ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 24ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಈ ದಿನ ನಿಮಗೆ ಹೇಳಿಕೊಳ್ಳಲು ಸಾಧ್ಯವಾಗದಂಥ ಸಂಕಟ ಕಾಡಬಹುದು. ಅದರಲ್ಲೂ ಈ ಹಿಂದೆ ಯಾವಾಗಲೋ ನಿಮಗೆ ಆಗಿದ್ದ ಅವಮಾನದ ಘಟನೆ ವಿಪರೀತವಾಗಿ ನೆನಪಾಗಲಿದೆ. ಇದಕ್ಕೆ ಪ್ರತೀಕಾರ ಹೇಳಬೇಕು ಅಥವಾ ಈಗಾಗಲೇ ಹಾಗೆ ನಡೆದುಕೊಂಡಿದ್ದರೂ ನಿಮಗೆ ಅವಮಾನ ಮಾಡಿದ್ದಂಥವರಿಗೆ ಮತ್ತೊಮ್ಮೆ ಮುಜುಗರ ಮಾಡಬೇಕು ಎಂದು ಅನಿಸಲಿದೆ. ಸಂಭ್ರಮ ಪಡುವಂಥ ಸುದ್ದಿಯನ್ನು ಆಪ್ತರ ಜತೆಗೇ ಹಂಚಿಕೊಳ್ಳುವುದಕ್ಕೆ ಪ್ರಯತ್ನಿಸಿ. ದ್ವೇಷ ಸಾಧನೆಗಾಗಿ ನಿಮ್ಮ ವೈರಿಗಳು ಅಥವಾ ನಿಮ್ಮ ಏಳ್ಗೆಯನ್ನು ಕಂಡರೆ ಸಹಿಸಲು ಆಗದವರಿಗೇ ಮೊದಲು ಹೇಳಬೇಕು ಅಂದುಕೊಳ್ಳಬೇಡಿ. ನಿಮ್ಮಲ್ಲಿ ಕೆಲವರು ಈ ದಿನ ಗ್ಯಾಜೆಟ್ ಖರೀದಿ ಮಾಡಲಿದ್ದೀರಿ. ಅಥವಾ ಇತ್ತೀಚೆಗಷ್ಟೇ ಖರೀದಿ ಮಾಡಿದ್ದೀರಿ ಎಂದಾದಲ್ಲಿ ಅದಕ್ಕೆ ಬೇಕಾದಂಥ ಕೆಲವು ಆಕ್ಸೆಸರೀಸ್ ಗಳನ್ನು ಕೊಳ್ಳುವ ಯೋಗ ನಿಮ್ಮ ಪಾಲಿಗೆ ಇದೆ. ಬಿಸಿಯಾದ ವಸ್ತುಗಳು, ಬಿಸಿ ನೀರು ಅಥವಾ ಬೆಂಕಿಯಿಂದ ಎಚ್ಚರಿಕೆಯನ್ನು ವಹಿಸಿ.
ನಿಮಗೇ ಅಚ್ಚರಿ ಆಗುವ ರೀತಿಯಲ್ಲಿ ಕೆಲವು ಸ್ನೇಹ- ಪರಿಚಯಗಳು ಈ ದಿನ ಆಗಲಿವೆ. ನೀವಿರುವುದಕ್ಕೆ ಅಂತಲೇ ಕಟ್ಟಿರುವ ಮನೆಯನ್ನು ಅಥವಾ ಬಾಡಿಗೆ ಆದಾಯ ಬರುವಂಥ ಕಟ್ಟಡಗಳನ್ನು ಕೊಳ್ಳುವುದಕ್ಕೆ ಹುಡುಕಾಟ ನಡೆಸುತ್ತಿದ್ದಲ್ಲಿ ಈ ದಿನ ನಿಮ್ಮ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಸಾಧ್ಯತೆ ಜಾಸ್ತಿ ಇದೆ. ನಿಮಗೆ ಸಿಗುವಂಥ ಅವಕಾಶ, ಗೌರವ, ಮರ್ಯಾದೆಗಳನ್ನು ನೋಡಿ, ಇತರರು ಅಚ್ಚರಿ ಪಡಲಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ನೀವು ಆಡಿದ ಮಾತುಗಳು ಹಾಗೂ ಸಮಯೋಚಿತವಾಗಿ ನೀಡಿದ ಸಲಹೆಗಳಿಂದಾಗಿ ಹಲವರು ನಿಮ್ಮ ಕಡೆಗೆ ಆಕರ್ಷಿತರಾಗಲಿದ್ದಾರೆ. ಹೊಸ ವ್ಯವಹಾರ ಅರಂಭಿಸುವ ಉದ್ದೇಶದಿಂದ ಹಣಕಾಸಿನ ವ್ಯವಸ್ಥೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದಲ್ಲಿ ವ್ಯಕ್ತಿಯೊಬ್ಬರು ನಿಮ್ಮ ನೆರವಿಗೆ ಬರಲಿದ್ದಾರೆ. ಜತೆಗೆ ಪ್ರಭಾವಿಗಳನ್ನು ಸಹ ಪರಿಚಯ ಮಾಡಿಕೊಡಲಿದ್ದಾರೆ. ನಿಮ್ಮ ಸ್ನೇಹಿತರ ಪೈಕಿ ಒಬ್ಬರಿಗೆ ಹಣಕಾಸಿನ ಅಗತ್ಯ ತೀವ್ರವಾಗಿ ಕಂಡುಬಂದು, ಸಾಲ ಕೊಡಿಸುವಂತೆ ದುಂಬಾಲು ಬೀಳಲಿದ್ದಾರೆ.
ಮನೆಯ ದುರಸ್ತಿ, ನವೀಕರಣ, ಸುಣ್ಣ- ಬಣ್ಣ ಇಂಥದ್ದನ್ನು ಮಾಡಿಸಬೇಕು ಎಂಬ ಕಾರಣಕ್ಕೆ ಸಂಬಂಧಪಟ್ಟವರನ್ನು ಕರೆಸಿ, ಎಷ್ಟು ಖರ್ಚಾಗಲಿದೆ ಹಾಗೂ ಎಷ್ಟು ಸಮಯ ಹಿಡಿಸಬಹುದು ಎಂದು ವಿಚಾರಿಸುವ ಸಾಧ್ಯತೆಗಳಿವೆ. ವಿದೇಶಗಳಲ್ಲಿ ವಾಸ ಇರುವಂಥವರಿಗೆ ಮನೆ ಬದಲಾವಣೆ ಮಾಡುವಂಥ ಯೋಗ ಇದ್ದು, ನಿಮ್ಮಲ್ಲಿ ಕೆಲವರು ಸ್ವಂತ ಮನೆಯನ್ನು ಖರೀದಿ ಮಾಡುವುದಕ್ಕೆ ಅಡ್ವಾನ್ಸ್ ಸಹ ನೀಡಲಿದ್ದೀರಿ. ಪೆಟ್ರೋಲ್ ಬಂಕ್ ಗಳನ್ನು ನಡೆಸುತ್ತಿರುವವರಿಗೆ ಆದಾಯದಲ್ಲಿನ ಇಳಿಕೆ ಭಾರೀ ಚಿಂತೆಗೆ ಕಾರಣ ಆಗಬಹುದು. ಇನ್ನು ಪೆಟ್ರೋಲ್ ಬಂಕ್, ರಸಗೊಬ್ಬರ, ಬಿತ್ತನೆ ಬೀಜ ಮಾರಾಟ ಮಾಡುತ್ತಿರುವವರು ವ್ಯವಹಾರ ಬೇರೆಯವರಿಗೆ ಬಿಟ್ಟು ಕೊಡುವುದಕ್ಕೋ ಅಥವಾ ಪಾರ್ಟನರ್ ಆಗಿ ಜನರನ್ನು ಸೇರಿಸಿಕೊಳ್ಳುವುದಕ್ಕೋ ಯೋಚನೆಯನ್ನು ಮಾಡಲಿದ್ದೀರಿ. ಕುಟುಂಬ ಸದಸ್ಯರ ಜತೆಗೆ ಈ ಬಗ್ಗೆ ಮಾತುಕತೆ ನಡೆಸಿದಾಗ ಏಕತ್ರವಾದ ಅಭಿಪ್ರಾಯ ಬಾರದೆ ಗೊಂದಲ ಉಂಟಾಗಬಹುದು.
ಕ್ಷಣಕ್ಕೊಂದು, ಘಳಿಗೆಗೊಂದು ಮಾತನಾಡುವಂಥ ವ್ಯಕ್ತಿಗಳು ನಿಮಗೆ ತಗುಲಿಕೊಳ್ಳಲಿದ್ದಾರೆ. ಅಂಥವರ ಜತೆಗೆ ಏಗುವುದರಲ್ಲೇ ದಿನದ ಬಹು ಪಾಲು ಸಮಯ ಕಳೆದುಹೋಗುವಂಥ ಯೋಗ ಇದೆ. ಆದ್ದರಿಂದ ಯಾವುದೇ ವೃತ್ತಿಪರರು ಅದು ಮನೆಯ ಕಾಂಟ್ರ್ಯಾಕ್ಟ್ ನಿಂದ ಪೇಂಟಿಂಗ್, ಪ್ಲಂಬಿಂಗ್, ರೇಲಿಂಗ್ ಯಾವುದಾದರೂ ಸರಿ, ಈ ಬಗ್ಗೆ ಮಾತನಾಡುವಾಗ, ಎಲ್ಲವೂ ಫೈನಲ್ ಮಾಡಿಕೊಂಡು ಬಂದು ಮಾತನಾಡುವಂತೆ ತಿಳಿಸಿ. ಇನ್ನು ಇದೇ ವೇಳೆ ವಿವಾಹ ವಾರ್ಷಿಕೋತ್ಸವ, ಹುಟ್ಟಿದ ಹಬ್ಬ ಅಥವಾ ಇನ್ಯಾವುದಾದರೂ ವಿಶೇಷ ದಿನದ ಅಂಗವಾಗಿ ಔತಣ ಕೂಟಗಳಿಗೆ ನಿಮಗೆ ಆಹ್ವಾನ ಬರಲಿದೆ. ತುಂಬ ಸಂತೋಷದ ಸಮಯವನ್ನು ಕಳೆಯಲಿದ್ದೀರಿ. ಬಂಧುಗಳು, ಸ್ನೇಹಿತರ ಭೇಟಿಯಿಂದ ಉತ್ಸಾಹ ಹೆಚ್ಚಾಗಲಿದೆ. ಇನ್ನು ನೀವು ಪ್ರೀತಿ- ಪ್ರೇಮದಲ್ಲಿದ್ದೀರಿ ಅಂತಾದರೆ ಪ್ರೇಮಿಗಳಿಗೆ ಒಡವೆ, ವಸ್ತ್ರ, ವಾಚ್ ಸೇರಿದಂತೆ ಕೆಲವು ಬ್ರ್ಯಾಂಡೆಡ್ ವಸ್ತುಗಳನ್ನು ಉಡುಗೊರೆ ನೀಡಲಿದ್ದೀರಿ.
ಮನೆಯಲ್ಲಿ, ಕುಟುಂಬ ಸದಸ್ಯರ ಮಧ್ಯೆ ನಿಮ್ಮ ಅಭಿಪ್ರಾಯಕ್ಕೆ ವಿಪರೀತವಾದ ಪ್ರಾಧಾನ್ಯ ದೊರೆಯಲಿದೆ. ಪ್ಲಾಟಿನಂ- ವಜ್ರದ ಆಭರಣಗಳನ್ನು ಖರೀದಿ ಮಾಡುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಇನ್ನು ನಿಮ್ಮಲ್ಲಿ ಯಾರು ಚಿನ್ನದ ಚೀಟಿ ಕಟ್ಟುತ್ತಾ ಬಂದಿರುತ್ತೀರಿ ಹಾಗೂ ಅದು ಈಗಾಗಲೇ ಅವಧಿ ಮುಗಿದು ಆಗಿರುತ್ತದೆ, ಅಂಥವರು ಸಹ ಚಿನ್ನಾಭರಣಗಳನ್ನು ಕೊಳ್ಳುವ ಸಾಧ್ಯತೆ ಇದೆ. ಮೂವತ್ತು ವರ್ಷ ಮೇಲ್ಪಟ್ಟವರು ಜಿಮ್, ಯೋಗ, ಪ್ರಾಣಾಯಾಮ ಇಂಥದ್ದಕ್ಕೆ ಸೇರ್ಪಡೆ ಆಗುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಹಳೆ ಸ್ನೇಹಿತರು- ಸ್ನೇಹಿತೆಯರ ಭೇಟಿ ಮಾಡುವುದರಿಂದ ಸಂತೋಷ- ಸಮಾಧಾನ ಆಗಲಿದೆ. ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಬೇಕು ಎಂದು ತೀರ್ಮಾನ ಮಾಡಿಯಾಗಿದೆ ಎಂಬುವವರು ಈ ಪ್ರಯಾಣವನ್ನು ಇನ್ನಷ್ಟು ಸಮಯ ಮುಂದಕ್ಕೆ ಹಾಕುವುದಕ್ಕೆ ನಿರ್ಧರಿಸಲಿದ್ದೀರಿ. ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವವರಿಗೆ ಸಣ್ಣ- ಪುಟ್ಟ ಪೆಟ್ಟುಗಳಾಗುವ ಸಾಧ್ಯತೆ ಇದೆ.
ಇತರರ ಬಗ್ಗೆ ನೀವು ಕೇಳಿಸಿಕೊಂಡ ಅಥವಾ ಯಾರೋ ಹೇಳಿದ ವಿಷಯಗಳನ್ನು ನಂಬಿಕೊಂಡು, ಅದನ್ನು ಇನ್ಯಾರ ಬಳಿಯೋ ಚರ್ಚಿಸುವುದಕ್ಕೆ ಹೋಗಬೇಡಿ. ಹಾಲಿನ ಪದಾರ್ಥಗಳ ಅಲರ್ಜಿ ಇರುವಂಥವರು ಹಾಗೂ ಕಫದ ತೊಂದರೆಯಿಂದ ಬಳಲುತ್ತಿರುವವರಿಗೆ ವೈದ್ಯರ ನೆರವು- ಮಾರ್ಗದರ್ಶನ ಪಡೆದುಕೊಳ್ಳಲೇ ಬೇಕಾದ ಸನ್ನಿವೇಶ ನಿರ್ಮಾಣ ಆಗಲಿದೆ. ಆದ್ದರಿಂದ ಸ್ವಯಂ ವೈದ್ಯ ಮಾಡಿಕೊಳ್ಳದೆ ಸೂಕ್ತ ವೈದ್ಯರಲ್ಲಿ ತೋರಿಸಿಕೊಳ್ಳಿ. ಜಮೀನು- ಸೈಟಿಗೆ ಸಂಬಂಧಿಸಿದಂತೆ ಕಾಗದ- ಪತ್ರಗಳ ಬಗ್ಗೆ ಲೀಗಲ್ ಒಪಿನಿಯನ್ ಪಡೆದುಕೊಳ್ಳಬೇಕು ಎಂದಿರುವವರು ಕಾನೂನು ಪಾಂಡಿತ್ಯ ಇರುವವರ ಬಳಿಯೇ ತೆರಳುವುದು ಒಳ್ಳೆಯದು. ಒಂದು ವೇಳೆ ಹಣ ಉಳಿಸಬಹುದು ಎಂದುಕೊಂಡು, ಯಾರೆಂದರೆ ಅವರ ಬಳಿ ಹೋದರೆ ಆ ನಂತರ ಪರಿತಪಿಸುವಂತೆ ಆಗುತ್ತದೆ. ಸ್ತ್ರೀಯರಿಗೆ ನೆರೆ ಹೊರೆಯವರಿಂದ ಆರೋಪಗಳು ಬರಬಹುದು.
ಆಮೇಲೆ ಮಾಡಿದರಾಯಿತು, ಇನ್ನೂ ಸಮಯ ಇದೆಯಲ್ಲಾ ಎಂದುಕೊಂಡು ಮುಂದಕ್ಕೆ ಹಾಕಿಕೊಂಡು ಬಂದ ಕೆಲಸದ ವಿಚಾರದಲ್ಲಿ ಇತರರ ಬೈಗುಳ, ನಿಂದನೆಯನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಗಡುವು ಇದೆ ಎಂದುಕೊಂಡು ಆಲಸ್ಯ ಮಾಡಬೇಡಿ. ಈ ಹಿಂದೆ ನೀವೇ ಬೇಡ ಅಂದುಕೊಂಡು ನಿಲ್ಲಿಸಿದ್ದ ಕೆಲವು ಕೆಲಸಗಳು ಮತ್ತೆ ನೀವೇ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಇದರಿಂದ ನಿಮ್ಮ ಆದಾಯ ಮೂಲಗಳು ಸಹ ಹೆಚ್ಚಾಗಲಿವೆ. ಹೋಮ್ ಲೋನ್, ಪರ್ಸನಲ್ ಲೋನ್ ಪಡೆದುಕೊಳ್ಳಬೇಕು ಎಂಬ ಗುರಿಯೊಂದಿಗೆ ಕಾಗದ- ಪತ್ರ, ದಾಖಲಾತಿಗಳನ್ನು ಹೊಂದಿಸಿಕೊಳ್ಳುತ್ತಿರುವವರಿಗೆ ಬೇಕಾದ ಎಲ್ಲ ದಾಖಲೆಗಳು ಈ ದಿನ ದೊರೆಯುವ ಅವಕಾಶಗಳು ಹೆಚ್ಚಿವೆ. ಮನೆಗೆ ಅತಿಥಿಗಳ ಆಗಮನವಾಗಲಿದೆ. ಹಾಗೆ ಬರುವಂಥವರು ನಿಮಗೆ ಕೆಲವು ಉಡುಗೊರೆಗಳನ್ನು ಸಹ ತರಬಹುದು. ರುಚಿಕಟ್ಟಾದ ಊಟ-ತಿಂಡಿ ವ್ಯವಸ್ಥೆ ಮಾಡಲಿದ್ದೀರಿ.
ನೀರಿಗೆ ಸಂಬಂಧಿಸಿದ ವ್ಯವಹಾರ, ವ್ಯಾಪಾರದಲ್ಲಿ ತೊಡಗಿಕೊಂಡವರಿಗೆ ವಿಸ್ತರಣೆ ಬಗ್ಗೆ ಆಲೋಚನೆ ಮೂಡಲಿದೆ. ತಂದೆಯ ಕಡೆಯಿಂದ ದೊಡ್ಡ ಮೊತ್ತ ಬರುವ ಅವಕಾಶ ಇದೆ. ಒಂದು ವೇಳೆ ಪಿತ್ರಾರ್ಜಿತ ಆಸ್ತಿಯ ಹಂಚಿಕೆಯ ನಿರೀಕ್ಷೆಯಲ್ಲಿ ಇರುವವರಿಗೆ ಅದು ಆಗುವ ಸೂಚನೆ ಕೂಡ ದೊರೆಯಲಿದೆ. ನಿಮ್ಮ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದಲ್ಲಿ ಅದನ್ನು ಮಾತುಕತೆ ಮೂಲಕ ರಾಜೀ ಮಾಡಿಕೊಳ್ಳುವುದಕ್ಕೆ ಪ್ರಭಾವಿಗಳು ನೆರವು ನೀಡಲಿದ್ದಾರೆ. ಸಣ್ಣ- ಪುಟ್ಟ ಸಾಲಗಳು ಇದ್ದಲ್ಲಿ ಅದನ್ನು ತೀರಿಸಿಕೊಳ್ಳುವುದಕ್ಕೆ ಹಣಕಾಸಿನ ಹೊಂದಾಣಿಕೆ ಆಗಲಿದೆ. ಅದೇ ರೀತಿ ಚಿನ್ನದ ಒಡವೆಗಳನ್ನೋ ಅಥವಾ ಜಮೀನನ್ನು ಒತ್ತೆ ಇಟ್ಟು, ಹಣವನ್ನು ಸಾಲವಾಗಿ ಪಡೆದುಕೊಂಡಿರುವವರು ಸಹ ಅದನ್ನು ತೀರಿಸು ಸಾಧ್ಯತೆ ಇದೆ. ಇನ್ನು ನಿಮ್ಮಲ್ಲಿ ಕೆಲವರು ಮಕ್ಕಳ ಶಿಕ್ಷಣದ ಸಲುವಾಗಿ ಈಗ ಓದುತ್ತಿರುವ ಶಿಕ್ಷಣ ಸಂಸ್ಥೆಯಿಂದ ಬೇರೆಡೆ ಸೇರಿಸುವ ತೀರ್ಮಾನ ಮಾಡಲಿದ್ದೀರಿ.
ರಂಗಭೂಮಿಯಲ್ಲಿ ತೊಡಗಿಸಿಕೊಂಡವರು, ಸ್ಟ್ಯಾಂಡ್ ಅಪ್ ಕಾಮಿಡಿ ಮಾಡುವಂಥವರು, ಚಿತ್ರಕಾರರು ಹಾಗೂ ಸಂಗೀತಗಾರರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ. ನೀವು ಬಹಳ ಸಮಯದಿಂದ ಎದುರು ನೋಡುತ್ತಿದ್ದ ವೇದಿಕೆ ದೊರೆಯಲಿದೆ. ದೀರ್ಘ ಕಾಲದ ಆದಾಯ ಹೆಚ್ಚಳಕ್ಕೆ ಇದು ದಾರಿ ಮಾಡಿಕೊಡಲಿದೆ. ನಿಮ್ಮ ಶಿಫಾರಸು, ಪ್ರಭಾವದಿಂದಾಗಿ ಕೆಲವರಿಗೆ ಕೆಲಸ ದೊರಕಿಸಿಕೊಡುವಷ್ಟು ಸಾಮರ್ಥ್ಯ ಈ ದಿನ ಕೆಲವರಿಗೆ ಇರಲಿದೆ. ಕೃಷಿಕರಾಗಿದ್ದಲ್ಲಿ ಮನೆಗೆ ರಾಸುಗಳನ್ನು ಖರೀದಿಸುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಹಾಗೂ ನಿಮ್ಮಲ್ಲಿ ಕೆಲವರು ಗೋದಾಮು, ಕೊಟ್ಟಿಗೆ ಇತ್ಯಾದಿಗಳನ್ನು ನಿರ್ಮಾಣ ಮಾಡುವ ಬಗ್ಗೆ ಕುಟುಂಬ ಸದಸ್ಯರ ಜತೆಗೆ ಚರ್ಚಿಸಲಿದ್ದೀರಿ. ಇನ್ನು ತಂದೆ- ತಂದೆ ಸಮಾನರಾದವರ ಆರೋಗ್ಯ ಸಮಸ್ಯೆಯು ಚಿಂತೆಗೆ ಕಾರಣ ಆಗಬಹುದು. ಅವರ ವೈದ್ಯಕೀಯ ಚಿಕಿತ್ಸೆಗಾಗಿಯೇ ಉಳಿತಾಯದ ಹಣವನ್ನು ತೆಗೆಯಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ.
ಲೇಖನ- ಎನ್.ಕೆ.ಸ್ವಾತಿ