ಕ್ರೋಧಿನಾಮ ಸಂವತ್ಸರದ ವರ್ಷ ಫಲ ಹೇಗಿದೆ ಎಂಬುದನ್ನು ವಿವರಿಸುವಂಥ ಲೇಖನ ಇಲ್ಲಿದೆ. ಏಪ್ರಿಲ್ 9ನೇ ತಾರೀಕು ಸಂವತ್ಸರದ ಆರಂಭ. ಇದನ್ನು ಯುಗಾದಿ ಎನ್ನಲಾಗುತ್ತದೆ. ಇಲ್ಲಿಂದ ಹೆಚ್ಚು-ಕಡಿಮೆ ಒಂದು ವರ್ಷ, ಮಾರ್ಚ್ 29, 2025ರ ತನಕದ ಗೋಚಾರ ಫಲಾಫಲ ಇಲ್ಲಿದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುವುದಕ್ಕೆ ದೀರ್ಘಾವಧಿಯನ್ನು ತೆಗೆದುಕೊಳ್ಳುವ ಶನಿ, ಗುರು ಮತ್ತು ರಾಹು- ಕೇತುಗಳನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಂಡು, ಈ ಫಲವನ್ನು ತಿಳಿಸಲಾಗುತ್ತಿದೆ.
ಬಹುತೇಕ ಈ ಸಂವತ್ಸರಾದ್ಯಂತ ಗುರು ವೃಷಭ ರಾಶಿಯಲ್ಲಿ, ಶನಿ ಕುಂಭ ರಾಶಿಯಲ್ಲಿ, ರಾಹು ಮೀನ ರಾಶಿಯಲ್ಲಿ ಹಾಗೂ ಕೇತು ಕನ್ಯಾ ರಾಶಿಯಲ್ಲಿ ಸಂಚರಿಸುತ್ತದೆ. ಅಂದ ಹಾಗೆ ಇಲ್ಲಿ ನೀಡುತ್ತಿರುವುದು ಗೋಚಾರ ಫಲ ಮಾತ್ರ. ಮನೆ ನಿರ್ಮಾಣ, ಮದುವೆ, ಉನ್ನತ ವ್ಯಾಸಂಗ, ವಿದೇಶ ಪ್ರಯಾಣ, ಆರೋಗ್ಯ ಸೇರಿದಂತೆ ಯಾವುದೇ ಅತಿ ಮುಖ್ಯ ವಿಚಾರದ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳು ಇದ್ದಲ್ಲಿ ಜ್ಯೋತಿಷಿಗಳ ಬಳಿ ಜನ್ಮ ಜಾತಕವನ್ನು ಪರಿಶೀಲನೆ ಮಾಡಿಸಿಕೊಳ್ಳಿ. ಅವರ ಮಾರ್ಗದರ್ಶನದ ಮೇಲೆ ತೀರ್ಮಾನಗಳನ್ನು ತೆಗೆದುಕೊಳ್ಳಿ.
ಸಿಂಹ ರಾಶಿಯವರಿಗೆ ಸಂವತ್ಸರ ಫಲ ಹೇಗಿದೆ ಎಂಬ ಮಾಹಿತಿ ನೀಡಲಾಗುತ್ತಿದೆ. ಮಖಾ ನಕ್ಷತ್ರದ ನಾಲ್ಕೂ ಪಾದ ಹಾಗೂ ಪುಬ್ಬಾ (ಪೂರ್ವ ಫಲ್ಗುಣಿ) ನಕ್ಷತ್ರದ ನಾಲ್ಕೂ ಪಾದ ಮತ್ತು ಉತ್ತರಾ ಫಲ್ಗುಣಿ ನಕ್ಷತ್ರದ ಒಂದು ಪಾದ ಸೇರಿ ಸಿಂಹ ರಾಶಿ ಆಗುತ್ತದೆ. ಈ ರಾಶಿಯು ಸ್ಥಿರಸ್ವಭಾವದ, ಅಗ್ನಿ ತತ್ವದ್ದಾಗಿದೆ. ಈ ರಾಶಿಯ ಅಧಿಪತಿ ರವಿ.
ಸಿಂಹ ರಾಶಿ ಅಂದರೆ ಬಾಸ್. ಇವರು ಯಾವುದೇ ವೃತ್ತಿಯಲ್ಲಿರಲಿ, ಉದ್ಯೋಗದಲ್ಲಿರಲಿ ಹಾಗೂ ಅದೆಂಥ ಸ್ಥಾನದಲ್ಲಿಯೇ ಇರಲಿ, ತನಗೆ ಅನಿಸಿದಂತೆಯೇ ಜೀವಿಸುವುದಕ್ಕೆ ಬಯಸುವ ರಾಶಿ ಇದು. ತಾವು ಮಾಡುವ ಕೆಲಸದಲ್ಲಿ ಸಿಗ್ನೇಚರ್ ಎನಿಸುವಂಥದ್ದನ್ನು ಏನಾದರೂ ಮಾಡಿಯೇ ಮಾಡುವ ಜನ ಇವರು. ತಮಗೆ ಪ್ರಾಮುಖ್ಯ ಇಲ್ಲದ ಕಡೆ ಇರುವುದಕ್ಕೆ ಇವರಿಗೆ ಇಷ್ಟವಾಗುವುದಿಲ್ಲ ಒಂದು ವೇಳೆ ಒಂದು ಸ್ಥಳದಲ್ಲಿ ಇದ್ದಾರೆ ಅಂತಾದರೆ ಅಲ್ಲಿ ತಮ್ಮ ಮಾತಿಗೆ ಬೆಲೆ ಇರುವಂತೆ ಮಾಡಿಕೊಳ್ಳುತ್ತಾರೆ. ಇತರರು ತಮ್ಮ ಮೇಲೆ ಅವಲಂಬಿಸಿದ್ದಾರೆ ಎಂದು ಹೇಳಿಕೊಳ್ಳುವುದನ್ನು ಹಾಗೂ ಅವಲಂಬಿಸುವುದನ್ನು ಇವರು ಹೆಚ್ಚು ಇಷ್ಟಪಡುತ್ತಾರೆ. ಸರ್ಕಾರದ ಆಯಕಟ್ಟಿನ ಜಾಗದಲ್ಲಿ ಪ್ರಮುಖ ಅಧಿಕಾರಿಗಳಾಗಿ, ದೊಡ್ಡ ಮಟ್ಟದ ಲೇವಾದೇವಿದಾರರಾಗಿ, ಟಾಪ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರಮುಖ ನಿರ್ಧಾರ ಮಾಡುವಂಥ ಸ್ಥಾನಗಳಲ್ಲಿ ಅಥವಾ ಸಣ್ಣ ಗುಂಪಿಗಾದರೂ ನಾಯಕ ಸ್ಥಾನದಲ್ಲಿ ಇರುವಂಥವರು ಸಿಂಹ ರಾಶಿಯವರು. ಇವರು ಸಿಟ್ಟಿನ ಕೈಲಿ ಬುದ್ಧಿ ಕೊಡುವುದು ಹೆಚ್ಚು. ತಾವು ಮಾಡಿದ್ದು ತಪ್ಪು ಅಂತ ಎಂದಿಗೂ ಅನಿಸುವುದಿಲ್ಲ. ಆ ಸನ್ನಿವೇಶಕ್ಕೆ ಹಾಗೆ ನಡೆದುಕೊಂಡಿದ್ದ ಸರಿ ಅಂತಲೇ ವಾದಿಸುತ್ತಾರೆ. ತಮ್ಮ ಸುತ್ತಮುತ್ತಲು ಇರುವ ಜನರ ಅಭಿಪ್ರಾಯಕ್ಕೂ ಬೆಲೆ ನೀಡುವುದನ್ನು ಇವರು ಕಲಿಯಬೇಕು.
ನಿಮ್ಮ ಮೇಲೆ ಕೆಲವು ಅಪವಾದಗಳು ಬರಲಿವೆ. ಉದ್ಯೋಗ ಸ್ಥಳದಲ್ಲಿ ಒತ್ತಡ ಅನುಭವಕ್ಕೆ ಬರಲಿದೆ. ಇಷ್ಟು ಸಮಯ ನಿಮ್ಮ ಬೆನ್ನಿಗೆ ನಿಂತು ಸಹಾಯ ಮಾಡಿದ ವ್ಯಕ್ತಿಗಳು ಏಕಾಏಕಿ ಅಸಹಾಯಕರಾಗಬಹುದು. ಅಥವಾ ನೀವೇ ಅವರಿಂದ ದೂರ ಆಗುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮಗೆ ಆಪ್ತರಾದವರ ಆರೋಗ್ಯ ವಿಚಾರದ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ನಿಮಗೆ ಇರುವಂಥ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಅದಕ್ಕೆ ಇರುವಂಥ ಚೌಕಟ್ಟನ್ನು ಸರಿಯಾಗಿ ಗುರುತಿಸುವುದು ಒಳ್ಳೆಯದು. ಏಕೆಂದರೆ ಪದೇಪದೇ ನಿಮ್ಮದು ಅಧಿಕಪ್ರಸಂಗ ಎಂದು ಹಣೆಪಟ್ಟಿ ಹಚ್ಚುವಂಥ ಸಾಧ್ಯತೆ ಹೆಚ್ಚು. ನೀವು ವಹಿಸಿಕೊಂಡ ಜವಾಬ್ದಾರಿ ಪೂರ್ತಿಯಾಗಿ, ಆ ಕೆಲಸ ಸಂಪೂರ್ಣ ಯಶಸ್ವಿಯಾಗಿದೆ ಎಂದು ಖಾತ್ರಿಯಾಗುವ ತನಕ ಆ ಬಗ್ಗೆ ಹೇಳಿಕೊಂಡು ಬರಬೇಡಿ. ಇನ್ನು ಸೆಲಬ್ರೇಟ್ ಅಂತೂ ಮಾಡಬೇಡಿ. ನಿಮ್ಮ ಕೈ ಸೇರದ ಹಣಕ್ಕೆ ಮೊದಲೇ ಕಮಿಟ್ ಆಗಿಬಿಟ್ಟಲ್ಲಿ ಅವಮಾನದ ಪಾಲಾಗುತ್ತೀರಿ. ಇನ್ನು ಸರ್ಕಾರದ ಮಟ್ಟದಲ್ಲಿ ಅಥವಾ ಬ್ಯಾಂಕ್ ವ್ಯವಹಾರಗಳು ಪೂರ್ತಿ ಆಗುವ ಮೊದಲಿಗೆ ಬರೀ ಬಾಯಿ ಮಾತಿನ ಭರವಸೆ ಮೇಲೆ ದೊಡ್ಡ ರಿಸ್ಕ್ ಗಳಿಗೆ ಕೈ ಹಾಕಬೇಡಿ. ನಿಮ್ಮಲ್ಲಿ ಕೆಲವರಿಗೆ ನಿಮಗಿಂತ ತುಂಬ ಬಲಿಷ್ಠರಾದವರು ಶತ್ರುಗಳಾಗಬಹುದು. ಅದರಲ್ಲೂ ಉದ್ಯೋಗ- ವೃತ್ತಿ ಸ್ಥಳಗಳಲ್ಲಿ ಹೆಜ್ಜೆಹೆಜ್ಜೆಗೂ ಸವಾಲು ಎದುರಾಗಲಿದೆ.
ಪ್ರೇಮಿಗಳು ಹಾಗೂ ದಂಪತಿ ಮಧ್ಯೆ ಅಭಿಪ್ರಾಯ ಭೇದಗಳು, ಮನಸ್ತಾಪ ಹಾಗೂ ಅನುಮಾನಗಳು ತಲೆ ಎತ್ತಲಿವೆ. ಇನ್ನು ಯಾರು ಪಾರ್ಟನರ್ ಷಿಪ್ ವ್ಯವಗಹಾರಗಳನ್ನು ಮಾಡುತ್ತಿರುವಿರೋ ಅಂಥವರಿಗೆ ಕಾಗದ- ಪತ್ರ, ಹಣಕಾಸಿನ ವಿಚಾರವಾಗಿ ಜಗಳ ಆಗಲಿದೆ. ಮದುವೆಗಾಗಿ ಪ್ರಯತ್ನ ಪಡುತ್ತಿದ್ದಲ್ಲಿ ನಾನಾ ರೀತಿಯ ಅಡೆತಡೆಗಳು ಕಾಣಿಸಿಕೊಳ್ಳಲಿದೆ. ಈಗಾಗಲೇ ನಿಶ್ಚಿತಾರ್ಥ ಆಗಿದೆ ಅಥವಾ ವಧು/ವರ ನಿಶ್ಚಯ ಆಗಿದೆ ಎಂದಾದಲ್ಲಿ ಒಂದಲ್ಲ, ಒಂದು ಕಾರಣಕ್ಕೆ ಅನಿಶ್ಚಿತತೆ ಉದ್ಭವಿಸಲಿದೆ. ವಿದೇಶ ಪ್ರಯಾಣಕ್ಕಾಗಿ, ಅಲ್ಲಿ ಉನ್ನತ ವ್ಯಾಸಂಗ ಅಥವಾ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ನಿರೀಕ್ಷಿತ ನೆರವು, ಸಹಾಯ ದೊರಕುವುದಿಲ್ಲ. ಅಥವಾ ಕೊನೆ ಕ್ಷಣದಲ್ಲಿ ಇದು ಬೇಡ ಅಂತಲೇ ಅನಿಸಬಿಡಲಿದೆ. ಮದುವೆ ಆಚೆಗಿನ ಸೆಳೆತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಥವಾ ಅಂಥ ಆಪಾದನೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಅಂಥ ಅನುಮಾನಗಳು ಉದ್ಭವಿಸಿದಲ್ಲಿ ಅದನ್ನು ಬಗೆಹರಿಸುವುದಕ್ಕೆ ಆದ್ಯತೆ ನೀಡಿ.
ಮೂತ್ರ ಸೋಂಕು, ಕಿಡ್ನಿ ಸ್ಟೋನ್, ಗಾಲ್ ಬ್ಲಾಡರ್ ಸಮಸ್ಯೆ ಕಾಣಿಸಿಕೊಳ್ಳಲಿದೆ ಅಥವಾ ಮಾನಸಿಕ ತೊಂದರೆಗಳಾದ ಆತಂಕ, ಉದ್ವೇಗ ಮೊದಲಾದ ಅನಾರೋಗ್ಯಗಳು ಕಾಡಲಿವೆ. ಜಠರದ ಹುಣ್ಣು, ಗುಳ್ಳೆಗಳು, ಚರ್ಮ ಸಂಬಂಧಿತ ವ್ಯಾಧಿಗಳು ಸಹ ಕಾಣಿಸಿಕೊಳ್ಳಬಹುದು. ಈಗಾಗಲೇ ಅನಾರೋಗ್ಯ ಸಮಸ್ಯೆ ಇರುವಂಥವರು ಆಹಾರಪಥ್ಯವನ್ನು ಸರಿಯಾಗಿ ಅನುಸರಿಸಿ. ನೀವು ದೈನಂದಿನ ಹಣಕಾಸಿನ ಲೆಕ್ಕಾಚಾರಗಳನ್ನು ನೋಡಿಕೊಳ್ಳುವವರಾದಲ್ಲಿ ಅಥವಾ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುವಂಥವರಾದಲ್ಲಿ ಸಾಮಾನ್ಯವಾಗಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಿ. ಭೂಮಿ ಸಂಬಂಧಿತ ವ್ಯಾಜ್ಯಗಳು ಉದ್ಭವಿಸಿದಲ್ಲಿ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಿ. ಅಥವಾ ಈಗಾಗಲೇ ಅಂಥ ಸಮಸ್ಯೆ ಇದೆ ಎಂದಾದಲ್ಲಿ ರಾಜೀ- ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ. ನಿಮ್ಮಿಂದ ಸಾಧ್ಯವಾದಲ್ಲಿ ದುರ್ಗಾದೇವಿಯ ಆರಾಧನೆ, ಅಂದರೆ ದುರ್ಗಾ ಹೋಮ, ದುರ್ಗಾ ದೀಪ ನಮಸ್ಕಾರ ಮಾಡಿಕೊಳ್ಳಿ.
ಕುಟುಂಬದಲ್ಲಿ ಸಾಮರಸ್ಯದ ಕೊರತೆ ಕಾಣಿಸಲಿದೆ. ನೀವು ಈ ಹಿಂದೆ ಯಾವಾಗಲೋ ಆಡಿದ ಮಾತುಗಳನ್ನು ಈಗ ಎತ್ತಾಡಿ, ಮಾನಸಿಕವಾಗಿ ಕುಗ್ಗಿಸುವಂಥ ಪ್ರಯತ್ನಗಳು ಆಗಲಿವೆ. ದೇವರು- ಧರ್ಮದ ವಿಚಾರವಾಗಿ ಮಾತನಾಡುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಅದರಲ್ಲೂ ಸೋಷಿಯಲ್ ಮೀಡಿಯಾ ಪೋಸ್ಟ್ ಗಳನ್ನು ಮಾಡುವಾಗ ಮುಂಜಾಗ್ರತೆಯನ್ನು ವಹಿಸುವುದು ಮುಖ್ಯ. ಒಟ್ಟಾರೆಯಾಗಿ ನಿಮ್ಮ ಮಾತಿನಿಂದಾಗಿ ವಿವಾದ ಮಾಡಿಕೊಳ್ಳುತ್ತೀರಿ. ನಿಮ್ಮಲ್ಲಿ ಕೆಲವರಿಗೆ ಗಂಟಲಿನ ಗಡ್ಡೆ ಸೇರಿದಂತೆ ಗಂಟಲು, ಧ್ವನಿ ಪೆಟ್ಟಿಗೆ, ನಾಲಗೆಗೆ ಸಂಬಂಧಿಸಿದಂತೆ ಒಂದಿಲ್ಲೊಂದು ಸಮಸ್ಯೆಗಳು ಕಾಡಲಿವೆ. ಈಗಾಗಲೇ ಹೊತ್ತಿರುವ ದೇವರ ಹರಕೆಗಳನ್ನು ಪೂರೈಸಿಕೊಳ್ಳಿ. ಇತರರ ವೈಯಕ್ತಿಕ ವಿಷಯಗಳಲ್ಲಿ ತಲೆ ಹಾಕಬೇಡಿ.
ಎನ್.ಕೆ. ಸ್ವಾತಿ
Published On - 9:58 pm, Wed, 10 April 24