
ಮನೆಯಿಂದ ದೂರ ಇದ್ದು ವ್ಯಾಸಂಗ ಮಾಡುತ್ತಿರುವವರು ಅಥವಾ ಉದ್ಯೋಗ ಮಾಡುತ್ತಿರುವವರಿಗೆ ಮನೆಯ ನೆನಪು ವಿಪರೀತ ಕಾಡಲಿದೆ. ಒಂದು ಬಾರಿ ಮನೆಗೆ ಹೋಗಿಬಂದು ಬಿಡಬೇಕು ಎಂಬ ಭಾವನೆ ಗಟ್ಟಿ ಆಗಲಿದೆ. ಇತರರಿಗೆ ನೀವು ಮಾಡುವ ಸಹಾಯದಿಂದ ಅವರನ್ನು ದೊಡ್ಡ ಸಮಸ್ಯೆಯಿಂದ ಹೊರಗೆ ಬರುವುದಕ್ಕೆ- ಪಾರು ಮಾಡುವುದಕ್ಕೆ ನೆರವು ಸಿಕ್ಕಂತೆ ಆಗಲಿದೆ. ಹಣಕಾಸು ಲೆಕ್ಕದ ಆಧಾರದಲ್ಲಿ ತೆಗೆದುಕೊಂಡ ನಿರ್ಧಾರಗಳಿಂದ ಕುಟುಂಬ ಸದಸ್ಯರ ಮೆಚ್ಚುಗೆ ಮಾತುಗಳು ನಿಮಗೆ ಕೇಳಿಬರಲಿವೆ. ನೆರೆಹೊರೆಯ ಮನೆಯವರ ಜೊತೆಗೆ ಒಂದು ವೇಳೆ ಮನಸ್ತಾಪ- ಅಭಿಪ್ರಾಯ ಭೇದ ಇದ್ದಲ್ಲಿ ಅವುಗಳನ್ನು ಬಗೆಹರಿಸಿಕೊಳ್ಳಲು ಅವಕಾಶ- ವೇದಿಕೆ ದೊರೆಯಲಿದೆ. ಹಣಕಾಸು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ತಮ್ಮ ಟಾರ್ಗೆಟ್ ಮುಟ್ಟುವುದಕ್ಕೆ ಬೇಕಾದ ಮಾರ್ಗೋಪಾಯ ಗೋಚರ ಆಗಲಿದೆ.
ಆರ್ಥಿಕವಾಗಿ ಈಗಿನ ಅನಿಶ್ಚಿತತೆ ನಿಮ್ಮನ್ನು ಕಾಡಲೇ ಬಾರದು ಎಂಬ ಬಗ್ಗೆ ಕೆಲವು ನಿರ್ಧಾರಗಳನ್ನು ನಿಮ್ಮಲ್ಲಿ ಕೆಲವರು ಮಾಡಲಿದ್ದೀರಿ. ತಿಂಗಳಿಗೆ ನಿಶ್ಚಿತ ಆದಾಯ ಬರುವುದಕ್ಕೆ ಏನು ಮಾಡಬೇಕು ಎಂಬ ಬಗ್ಗೆ ಗಂಭೀರ ಪ್ರಯತ್ನಗಳನ್ನು ಶುರು ಮಾಡಲಿದ್ದೀರಿ. ಫ್ರೀ ಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಬಾಯಿ ಬಿಟ್ಟು ಹಣ ಕೇಳುವುದಕ್ಕೆ ಸಂಕೋಚ ಆಗುತ್ತಿದೆ ಎಂಬ ಕೊರಗು ನಿಮ್ಮನ್ನು ಕಾಡುತ್ತಾ ಇದ್ದಲ್ಲಿ ಅದರಿಂದ ಹೊರಬರುವ ನಿಟ್ಟಿನಲ್ಲಿ ಪ್ರಯತ್ನ ಆರಂಭ ಮಾಡಲಿದ್ದೀರಿ. ಪಿಜ್ಜಾ ಡೆಲಿವರಿ, ಕೊರಿಯರ್ ಡೆಲಿವರಿ ಇಂಥ ಕಡೆಗಳಲ್ಲಿ ಕೆಲಸ ಮಾಡುತ್ತಾ ಇರುವವರು ಸ್ವಂತ ಉದ್ಯಮ ಆರಂಭಿಸುವ ಬಗ್ಗೆ ಪ್ರಾಜೆಕ್ಟ್ ಸಿದ್ಧ ಮಾಡಿಕೊಳ್ಳಲಿದ್ದೀರಿ. ಅಥವಾ ಈಗಾಗಲೇ ಅಂಥದ್ದೊಂದು ಆಲೋಚನೆ ಇದೆ ಎಂದಾದಲ್ಲಿ ಹಣಕಾಸಿನ ಹೊಂದಾಣಿಕೆ ಪ್ರಯತ್ನಗಳಿಗೆ ಬೆಂಬಲ ದೊರೆತು, ಸಮಾಧಾನ ದೊರೆಯಲಿದೆ.
ಇಷ್ಟು ಸಮಯ ಯಾವ ವಿಚಾರ ರಹಸ್ಯವಾಗಿ ಕಾಪಾಡಿಕೊಂಡು ಬಂದಿದ್ದರೋ ಆ ಬಗ್ಗೆ ಎಲ್ಲರಿಗೂ ಗೊತ್ತಾಗಿ, ವರ್ಚಸ್ಸಿಗೆ ಹಾನಿ ಆಗುವ ಸನ್ನಿವೇಶ ಸೃಷ್ಟಿ ಆಗಲಿದೆ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಹುದ್ದೆ- ಸ್ಥಾನಮಾನ ಕಳೆದುಕೊಳ್ಳುವ ಅಥವಾ ಬಿಟ್ಟುಕೊಡಬೇಕಾದ ಸನ್ನಿವೇಶ ಎದುರಾಗಿದೆ ಎಂಬ ಸುಳಿವು ಸಿಗಲಿದೆ. ಯಾರಿಂದ ನಿಮಗೆ ವಿರೋಧ ಬರುವುದೇ ಇಲ್ಲ ಎಂದು ಭಾವಿಸಿರುತ್ತೀರೋ ಅಂಥವರೇ ಧ್ವನಿ ಎತ್ತಲಿದ್ದಾರೆ. ಆಪತ್ಕಾಲಕ್ಕೆ ಇರಲಿ ಅಂದುಕೊಂಡು, ಉಳಿತಾಯ ಮಾಡಿಟ್ಟಿದ್ದ ಹಣವನ್ನು ತೆಗೆದುಕೊಳ್ಳಲೇಬೇಕಾದ ಪರಿಸ್ಥಿತಿ ನಿಮ್ಮಲ್ಲಿ ಕೆಲವರು ಒದಗಿ ಬರಲಿದೆ. ಕುಟುಂಬದಲ್ಲಿ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಅದನ್ನು ಬಗೆಹರಿಸಿ ಬಿಡುವಂತೆ ಪೋಷಕರು ಅಥವಾ ಸೋದರ- ಸೋದರಿಯರ ಜೊತೆಗೆ ಮಾತನಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಇದರಿಂದ ನಿಮ್ಮ ಬಗ್ಗೆ ಇತರರಿಗೆ ಬೇಸರ ಆಗಬಹುದು.
ಒಮ್ಮತದ ತೀರ್ಮಾನ ಬರಲಿ ಎಂದು ಇಷ್ಟು ಸಮಯ ನೀವು ಮಾಡುತ್ತಿದ್ದ ಪ್ರಯತ್ನ ಫಲ ನೀಡುವುದಕ್ಕೆ ಶುರು ಆಗಲಿದೆ. ನಿಮ್ಮ ಪರಿಶ್ರಮ, ನಿಷ್ಠೆ ಹಾಗೂ ಪ್ರಾಮಾಣಿಕತೆ ಮೇಲಧಿಕಾರಿಗಳ ಗಮನಕ್ಕೆ ಬರಲಿದೆ. ನಿಮ್ಮಲ್ಲಿ ಕೆಲವರಿಗೆ ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ನೀಡುವ ಸಾಧ್ಯತೆಗಳು ಇವೆ. ದೀರ್ಘ ಕಾಲದಿಂದ ತೆಗೆದುಕೊಳ್ಳುತ್ತಾ ಬಂದಿದ್ದ ಔಷಧ- ಮಾತ್ರೆಗಳನ್ನು ಇನ್ನು ತೆಗೆದು ಕೊಳ್ಳುವ ಅಗತ್ಯ ಇಲ್ಲ ಎಂಬ ಮಾತನ್ನು ನಿಮ್ಮ ವೈದ್ಯರು ತಿಳಿಸಬಹುದು. ಬಹಳ ವರ್ಷಗಳಿಂದ ತೆರಳಬೇಕು ಎಂದುಕೊಳ್ಳುತ್ತಾ ಇದ್ದ ದೇಶವೊಂದಕ್ಕೆ ಹೋಗಲು ನಿಮ್ಮಲ್ಲಿ ಕೆಲವರಿಗೆ ಅವಕಾಶ ಸಿಕ್ಕ ಬಗ್ಗೆ ಸುಳಿವು- ಮಾಹಿತಿ ದೊರೆಯಲಿದೆ. ಲ್ಯಾಂಡ್ ಡೆವಲಪ್ ಮೆಂಟ್ ಮಾಡುವ ವ್ಯವಹಾರದಲ್ಲಿ ಇರುವವರಿಗೆ ಸರ್ಕಾರದಿಂದ ಆಗಬೇಕಾದ ಕೆಲಸಗಳು ಬಾಕಿ ಉಳಿದು ಹೋಗಿದ್ದಲ್ಲಿ ಅದು ಪೂರ್ಣಗೊಳ್ಳುವ ಮಾರ್ಗೋಪಾಯ ದೊರೆಯಲಿದೆ. ಅಥವಾ ಪ್ರಭಾವಿಗಳ ನೆರವು ಸಿಗಲಿದೆ.
ನೀವು ಬಹಳ ಸಮಯದಿಂದ ನಿರೀಕ್ಷೆ ಮಾಡುತ್ತಿದ್ದ ಕೆಲವು ವಿಚಾರಗಳ ಬಗ್ಗೆ ನಂಬಿಕೆ ಅರ್ಹವಾದ ಅಪ್ ಡೇಟ್ ದೊರೆಯಲಿದೆ. ನೀವು ಪ್ರಯತ್ನ ಪಟ್ಟು, ಶ್ರಮ ಹಾಕಿ ರೂಢಿಸಿಕೊಂಡ ಕಾಂಟ್ಯಾಕ್ಟ್ ಗಳು ಕೆಲಸ ಮಾಡುತ್ತವೆ ಎಂಬ ಬಗ್ಗೆ ಬಲವಾದ ನಂಬಿಕೆ ನಿಮಗೆ ಮೂಡಲಿದೆ. ಖರ್ಚಿನ ಬಗ್ಗೆ ನಿಮ್ಮಲ್ಲಿ ಕೆಲವರು ನಿಯಮ ರೂಪಿಸಿಕೊಳ್ಳ ಬೇಕು ಎಂಬ ಬಗ್ಗೆ ಗಟ್ಟಿಯಾದ ನಿರ್ಧಾರವನ್ನು ಮಾಡಲಿದ್ದೀರಿ. ತೀರ್ಥಕ್ಷೇತ್ರ ಪ್ರವಾಸಕ್ಕೆ ತೆರಳುವ ವಿಚಾರವಾಗಿ ಕುಟುಂಬ ಸದಸ್ಯರ ಜೊತೆಗೆ ಮಾತುಕತೆ ನಡೆಸುವ ಯೋಗ ಇದ್ದು, ನೀವೇನಾದರೂ ಹರಕೆ ಹೊತ್ತುಕೊಂಡಿದ್ದಲ್ಲಿ ಅದನ್ನು ತೀರಿಸುವ ಯೋಗ ಸಹ ಕಂಡುಬರುತ್ತದೆ. ಯಾವ ವ್ಯಕ್ತಿಯ ಮಾತಿಗೆ ಇಷ್ಟು ಸಮಯ ಬಹಳ ಪ್ರಾಧಾನ್ಯ ನೀಡುತ್ತಾ ಬಂದಿದ್ದೀರಿ, ಅದರಲ್ಲಿ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.
ಕುಟುಂಬ ಸದಸ್ಯರು ಇರಬಹುದು, ಸ್ನೇಹಿತರು, ಸಹೋದ್ಯೋಗಿಗಳು- ಮೇಲಧಿಕಾರಿ ಹೀಗೆ ಯಾರದೇ ಸಣ್ಣ ತಪ್ಪನ್ನೂ ಕ್ಷಮಿಸುವ ಮನಸ್ಥಿತಿಯಲ್ಲಿ ನೀವು ಇರುವುದಿಲ್ಲ. ಆದ್ದರಿಂದ ಈ ದಿನ ನೀವು ಎಲ್ಲಿ ಇರುತ್ತೀರೋ ಅಲ್ಲಿ ಉದ್ವಿಗ್ನತೆ ವಾತಾವರಣ ಕಂಡುಬರಲಿದೆ. ನೇರವಂತಿಕೆಯಿಂದ ಹೇಳಿ ಮುಗಿಸಿ ಬಿಡೋಣ, ಅದನ್ನು ಒಪ್ಪಿಕೊಳ್ಳುವುದೇ ಅಥವಾ ನಿಮ್ಮನ್ನೇ ದ್ವೇಷದಿಂದ ನೋಡುವುದೋ ಹೀಗೆ ಏನು ಮಾಡಿದರೂ ಎದುರಿಸೋಣ ಎಂಬ ಧೋರಣೆಯಲ್ಲಿ ಇರುತ್ತೀರಿ. ಕೃಷಿಕರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ. ಆಶ್ಚರ್ಯಕರ ರೀತಿಯಲ್ಲಿ ಇತರರು ನಿಮ್ಮ ಬೆನ್ನಿಗೆ ಬೆಂಬಲವಾಗಿ ನಿಲ್ಲಲಿದ್ದಾರೆ. ನೀವು ಕೈಗೆತ್ತಿಕೊಂಡ ಪ್ರಾಜೆಕ್ಟ್ ನಲ್ಲಿ ಸಕಾರಾತ್ಮಕ ಬೆಳವಣಿಗೆ ಆಗಲಿದ್ದು, ಅದಕ್ಕೆ ಪ್ರತಿಫಲವಾಗಿ ವೇತನ ಹೆಚ್ಚಳ, ಸ್ಥಾನ- ಮಾನದಲ್ಲಿ ಬಡ್ತಿ ದೊರೆಯುವ ಯೋಗ ಇದೆ.
ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಲ್ಲಿ ಹಣಕಾಸು ಸಾಲದ ವಿಚಾರವಾಗಿ ಪ್ರಯತ್ನ ಪಡುತ್ತಾ ಇರುವವರಿಗೆ ಅದು ದೊರೆಯುವ ಮಾರ್ಗ ಸಿಗಬಹುದು ಅಥವಾ ನಿಮಗೆ ಮಂಜೂರು ಆಗಿದೆ ಎಂಬ ಮಾಹಿತಿಯಾದರೂ ಸಿಗಬಹುದು. ಇದರಿಂದಾಗಿ ಆತಂಕ ದೂರವಾಗಿ, ಆತ್ಮವಿಶ್ವಾಸ ಹೆಚ್ಚುತ್ತದೆ. ಸಣ್ಣ ಮೊತ್ತದ ಬಂಡವಾಳ ಹೂಡಿ, ಆರಂಭಿಸಿದ ವ್ಯಾಪಾರ- ವ್ಯವಹಾರ ಕೈ ಹಿಡಿಯುತ್ತಾ, ಆ ಮೂಲಕ ಅದರಲ್ಲಿ ಇನ್ನಷ್ಟು ಹೊಸ ಹಾಗೂ ಹೆಚ್ಚಿನ ಮೊತ್ತದ ಹೂಡಿಕೆ ಮಾಡುವ ನಂಬಿಕೆ ಮೂಡಲಿದೆ. ನಿಮ್ಮಲ್ಲಿ ಕೆಲವರು ಸಣ್ಣ ಅಳತೆಯ ಸೈಟು ಅಥವಾ ಫ್ಲ್ಯಾಟ್ ಖರೀದಿ ಮಾಡುವ ಬಗ್ಗೆ ಕುಟುಂಬ ಸದಸ್ಯರ ಜೊತೆಗೆ ಚರ್ಚೆ ನಡೆಸಲಿದ್ದೀರಿ. ಅದಕ್ಕಾಗಿ ಈಗ ನೀವು ಮಾಡಿಸಿರುವ ಎಫ್ ಡಿ ಮುರಿಸುವ ಬಗ್ಗೆ ಹಾಗೂ ಚಿನ್ನದ ಒಡವೆಗಳನ್ನು ಮಾರಾಟ ಮಾಡುವ ಬಗ್ಗೆ ಕೂಡ ಆಲೋಚನೆ ಮಾಡಲಿದ್ದೀರಿ.
ನಿಮ್ಮಲ್ಲಿ ಯಾರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇದ್ದೀರಿ, ಅಂಥವರಿಗೆ ಬಹಳ ಉತ್ತಮವಾದ ದಿನ ಇದು. ಇನ್ನು ಕಮಿಷನ್ ಆಧಾರದಲ್ಲಿ ಮಾಡುವ ವ್ಯವಹಾರಗಳು ಕೈ ಹಿಡಿಯಲಿವೆ. ಈಗಾಗಲೇ ಕೆಲಸ ಮಾಡಿಕೊಟ್ಟಿದ್ದಿರಿ, ಆದರೆ ಅದರಿಂದ ಬರಬೇಕಾದ ಹಣ ಹಾಗೇ ಬಾಕಿ ಉಳಿದಿದೆ ಎಂದಿದ್ದಲ್ಲಿ ಅದನ್ನು ವಸೂಲಿ ಮಾಡಿಕೊಳ್ಳಲು ಸಾಧ್ಯ ಆಗಲಿದೆ. ಈ ದಿನ ನಿಮಗೆ ಸಿಗುವಂಥ ಮಾಹಿತಿಯ ಸರಿಯಾದ ಬಳಕೆ ಮಾಡಿಕೊಳ್ಳುವ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ. ಇತರರಿಗೆ ನೀವು ನೀಡುವ ಸಲಹೆ- ಸೂಚನೆಗಳು ಲಾಭದಾಯಕ ಆಗುವ ಮೂಲಕ ನಿಮ್ಮ ಜನಪ್ರಿಯತೆ, ಸಾಮರ್ಥ್ಯದ ಬಗ್ಗೆ ಗೌರವ ಹೆಚ್ಚಾಗಲಿದೆ. ಆರ್ಥಿಕವಾಗಿ ಕಷ್ಟದಲ್ಲಿ ಇರುವ ನಿಮ್ಮ ಕೆಲವು ಸ್ನೇಹಿತರು ಸಹಾಯ ಕೇಳಿಕೊಂಡು ಬರಲಿದ್ದು, ನಿಮ್ಮ ಶಿಫಾರಸು, ಪ್ರಭಾವ ಬಳಸಿ ನೆರವು ನೀಡಲಿದ್ದೀರಿ.
ಸಲೀಸಾಗಿ ಮಾಡಬಹುದು ಅಂದುಕೊಂಡಿದ್ದ ಕೆಲಸ- ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕೆ ಹೈರಾಣಾಗುತ್ತೀರಿ. ವಾಹನ ಚಾಲನೆ ಮಾಡುವಾಗ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಜಾಗ್ರತೆ ವಹಿಸಿ. ಮಕ್ಕಳ ಮಾತು, ಸ್ವಭಾವ ಹಾಗೂ ಸಿಟ್ಟಿನ ಕಾರಣಗಳಿಗೆ ಒಂದು ಆತಂಕ ನಿಮ್ಮನ್ನು ಕಾಡಲಿದೆ. ಡೆಡ್ ಲೈನ್ ಅನ್ನು ಗಮನದಲ್ಲಿ ಇಟ್ಟುಕೊಂಡು ನಿಮಗೆ ವಹಿಸಿದ ಜವಾಬ್ದಾರಿಗಳನ್ನು ಪೂರ್ಣ ಮಾಡುವ ಕಡೆಗೆ ಲಕ್ಷ್ಯ ಇರಲಿ. ಆಹಾರ ಪಥ್ಯವನ್ನು ಅನುಸರಿಸುತ್ತಾ ಇರುವವರು ಇದೊಂದು ದಿನ ತಾನೇ ಎಂಬ ಭಾವನೆಯಲ್ಲಿ ಮುರಿಯುವ ಸಾಧ್ಯತೆಗಳು ಇರುತ್ತವೆ. ಈ ರೀತಿ ಮಾಡಿದಲ್ಲಿ ಆ ನಂತರ ಬಹು ಮಟ್ಟಿಗೆ ಪರಿತಪಿಸುವಂತೆ ಆಗಲಿದೆ. ಗೃಹಿಣಿಯರು ಅಡುಗೆ ಮಾಡುವ ವೇಳೆಯಲ್ಲಿ ಬೇರೆಯವರು ಆತುರ ಮಾಡಿದರು ಎಂಬ ಕಾರಣಕ್ಕೆ ಗುಣಮಟ್ಟದಲ್ಲಿ ರಾಜೀ ಆಗದ ರೀತಿ ಕೆಲಸ ಪೂರ್ಣಗೊಳಿಸುವ ಕಡೆಗೆ ಗಮನ ನೀಡಿ.
ಲೇಖನ- ಎನ್.ಕೆ.ಸ್ವಾತಿ