
ನೀವು ಬಹಳ ಪ್ರೀತಿಸುವ ವ್ಯಕ್ತಿಗಳನ್ನು ಈ ದಿನ ತುಂಬ ನೆನಪು ಮಾಡಿಕೊಳ್ಳಲಿದ್ದೀರಿ. ಬಿಡುವೇ ಸಿಗದಷ್ಟು ಕೆಲಸಗಳಲ್ಲಿ ಮುಳುಗಿ ಹೋಗುವಂತೆ ಆಗಲಿದ್ದು, ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಸಹ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಲಿದೆ. ಮಾರ್ಕೆಟಿಂಗ್- ಜಾಹೀರಾತು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಹುದ್ದೆಯಲ್ಲಿ ಬಡ್ತಿ ಸಿಗುವ ಬಗ್ಗೆ ಮಾಹಿತಿ ಸಿಗಲಿದೆ. ರಾಜಕಾರಣಿಗಳಿಗೆ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಮಹತ್ವಾಕಾಂಕ್ಷೆಯಿಂದ ನಡೆಸುವಂಥ ಸಮಾವೇಶದ ಮುಂದಾಳತ್ವ ನೀವೇ ವಹಿಸಬೇಕು, ಅದರ ಸಂಘಟನೆ, ಜನ ಸೇರಿಸುವುದು ಸೇರಿದಂತೆ ಇತರ ಕೆಲಸಗಳ ಹೊಣೆ ನೀವೇ ಹೊರಬೇಕು ಎಂದು ಸಹ ಸೂಚನೆ ಬರಲಿದೆ. ಸ್ಥೂಲಕಾಯದಿಂದ ಬಳಲುತ್ತಾ ಇರುವವರು ಸೂಕ್ತ ವೈದ್ಯೋಪಚಾರ ಪಡೆಯುವ ಕಡೆಗೆ ಗಮನ ನೀಡಲಿದ್ದೀರಿ. ಸರ್ಜರಿ ಮೂಲಕ ದೇಹದ ತೂಕ ಇಳಿಸುವುದಕ್ಕೆ ನಿಮ್ಮಲ್ಲಿ ಕೆಲವರು ನಿರ್ಧಾರ ಮಾಡುತ್ತೀರಿ.
ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಾ ನೀವು ಒಪ್ಪಿಸಿದ ಕೆಲಸಗಳನ್ನು ಆಗ- ಈಗ ಎಂದು ಮುಂದಕ್ಕೆ ಹಾಕುತ್ತಾ ಇರುವವರ ಬಳಿ ಗೆರೆ ಕೊಯ್ದಂತೆ ಮಾತನಾಡಲಿದ್ದೀರಿ. ಒಂದು ವೇಳೆ ಈಗಾಗಲೇ ಆ ಕೆಲಸದ ಸಲುವಾಗಿ ಅಡ್ವಾನ್ಸ್ ರೂಪದಲ್ಲಿ ಹಣವನ್ನು ನೀಡಿದ್ದಲ್ಲಿ ಅದನ್ನು ಹಿಂತಿರುಗಿಸುವಂತೆ ಕೇಳಲಿದ್ದೀರಿ. ನಿಮ್ಮ ಸ್ನೇಹಿತರ ಪೈಕಿ ಒಬ್ಬರು ತಮಗೆ ಸಾಲದ ಅಗತ್ಯ ಇದ್ದು, ಜಾಮೀನು ನೀವು ನೀಡಬೇಕು ಎಂದು ಕೇಳಿಕೊಂಡು ಬರಬಹುದು. ಆಟೋ ಚಾಲಕರು ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಹೆಚ್ಚಿನ ಮೊತ್ತದ ದಂಡವನ್ನು ಪಾವತಿಸುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮಲ್ಲಿ ಕೆಲವರಿಗೆ ಗಂಭೀರ ಸ್ವರೂಪದಲ್ಲಿ ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಲಿದ್ದು, ವೈದ್ಯರನ್ನು ಭೇಟಿ ಮಾಡಲೇಬೇಕು ಎಂಬ ಪರಿಸ್ಥಿತಿ ಎದುರಾಗಲಿದೆ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ವಿವಿಧ ಅವಕಾಶಗಳು ದೊರೆಯಲಿವೆ.
ಇತರರಿಗೆ ಹೊಳೆಯದ ಕೆಲವು ಸಂಗತಿಗಳು ನಿಮಗೆ ಸುಲಭವಾಗಿ ಮಾಡಿ ಮುಗಿಸುವುದಕ್ಕೆ ದಾರಿಗಳು ಗೋಚರ ಆಗಲಿವೆ. ನಿಮ್ಮನ್ನು ಯಾವುದಾದರೂ ಹಗರಣದಲ್ಲಿ ಸಿಲುಕಿಸಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರು ತಾವೇ ತೊಂದರೆಗೆ ಸಿಕ್ಕಿ ಹಾಕಿಕೊಳ್ಳಲಿದ್ದಾರೆ. ನಿಮ್ಮ ವೃತ್ತಿ ಅಥವಾ ಉದ್ಯೋಗಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಸಹಾಯ ಆಗುವಂಥ ಮಾಹಿತಿಗಳು ದೊರೆಯಲಿವೆ. ನಿಮ್ಮಲ್ಲಿ ಯಾರು ಕಮಿಷನ್ ಆಧಾರದಲ್ಲಿ ಕೆಲಸ ಮಾಡುತ್ತಾ ಇದ್ದೀರಿ, ಅಂಥವರಿಗೆ ಪ್ರಭಾವಶಾಲಿ ಆದ ವ್ಯಕ್ತಿಯೊಬ್ಬರ ಮೂಲಕ ಹಲವು ಸಂಸ್ಥೆಗಳ ಸಂಪರ್ಕ ದೊರೆಯಲಿದ್ದು, ಆದಾಯದ ಪ್ರಮಾಣ ಹೆಚ್ಚು ಮಾಡಿಕೊಳ್ಳಲು ಬಾಗಿಲು ತೆರೆದುಕೊಳ್ಳಲಿದೆ. ಇನ್ನು ನಿಮ್ಮಲ್ಲಿ ಕೆಲವರು ಸಂಗಾತಿಯ ಸಲುವಾಗಿ ಕೆಲವು ದುಬಾರಿ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಅಚಾನಕ್ಕಾಗಿ ದೂರ ಪ್ರಯಾಣ ಮಾಡಲೇ ಬೇಕಾದ ಸನ್ನಿವೇಶಗಳು ಸೃಷ್ಟಿ ಆಗಲಿದ್ದು, ಇದಕ್ಕಾಗಿ ಹೆಚ್ಚಿನ ಖರ್ಚು ಸಹ ಆಗಲಿದೆ.
ಚಿಕ್ಕ- ಪುಟ್ಟ ಕಟ್ಟಡ ದುರಸ್ತಿ ಕಾರ್ಯಗಳನ್ನು ಮಾಡಿಸುತ್ತಾ ಇರುವವರಿಗೆ ದೊಡ್ಡ ಕೆಲಸವೊಂದು ಈ ದಿನ ದೊರೆಯುವಂಥ ಯೋಗ ಇದೆ. ಈ ಹಿಂದೆ ನೀವು ವ್ಯಕ್ತಿಯೊಬ್ಬರಿಗೆ ಮಾಡಿಕೊಟ್ಟ ಕೆಲಸ ಹಾಗೂ ಆ ಸಮಯದಲ್ಲಿ ನೀವು ಪಟ್ಟ ಶ್ರಮ, ತೋರಿಸಿದ ನಿಷ್ಠೆ- ಪ್ರಾಮಾಣಿಕತೆಗೆ ಫಲ ದೊರೆಯಲಿದೆ. ಯಾವುದೇ ವಿಚಾರದಲ್ಲೂ ಅತುರ ಮಾಡಬೇಡಿ. ನಿಮ್ಮ ಎದುರಿಗೆ ಇರುವಂಥವರು ಪೂರ್ಣವಾಗಿ ಮಾತು ಮುಗಿಸುವ ತನಕ ಕೇಳಿಸಿಕೊಳ್ಳಿ. ಹೇಳಿದ್ದನ್ನೇ ಹೇಳುತ್ತಾ ಇದ್ದಾರೆ ಎಂದೆನಿಸಿದರೂ ಮಧ್ಯೆ ಮಾತಾಡುವುದಕ್ಕೋ ಅಥವಾ ನಿಮಗೆ ಇವೆಲ್ಲ ಗೊತ್ತಿದೆ ಅಂತಲೋ ಹೇಳುವುದಕ್ಕೆ ಹೋಗಬೇಡಿ. ನರಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಾ ಇರುವವರಿಗೆ ಸಮಸ್ಯೆ ತೀವ್ರವಾಗಲಿದೆ. ಈಗ ಔಷಧ ತೆಗೆದುಕೊಳ್ಳುತ್ತಾ ಇದ್ದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಾ ಇಲ್ಲ ಎಂಬ ಕಾರಣಕ್ಕೆ ಅದರಲ್ಲಿ ಬದಲಾವಣೆ ಮಾಡಬೇಕು ಎಂಬ ಸಲಹೆಯನ್ನು ವೈದ್ಯರು ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: ನವೆಂಬರ್ 23ರಿಂದ 29 ರವರೆಗೆ ರಾಶಿ ಭವಿಷ್ಯ: ಆನಂದದಿಂದ ಕರ್ತವ್ಯ ನಿರ್ವಹಿಸಿದರೆ ಲಾಭ ಖಚಿತ
ಇತರರಿಗೆ ನಿಮ್ಮ ಸಹಾಯದ ಅಗತ್ಯ ತೀವ್ರವಾಗಿರುತ್ತದೆ. ನಿಮ್ಮ ಜೊತೆ ವ್ಯಾಜ್ಯ- ಜಗಳ ಇರುವವರು ರಾಜೀ- ಸಂಧಾನಕ್ಕೆ ಪ್ರಯತ್ನ ಮಾಡಲಿದ್ದಾರೆ. ಅವರ ಪ್ರಸ್ತಾವಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡುವುದು ಮುಖ್ಯವಾಗುತ್ತದೆ. ನಿಮಗಿಂತ ಕಿರಿಯ ವಯಸ್ಸಿನವರಿಗೆ ಹೊಸ ಬಟ್ಟೆಗಳನ್ನು ಕೊಡಿಸಲಿದ್ದೀರಿ. ನಿರ್ದಿಷ್ಟ ಸಮಯದೊಳಗೆ ಕೆಲವು ಕಾರ್ಯಗಳನ್ನು ಮುಗಿಸಿಕೊಡುವ ಮಾತು ನೀಡಿದ್ದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯ ಆಗುವುದಿಲ್ಲ ಎಂದು ಹೇಳುವ ಸಾಧ್ಯತೆ ಇದೆ. ಒಂದೇ ಕೆಲಸಕ್ಕೆ ನಾಲ್ಕಾರು ಸಲ ಓಡಾಡುವಂತೆ ಆಗಲಿದ್ದು, ನೀವು ಯಾವ ಕಾರ್ಯಕ್ಕೆ ಪ್ರಯತ್ನ ಮಾಡುತ್ತಿದ್ದೀರಿ ಅದರ ಎಲ್ಲ ದಾಖಲೆ- ಪತ್ರಗಳು ಇವೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ನಿಮ್ಮಲ್ಲಿ ಕೆಲವರಿಗೆ ತೀವ್ರ ಬಗೆಯಲ್ಲಿ ಹಲ್ಲು ನೋವು ಕಾಡಬಹುದು. ಈ ಸಮಸ್ಯೆಗೆ ಮನೆ ಮದ್ದು ಮಾಡುವುದಕ್ಕಿಂತ ವೈದ್ಯರ ಭೇಟಿ ಮಾಡಿ, ಔಷಧೋಪಚಾರ ಮಾಡಿಕೊಳ್ಳುವುದು ಕ್ಷೇಮ.
ನಿಮ್ಮಲ್ಲಿ ಕೆಲವರು ಮನೆಯಲ್ಲಿ ಸಮಾರಂಭ- ಕಾರ್ಯಕ್ರಮ ಆಯೋಜಿಸುವಂಥ ಯೋಗ ಇದೆ. ನಿಮ್ಮ ಸಂಬಂಧಿಗಳ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಂದೆ ನಿಂತು ಕೆಲಸ- ಕಾರ್ಯ ಮಾಡಬೇಕಾದ ಜವಾಬ್ದಾರಿ ವಹಿಸುವ ಸಾಧ್ಯತೆಯಾದರೂ ಇದೆ. ಹಣಕಾಸು ವಿಚಾರದಲ್ಲಿ ವೇಗವಾಗಿ ನಿರ್ಧಾರಗಳನ್ನು ಈ ದಿನ ತೆಗೆದುಕೊಳ್ಳ ಬಾರದು. ಷೇರು- ಮ್ಯೂಚುವಲ್ ಫಂಡ್ ಹೂಡಿಕೆಗೆ ಸಲಹೆ ನೀಡುವಂಥ ಫೈನಾನ್ಷಿಯಲ್ ಅಡ್ವೈಸರ್- ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುವವರಿಗೆ ಸ್ವಲ್ಪ ಮಟ್ಟಿಗೆ ಒತ್ತಡದ ದಿನ ಆಗಿರುತ್ತದೆ. ಕಣ್ತಪ್ಪಿನಿಂದ ಆದ ಸಮಸ್ಯೆಯನ್ನು ಬಗೆಹರಿಸಲು ಕಲಿತ ವಿದ್ಯೆ- ಬುದ್ಧಿಯನ್ನೆಲ್ಲ ಖರ್ಚು ಮಾಡುವಂತೆ ಆಗಲಿದೆ. ನಿಮ್ಮ ಜವಾಬ್ದಾರಿ ಇತರರಿಗೆ ವರ್ಗಾಯಿಸಬೇಡಿ. ಸಂಖ್ಯೆಗಳನ್ನು ಒಂದಕ್ಕೆ ನಾಲ್ಕು ಬಾರಿಗೆ ಪರೀಕ್ಷೆ ಮಾಡಿದ ನಂತರದಲ್ಲಿ ವ್ಯವಹಾರ ಮಾಡಿ. ಮೃದುವಾದ ಆಹಾರ ಪದಾರ್ಥಗಳ ಸೇವನೆಗೆ ಈ ದಿನ ಆದ್ಯತೆಯನ್ನು ನೀಡಿ. ಗಟ್ಟಿಯಾದ ಆಹಾರ ಪದಾರ್ಥಗಳಿಂದ ದೂರವಿರಿ.
ಆದಾಯ ಜಾಸ್ತಿ ಮಾಡಿಕೊಳ್ಳಲು ಹಲವು ರೀತಿ ಪ್ರಯತ್ನಗಳನ್ನು ಮಾಡಲಿದ್ದೀರಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರು, ಬರವಣಿಗೆ ಮೂಲಕ ಆದಾಯ ಪಡೆಯುವವರು ಇಂಥವರಿಗೆ ಹೊಸ ಅವಕಾಶಗಳು ಹುಡುಕಿ ಬರಲಿವೆ. ಮಕ್ಕಳ ಅನಾರೋಗ್ಯ ಸಮಸ್ಯೆ ಚಿಂತೆ ತಂದೊಡ್ಡಲಿದೆ. ಶೀತ, ಕಫ, ಕೆಮ್ಮು ಈ ರೀತಿಯ ತೊಂದರೆಗಳು ಜಾಸ್ತಿ ಆಗಲಿದ್ದು, ವೈದ್ಯರಿಗೆ ತೋರಿಸಿದ ನಂತರದಲ್ಲಿಯೂ ಹತೋಟಿಗೆ ಬಾರದೆ ಆತಂಕಕ್ಕೆ ಕಾರಣ ಆಗಲಿದೆ. ಹೆಣ್ಣುಮಕ್ಕಳ ಜೊತೆ ಮಾತನಾಡುವಾಗ, ಅದರಲ್ಲಿಯೂ ನಿಮ್ಮ ಸಹೋದ್ಯೋಗಿಗಳ ಜೊತೆಗೆ ಮಾತನಾಡುವಾಗ ಬಳಕೆ ಮಾಡುವ ಪದಗಳ ಬಗ್ಗೆ ಜಾಗ್ರತೆಯಿಂದ ಇರಿ. ಅತ್ಯುತ್ಸಾಹದಲ್ಲೋ ಅಥವಾ ತಮಾಷೆ ಎಂದುಕೊಂಡು ನೀವಾಡಿದ ಮಾತುಗಳಿಂದ ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ತನಕ ಹೋಗಬಹುದು. ಯಾವ ಉದ್ದೇಶಕ್ಕೆ ಹಣವನ್ನು ಉಳಿತಾಯ ಅಥವಾ ಹೂಡಿಕೆ ಮಾಡಿದ್ದೀರೋ ಆ ಮೊತ್ತವನ್ನು ಉದ್ದೇಶಿತ ಕಾರ್ಯಗಳಿಗೇ ಬಳಸಿಕೊಳ್ಳಿ.
ಮರಳು, ಇಟ್ಟಿಗೆ, ಸಿಮೆಂಟ್ ಮಾರಾಟದಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ. ಇನ್ನು ಯಾರು ಮನೆ ನಿರ್ಮಾಣದ ಕಾಂಟ್ರಾಕ್ಟ್ ತೆಗೆದುಕೊಂಡು ಕೆಲಸ ಮಾಡಿಸುತ್ತೀರೋ ಅಂಥವರಿಗೆ ಹೊಸ ಕೆಲಸವೊಂದು ಸ್ನೇಹಿತರ ಮೂಲಕ ಬರಲಿದೆ. ಸಿವಿಲ್ ಎಂಜಿನಿಯರ್ ಗಳಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗದ ಆಫರ್ ಬರಲಿದೆ. ಅಥವಾ ಈ ಹಿಂದೆ ಇಂಟರ್ ವ್ಯೂ ತೆಗೆದುಕೊಂಡಿದ್ದಲ್ಲಿ ಅದರಲ್ಲಿ ಆಯ್ಕೆ ಆಗಿರುವ ಬಗ್ಗೆ ಮಾಹಿತಿ ಬರಲಿದೆ. ಹಳೇ ಸ್ನೇಹ- ಪರಿಚಯಗಳನ್ನು ಮತ್ತೊಮ್ಮೆ ಮುಂದುವರಿಸಲು ಬೇಕಾದ ವೇದಿಕೆಯೊಂದು ಈ ದಿನ ನಿಮಗೆ ಸಿಗಲಿದೆ. ಹಣದ ವಿಚಾರಕ್ಕೆ ಸೋದರ- ಸೋದರಿಯರ ಜೊತೆಗೆ ಇರುವ ಅಭಿಪ್ರಾಯ ಭೇದಗಳನ್ನು ಬಗೆಹರಿಸಿಕೊಳ್ಳಲು ತಂದೆ- ತಾಯಿ ಸಹಾಯ ಮಾಡಲಿದ್ದಾರೆ. ದೂರ ಪ್ರಯಾಣ ಮಾಡುವುದರಿಂದ ನಿಮ್ಮಲ್ಲಿ ಕೆಲವರಿಗೆ ದೈಹಿಕವಾಗಿ ಒತ್ತಡ ಏರ್ಪಡಲಿದೆ. ಇತರರ ವೈಯಕ್ತಿಕ ವಿಷಯಗಳಿಗೆ ತಲೆ ಹಾಕಬೇಡಿ.
ನಿಮಗೆ ಗೊತ್ತಿರುವುದು ಮಾತ್ರ ಹೇಳ್ತೀನಿ ಎಂಬ ಮನಸ್ಥಿತಿಯಲ್ಲಿ ನೀವು ಇರುತ್ತೀರಿ. ಆದರೆ ತಮಗೆ ಏನು ಬೇಕೋ ಅದನ್ನು ತಿಳಿದು, ಆ ನಂತರ ಹೇಳಬೇಕು ಎಂದು ನೀವು ಕೆಲಸ ಮಾಡುವಂಥ ಉದ್ಯೋಗದಾತರು, ನಿಮ್ಮಿಂದ ಸೇವೆ ಪಡೆಯುವ ಕ್ಲೈಂಟ್ ಗಳು ಒತ್ತಡ ಹಾಕಲಿದ್ದಾರೆ. ಪೊಂಜಿ ಯೋಜನೆಗಳಿಂದ ದೂರ ಇರುವುದು ಬಹಳ ಮುಖ್ಯ. ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ರಿಟರ್ನ್ಸ್ ಸಿಗುತ್ತದೆ ಎಂಬ ಆಸೆ ತೋರಿಸಿ, ನಿಮ್ಮ ಸ್ನೇಹಿತರೋ ಸಂಬಂಧಿಗಳೋ ನಿಮಗಿಂತ ಮೇಲಿನ ಹುದ್ದೆಯಲ್ಲಿ ಕೆಲಸ ಮಾಡುವಂಥವರೋ ಒತ್ತಾಯ ಮಾಡಿದಲ್ಲಿ ಅಂಥವುಗಳಿಂದ ದೂರ ಉಳಿಯುವುದು ಸವಾಲಾಗಲಿದೆ. “ಇಲ್ಲ” ಎಂಬುದನ್ನು ಗಟ್ಟಿಯಾಗಿ ಹೇಳಿ. ಬಾಯಿ ರುಚಿಗೆ ಬಿದ್ದು, ನಿಮ್ಮ ದೇಹ ಪ್ರಕೃತಿಗೆ ಒಗ್ಗದ ಖಾದ್ಯ- ತಿನಿಸುಗಳನ್ನು ಸೇವಿಸಿ, ಕೆಲವು ದೈಹಿಕ ತೊಂದರೆ ಅನುಭವಿಸುವಂತೆ ಆಗಲಿದೆ. ಎಚ್ಚರಿಕೆ ವಹಿಸಿ.
ಲೇಖನ- ಎನ್.ಕೆ.ಸ್ವಾತಿ