
ಸಂತೋಷವೋ ಸಂಭ್ರಮವೋ ಅಥವಾ ಭಾವನಾತ್ಮಕ ಕ್ಷಣಗಳೋ ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ಇರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಭಾವನಾತ್ಮಕ ಕ್ಷಣಗಳಲ್ಲಿ ಯಾರಿಗೂ ಮಾತು ನೀಡುವುದಕ್ಕೆ ಹೋಗಬೇಡಿ. ಕಡಿಮೆ ಖರ್ಚಿನಲ್ಲಿ ಉಡುಗೊರೆ ನೀಡಬೇಕು ಎಂದು ನೀವು ಅಂದುಕೊಂಡಿರುತ್ತೀರಿ, ನಾನಾ ಕಾರಣಗಳಿಂದ ಅದು ಬಜೆಟ್ ಮೀರಿ ಹೋಗುವಂತೆ ಆಗಲಿದೆ. ಆರ್ಥಿಕವಾಗಿ ನಿಮಗಿಂತ ಅನುಕೂಲಸ್ಥರಾಗಿ ಇರುವವರ ಜೊತೆಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ಹಣವನ್ನು ಮಾನದಂಡವಾಗಿ ಇರಿಸಿಕೊಂಡು ಕೆಲವರು ನಿಮ್ಮನ್ನು ನಿರ್ಲಕ್ಷ್ಯ- ತಿರಸ್ಕಾರ ಭಾವನೆಯಿಂದ ನೋಡುತ್ತಾರೆ ಎಂಬ ಭಾವನೆ ಮನದಲ್ಲಿ ಗಟ್ಟಿಯಾಗಿ ಕೂರಲಿದೆ. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಡುವ ಮುನ್ನ ಹನುಮಾನ್ ಚಾಲೀಸಾ ಕೇಳಿಸಿಕೊಳ್ಳುವುದು ಅಥವಾ ಪಠಿಸುವುದರಿಂದ ಹಲವು ನಕಾರಾತ್ಮಕ ಬೆಳವಣಿಗೆಗಳು ದೂರವಾಗುತ್ತವೆ.
ಕಡಿಮೆ ಬೆಲೆಗೆ ಸಿಗುತ್ತಿದೆ ಎಂಬ ಕಾರಣಕ್ಕೆ ನಿಮಗೆ ಅಗತ್ಯವೇ ಇಲ್ಲದಿದ್ದರೂ ಕೆಲವು ವಸ್ತುಗಳನ್ನು ಈ ದಿನ ಖರೀದಿ ಮಾಡುವಂತೆ ಆಗಲಿದೆ. ಇನ್ನು ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಅಂತಾದರೆ ಇನ್ನೂ ಹೆಚ್ಚು ಮುಂಜಾಗ್ರತೆ ತೆಗೆದುಕೊಳ್ಳಬೇಕು. ನೀವಾಗಿಯೇ ದುಂಬಾಲು ಬಿದ್ದು ವಹಿಸಿಕೊಂಡಂಥ ಕೆಲಸಗಳನ್ನು ಗಡುವಿನೊಳಗೆ ಮುಗಿಸಿಕೊಡುವುದಕ್ಕೆ ಪ್ರಯತ್ನಿಸಿ. ನಿಮ್ಮಲ್ಲಿ ಯಾರು ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಅಂಥವರು ಸೋಷಿಯಲ್ ಮೀಡಿಯಾದಲ್ಲಿ ಹಾಕುವಂಥ ಪೋಸ್ಟ್ ನಿಂದಲೋ ಅಥವಾ ಮಾಧ್ಯಮಗಳ ಎದುರಿಗೆ ನೀವು ಆಡಿದ ಮಾತಿನಿಂದ ಕೆಲವು ವಿವಾದಕ್ಕೆ ಸಿಲುಕಿಕೊಳ್ಳುವಂತೆ ಆಗಲಿದೆ. ಆಕಸ್ಮಿಕವಾಗಿ ನಿಮಗೆ ಪರಿಚಯ ಆದಂಥ ವ್ಯಕ್ತಿಯೊಬ್ಬರ ಒಡನಾಟದಿಂದ ಉದ್ಯೋಗಕ್ಕೆ ಸಂಬಂಧಿಸಿದ ಕೆಲವು ಮುಖ್ಯವಾದ ರೆಫರೆನ್ಸ್ ಗಳು ದೊರೆಯುವ ಯೋಗ ಇದೆ. ನಿಮ್ಮ ಜೊತೆಯಲ್ಲಿ ಉದ್ಯೋಗ ಮಾಡುವವರು ಸಹಾಯ ಕೇಳಿಕೊಂಡು ಬಂದಲ್ಲಿ ಅವರಿಗೆ ಸ್ಪಂದಿಸಿ.
ನಿಮಗೆ ಮಾತು ನೀಡಿದವರು ಇನ್ಯಾರಿಗೋ ಅನುಕೂಲ ಮಾಡಿಕೊಡುವ ಸಲುವಾಗಿ ನೀಡಿದ್ದ ಭರವಸೆ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಹೇಳಲಿದ್ದಾರೆ. ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿ, ಮಾಡಿಕೊಂಡ ಸಿದ್ಧತೆ ವ್ಯರ್ಥ ಆಗುತ್ತದೆ ಎಂಬುದು ನಿಮ್ಮನ್ನು ಚಿಂತೆಗೆ ಗುರಿ ಮಾಡಲಿದೆ. ಎರಡು ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಇದ್ದಲ್ಲಿ ಅವರ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚಿನ ವೆಚ್ಚ ಆಗಲಿದೆ. ಅಜೀರ್ಣ, ವಿಪರೀತ ಜ್ವರ ಈ ರೀತಿ ತೊಂದರೆಗಳು ಮಕ್ಕಳಿಗೆ ಕಾಣಿಸಿಕೊಂಡಲ್ಲಿ ಕೂಡಲೇ ಸೂಕ್ತ ವೈದ್ಯೋಪಚಾರ ಕೊಡಿಸುವ ಕಡೆಗೆ ಗಮನವನ್ನು ನೀಡಿ. ಸಾವಕಾಶವಾಗಿ ಮಾತನಾಡಿ, ಬಗೆಹರಿಸಿದರಾಯಿತು ಎಂದುಕೊಂಡ ಸಮಸ್ಯೆಯೊಂದು ವಿಕೋಪಕ್ಕೆ ಹೋಗುವುದರಿಂದ ಬಹಳ ಹಿಂಸೆ ಆಗಲಿದೆ. ಯಾವ ವ್ಯಕ್ತಿ ನಿಮ್ಮ ಮಾತನ್ನು ಮೀರುವುದಿಲ್ಲ ಎಂದು ಅಂದುಕೊಂಡಿರುತ್ತೀರೋ ಅಂಥವರೇ ಧ್ವನಿ ಏರಿಸಿ, ನಿಮ್ಮ ಅಭಿಪ್ರಾಯಗಳಿಗೆ- ಸಲಹೆಗಳಿಗೆ ವಿರುದ್ಧವಾಗಿ ಮಾತನಾಡಲಿದ್ದಾರೆ.
ಹಣಕಾಸಿನ ಹರಿವು ನೀವು ನಿರೀಕ್ಷೆಗೂ ಮೀರಿ ಸರಾಗವಾಗಿ ಆಗಲಿದೆ. ನಿಮ್ಮಲ್ಲಿ ಕೆಲವರು ಸಂಗೀತ ಅಥವಾ ಸಂಗೀತದ ಸಾಧನಗಳನ್ನು ಕಲಿಯುವುದಕ್ಕೆ ಸೇರಿಕೊಳ್ಳುವ ನಿರ್ಧಾರ ಮಾಡುವ ಯೋಗ ಇದೆ. ಅತಿಯಾದ ಖಾರದ ಪದಾರ್ಥಗಳನ್ನು ಸೇವನೆ ಮಾಡುವ ರೂಢಿ ಇರುವವರು ಈ ದಿನ ಸಾಧ್ಯವಾದಷ್ಟು ಆ ರೀತಿ ಆಹಾರ ಪದಾರ್ಥಗಳಿಂದ ದೂರ ಇರುವುದು ಕ್ಷೇಮ. ನಿಮ್ಮಲ್ಲಿ ಯಾರು ಈಗಿರುವ ಹುದ್ದೆಯಿಂದ ಕೆಳಗೆ ಇಳಿಯಬೇಕು ಅಂದುಕೊಳ್ಳುತ್ತಾ ಇರುತ್ತೀರೋ ಅಂಥವರು ಆ ಹುದ್ದೆಗೆ ಮುಂದೆ ಯಾರನ್ನು ನೇಮಿಸಬೇಕು ಎಂಬ ಬಗ್ಗೆ ಆಪ್ತರಾದವರ ಜೊತೆಗೆ ಚರ್ಚೆಯನ್ನು ಮಾಡಲಿದ್ದೀರಿ. ಈಗಾಗಲೇ ಇಂಟರ್ ವ್ಯೂ ನೀಡಿಯಾಗಿದೆ, ಅದರ ಫಲಿತಾಂಶ ಏನಾಗಿದೆ ಎಂಬುದು ತಿಳಿದಿಲ್ಲ ಎಂದಾಗಿದ್ದಲ್ಲಿ ಆ ಬಗ್ಗೆ ಅಪ್ ಡೇಟ್ ದೊರೆಯುವ ಸಾಧ್ಯತೆ ಇದೆ. ತಾಯಿ ಅಥವಾ ತಾಯಿ ಸಮಾನರಾದವರ ಅನಾರೋಗ್ಯ ಸಮಸ್ಯೆ ನಿಮ್ಮ ಆತಂಕಕ್ಕೆ ಕಾರಣವಾಗಲಿದೆ.
ನಿಮ್ಮಲ್ಲಿ ಕೆಲವರಿಗೆ ಈ ದಿನ ಭಾವನೆಗಳ ಏರಿಳಿತ ಇರುತ್ತದೆ. ಇನ್ನು ನಿಮಗೆ ದೊರೆಯುವ ಯಶಸ್ಸನ್ನು ಹೇಗೆ ನಿಭಾಯಿಸಬೇಕು ಎಂಬುದು ಕೂಡ ಗೊಂದಲ ತಂದೊಡ್ಡುತ್ತದೆ. ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಂಥ ಸಂಸ್ಥೆಗಳಲ್ಲಿ ಉಪನ್ಯಾಸ ನೀಡುವಂತೆ ನಿಮಗೆ ಆಹ್ವಾನ ಬರುವ ಯೋಗ ಇದೆ. ಪ್ರೀತಿಯಲ್ಲಿ ಇರುವವರು ನೀವು ಪ್ರೀತಿಸುವ ವ್ಯಕ್ತಿಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಮಾಡಿಕೊಡುವುದಕ್ಕೆ ಹೆಚ್ಚು ಸಮಯವನ್ನು ಮೀಸಲಿಡಲಿದ್ದೀರಿ. ಗುರು ಸಮಾನರಾದ ವ್ಯಕ್ತಿಯೊಬ್ಬರು ದೊಡ್ಡ ಹುದ್ದೆಯೊಂದಕ್ಕೆ ನಿಮ್ಮ ಹೆಸರು ಸೂಚಿಸಲಿದ್ದಾರೆ. ಹೀಗೆ ನಿಮ್ಮ ಹೆಸರು ಪ್ರಸ್ತಾವ ಮಾಡಿರುವ ಬಗ್ಗೆ ನಿಮಗೂ ತಿಳಿಸಲಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸ ಇರುವವರು ಈಗ ವಾಸ ಇರುವಂಥ ಮನೆಗಿಂತ ದೊಡ್ಡದನ್ನು ಹುಡುಕುವುದಕ್ಕೆ ಆರಂಭಿಸಲಿದ್ದೀರಿ, ನೀವು ಅಂದುಕೊಳ್ಳುತ್ತಿದ್ದ ರೀತಿಯ ಮನೆ ಸಿಕ್ಕುಬಿಡುವ ಸಾಧ್ಯತೆಯೂ ಹೆಚ್ಚಿದೆ.
ಕುಟುಂಬ ಸದಸ್ಯರಿಗೆ ನಿಮ್ಮ ಅಗತ್ಯ ವಿಪರೀತ ಹೆಚ್ಚಾಗಿ ಇರುತ್ತದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ಕಾರ್ಯಕ್ರಮ- ಸಮಾರಂಭಗಳು ನಡೆಯುತ್ತಿರುವ ಸ್ಥಳಕ್ಕೆ ಕರೆದುಕೊಂಡು ಹೋಗುವುದು ಹೀಗೆ ಒಂದಲ್ಲ ಒಂದು ರೀತಿ ಅವರಿಗೆ ನಿಮ್ಮ ಸಹಾಯ ಬೇಕಾಗಲಿದೆ. ನೀವು ವಿವಾಹ ವಯಸ್ಕರಾಗಿದ್ದು ಸಂಬಂಧಿಗಳ ಕಾರ್ಯಕ್ರಮವೊಂದಕ್ಕೆ ತೆರಳಿದ್ದಲ್ಲಿ ವ್ಯಕ್ತಿಯೊಬ್ಬರು ಇಷ್ಟವಾಗಿ, ಅದು ಮದುವೆ ಹಂತದ ತನಕ ಮುಂದುವರಿಯುವ ಯೋಗ ಇದೆ. ಐತಿಹಾಸಿಕ ಮಹತ್ವ ಇರುವಂಥ ಹಳೇ ವಸ್ತುಗಳ ಸಂಗ್ರಹವನ್ನೇ ಹವ್ಯಾಸ ಮಾಡಿಕೊಂಡಿದ್ದೀರಿ ಅಂತಾದಲ್ಲಿ ಬಹಳ ಕಾಲದಿಂದ ನೀವು ಯಾವ ವಸ್ತುಗಳಿಗೆ ಹುಡುಕಾಟ ನಡೆಸುತ್ತಿದ್ದರೋ ಅದು ದೊರೆಯಲಿದೆ ಅಥವಾ ಇಂಥಲ್ಲಿ ಇದ್ದು, ಅಲ್ಲಿ ಪ್ರಯತ್ನಿಸಿದರೆ ಸಿಗುತ್ತದೆ ಎಂಬ ಮಾಹಿತಿಯಾದರೂ ಸಿಗುತ್ತದೆ. ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಚೂಪಾದ ವಸ್ತುಗಳನ್ನು ಬಳಸುವಾಗ ಎಚ್ಚರಿಕೆ ವಹಿಸಿ.
ನಿಮ್ಮಲ್ಲಿ ಕೆಲವರು ಅಂದುಕೊಳ್ಳದ ರೀತಿಯಲ್ಲಿ ಪ್ರಯಾಣಕ್ಕೆ ತೆರಳಬೇಕು ಎಂಬ ಪರಿಸ್ಥಿತಿ ಬರಲಿದೆ. ಅಥವಾ ನಿಮ್ಮ ಬಂಧುಗಳೋ- ಸ್ನೇಹಿತರೋ ತಮ್ಮ ಜೊತೆಗೆ ನೀವು ಬರಲೇಬೇಕು ಎಂದು ಒತ್ತಾಯ ಮಾಡಿ, ಕರೆದುಕೊಂಡು ಹೋಗಲಿದ್ದಾರೆ. ನಿಮಗೆ ಖಚಿತವಾಗಿಯೂ ಗೊತ್ತಿದೆ ಎಂದು ಆತ್ಮವಿಶ್ವಾಸ ಇರುವಾ ವಿಷಯದ ಬಗ್ಗೆಯೇ ಮಾತನಾಡುತ್ತಾ ಇದ್ದರೂ ಅದರಲ್ಲಿ ಕೆಲವು ತಪ್ಪುಗಳಿವೆ ಎಂದು ಯಾರಾದರೂ ಹೇಳಿದಲ್ಲಿ ಒಮ್ಮೆ ಪರೀಕ್ಷಿಸಿಕೊಳ್ಳುವುದು ಉತ್ತಮ. ಒಂದು ವೇಳೆ ನೀವು ಹೇಳಿದ್ದೇ ಸರಿ ಎಂಬ ವಿತಂಡವಾದ ಹೂಡುವುದಕ್ಕೆ ಹೋಗಬೇಡಿ. ವ್ಯಾಪಾರ- ವ್ಯವಹಾರದಲ್ಲಿ ಇರುವವರು ಇಷ್ಟು ಸಮಯ ಅನುಸರಿಸುತ್ತಿದ್ದ ಸ್ಟ್ರಾಟೆಜಿ ಬದಲಾಯಿಸಿಕೊಳ್ಳಲು ಮುಂದಾಗಲಿದ್ದೀರಿ. ಈಗ ಮಾರಾಟ ಮಾಡುತ್ತಿರುವ ಉತ್ಪನ್ನಗಳ ಜೊತೆಗೆ ಇನ್ನಷ್ಟು ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಮೂಲಸೌಕರ್ಯಕ್ಕಾಗಿ ಹಣವನ್ನು ಖರ್ಚು ಮಾಡಲು ತೀಮಾನ ಮಾಡುತ್ತೀರಿ.
ನೀವು ದೇಹಾರೋಗ್ಯಕ್ಕಾಗಿ ಇಷ್ಟು ಸಮಯ ತೆಗೆದುಕೊಳ್ಳುತ್ತಿದ್ದ ಔಷಧ ಪದ್ಧತಿಯಲ್ಲಿ ಬದಲಾವಣೆ ಮಾಡುವುದಕ್ಕೆ ತೀರ್ಮಾನ ಮಾಡುವ ಸಾಧ್ಯತೆ ಇದೆ. ಅದರಲ್ಲೂ ನಿಮಗೆ ಆಪ್ತರಾದ ಸ್ನೇಹಿತ ಒಬ್ಬರು ನೀಡುವ ಸಲಹೆಯಿಂದ ಕೆಲವು ಹೊಸ ವಿಚಾರಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಸಂಗಾತಿಯ ಸಂಬಂಧಿಗಳ ಜೊತೆಗೆ ಆಡಿದ ಮಾತುಗಳಿಂದ ವಿರಸ ಏರ್ಪಡುವ ಸಾಧ್ಯತೆ ಇದೆ. ಒಂದು ವೇಳೆ ಮದುವೆ ಪ್ರಯತ್ನದಲ್ಲಿ ಇರುವವರು ಹುಡುಗ ಅಥವಾ ಹುಡುಗಿಯ ಕುಟುಂಬದ ಬಗ್ಗೆ ನಿಮ್ಮನ್ನು ಕೇಳಿದಲ್ಲಿ “ಅವರ ಬಗ್ಗೆ ನನಗೆ ಹೆಚ್ಚು ಮಾಹಿತಿ ಗೊತ್ತಿಲ್ಲ” ಅಂತಲೋ ಅಥವಾ ಬೇರೆ ಏನಾದರೂ ಕಾರಣ ಹೇಳಿ, ನಿಮ್ಮ ಅಭಿಪ್ರಾಯ ಹೇಳದಿರುವುದು ಕ್ಷೇಮ. ತಿಂಗಳಾ ತಿಂಗಳು ನಿಶ್ಚಿತವಾದ ಆದಾಯ ಬರುವಂತೆ ಆಗಬೇಕು ಎಂದು ಯೋಜನೆ ರೂಪಿಸಲಿದ್ದೀರಿ. ಬಾಡಿಗೆ ಮನೆಗಳ ನಿರ್ಮಾಣಕ್ಕೆ ಅಥವಾ ಆ ರೀತಿ ಬಾಡಿಗೆ ಬರುತ್ತಿರುವಂಥ ಕಟ್ಟಡವನ್ನು ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ.
ವಿದೇಶದ ದುಬಾರಿ ಬ್ರ್ಯಾಂಡ್ ಗಳ ವಸ್ತುಗಳನ್ನು ಆಮದು ಮಾಡಿಕೊಂಡು, ಮಾರಾಟ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಭಾರೀ ಹೆಚ್ಚಳ ಆಗುವಂಥ ಯೋಗ ಇದೆ. ಈಗ ನೀವು ಮಾಡುವ ವ್ಯವಹಾರವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಣೆ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಮನೆಯಲ್ಲಿ ದೇವತಾ ಕಾರ್ಯಗಳನ್ನು ಆಯೋಜಿಸುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಹೋಮ- ಹವನ, ಪೂಜೆ- ಪುನಸ್ಕಾರಗಳ ಜೊತೆಗೆ ಹತ್ತಾರು ಜನರನ್ನು ಆಹ್ವಾನಿಸಿ ಊಟದ ವ್ಯವಸ್ಥೆಯನ್ನು ಮಾಡಬೇಕು ಎಂದು ಕುಟುಂಬ ಸದಸ್ಯರ ಜತೆಗೆ ಈ ಕುರಿತು ಚರ್ಚೆ ನಡೆಸಲಿದ್ದೀರಿ. ನಿಮಗೆ ಸಿಗುವ ಅತಿ ದೊಡ್ಡ ಅವಕಾಶ ಒಂದರ ಬಗ್ಗೆ ಮಾಹಿತಿ ದೊರೆಯಲಿದೆ. ಉದ್ಯೋಗಸ್ಥರಾಗಿದ್ದಲ್ಲಿ ನಿಮ್ಮ ಮೇಲಧಿಕಾರಿಗಳು ಈ ಬಗ್ಗೆ ಸುಳಿವು ಬಿಟ್ಟುಕೊಡಲಿದ್ದಾರೆ. ನಿಮ್ಮಲ್ಲಿ ಕೆಲವರಿಗೆ ಈ ದಿನ ಚಿನ್ನದ ಮೇಲೆ ಹೂಡಿಕೆ ಮಾಡುವಂಥ ಯೋಗ ಇದೆ.
ಲೇಖನ- ಎನ್.ಕೆ.ಸ್ವಾತಿ