Lunar eclipse: ಸೆ. 07ಕ್ಕೆ ರಾಹುಗ್ರಸ್ತ ಚಂದ್ರ ಗ್ರಹಣ ಭಾರತದಲ್ಲಿ ಗೋಚರ; ಆಚರಣೆ ಹೇಗಿರಬೇಕು?
ಸೆ.07ರಂದು ರಾಹುಗ್ರಸ್ತ ಚಂದ್ರ ಗ್ರಹಣ ಇದೆ. ಕುಂಭ ರಾಶಿಯಲ್ಲಿ ಈ ಗ್ರಹಣವು ಸಂಭವಿಸುತ್ತಿದ್ದು, ಭಾರತದಲ್ಲಿ ಗೋಚರ ಸಹ ಆಗುತ್ತದೆ. ಆದ ಕಾರಣಕ್ಕೆ ಚಂದ್ರ ಗ್ರಹಣದ ಸಮಯದಲ್ಲಿ ಆಚರಣೆ, ಅಂದರೆ ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ನಡೆದುಬಂದಂಥ ಆಚರಣೆಗಳು ಇರುತ್ತವೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಭಾನುವಾರದಂದು, ಪೌರ್ಣಮಿ ದಿನ ಸಂಭವಿಸುವ ಈ ಚಂದ್ರ ಗ್ರಹಣದ ದಿನ ಭೋಜನ ಯಾವ ಸಮಯದೊಳಗಾಗಿ ಮಾಡಿರಬೇಕು, ಈ ಸಮಯದ ವಿಚಾರಕ್ಕೆ ಯಾರಿಗೆ ಸ್ವಲ್ಪ ಮಟ್ಟಿಗೆ ವಿನಾಯಿತಿ ಇದೆ, ಶ್ರಾದ್ಧ ಕಾರ್ಯಗಳ ಆಚರಣೆ- ತರ್ಪಣ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇಲ್ಲಿ ನೀಡಲಾಗಿದೆ.

ಇದೇ ಸೆಪ್ಟೆಂಬರ್ 7ನೇ ತಾರೀಕಿನಂದು ರಾಹುಗ್ರಸ್ತ ಚಂದ್ರ ಗ್ರಹಣ (Lunar eclipse) ಇದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಭಾನುವಾರದಂದು, ಪೌರ್ಣಮಿ ದಿನ ಈ ಚಂದ್ರ ಗ್ರಹಣ (Chandra Grahan) ಸಂಭವಿಸುತ್ತಿದ್ದು, ಭಾರತ ದೇಶದಲ್ಲಿ ಇದು ಗೋಚರಿಸಲಿದೆ. ಆದ್ದರಿಂದ ಗ್ರಹಣ ಆಚರಣೆಗಳು ಇರುತ್ತವೆ. ಈ ಗ್ರಹಣಕ್ಕೆ ಸಂಬಂಧಿಸಿದಂತೆ ಮುಖ್ಯ ಮಾಹಿತಿಗಳು ಇಲ್ಲಿವೆ. ಇಲ್ಲಿ ನೀಡುತ್ತಿರುವ ಆಚರಣೆಯ ಮಾಹಿತಿ ಇತ್ಯಾದಿ ವಿವರಗಳನ್ನು ಹಿಂದೂ ಧಾರ್ಮಿಕ ನಂಬಿಕೆ ಹಾಗೂ ಜ್ಯೋತಿಷ್ಯದ ಆಧಾರದಲ್ಲಿ ನೀಡಲಾಗುತ್ತಿದೆ. ವೈಯಕ್ತಿಕ ನಂಬಿಕೆಯ ಆಧಾರದ ಮೇಲೆ ಇವುಗಳನ್ನು ಅನುಸರಿಸುವುದು ಅವಲಂಬಿಸಿರುತ್ತದೆ. ಆದ್ದರಿಂದ ಈ ಲೇಖನವು ಧಾರ್ಮಿಕ ನಂಬಿಕೆ, ಶ್ರದ್ಧೆ ಹಾಗೂ ಅದರ ಸುತ್ತ ಇರುವಂಥ ಆಚರಣೆಗೆ ಸಂಬಂಧಿಸಿದ್ದಾಗಿರುತ್ತದೆ.
ರಾಹುಗ್ರಸ್ತ ಚಂದ್ರ ಗ್ರಹಣದ ಸಮಯ:
- ಸ್ಪರ್ಶಕಾಲ- ರಾತ್ರಿ 9.56
- ನಿಮೀಲನ ಕಾಲ- ರಾತ್ರಿ 11 ಗಂಟೆ
- ಮಧ್ಯಕಾಲ- ರಾತ್ರಿ 11.42
- ಉನ್ಮೀಲನ ಕಾಲ- ರಾತ್ರಿ 12.23
- ಗ್ರಹಣ ಮೋಕ್ಷ ಕಾಲ- ರಾತ್ರಿ 1.26
ಒಟ್ಟಾರೆಯಾಗಿ ಗ್ರಹಣದ ಅವಧಿ 3 ಗಂಟೆ 31 ನಿಮಿಷಗಳ ಕಾಲ ಇರುತ್ತದೆ. ಗ್ರಹಣಾಚರಣೆ ಮಾಡುವವರು ಗ್ರಹಣ ಸ್ಪರ್ಶ ಕಾಲದಲ್ಲೂ ಹಾಗೂ ಮೋಕ್ಷವಾದ ನಂತರ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.
ಆಹಾರ ಸ್ವೀಕಾರದ ವಿಚಾರ:
ಸೆಪ್ಟೆಂಬರ್ 7ನೇ ತಾರೀಕು ಸೂರ್ಯ ಉದಯ ಆದಾಗಿನಿಂದ ಮಧ್ಯಾಹ್ನ 12.15ರ ಒಳಗಾಗಿ ಊಟವನ್ನು ಮಾಡಿ ಮುಗಿಸಬೇಕು. ಸಣ್ಣ ವಯಸ್ಸಿನ ಮಕ್ಕಳು, ಅನಾರೋಗ್ಯ ಇರುವಂಥವರು, ವಯಸ್ಸಿನಲ್ಲಿ ಹಿರಿಯರು ಮಧ್ಯಾಹ್ನ 3.15ರ ವರೆಗೂ ಆಹಾರವನ್ನು ಸೇವನೆ ಮಾಡಬಹುದು. ಅಂದರೆ ಆ ಸಮಯದೊಳಗಾಗಿ ಮುಗಿಸಿರಬೇಕು.
ತರ್ಪಣದ ವಿಚಾರ:
ಗ್ರಹಣ ಕಾಲದಲ್ಲಿ ತರ್ಪಣ ನೀಡುವಂಥವರು ರಾತ್ರಿ 11.42ರ ನಂತರ ತರ್ಪಣವನ್ನು ನೀಡಬೇಕು.
ಶ್ರಾದ್ಧವಿಚಾರ:
ಈ ಬಾರಿ ಭಾದ್ರಪದ ಪೌರ್ಣಮಿ ದಿನ ಶ್ರಾದ್ಧವನ್ನು ಆಚರಿಸಬೇಕಾದವರು ಮರುದಿನ, ಅಂದರೆ ಸೆಪ್ಟೆಂಬರ್ 8ನೇ ತಾರೀಕಿನ ಸೋಮವಾರದಂದು, ಭಾದ್ರಪದ ಕೃಷ್ಣಪಕ್ಷ ಪಾಡ್ಯದ ದಿನ ಮಾಡಬೇಕು.
ನಕ್ಷತ್ರ ಶಾಂತಿ:
ಶತಭಿಷಾ ನಕ್ಷತ್ರ ಕುಂಭ ರಾಶಿಯವರು ಹಾಗೂ ಪೂರ್ವಾಭಾದ್ರ ನಕ್ಷತ್ರದ ಕುಂಭ ಹಾಗೂ ಮೀನ ರಾಶಿಯವರು ಈ ಕೆಳಗೆ ನೀಡುವಂಥ ಶ್ಲೋಕವನ್ನು ಒಂದು ಚೀಟಿಯಲ್ಲಿ ಬರೆದು, ಗ್ರಹಣ ಕಾಲದಲ್ಲಿ ತಮ್ಮ ಬಳಿ ಇಟ್ಟುಕೊಂಡಿದ್ದು, ಗ್ರಹಣ ಸಂಪೂರ್ಣವಾದ ನಂತರದಲ್ಲಿ ಉದ್ದು, ಭತ್ತ ಅಥವಾ ಅಕ್ಕಿ, ಚಂದ್ರ ಬಿಂಬದೊಂದಿಗೆ (ಇದು ಗ್ರಂಥಿಗೆ ಅಂಗಡಿಯಲ್ಲಿ ದೊರೆಯುತ್ತದೆ) ತಮ್ಮಿಂದ ಸಾಧ್ಯವಾದಷ್ಟು ದಾನ- ದಕ್ಷಿಣೆ ಕೊಡಬೇಕು.
ಇದನ್ನೂ ಓದಿ: ಸೆ. 07 ಎರಡನೇ ಚಂದ್ರಗ್ರಹಣ; ಈ ಎರಡು ರಾಶಿಯವರು ಅತ್ಯಂತ ಜಾಗರೂಕರಾಗಿರಿ
ಶ್ಲೋಕ:
ಯೋ ಸೌ ವಜ್ರಧರೋದೇವಃ ಆದಿತ್ಯಾನಾಂ ಪ್ರಭುರ್ಮತಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
ಯೋ ಸೌ ದಂಡಧರೋದೇವಃ ಯಮೋ ಮಹಿಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |
ಚಂದ್ರ ಮನಸ್ಸಿಗೆ ಕಾರಕ. ಚಂದ್ರ ಗ್ರಹಣವಾದ್ದರಿಂದ ಇದು ಮನಸ್ಸಿನ ಮೇಲೆ ಪರಿಣಾಮ ಬೀರಿ, ಅದರ ಮೂಲಕವಾಗಿ ಒಳಿತು ಹಾಗೂ ಕೆಡುಕು ಮತ್ತು ಕೆಲವರಿಗೆ ಎರಡರ ಮಿಶ್ರಣದ ಫಲವನ್ನು ನೀಡುತ್ತದೆ. ಹಾಗೂ ರಾಹು ಗ್ರಹ ಉದ್ವಿಗ್ನತೆ, ಉನ್ಮಾದ, ಆವೇಶ, ವಿಪರೀತ ವಿಷಯಾಸಕ್ತಿ, ಪಾಪ ಕರ್ಮಾಸಕ್ತಿ ನೀಡುವಂಥದ್ದಾಗಿರುತ್ತದೆ. ಗ್ರಹಣದ ಸಮಯದಲ್ಲಿ ಮನಸ್ಸಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದು ಬಹಳ ಮುಖ್ಯ. ಜ್ಯೋತಿಷ್ಯ ರೀತಿಯಾಗಿ ಹೇಳಬೇಕು ಅಂದರೂ ಮಾನಸಿಕ ನಿಯಂತ್ರಣದಿಂದ ಹಲವು ಸಮಸ್ಯೆಗಳು ಬಾರದಂತೆ ಇರಲು ಸಹಕಾರ ಆಗುತ್ತದೆ. ಇದರ ಆಚೆಗೆ ದೇವತಾ ಆರಾಧನೆ ಹಾಗೂ ಆಯಾ ಗ್ರಹಗಳ ಧಾನ್ಯ, ವಸ್ತ್ರ ದಾನ ಹಾಗೂ ಪೂಜೆ- ಪುನಸ್ಕಾರಗಳಿಂದಲೂ ರಕ್ಷಣೆ ದೊರೆಯುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:09 pm, Wed, 20 August 25
