Lunar Eclipse Impact on Zodiac Signs: ಮೇಷದಿಂದ ಮೀನದ ತನಕ ರಾಹುಗ್ರಸ್ತ ಚಂಗ್ರದ್ರಹಣದ ಪರಿಣಾಮಗಳೇನು?

ಚಂದ್ರ ಗ್ರಹಣ 2025: ಸೆಪ್ಟೆಂಬರ್ 7ರಂದು ರಾಹುಗ್ರಸ್ತ ಚಂದ್ರ ಗ್ರಹಣ. ಈ ದಿನದಂದು ಮೇಷದಿಂದ ಮೀನದ ತನಕ ರಾಹುಗ್ರಸ್ತ ಚಂದ್ರಗ್ರಹಣ ಪರಿಣಾಮಗಳು ಹೇಗಿರಲಿದೆ. ಜತೆಗೆ ಅದರಿಂದ ಆಗುವ ಲಾಭ, ನಷ್ಟಗಳೇನು ಎಂಬುದನ್ನು ಇಲ್ಲಿ ಹೇಳಲಾಗಿದೆ. ಕುಂಭ ಹಾಗೂ ಮೀನ ರಾಶಿಯವರು ಈ ಕೆಳಗೆ ನೀಡುವಂಥ ಶ್ಲೋಕವನ್ನು ಪಠಣೆ ಮಾಡಬೇಕು. ಇದರ ಜತೆಗೆ ಕೆಲವೊಂದು ನಿಯಮಗಳನ್ನು ಇಲ್ಲಿ ನೀಡಲಾಗಿದೆ.

Lunar Eclipse Impact on Zodiac Signs: ಮೇಷದಿಂದ ಮೀನದ ತನಕ ರಾಹುಗ್ರಸ್ತ ಚಂಗ್ರದ್ರಹಣದ ಪರಿಣಾಮಗಳೇನು?
ಸಾಂದರ್ಭಿಕ ಚಿತ್ರ
Edited By:

Updated on: Aug 26, 2025 | 9:51 AM

ಇದೇ ಸೆಪ್ಟೆಂಬರ್ 7ನೇ ತಾರೀಕಿನಂದು ರಾಹುಗ್ರಸ್ತ ಚಂದ್ರ ಗ್ರಹಣ (Lunar eclipse) ಇದೆ. ಗ್ರಹಣದ ಪರಿಣಾಮ ಪ್ರಕೃತಿಯ ಮೇಲೆ ಹಾಗೂ ಮನುಷ್ಯರ ಮೇಲೆ ಇರುತ್ತದೆ. ಮನುಷ್ಯರ ವಿಚಾರಕ್ಕೆ ಬಂದಾಗ ವೈದಿಕ ಜ್ಯೋತಿಷ್ಯದ (Vedic astrology) ಅನ್ವಯ ರಾಶಿಯ ಆಧಾರದಲ್ಲಿ ಗ್ರಹಣದ ಶುಭಾಶುಭ ಫಲಗಳನ್ನು ಹೇಳಲಾಗುತ್ತದೆ. ಗ್ರಹಣವು ಕುಂಭ (Aquarius) ರಾಶಿಯಲ್ಲಿ ಸಂಭವಿಸುತ್ತಿದೆ. ಶತಭಿಷಾ ನಕ್ಷತ್ರ ಕುಂಭ ರಾಶಿಯವರು ಹಾಗೂ ಪೂರ್ವಾಭಾದ್ರ ನಕ್ಷತ್ರದ ಕುಂಭ ಹಾಗೂ ಮೀನ (Pisces) ರಾಶಿಯವರು ಈ ಕೆಳಗೆ ನೀಡುವಂಥ ಶ್ಲೋಕವನ್ನು ಒಂದು ಚೀಟಿಯಲ್ಲಿ ಬರೆದು, ಗ್ರಹಣ ಕಾಲದಲ್ಲಿ ತಮ್ಮ ಬಳಿ ಇಟ್ಟುಕೊಂಡಿದ್ದು, ಗ್ರಹಣ ಸಂಪೂರ್ಣವಾದ ನಂತರದಲ್ಲಿ ಉದ್ದು, ಭತ್ತ ಅಥವಾ ಅಕ್ಕಿ, ಚಂದ್ರ ಬಿಂಬದೊಂದಿಗೆ (ಇದು ಗ್ರಂಥಿಗೆ ಅಂಗಡಿಯಲ್ಲಿ ದೊರೆಯುತ್ತದೆ) ತಮ್ಮಿಂದ ಸಾಧ್ಯವಾದಷ್ಟು ದಾನ- ದಕ್ಷಿಣೆ ಕೊಡಬೇಕು.

ಶ್ಲೋಕ:

ಯೋ ಸೌ ವಜ್ರಧರೋದೇವಃ ಆದಿತ್ಯಾನಾಂ ಪ್ರಭುರ್ಮತಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||

ಯೋ ಸೌ ದಂಡಧರೋದೇವಃ ಯಮೋ ಮಹಿಷವಾಹನಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |

ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |

ರಾಹುಗ್ರಸ್ತ ಚಂದ್ರ ಗ್ರಹಣ ಯಾವ ರಾಶಿಗೆ ಏನು ಫಲ?:

ಶುಭ ಫಲ- ಧನುಸ್ಸು, ಕನ್ಯಾ, ಮೇಷ ಹಾಗೂ ವೃಷಭ

ಅಶುಭ ಫಲ- ಕುಂಭ, ಮೀನ, ಕರ್ಕಾಟಕ ಹಾಗೂ ವೃಶ್ಚಿಕ

ಮಿಶ್ರ ಫಲ- ಸಿಂಹ, ತುಲಾ, ಮಕರ, ಮಿಥುನ

ಮುಖ್ಯವಾಗಿ ಅಶುಭ ಫಲಗಳು ಎಂದಿರುವ ಕುಂಭ, ಮೀನ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರು ಬಹಳ ಎಚ್ಚರಿಕೆ ಹಾಗೂ ಮುಂಜಾಗ್ರತೆಯನ್ನು ವಹಿಸಬೇಕು.

ಮೇಷದಿಂದ ಮೀನ ರಾಶಿಯ ತನಕ ರಾಹುಗ್ರಸ್ತ ಚಂದ್ರ ಗ್ರಹಣದ ಫಲಾಫಲ ಹೀಗಿದೆ:

ಮೇಷ: ನಿಮ್ಮ ರಾಶಿಯವರಿಗೆ ಈ ಗ್ರಹಣವು ಶುಭ ಫಲವನ್ನು ತರುತ್ತದೆ. ವ್ಯಾಪಾರ- ವ್ಯವಹಾರ ಮಾಡುವಂಥವರಿಗೆ ಇಲ್ಲಿಯವರೆಗೆ ಕಾಡುತ್ತಿರುವ ತೊಂದರೆಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗುತ್ತವೆ. ಮುಂದಕ್ಕೆ ಹಾಕುತ್ತಾ ಬರುತ್ತಿದ್ದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ವಾಹನ, ಸೈಟು, ಮನೆ ಖರೀದಿ ಇತ್ಯಾದಿಗಳನ್ನು ಮಾಡಬೇಕು ಎಂದುಕೊಳ್ಳುತ್ತಾ ಇರುವವರಿಗೆ ಅದು ಸಾಧ್ಯವಾಗಲಿದೆ. ನಿಮಗೆ ಬರಬೇಕಾದ ಸಾಲ ಅಥವಾ ಈಗಾಗಲೇ ಕೆಲಸ ಮಾಡಿಕೊಟ್ಟು, ನಿಮಗೆ ಬರಬೇಕಾದ ಹಣ ಬಾಕಿ ಉಳಿದುಹೋಗಿದೆ ಅಂತಾದಲ್ಲಿ ಅದು ವಸೂಲಾಗುವ ಅವಕಾಶಗಳು ಉದ್ಭವಿಸುತ್ತವೆ. ಅದನ್ನು ಬಳಸಿಕೊಳ್ಳುವುದು ಸಹ ಮುಖ್ಯವಾಗುತ್ತದೆ. ವಿದೇಶಕ್ಕೆ ತೆರಳುವಂಥ ಅವಕಾಶಗಳು ನಿಮ್ಮಲ್ಲಿ ಕೆಲವರಿಗೆ ದೊರೆಯಬಹುದು. ವಿಲಾಸಿ ವಸ್ತುಗಳ ಖರೀದಿ ಯೋಗ ಸಹ ಇದೆ.

ವೃಷಭ: ಉದ್ಯೋಗ ವಿಚಾರದಲ್ಲಿ ಉತ್ತಮವಾದ ಬೆಳವಣಿಗೆಗಳನ್ನು ನಿರೀಕ್ಷೆ ಮಾಡಬಹುದು. ನಿಮ್ಮ ಸಾಮರ್ಥ್ಯಕ್ಕೆ, ಪರಿಶ್ರಮಕ್ಕೆ ಇಷ್ಟು ಸಮಯ ಸಿಗಬೇಕಾದ ಮನ್ನಣೆ, ಮಾನ್ಯತೆ ದೊರೆಯುತ್ತಿಲ್ಲ ಎಂದು ಚಿಂತೆಗೆ ಗುರಿ ಆಗಿರುವವರು ಈಗ ನಿಟ್ಟುಸಿರು ಬಿಡುವಂತೆ ಆಗಲಿದೆ. ನಿಮ್ಮಲ್ಲಿ ಕೆಲವರಿಗೆ ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳ, ಬೆಳವಣಿಗೆಗೆ ಅವಕಾಶ ಇರುವಂಥ ಸ್ಥಳ, ಹುದ್ದೆಗೆ ವರ್ಗಾವಣೆ ಇವೆಲ್ಲ ಆಗಬಹುದು. ಮನೆಯಲ್ಲಿ ದೇವತಾ ಕಾರ್ಯಗಳನ್ನು ಆಯೋಜಿಸಬೇಕು ಎಂದುಕೊಂಡು ಅದು ಮುಂದಕ್ಕೆ ಹೋಗುತ್ತಾ ಬಂದಿದ್ದಲ್ಲಿ ಈ ಅವಧಿಯಲ್ಲಿ ಪೂಜೆ- ಪುನಸ್ಕಾರಗಳನ್ನು ಮಾಡುವುದಕ್ಕೆ ಹಾಗೂ ಆ ಮೂಲಕ ನೆಮ್ಮದಿ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಸೋದರ- ಸೋದರಿಯರ ಅಥವಾ ಸೋದರ ಸಂಬಂಧಿಗಳ ಜೊತೆಗೆ ಮನಸ್ತಾಪಗಳು ಏನಾದರೂ ಇದ್ದಲ್ಲಿ ಅವುಗಳನ್ನು ಬಗೆಹರಿಸಿಕೊಳ್ಳಲು ಬೇಕಾದ ವೇದಿಕೆ ಸಿಗಲಿದೆ.

ಮಿಥುನ: ನಿಮ್ಮಲ್ಲಿ ಯಾರಿಗೆ ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಇರುತ್ತದೋ ಅಂಥವುಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಬೇಕಾದ ಅವಕಾಶ ದೊರೆಯಲಿದೆ. ಇನ್ನು ಇದೇ ವೇಳೆ ಕೆಲವು ಕೆಲಸ- ಕಾರ್ಯಗಳು ಒಂದು ಸಲಕ್ಕೆ ಮುಗಿಯುವುದೇ ಇಲ್ಲ. ತಂದೆ ಅಥವಾ ತಂದೆ ಸಮಾನರಾದವರ ಅನಾರೋಗ್ಯ ಸಮಸ್ಯೆ ಚಿಂತೆಗೆ ಕಾರಣ ಆಗಲಿದೆ. ಇನ್ನು ಅವರಿಗಾಗಿ ಖರ್ಚು- ವೆಚ್ಚಗಳು ಸಹ ಹೆಚ್ಚಾಗಬಹುದು. ನಿಮ್ಮಲ್ಲಿ ಯಾರು ಷೇರು, ಮ್ಯೂಚುವಲ್ ಫಂಡ್ ಅಥವಾ ಸಟ್ಟಾ ವ್ಯವಹಾರಗಳನ್ನು ಮಾಡುತ್ತಿದ್ದೀರಿ ಅಂಥವರು ಹೂಡಿಕೆ ಅಂತ ಬಂದಾಗ ನಿಯಂತ್ರಣದಲ್ಲಿ ವ್ಯವಹಾರ ಮಾಡುವುದು ಕ್ಷೇಮ. ಅತಿಯಾದ ಲಾಭದ ಆಸೆಗೆ ಬಿದ್ದು ಅಸಲು ಹಣವನ್ನೇ ಕಳೆದುಕೊಳ್ಳುವಂತೆ ಆಗಬಹುದು. ಅದೃಷ್ಟ ಪರೀಕ್ಷೆಗೆ ಇಳಿಯುವ ಮುಂಚೆ ಅದರಿಂದ ಆಗಬಹುದಾದ ಆರ್ಥಿಕ ಪರಿಣಾಮವನ್ನು ಗಮನದಲ್ಲಿ ಇಟ್ಟುಕೊಳ್ಳಿ.

ಕರ್ಕಾಟಕ: ನಿಮ್ಮ ಆರೋಗ್ಯದ ಬಗ್ಗೆ ವಿಪರೀತ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಅದರಲ್ಲೂ ಮೂತ್ರ ಸೋಂಕು (ಯೂರಿನ್ ಇನ್ ಫೆಕ್ಷನ್), ಕಿಡ್ನಿ ಸ್ಟೋನ್, ಫ್ಯಾಟಿ ಲಿವರ್ ಗಂಭೀರ ಸ್ವರೂಪದ ತೊಂದರೆ, ಪ್ಯಾಂಕ್ರಿಯಾಸ್ ಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಇಂಥವುಗಳು ಕಾಣಿಸಿಕೊಳ್ಳಬಹುದು ಅಥವಾ ಈಗಾಗಲೇ ಸಮಸ್ಯೆ ಇದೆ ಎಂದಾದಲ್ಲಿ ಅದು ಉಲ್ಬಣಿಸಬಹುದು. ಇತರರಿಗೆ ಸಹಾಯ ಆಗಲಿ ಎಂದು ನೀವಾಡಿದ ಮಾತು ಹಾಗೂ ತೆಗೆದುಕೊಂಡ ನಿರ್ಧಾರಗಳು ನಿಮಗೇ ಸಮಸ್ಯೆಯಾಗಿ ಕಾಡಲಿಕ್ಕೆ ಆರಂಭಿಸಲಿದೆ. ಇನ್ನು ಯಾವುದೇ ವ್ಯಕ್ತಿ ಅಥವಾ ಘಟನೆಗೆ ಸಂಬಂಧಿಸಿದಂತೆ ಉದ್ಭವಿಸುವ ಪ್ರಶ್ನೆಗಳನ್ನು ಅಲ್ಲಿಂದಲಿಗೇ ಕೇಳಿ ಬಗೆಹರಿಸಿಕೊಳ್ಳುವುದು ಉತ್ತಮ. ವಾಹನ ಚಾಲನೆ ಮಾಡುವಾಗ ಕೂಡ ಸಾಮಾನ್ಯವಾಗಿ ಇರುವುದಕ್ಕಿಂತ ಹೆಚ್ಚಿನ ಮುಂಜಾಗ್ರತೆ ಅಗತ್ಯ ಇರುತ್ತದೆ. ಏಕಾಗ್ರತೆ ಇಲ್ಲ, ಮನಸ್ಸು ಒಂದು ಕಡೆ ಸ್ಥಿರವಾಗಿ ನಿಲ್ಲುತ್ತಿಲ್ಲ ಎಂದಾದಲ್ಲಿ ಅಪಾಯ ತಂದೊಡ್ಡಬಹುದಾದ ಕೆಲಸಗಳಲ್ಲಿ ತೊಡಗಿಕೊಳ್ಳಬೇಡಿ.

ಸಿಂಹ: ನಿಮ್ಮಲ್ಲಿ ಯಾರು ವಿವಾಹ ವಯಸ್ಕರಿದ್ದೀರಿ ಅಂಥವರಿಗೆ ಮದುವೆ ನಿಶ್ಚಯ ಆಗುವ ಯೋಗ ಇದೆ. ಒಂದು ವೇಳೆ ಈಗಾಗಲೇ ಮದುವೆ ನಿಶ್ಚಯ ಆಗಿದೆ, ದಿನಾಂಕ ನಿಗದಿ ಮತ್ತಿತರ ವಿಚಾರಗಳು ಮುಂದಕ್ಕೆ ಹೋಗುತ್ತಿದೆ ಅಂತಾದಲ್ಲಿ ಅದಕ್ಕಿರುವ ಅಡೆತಡೆ ಗೊಂದಲಗಳು ನಿವಾರಣೆ ಆಗಲಿವೆ. ಮಾತಿನ ಮೇಲೆ ಹಿಡಿತ ಇರಿಸಿಕೊಳ್ಳಿ. ಅತ್ಯುತ್ಸಾಹದಲ್ಲಿ ಆಡಿದ ಮಾತುಗಳು ಸಮಸ್ಯೆಯಾಗಿ ಪರಿಣಮಿಸಬಹುದು. ಆದ್ದರಿಂದ ಎಲ್ಲಿ ಹಾಗೂ ಎಷ್ಟು ಮಾತು ಮತ್ತು ಯಾವ ಸಮಯದಲ್ಲಿ ಮೌನವಾಗಿರಬೇಕು ಎಂದು ತಿಳಿದುಕೊಳ್ಳಿ. ವಿದೇಶ ಪ್ರವಾಸ ತೆರಳಬೇಕು ಅಥವಾ ಅಲ್ಲಿಯೇ ವ್ಯಾಸಂಗ ಮಾಡಬೇಕು, ಉದ್ಯೋಗ ಮಾಡಬೇಕು ಎಂದುಕೊಳ್ಳುತ್ತಿರುವವರು ಬಹಳ ಎಚ್ಚರಿಕೆಯನ್ನು ವಹಿಸಬೇಕು. ದಂಪತಿ ಮಧ್ಯೆ ಈಗಾಗಲೇ ವಿರಸ ಇದೆ, ಮಾತು ಆಡದಷ್ಟು ಸಂಬಂಧ ಹಳಸಿದೆ ಎಂದಿದ್ದಲ್ಲಿ ಸರಿಪಡಿಸಿಕೊಳ್ಳುವುದಕ್ಕೆ ಸಿಗುವ ವೇದಿಕೆ ಹಾಗೂ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ಮುಖ್ಯ.

ಇದನ್ನೂ ಓದಿ: ಸೆ. 07ಕ್ಕೆ ರಾಹುಗ್ರಸ್ತ ಚಂದ್ರ ಗ್ರಹಣ ಭಾರತದಲ್ಲಿ ಗೋಚರ; ಆಚರಣೆ ಹೇಗಿರಬೇಕು?

ಕನ್ಯಾ: ಇಲ್ಲಿಯವರೆಗೆ ಅಡೆತಡೆಯಾಗಿ ನಿಂತುಹೋಗಿದ್ದ ಅಥವಾ ತಡವಾಗಿದ್ದ ಕೆಲಸಕ್ಕೆ ವೇಗ ದೊರೆಯಲಿದೆ. ಆರೋಗ್ಯ ವಿಚಾರದಲ್ಲಿ ಸಮಸ್ಯೆಯಾಗಿ, ತೊಂದರೆ ಏನಾದರೂ ಅನುಭವಿಸುತ್ತಾ ಇದ್ದಲ್ಲಿ ಅದಕ್ಕೆ ಬೇಕಾದ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಹಣಕಾಸು ಹರಿವು ಸರಾಗವಾಗಿ ಆಗಲಿದೆ. ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗಲಿದೆ. ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಪಡುತ್ತಾ ಇದ್ದಲ್ಲಿ ದೊರೆಯಲಿದೆ. ನೀವು ಈಗಾಗಲೇ ಕೆಲಸ ಮಾಡಿಯಾಗಿದೆ, ಅದರಿಂದ ಬರಬೇಕಾದ ಪೂರ್ಣ ಪ್ರಮಾಣದ ಹಣವು ಬಂದಿಲ್ಲ ಅಂತಾದರೆ ಅದು ವಸೂಲಿ ಆಗುವ ಸಾಧ್ಯತೆ ಇರುತ್ತದೆ. ಪ್ರಯತ್ನ ಮಾಡುವುದು ಮುಖ್ಯವಾಗುತ್ತದೆ. ಈಗಾಗಲೇ ಸೈಟು ಇದೆ, ಮನೆ ಕಟ್ಟಬೇಕು ಅಂದುಕೊಂಡಿದ್ದೇವೆ ಎಂದಿರುವವರಿಗೆ ಅದು ಕೂಡ ಸಾಧ್ಯವಾಗಲಿದೆ. ಮಕ್ಕಳಿಂದ ಕೂಡ ವಿವಿಧ ಬಗೆಯ ಅನುಕೂಲಗಳು ನಿಮಗೆ ಒದಗಿ ಬರಲಿವೆ.

ತುಲಾ: ಮಕ್ಕಳ ವಿಚಾರವಾಗಿ ಬಹಳ ಚಿಂತೆ, ಯೋಚನೆಗಳು ಆಗಲಿವೆ. ಒಂದು ವೇಳೆ ಮನೆಯ ರೆನೊವೇಷನ್ ಕೈಗೊಂಡಿದ್ದರೆ ವಿಪರೀತ ಖರ್ಚಾಗಲಿದೆ. ಅಂದರೆ ಅಂದುಕೊಂಡ ಅಥವಾ ಬಜೆಟ್ ಗಿಂತ ಹೆಚ್ಚಿನ ಮೊತ್ತವು ಖರ್ಚಾಗಲಿದೆ. ಕೆಲವು ಕೆಲಸಗಳನ್ನು ಆಲಸ್ಯದ ಕಾರಣಕ್ಕೆ ಮುಂದಕ್ಕೆ ಹಾಕಿ, ಕೈಯಿಂದ ಹಣ ಕಳೆದುಕೊಳ್ಳುವಂಥ ಯೋಗ ಇರುತ್ತದೆ. ಡೆಡ್ ಲೈನ್ ಒಳಗಾಗಿ ಕೆಲಸ ಪೂರ್ಣ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಿ. ನಿಮ್ಮಲ್ಲಿ ಕೆಲವರಿಗೆ ಈ ಹಿಂದೆ ನೀವು ಎಲ್ಲಿ ಕೆಲಸ ಮಾಡಿದ್ದಿರಿ ಅಲ್ಲಿಂದ ಮತ್ತೆ ದೊಡ್ಡ ಮಟ್ಟದ ಆರ್ಡರ್ ಹುಡುಕಿಕೊಂಡು ಬರುವಂಥ ಯೋಗ ಇದೆ. ಉದ್ಯೋಗ ಸ್ಥಳದಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿ, ಪ್ರಮೋಷನ್ ಸಹ ಕೊಡಬಹುದು. ಈಗಾಗಲೇ ವೇತನ ಹೆಚ್ಚಳಕ್ಕಾಗಿ ಕೇಳಿದ್ದಲ್ಲಿ ಅಂದುಕೊಂಡ ಪ್ರಮಾಣದಲ್ಲಿ ಅಲ್ಲವಾದರೂ ಸಮಾಧಾನ ಆಗುವ ಮಟ್ಟಿಗಾದರೂ ಸಂಬಳ ಹೆಚ್ಚಾಗಬಹುದು. ಆದರೆ ಒಂದಲ್ಲ ಒಂದು ಬಗೆಯಲ್ಲಿ ಮಾನಸಿಕ ಕಿರಿಕಿರಿ ಇರುತ್ತದೆ.

ವೃಶ್ಚಿಕ: ಮಾತಿನ ಮೇಲೆ ಲಕ್ಷ್ಯ ಇರಲಿ. ಪದ ಬಳಕೆ ಏನು ಮಾಡ್ತೀರಿ, ಯಾರ ಬಗ್ಗೆ ಏನು ಮಾತನಾಡುತ್ತೀರಿ ಎಂಬ ಲಕ್ಷ್ಯವನ್ನು ಇಟ್ಟುಕೊಳ್ಳಿ. ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಿರುವವರು ಪೋಸ್ಟ್ ಮಾಡುವ ಮುನ್ನ ಅದರಿಂದ ಏನು ಪರಿಣಾಮಗಳು ಆಗಬಹುದು ಎಂಬ ಕಡೆಗೂ ಆಲೋಚನೆ ಮಾಡಬೇಕು. ತಾಯಿ ಅಥವಾ ತಾಯಿ ಸಮಾನರಾದವರ ಅನಾರೋಗ್ಯದಿಂದ ಆತಂಕ ಉಂಟಾಗಬಹುದು. ಒಂದು ವೇಳೆ ಈಗಾಗಲೇ ಆರೋಗ್ಯ ಸಮಸ್ಯೆಗಳು ಇವೆ ಎಂದಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಿ. ನಿಮ್ಮ ವರ್ಚಸ್ಸಿಗೆ ಹಾನಿ ಆಗುವಂಥ ಬೆಳವಣಿಗೆಗೆಳು ಆಗಲಿವೆ. ನಿಮ್ಮ ವಿರುದ್ಧ ದೂರು ನೀಡುವುದು, ಚಾಡಿ ಹೇಳುವುದು ಇವೇ ಮೊದಲಾದ ಫಲಗಳನ್ನು ಕಾಣಲಿದ್ದೀರಿ. ಸೋದರ- ಸೋದರಿಯರ ಜೊತೆಗೆ ವಾಗ್ವಾದ- ಮನಸ್ತಾಪಗಳು ಏರ್ಪಡಲಿವೆ. ಅವರು ನಿಮ್ಮ ಬಗ್ಗೆ ಅಪಪ್ರಚಾರ ಸಹ ಮಾಡಬಹುದು.

ಧನುಸ್ಸು: ಪಿತ್ರಾರ್ಜಿತ ಆಸ್ತಿ ವಿಚಾರಗಳಲ್ಲಿ ವ್ಯಾಜ್ಯಗಳೇನಾದರೂ ಇದ್ದಲ್ಲಿ ಅವುಗಳನ್ನು ಬಗೆಹರಿಸಿಕೊಳ್ಳಬಹುದು. ಸೋದರ- ಸೋದರಿಯರ ಜೊತೆಗಿನ ಮನಸ್ತಾಪಗಳು ಇದ್ದಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಬೇಕಾದ ವೇದಿಕೆ ದೊರೆಯಲಿದೆ. ಒಂದು ವೇಳೆ ಸಂಗಾತಿಗೇನಾದರೂ ಆಸ್ತಿ-ಪಾಸ್ತಿ, ಹಣಕಾಸು ಏನಾದರೂ ಬರಬೇಕಾಗಿದ್ದಲ್ಲಿ ಅದು ಕೂಡ ಬರುವಂಥ ಅವಕಾಶಗಳು ಇರುತ್ತವೆ. ನಿಮ್ಮ ಮೇಲೆ ಏನಾದರೂ ದೂರುಗಳು ದಾಖಲಾಗಿದ್ದು, ಕೋರ್ಟ್- ಕಚೇರಿ ಅಂತೇನಾದರೂ ಅಲೆದಾಡುತ್ತಾ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಬಾಗಿಲುಗಳು ತೆರೆದುಕೊಳ್ಳಲಿವೆ. ಧೈರ್ಯದಿಂದ ನೀವು ಕೈಗೊಂಡ ತೀರ್ಮಾನಗಳ ಫಲ ನೀಡಲಿವೆ. ಈಗಾಗಲೇ ನೀಡಿದ ಸಾಲವನ್ನು ವಾಪಸ್ ಕೊಡದೆ ನಿಮಗೆ ಯಾರಾದರೂ ಸತಾಯಿಸುತ್ತಾ ಇದ್ದಲ್ಲಿ ಅದನ್ನು ವಸೂಲಿ ಮಾಡುವುದು ಹೇಗೆ ಎಂಬ ಮಾರ್ಗೋಪಾಯಗಳು ಸಿಗಲಿವೆ. ಪ್ರಭಾವಿಗಳು ನಿಮ್ಮ ನೆರವಿಗೆ ನಿಲ್ಲುವ ಸಾಧ್ಯತೆಗಳು ಸಹ ಇವೆ.

ಮಕರ: ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಇದ್ದಲ್ಲಿ ಬಗೆಹರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಒಂದು ವೇಳೆ ನಿಮ್ಮದೇ ಹಠಮಾರಿತನದಿಂದ ಯಾವುದಾದರೂ ಸಂಬಂಧ- ಸ್ನೇಹದಲ್ಲಿ ಬಿರುಕು ಉಂಟಾಗಿ, ಮಾತು ಬಿಟ್ಟಿದ್ದಲ್ಲಿ ಅದನ್ನು ಸರಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಖರ್ಚಿನ ವಿಚಾರದಲ್ಲಿ ನಿಗಾ ಇಟ್ಟುಕೊಳ್ಳಬೇಕು. ನಿಮಗೆ ಬರಬೇಕಾದ ಹಣ ಸಮಯಕ್ಕೆ ಸರಿಯಾಗಿ ಬಾರದ ಕಾರಣದಿಂದ ಒತ್ತಡದ ಸನ್ನಿವೇಶ ಸೃಷ್ಟಿಯಾಗಲಿದೆ. ಆದ್ದರಿಂದ ನಿಮಗೆ ಯಾವುದೋ ಹಣ ಬರುತ್ತದೆ, ಅದನ್ನು ಕೊಡಬಹುದು ಎಂಬ ಧೈರ್ಯದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಜಾಸ್ತಿ ಮಾಡಿದಲ್ಲಿ ಅಥವಾ ಅಳತೆಗೆ ಮೀರಿ ಖರ್ಚು- ವೆಚ್ಚಗಳೇನಾದರೂ ಮಾಡಿ, ಆ ನಂತರ ಪರಿತಪಿಸುವಂತೆ ಆಗಲಿದೆ. ಕಣ್ಣಿನ ಆರೋಗ್ಯದ ಕಡೆಗೆ ಹೆಚ್ಚು ಲಕ್ಷ್ಯ ನೀಡಿ. ಅದೇ ರೀತಿ ಅಜೀರ್ಣ ಸಮಸ್ಯೆ ಕಾಡಬಹುದು, ಆಹಾರ- ಪಥ್ಯದ ಬಗ್ಗೆ ಸಾಮಾನ್ಯವಾಗಿ ತೆಗೆದುಕೊಳ್ಳುವಂತೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ.

ಕುಂಭ: ನಿಮ್ಮದೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಬಹಳ ಬಹಳ ಎಚ್ಚರಿಕೆಯನ್ನು ವಹಿಸಬೇಕು. ವಾಹನ ಚಾಲನೆ ಮಾಡದಿರುವುದು ಉತ್ತಮ. ಇನ್ನು ಆರೋಗ್ಯ ಸಮಸ್ಯೆಗಳು ಕಾಡಬಹುದು. ಹೊಟ್ಟೆ, ಹೃದಯ, ಬೆನ್ನು, ಕಾಲು ದೇಹದ ಈ ಭಾಗಗಳಲ್ಲಿನ ನೋವು ವಿಪರೀತ ಕಾಡಲಿದೆ. ನಿಮ್ಮದಲ್ಲದ ತಪ್ಪಿಗೆ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ. ಮನಸ್ಸಿನ ಮೇಲೆ ಹತೋಟಿಯನ್ನು ಇರಿಸಿಕೊಳ್ಳಿ. ಯಾರದೋ ಮೇಲಿನ ಪ್ರತಿಷ್ಠೆಗಾಗಿ ನೀವು ಕೈಗೊಳ್ಳುವ ನಿರ್ಧಾರ ಹಾಗೂ ಮಾಡುವ ಕೆಲಸಗಳಿಂದ ನಿಮ್ಮ ಸ್ವಂತ ಜನರನ್ನು, ಹಿತೈಷಿಗಳನ್ನೇ ಶತ್ರುಗಳನ್ನಾಗಿ ಮಾಡಿಕೊಳ್ಳಲಿದ್ದೀರಿ. ನಿಮಗೆ ವಹಿಸಿದ ಜವಾಬ್ದಾರಿಗಳನ್ನು ಇತರರಿಗೆ ವರ್ಗಾಯಿಸುವುದಕ್ಕೆ ಹೋಗಬೇಡಿ. ಇನ್ನು ನಿಮಗೆ ಚೆನ್ನಾಗಿ ಗೊತ್ತಿರುವ ಕೆಲಸಗಳೇ ಇದ್ದರೂ ಅದನ್ನು ಮನಸ್ಸಿಟ್ಟು ಮಾಡುವುದು ಮುಖ್ಯವಾಗುತ್ತದೆ. ಇತರರು ಹೇಳಿದ ಚಾಡಿ ಮಾತುಗಳ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡುವುದಕ್ಕೆ ಹೋಗಬೇಡಿ.

ಮೀನ: ನೀವು ಮುಂದೆ ನಿಂತು ಇತರರಿಗೆ ಕೊಡಿಸಿದ ಸಾಲ, ಕೆಲಸಗಳು ಸಮಸ್ಯೆಯಾಗಿ ಮಾರ್ಪಡಲಿವೆ. ನಿಮಗೆ ಸಂಬಂಧಿಸದ ವಿಷಯಗಳಲ್ಲಿ ಮೂಗು ತೂರಿಸುವುದಕ್ಕೆ ಹೋಗಬೇಡಿ. ನೀವು ಸ್ನೇಹ- ಸಂಬಂಧದಲ್ಲಿ ನೀಡಿದ ಸಲಹೆ- ಸೂಚನೆಗಳು ಸಹ ದೊಡ್ಡ ತೊಂದರೆಗಳಾಗಲಿವೆ. ಇತರರ ವಸ್ತು, ವಾಹನಗಳನ್ನು ಬಳಸುವುದಕ್ಕೆ ಹೋಗಬೇಡಿ. ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ಅಥವಾ ಬಡ್ಡಿ ಸಿಗುತ್ತದೆ ಎಂಬ ಆಸೆಯಲ್ಲಿ ಏನಾದರೂ ಹಣ ಹೂಡಿಕೆ ಮಾಡುವುದಕ್ಕೆ ಮುಂದಾದಲ್ಲಿ ಅದರಿಂದ ನಷ್ಟವನ್ನು ಅನುಭವಿಸಲಿದ್ದೀರಿ. ಚೈನ್ ಲಿಂಕ್ ವ್ಯವಹಾರಗಳು, ಚೀಟಿ ವ್ಯವಹಾರಗಳು ಇಂಥವುಗಳಿಂದ ದೂರ ಇದ್ದಲ್ಲಿ ಕ್ಷೇಮ. ಈ ಹಿಂದೆ ಯಾವಾಗಲೋ ನಿಮ್ಮಿಂದ ಆದ ತಪ್ಪಿಗೆ ಈಗ ದಂಡವನ್ನು ಕಟ್ಟಬೇಕಾದ ಸನ್ನಿವೇಶಗಳು ಎದುರಾಗಲಿವೆ. ಕಡಿಮೆ ಬಡ್ಡಿಗೆ ಸಿಗುತ್ತದೆ ಅಂತಲೋ ಅಥವಾ ಜಾಸ್ತಿ ಅವಧಿ ದೊರೆಯುತ್ತದೆ ಅಂತಲೋ ಅಗತ್ಯ ಇಲ್ಲದಿದ್ದರೂ ಅಥವಾ ಅಗತ್ಯಕ್ಕಿಂತಲೂ ಹೆಚ್ಚು ಸಾಲವನ್ನು ಮಾಡಲಿಕ್ಕೆ ಹೋಗಬೇಡಿ.

ಅಶುಭ ಫಲಗಳು ಎಂದಿರುವ ಕುಂಭ, ಮೀನ, ಕರ್ಕಾಟಕ ಹಾಗೂ ವೃಶ್ಚಿಕ ರಾಶಿಯವರು ಚಂದ್ರ ಗ್ರಹಣ ಶಾಂತಿ ಪೂಜೆ, ದೇವತಾರಾಧನೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ಆಯಾ ರಾಶಿಯವರಿಗೆ ಹೇಳಿದಂತಹ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ.

– ಸ್ವಾತಿ ಎನ್.ಕೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:24 pm, Mon, 25 August 25