯ ನೋಡಿಕೊಂಡು ನಿರ್ಧಾರ ಮಾಡಿಕೊಳ್ಳಿ)
– ಬ್ರಾಹ್ಮಣರಿಗೆ ಅಥವಾ ವೃದ್ಧರಿಗೆ ಹಳದಿ ಪದಾರ್ಥಗಳಾದ ಕಡಲೆಬೇಳೆ/ ಹಾಲು / ಹಣ್ಣು ದಾನ ಮಾಡಿ.
– ದತ್ತಾತ್ರೇಯ ಅಥವಾ ಸಾಯಿ ಬಾಬಾ ಮಂದಿರಕ್ಕೆ ಭೇಟಿ ನೀಡಿ.
– ಪ್ರತಿ ಗುರುವಾರ ಸಾಧ್ಯವಿದ್ದರೆ ಭಗವದ್ಗೀತೆಯ 12ನೇ ಅಧ್ಯಾಯ ಪಾರಾಯಣ ಮಾಡಿ.
– ಗುರುವಾರದ ದಿನ ಹಳದಿ ಬಟ್ಟೆಯಲ್ಲಿ ಕಡಲೇಕಾಳನ್ನು (ಮೂರು ಹಿಡಿಯಷ್ಟು) ಹಾಕಿ, ಬಟ್ಟೆಯಿಂದ ಕಟ್ಟಿದ ನಂತರ ವೀಳ್ಯದೆಲೆ, ಅಡಿಕೆ, ಬಾಳೇಹಣ್ಣು, ದಕ್ಷಿಣೆ ಸಹಿತ ದಾನ ಮಾಡಿ.
ಲೇಖನ- ಸ್ವಾತಿ ಎನ್.ಕೆ.