
ನಿಮಗೆ ಯಾವುದೇ ವಿಚಾರ ಹೇಳಲಿಕ್ಕೆ ಬಂದಂಥವರಿಂದ ಸವಿಸ್ತಾರವಾಗಿ ಅದರ ಬಗ್ಗೆ ಕೇಳಿಕೊಳ್ಳಲಿದ್ದೀರಿ. ಈ ದಿನ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಅದಕ್ಕೆ ನೀವು ಅನುಸರಿಸುವ ವಿಧಾನ ಪರಿಣಾಮಕಾರಿ ಆಗಿ ಇರಲಿದೆ. ಭರತನಾಟ್ಯ ಕಲಾವಿದರಿಗೆ ತುಂಬ ಒಳ್ಳೆ ದಿನ ಇದಾಗಿರಲಿದೆ. ಪ್ರತಿಷ್ಠಿತ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ಮಾಡುವುದಕ್ಕೆ ನಿಮಗೆ ಆಹ್ವಾನ ಬರಬಹುದು ಅಥವಾ ಸಂಘ- ಸಂಸ್ಥೆಗಳಿಂದ ಸನ್ಮಾನ ಆಗುವ ಬಗ್ಗೆ ತಿಳಿಸುವ ಸಾಧ್ಯತೆ ಇದೆ. ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ಇದೆ ಎಂದಾದಲ್ಲಿ ಪ್ರಭಾವಿಗಳ ಸಹಾಯದ ಮೂಲಕವಾಗಿ ಅದನ್ನು ಬಗೆಹರಿಸಿಕೊಳ್ಳುವ ಅವಕಾಶಗಳಿವೆ. ನೀವು ಬಹಳ ಇಷ್ಟಪಟ್ಟು ತಂದುಕೊಂಡಂಥ ವಸ್ತುವೊಂದರ ಗುಣಮಟ್ಟ ಚೆನ್ನಾಗಿಲ್ಲ ಎಂಬ ಕಾರಣದಿಂದ ಅದನ್ನು ಹಿಂದಿರುಗಿಸಲೇ ಬೇಕು ಎಂಬ ಸನ್ನಿವೇ ಸೃಷ್ಟಿ ಆಗಲಿದ್ದು, ಇದಕ್ಕಾಗಿ ಜೋರು ಧ್ವನಿಯ ಮಾತುಕತೆ ಆಗಲಿದೆ.
ನಿಮಗೆ ಬೇಕಾದಂಥ ಕೆಲಸ- ಕಾರ್ಯಗಳನ್ನು ನೀಟಾಗಿ, ಹೆಚ್ಚು ಸದ್ದು ಗದ್ದಲ ಇದ್ದಂತೆ ಮಾಡಿ ಮುಗಿಸಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಯಾವ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಎಲ್ಲರೂ ಭಾವಿಸಿರುತ್ತಾರೋ ಅಂಥವುಗಳನ್ನು ನಿಮ್ಮ ಏಕಾಂಗಿ ತೀರ್ಮಾನದಿಂದ ಮಾಡಲಿದ್ದೀರಿ. ಹಣ್ಣು- ತರಕಾರಿ ಬೆಳೆಗಳನ್ನು ಬೆಳೆಯುವಂಥ ರೈತರು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬೇಕಾದ ಎಲ್ಲ ಪ್ರಯತ್ನಗಳನ್ನು ಮಾಡಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ರಾಸುಗಳನ್ನು ಖರೀದಿ ಮಾಡುವುದಕ್ಕೆ ತೀರ್ಮಾನವನ್ನು ಮಾಡುತ್ತೀರಿ. ಅನವಶ್ಯಕವಾಗಿ ಖರ್ಚುಗಳನ್ನು ಮಾಡುವುದಕ್ಕೆ ಕಾರಣ ಆಗುವ ಕುಟುಂಬ ಸದಸ್ಯರು ಯಾರಿದ್ದಾರೋ ಅವರಿಗೆ ನೇರವಾಗಿ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದೀರಿ. ವೈದ್ಯಕೀಯ ಕಾರಣಗಳಿಗಾಗಿ ಆಹಾರ ಪಥ್ಯವನ್ನು ಅನುಸರಿಸುವುದಕ್ಕೆ ಆರಂಭ ಮಾಡುವ ಸಾಧ್ಯತೆ ಇದ್ದು, ಇದೇ ನೆಪದಲ್ಲಿ ವೈದ್ಯರ ಸಲಹೆ ಪಡೆಯಬೇಕು ಎಂದುಕೊಳ್ಳಲಿದ್ದೀರಿ.
ಗಡುವು ಮೀರಿ ಹೋಗುತ್ತಾ ಇದೆಯಲ್ಲ, ಆ ಎಲ್ಲವನ್ನೂ ಒಂದೊಂದಾಗಿ ಮುಗಿಸುವ ಕಡೆಗೆ ಗಮನವನ್ನು ನೀಡಲಿದ್ದೀರಿ. ಸಾಮಾಜಿಕವಾಗಿ ನಿಮ್ಮ ಸ್ಥಾನಮಾನದಲ್ಲಿ ಏರಿಕೆ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಕೆಲವು ಖರೀದಿಗಳನ್ನು ಮಾಡುವ ಕುರಿತು ಕುಟುಂಬ ಸದಸ್ಯರ ಜೊತೆಗೆ ಚರ್ಚೆ ನಡೆಸಲಿದ್ದೀರಿ. ಈಗಾಗಲೇ ಸೈಟು ಇದೆ ಎಂದಾದಲ್ಲಿ ಅಲ್ಲಿ ಮನೆ ನಿರ್ಮಾಣ ಮಾಡುವ ಬಗ್ಗೆ ಕೂಡ ಕೆಲವು ವ್ಯಕ್ತಿಗಳನ್ನು ಕುರಿತು ಮಾತನಾಡಲಿದ್ದೀರಿ. ದಿಢೀರ್ ಆಗಿ ದೂರ ಪ್ರಯಾಣ ಮಾಡಲೇಬೇಕು ಎಂಬ ಸನ್ನಿವೇಶ ಉದ್ಯೋಗದ ಕಾರಣಕ್ಕಾಗಿ ಉದ್ಭವ ಆಗಬಹುದು. ಅದನ್ನು ಹೇಗೆ ನಿಭಾಯಿಸಬೇಕು ಎಂಬ ಸ್ಪಷ್ಟ ಆಲೋಚನೆ ಇರಿಸಿಕೊಳ್ಳಿ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಾ ಇರುವವರು ನಿಮ್ಮ ಹಳೇ ಸಂಪರ್ಕಗಳನ್ನು ಬಳಸಿಕೊಂಡು, ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೀರಿ. ಪ್ರತಿಷ್ಠಿತ ಸಂಸ್ಥೆಗಳಿಗೆ ರೆಫರೆನ್ಸ್ ಮೂಲಕವಾಗಿ ಅಪ್ಲೈ ಮಾಡುವ ಯೋಗ ಸಹ ಇದೆ.
ವಾಹನ ಚಾಲನೆ ಮಾಡುವ ವೇಳೆ ಬಹಳ ಎಚ್ಚರಿಕೆ ವಹಿಸಬೇಕು. ಒನ್ ವೇ, ನೋ ಪಾರ್ಕಿಂಗ್ ಇಂಥವುಗಳನ್ನು ಗಮನಿಸುವುದು ಸಹ ಮುಖ್ಯ. ನಿಮಗೆ ಎಷ್ಟೇ ಆಪ್ತರಾದರೂ ಅವರ ಪ್ರೀತಿ- ಪ್ರೇಮದ ವಿಷಯಗಳಿಗೆ ಮೂಗು ತೂರಿಸಬೇಡಿ. ನಿಮ್ಮಲ್ಲಿ ಯಾರು ಈಗ ಮನೆ ನಿರ್ಮಾಣ ಅಥವಾ ರಿನೋವೇಷನ್ ಮಾಡಿಸುತ್ತಾ ಇದ್ದೀರಿ, ಅಂಥವರು ಮರದ ಕೆಲಸಗಳನ್ನು ಮಾಡಿಸುವುದಕ್ಕೆ ಆ ಕೆಲಸಗಳನ್ನು ಮಾಡಿಸುವಂಥವರನ್ನು ಭೇಟಿಯಾಗಿ, ಮಾತುಕತೆ ನಡೆಸುವ ಯೋಗ ಇದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದಂಥವರು ಸ್ವಲ್ಪವಾದರೂ ಮೊತ್ತವನ್ನು ಹಿಂತೆಗೆದು, ಬೇರೆ ಕಡೆಗೆ ಹೂಡಿಕೆ ಮಾಡುವ ಸಂಬಂಧ ತಜ್ಞರ ಭೇಟಿ ಮಾಡಲಿದ್ದೀರಿ. ಸ್ಟೇಷನರಿಗೆ ಸಂಬಂಧಿಸಿದ ವ್ಯವಹಾರ- ವ್ಯಾಪಾರ ಮಾಡುತ್ತಿರುವವರು ದೊಡ್ಡ ಮೊತ್ತದ ಸಾಲವನ್ನು ನೀಡದಿರುವುದು ಕ್ಷೇಮ. ಈ ದಿನ ಸಾಧ್ಯವಾದಲ್ಲಿ ಕಾಲಭೈರವ ಅಷ್ಟಕವನ್ನು ಕೇಳಿಸಿಕೊಳ್ಳಿ.
ನಿಮ್ಮ ಬಳಿ ಇರುವಂಥ ಸಣ್ಣ- ಪುಟ್ಟ ಒಡವೆಗಳು ಹಾಗೂ ಮುಖ್ಯವಾದ ದಾಖಲೆ- ಪತ್ರಗಳನ್ನು ಈ ದಿನ ಜೋಪಾನವಾಗಿ ಇರಿಸಿಕೊಳ್ಳುವುದು ಮುಖ್ಯವಾಗುತ್ತದೆ. ಒಂದು ಚಿಕ್ಕ ಮೈ ಮರೆವು ಕೂಡ ಬಹು ಕಾಲ ದುಃಖ ಪಡುವಂತೆ ಮಾಡಲಿದೆ. ಹೊಸಬರ ಜೊತೆಗೆ ವ್ಯವಹಾರ ಮಾಡುವಾಗ ಕೆಲವು ವಿಚಾರಗಳನ್ನು ಹಂಚಿಕೊಳ್ಳುವುದಕ್ಕೆ ಹೋಗಬೇಡಿ. ತಂದೆ- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಮಾಡಬೇಕಾಗುತ್ತದೆ. ಫ್ಯಾಷನ್ ಡಿಸೈನಿಂಗ್ ವೃತ್ತಿಯಲ್ಲಿ ಇರುವವರಿಗೆ ಬಹಳ ಮುಖ್ಯವಾದ ದಿನ ಇದಾಗಿರುತ್ತದೆ. ದೊಡ್ಡ ಆರ್ಡರ್ ಬರಬಹುದು ಅಥವಾ ಮದುವೆ ಮೊದಲಾದ ಸಮಾರಂಭಕ್ಕೆ ವಸ್ತ್ರ ವಿನ್ಯಾಸ ಮಾಡಿಕೊಡುವಂತೆ ಕೇಳಿಕೊಳ್ಳಬಹುದು. ವಿದ್ಯಾರ್ಥಿಗಳು ಮನೆಯಲ್ಲಿ ನಡೆಯುವಂಥ ಯಾವುದಾದರೂ ಒಂದು ಬೇಸರದ ಘಟನೆಯ ಕಾರಣಕ್ಕಾಗಿ ಓದಿನಲ್ಲಿ ಏಕಾಗ್ರತೆ ಕಳೆದುಕೊಳ್ಳುವಂತೆ ಆಗಲಿದೆ.
ನಿಮ್ಮ ಕುಟುಂಬ ಸದಸ್ಯರಿಗಾಗಿ, ಅವರಿಗೆ ಅಗತ್ಯ ಇರುವ ಆಹಾರ ಪದಾರ್ಥಗಳನ್ನು ಹೊಂದಿಸುವುದಕ್ಕೆ ಹಾಕುವಂಥ ಶ್ರಮಕ್ಕೆ ಇತರರು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಜರ್ಕಿನ್, ಸ್ವೆಟರ್, ರೂಮ್ ಹೀಟರ್, ಸಾಕ್ಸ್ ಇಂಥವುಗಳ ಖರೀದಿ ಮಾಡುವುದಕ್ಕೆ ಸಮಯ- ಹಣವನ್ನು ಮೀಸಲಿಡಲಿದ್ದೀರಿ. ಆನ್ ಲೈನ್ ಮೂಲಕವೇ ನಿಮ್ಮ ಶಾಪಿಂಗ್ ಮಾಡುವುದಾದಲ್ಲಿ ಹಣ ಪಾವತಿ ವಿಧಾನದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ. ನಿಮ್ಮಲ್ಲಿ ಕೆಲವರು ಮನೆಯಲ್ಲಿಯೇ ಹೋಮ್ ಥಿಯೇಟರ್ ಮಾಡಿಕೊಳ್ಳುವುದಕ್ಕಾಗಿ ಸಂಬಂಧಪಟ್ಟ ತಂತ್ರಜ್ಞರು ಅಥವಾ ಸಂಸ್ಥೆಯವರನ್ನು ಕರೆಸಿ ಮಾತುಕತೆ ನಡೆಸಲಿದ್ದೀರಿ. ಪ್ರೀತಿಯಲ್ಲಿ ಇರುವಂಥ ಪ್ರೇಮಿಗಳಿಗೆ ಜೊತೆಯಾಗಿ ಹೆಚ್ಚಿನ ಸಮಯವನ್ನು ಕಳೆಯುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ಕಿರು ಪ್ರವಾಸಕ್ಕಾದರೂ ತೆರಳುವ ಸಾಧ್ಯತೆ ಸಹ ಇದೆ. ಉದ್ಯೋಗಸ್ಥ ಮಹಿಳೆಯರಿಗೆ ಕೆಲವರಿಗೆ ಸ್ವಾಭಿಮಾನಕ್ಕೆ ಪೆಟ್ಟು ಬೀಳುವಂಥ ಮಾತು ಕೇಳಿಸಿಕೊಳ್ಳುವ ಸನ್ನಿವೇಶ ಎದುರಾಗುತ್ತದೆ.
ಇಷ್ಟು ಸಮಯ ಹೃದಯದಿಂದ ಆಲೋಚನೆ ಮಾಡುತ್ತಾ ಬಂದಿದ್ದನ್ನೆಲ್ಲ ಮೆದುಳಿನಿಂದ- ವಾಸ್ತವ ನೆಲೆಗಟ್ಟಿನಲ್ಲಿ ನೋಡಬೇಕು ಎಂದು ಈ ದಿನ ನಿಮ್ಮ ಮನಸ್ಸಿನಲ್ಲಿ ಗಟ್ಟಿಯಾಗಿ ಕೂರಲಿದೆ. ಫ್ರೀಲ್ಯಾನ್ಸರ್ ಆಗಿ ಆದಾಯದ ದಾರಿ ನೋಡಿಕೊಂಡಿರುವವರು ತಮ್ಮ ಕೆಲಸಕ್ಕೆ ಉಪಯುಕ್ತ ಆಗುವ ಕೆಲವು ಉಪಕರಣ- ಸಲಕರಣೆಗಳನ್ನು ಖರೀದಿ ಮಾಡುವಂಥ ಯೋಗ ಇದೆ. ನೀವೇ ಜಾರಿಗೆ ತಂದಿರುವ ಹೊಸ ಪದ್ಧತಿ ಬಗ್ಗೆ ಇತರರಿಗೆ ಹಾಗೂ ಅದಕ್ಕಿಂತ ಹೆಚ್ಚಾಗಿ ನಿಮಗೇ ಸಂತೋಷ ಆಗಲಿದೆ. ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಲ್ಲಿ ಸಕ್ರಿಯವಾಗಿ ಇರುವವರಿಗೆ ಜನಪ್ರಿಯತೆ ಹೆಚ್ಚಾಗಲಿದೆ. ಸಮಾಜದಲ್ಲಿ ಒಳ್ಳೆ ಹೆಸರು ಇರುವಂಥ ವ್ಯಕ್ತಿಗಳು ಅಥವಾ ಸಂಸ್ಥೆಗಳು ತಮ್ಮ ಪರವಾಗಿ ನೀವು ಕೆಲಸ ಮಾಡಿ ಎಂದು ಪ್ರಸ್ತಾವ ಮುಂದಿಡುವ ಸಾಧ್ಯತೆ ಇದೆ. ಜ್ಯೋತಿಷಿಗಳಿಗೆ ಆದಾಯದಲ್ಲಿ ಅನಿರೀಕ್ಷಿತವಾದ ಹೆಚ್ಚಳ ಆಗಲಿದೆ.
ನಿಮ್ಮ ಸುತ್ತಮುತ್ತ ಇರುವವರು ಬಹಳ ಸಿಟ್ಟು ತರಿಸಲಿದ್ದಾರೆ. ಹೇಗೆ ಮಾಡಬಾರದು ಮತ್ತು ಯಾವುದನ್ನು ಮಾಡಬಾರದು ಎಂಬುದನ್ನು ಜತೆಯಲ್ಲಿ ಅಥವಾ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರಿಗೆ ಸ್ಪಷ್ಟ ಮಾತುಗಳಲ್ಲಿ ನೀವು ಏನೇನು ಹೇಳಿರುತ್ತೀರೋ ಆ ಎಲ್ಲವನ್ನೂ ಮೀರಿ ನಡೆದುಕೊಂಡ ಕಾರಣಕ್ಕೆ ಸಮಸ್ಯೆ ನಿಮ್ಮ ತಲೆಗೆ ಬರಲಿದೆ. ಕುಟುಂಬದಲ್ಲಿ ನಡೆಸಬೇಕಾದ ಮದುವೆ ಅಥವಾ ಅಂಥದ್ದೇ ಕಾರ್ಯಕ್ರಮ ಆಯೋಜನೆ ವಿಚಾರದಲ್ಲಿ ಸಹ ನಿಮ್ಮ ಮಾತಿಗೆ ಕಿಮ್ಮತ್ತು ನೀಡಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣ ಆಗಬಹುದು. ಹೌಸ್ ಕೀಪಿಂಗ್ ಅಥವಾ ಸ್ವಚ್ಛತಾ ಕೆಲಸಗಳ ಮೇಲುಸ್ತುವಾರಿ ನೋಡಿಕೊಳ್ಳುವ ವೃತ್ತಿ- ಉದ್ಯೋಗದಲ್ಲಿ ಯಾರು ಇದ್ದೀರೋ ಅಂಥವರಿಗೆ ತಮಗೆ ಸಿಗುತ್ತಿರುವ ರಿಟರ್ನ್ಸ್- ಸಂಬಳದ ಬಗ್ಗೆ ಅಸಮಾಧಾನ ಮೂಡಲಿದೆ. ಎಲ್ಲ ಕಡೆಯಿಂದಲೂ ಬೇಕಂತಲೇ ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಭಾವನೆ ಬಲವಾಗಿ ಬೇರೂರಲಿದೆ.
ನಿಮ್ಮ ಪಾಲಿಗೆ ಬರುವಂಥ ಯೋಗದಿದ್ದರೆ ಅದು ಏನೇ ಆದರೂ ಬಂದೇ ಬರುತ್ತದೆ ಎಂಬ ನಂಬಿಕೆ ನಿಮ್ಮಲ್ಲಿ ಯಾರಿಗಿದೆ, ಅಂಥವರಿಗೆ ಅದು ನಿಜವಾಗುವ ದಿನ ಇದಾಗಿರುತ್ತದೆ. ಇತರರಿಗೆ ಬೇಸರ ಆಗಬಾರದು ಎಂಬ ಕಾರಣಕ್ಕೆ ಈ ಹಿಂದೆ ಯಾವ್ಯಾವ ಅವಕಾಶ ನೀವು ಬಿಟ್ಟುಕೊಟ್ಟಿರುತ್ತೀರೋ ಅವೆಲ್ಲಕ್ಕೂ ಪ್ರತಿಫಲ ದೊರೆಯುವ ಸುಳಿವು ಹಾಗೂ ಸಿಕ್ಕಿಬಿಡಲಿದೆ. ಸ್ವಭಾವತಃ ನಿಮಗೆ ನೇರವಾಗಿ ಹೇಳಿಬಿಡಬೇಕು ಎಂದು ಯಾವ ವಿಷಯಗಳೆಲ್ಲ ಅನ್ನಿಸುತ್ತಾ ಇರುತ್ತದೋ ಆ ಎಲ್ಲದರ ಬಗ್ಗೆಯೂ ಮತ್ತೊಮ್ಮೆ ಆಲೋಚಿಸುವುದಕ್ಕೆ ಆರಂಭಿಸುತ್ತೀರಿ. ನಿಮ್ಮ ಬಳಿ ಇರುವಂಥ ಹಣ ಅಂದುಕೊಂಡ ಕೆಲಸ- ಕಾರ್ಯಗಳನ್ನು ಪೂರ್ಣ ಮಾಡುವುದಕ್ಕೆ ಸಾಲುವುದಿಲ್ಲ ಎಂದು ನಿಮ್ಮಲ್ಲಿ ಕೆಲವರಿಗೆ ಅನಿಸಲಿದೆ. ಒಂದು ವೇಳೆ ನೀವು ವ್ಯಾಪಾರ- ವ್ಯವಹಾರ ಮಾಡುವಂಥವರಾಗಿದ್ದಲ್ಲಿ ಓವರ್ ಡ್ರಾಫ್ಟ್ ತೆಗೆದುಕೊಳ್ಳುವುದಕ್ಕೆ ಅಥವಾ ಮ್ಯೂಚುವಲ್ ಫಂಡ್, ಎಲ್ಐಸಿ ಪಾಲಿಸಿ ಮೇಲೆ ಹಣವನ್ನು ಸಾಲ ಪಡೆಯುವುದಕ್ಕೆ ಆಲೋಚಿಸುತ್ತೀರಿ.
ಲೇಖನ- ಎನ್.ಕೆ.ಸ್ವಾತಿ