ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 1ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಾನಾಯಿತು ನನ್ನ ಪಾಡಾಯಿತು ಎಂದು ನೀವು ಈ ದಿನ ಇದ್ದರೂ ಹಲವು ಅವಕಾಶಗಳು ನಿಮಗೆ ತೆರೆದುಕೊಳ್ಳಲಿವೆ. ಈ ಹಿಂದೆ ನೀವು ಯಾವಾಗಲೋ ಕೆಲಸ ಮಾಡಿಕೊಟ್ಟು, ಸ್ವತಃ ನೀವೇ ಮರೆತು ಹೋದರೂ ನಿಮ್ಮ ಕೆಲಸವನ್ನು ಮೆಚ್ಚಿಕೊಂಡು ಈಗ ಆರ್ಡರ್ ನೀಡಬಹುದು. ವ್ಯವಹಾರ, ಉದ್ಯಮದಲ್ಲಿ ಇರುವಂತಹವರು ವ್ಯಾಪಾರ ವಿಸ್ತರಣೆಗಾಗಿ ಬ್ಯಾಂಕ್ ಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡಲಿದ್ದೀರಿ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಭವಿಷ್ಯದಲ್ಲಿ ಅತ್ಯುತ್ತಮ ಅವಕಾಶಗಳು ದೊರೆಯಲಿವೆ ಎಂಬ ಸುಳಿವು ಸಿಗಲಿದೆ. ಸೋದರ ಸಂಬಂಧಿಗಳು ನಿಮಗೆ ಸಲಹೆ ಏನಾದರೂ ನೀಡಿದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ.
ಹಳೆ ಪ್ರೇಮ ವಿಚಾರಗಳು ನಿಮ್ಮನ್ನು ವಿಪರೀತ ಕಾಡಲಿವೆ. ನಿಮಗೆ ಫೋನ್ ಮಾಡಿ ಬೆದರಿಕೆ ಹಾಕುವ ಸಾಧ್ಯತೆಗಳು ಸಹ ಇವೆ. ಇಂಥ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬುದು ನಿಮ್ಮ ಕೈಯಲ್ಲಿ ಇದೆ. ಯಾರಿಗೂ ಅತಿಯಾದ ಸಲುಗೆ ಕೊಡುವುದಕ್ಕೆ ಹೋಗಬೇಡಿ. ಹಳೆ ನೆನಪುಗಳನ್ನು ಭಾವನಾತ್ಮಕವಾಗಿ ತಳುಕು ಹಾಕಿಕೊಂಡು, ಸಿಕ್ಕಿ ಹಾಕಿಕೊಳ್ಳಬೇಡಿ. ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಒಂದು ವೇಳೆ ಇದ್ದಲ್ಲಿ ಅದು ವಿಪರೀತಕ್ಕೆ ಹೋಗುವ ಸಾಧ್ಯತೆಗಳಿವೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಸಂಗಾತಿ ಜೊತೆಗೆ ಇದೇ ವಿಚಾರವಾಗಿ ಮನಸ್ತಾಪ, ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ಯಾವುದೇ ಮುಖ್ಯ ವಿಚಾರದ ಮೇಲೆ ಮನೆಯಿಂದ ಹೊರಡುವ ಮೊದಲು ಒಮ್ಮೆ ಮನಸ್ಸಿನಲ್ಲಿ ಈಶ್ವರನನ್ನು ಸ್ಮರಿಸಿಕೊಳ್ಳಿ.
ಈ ದಿನ ನೀವು ಪಟ್ಟು ಹಿಡಿದು ಕೆಲಸಗಳನ್ನು ಮಾಡಿಸಲಿದ್ದೀರಿ. ಅದು ಯಾವುದೇ ಕಾರ್ಯ ಇರಬಹುದು ಅಥವಾ ಸರ್ಕಾರಕ್ಕೆ ಸಂಬಂಧಪಟ್ಟಂತಹ ವಿಚಾರಗಳಿರಬಹುದು, ಗಡುವಿನ ತನಕ ಕಾಯುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರಿಗೆ ಮಕ್ಕಳ ಶಿಕ್ಷಣದ ವಿಚಾರಕ್ಕೆ ಸ್ವಲ್ಪಮಟ್ಟಿಗೆ ಆತಂಕಕ್ಕೆ ಕಾರಣ ಆಗಬಹುದು. ಈಗ ಹೋಗುತ್ತಿರುವ ಶಿಕ್ಷಣ ಸಂಸ್ಥೆಯಿಂದ ಬದಲಾವಣೆ ಮಾಡುವುದಕ್ಕೆ ತುಂಬಾ ಗಟ್ಟಿಯಾಗಿ ನಿರ್ಧಾರ ಮಾಡುವ ಸಾಧ್ಯತೆಗಳಿವೆ. ಅದನ್ನು ಹೊರತುಪಡಿಸಿದರೆ ಯಾರು ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಅಂತಹವರಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಮನೆಯಿಂದ ಹೊರಡುವ ಮೊದಲಿಗೆ ಮನಸ್ಸಿನಲ್ಲಿ ದಕ್ಷಿಣಾ ಮೂರ್ತಿಯನ್ನು ಸ್ಮರಿಸಿಕೊಳ್ಳಿ.
ಈ ಹಿಂದೆ ನೀವೇ ಆಡಿದಂಥ ಮಾತುಗಳನ್ನು ಎತ್ತಾಡಿ, ಮನಸ್ಸಿಗೆ ನೋವು ಮಾಡುವವರ ಸಂಖ್ಯೆ ಈ ದಿನ ಜಾಸ್ತಿ ಇರಲಿದೆ. ನಿಮಗೆ ಸಂಬಂಧವೇ ಪಡದಂತಹ ವಿಚಾರವೊಂದಕ್ಕೆ ನೀವಾಗಿಯೇ ಹೋಗಿ ತಗುಲಿ ಹಾಕಿಕೊಳ್ಳಲಿದ್ದೀರಿ. ಅತ್ಯುತ್ಸಾಹದಿಂದ ಯಾರಿಗೂ ಗಡುವನ್ನು ನೀಡಿ, ಮಾತು ನೀಡಲು ಹೋಗಬೇಡಿ. ಸಂಬಂಧಿಕರ ಮನೆಯ ಕಾರ್ಯಕ್ರಮಗಳಿಗೆ ಭೇಟಿ ನೀಡುವಂತಹವರು ಆರ್ಥಿಕ ವಿಚಾರದ ಬಗ್ಗೆ ಚರ್ಚೆ ಮಾಡದಿರುವುದು ಕ್ಷೇಮ. ಇಲ್ಲದಿದ್ದಲ್ಲಿ ಅವಮಾನದ ಪಾಲಾಗುತ್ತೀರಿ. ವರ್ಗಾವಣೆಗಾಗಿ ಪ್ರಯತ್ನ ಮಾಡುತ್ತಿರುವವರು ಸಾಧ್ಯವಾದಷ್ಟು ಈ ದಿನ ಸುಮ್ಮನಿರುವುದು ಉತ್ತಮ. ಒಂದು ವೇಳೆ ಪ್ರಯತ್ನ ಪಟ್ಟಲ್ಲಿ ನಿಮಗೆ ಬೇಡದಿರುವ ಸ್ಥಳಕ್ಕೆ ವರ್ಗಾವಣೆ ಮಾಡಿಬಿಡುವ ಸಾಧ್ಯತೆಗಳಿವೆ ಎಚ್ಚರಿಕೆ.
ನಕ್ಕು ಸುಮ್ಮನಾಗುವಂತಹ ಗಾಸಿಪ್ ಗಳು ನಿಮ್ಮ ಬಗ್ಗೆ ಹರಿದಾಡುತ್ತಿದ್ದಲ್ಲಿ ಈ ದಿನ ಸುಮ್ಮನಿರುವುದು ಒಳ್ಳೆಯದು. ಅದಕ್ಕೆ ನೀವು ಪ್ರತಿಕ್ರಿಯಿಸಲು ಹೋದರೆ ವರ್ಚಸ್ಸಿಗೆ ಪೆಟ್ಟು ಬೀಳುವಂತಹ ಸನ್ನಿವೇಶಗಳು ಸೃಷ್ಟಿಯಾಗಲಿವೆ. ಯಾರದೋ ಒತ್ತಡಕ್ಕೆ ಮಣಿದು, ನಿಮಗೆ ಬೇಡದ ಕೆಲವು ವಸ್ತುಗಳನ್ನು ಖರೀದಿ ಮಾಡಿ, ಸಾಲಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ನೀವು ಏನನ್ನೇ ಖರೀದಿ ಮಾಡುವ ಮೊದಲಿಗೆ ಕುಟುಂಬಸ್ಥರ ಜೊತೆಗೆ ಅಥವಾ ಸಂಗಾತಿಯ ಜೊತೆಗೆ ಮಾತನಾಡಿ, ಆ ನಂತರ ನಿರ್ಧಾರವನ್ನು ಮಾಡಿದರೆ ಒಳ್ಳೆಯದು. ನಿಮಗೆ ಏನಾದರೂ ವೇಗವಾಗಿ ವಾಹನವನ್ನು ಓಡಿಸುವಂತಹ ರೂಢಿ ಇದ್ದಲ್ಲಿ ಈ ದಿನ ಸಣ್ಣ ಪುಟ್ಟದಾದರೂ ಅಪಘಾತ, ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಜಾಗ್ರತೆ.
ಹಣಕಾಸಿನ ವಿಚಾರದಲ್ಲಿ ಖರ್ಚು ಕೈ ಮೀರಿ ಹೋಗುತ್ತಿದೆ ಎಂದೇನಾದರೂ ಆತಂಕಕ್ಕೆ ಒಳಗಾಗಿದ್ದಲ್ಲಿ ಅದು ಈ ದಿನ ನಿವಾರಣೆಯಾಗಲಿದೆ. ಒಂದು ನೀವು ಯಾವಾಗಲೋ ಸಾಲ ಎಂದು ಕೊಟ್ಟಿದ್ದನ್ನು ಸಾಲ ಪಡೆದವರು ಹಿಂತಿರುಗಿಸುವ ಸಾಧ್ಯತೆಗಳಿವೆ. ಇಲ್ಲದಿದ್ದರೆ ಹೂಡಿಕೆ ಮಾಡಿ ಅದು ನಷ್ಟದಲ್ಲಿದೆ ಎಂಬ ಕಾರಣಕ್ಕೆ ಬಹುತೇಕ ಮರೆತೇ ಹೋಗಿದ್ದಂತಹ ಇನ್ವೆಸ್ಟ್ ಮೆಂಟ್ ಒಂದು ನೀವು ಅಂದುಕೊಂಡಂತೆ ಅಸಲಿಗಾದರೂ ಅಥವಾ ಅಸಲಿಗೆ ಸ್ವಲ್ಪ ಕಡಿಮೆಯಾದರೂ ಮೊತ್ತ ಸಿಗುವ ಸಾಧ್ಯತೆಗಳಿವೆ. ನಿಮ್ಮ ಮನಸ್ಸಿನಲ್ಲಿ ಬಹಳ ಸಮಯದಿಂದ ಗುರಿ ಎಂದು ಹಾಕಿಕೊಂಡಿದ್ದ ವಿಚಾರ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬರಲಿದೆ.
ನಾನು ಮಾಡಿದ್ಧು ಅನ್ನೋದಕ್ಕೂ ನಾನೇ ಮಾಡಿದ್ದು ಎನ್ನುವುದಕ್ಕೂ ಬಹಳ ವ್ಯತ್ಯಾಸ ಇದೆ. ಈ ವ್ಯತ್ಯಾಸವನ್ನು ತಿಳಿದುಕೊಂಡು ಮಾತನಾಡುವುದು ಬಹಳ ಮುಖ್ಯವಾಗುತ್ತದೆ. ಈ ದಿನ ನಿಮ್ಮನ್ನು ಉದ್ಯೋಗ ಸ್ಥಳದಲ್ಲಿ ಅಹಂಕಾರಿ ಎಂದು ಅಂದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆ ಕಾರಣದಿಂದ ನಿಮ್ಮ ಮೇಲಧಿಕಾರಿಗಳು ಅಥವಾ ನೀವು ಯಾರಿಗೆ ರಿಪೋರ್ಟ್ ಮಾಡಿಕೊಳ್ಳುತ್ತಿರಲ್ಲ, ಅಂಥವರಿಗೆ ಬರೀ ಫೋನ್ ಮೂಲಕ ಮಾತನಾಡುವ ಬದಲು ಇಮೇಲ್ ಕಳಿಸುವುದು ಒಳ್ಳೆಯದು. ಈ ದಿನ ಯಾವುದೇ ಮುಖ್ಯ ಕೆಲಸಗಳಿಗೆ ಮನೆಯಿಂದ ಹೊರಡುವ ಮೊದಲಿಗೆ ಭೂವರಾಹ ಸ್ವಾಮಿ ದೇವರನ್ನು ಮನಸ್ಸಿನಲ್ಲಿ ಸ್ಮರಿಸಿಕೊಳ್ಳಿ.
ನಿಮಗೆ ರೂಢಿ ಇದೆಯೋ ಅಥವಾ ಇದುವರೆಗೂ ಆ ರೀತಿ ಮಾಡಿದ್ದೀರೋ ಇಲ್ಲವೋ ಈ ದಿನವಂತೂ ಜೂಜು, ಪಂಥ ಇಂಥದ್ದನ್ನು ಕಟ್ಟಿ ಹಣ ಕಳೆದುಕೊಳ್ಳಲಿದ್ದೀರಿ. ನೀವು ಒಂದು ವೇಳೆ ಸ್ವಂತ ಹಣ ಇಲ್ಲ ಎಂದು ಅಲವತ್ತುಕೊಂಡರೂ ಸಾಲ ಕೊಟ್ಟಾದರೂ ನಿಮ್ಮಿಂದ ಜೂಜಾಡಿಸಲಿದ್ದಾರೆ ಎಚ್ಚರ. ವಾಹನವನ್ನು ಪಾರ್ಕಿಂಗ್ ಮಾಡುವಾಗ ಮೈತುಂಬ ಕಣ್ಣಾಗಿರಲಿ. ನೀವು ದಂಡ ಕಟ್ಟಬೇಕಾದ ಸನ್ನಿವೇಶ ಎದುರಾಗಲಿದೆ. ಹೊಸದಾಗಿ ಮನೆ ಕಟ್ಟುತ್ತಿರುವವರಿಗೆ ಬ್ಯಾಂಕಿನಿಂದ ಬರಬೇಕಾದ ಹಣದಲ್ಲಿ ಸ್ವಲ್ಪ ಅಡೆತಡೆಗಳು ಎದುರಾಗಬಹುದು. ಆ ಕಾರಣದಿಂದ ಕಾನೂನನ್ನು ಮೀರಿ ಅದನ್ನು ಅಲಾಟ್ ಮಾಡಿಸಿಕೊಳ್ಳಲು ಹೋಗಬೇಡಿ. ನೀವು ಯಾರಿಂದಾದರೂ ಕೊಟೇಶನ್ ಪಡೆದುಕೊಳ್ಳಬೇಕು ಎಂದಾದರೂ ಸರಿ, ಬಾಯಿ ಮಾತಿನಲ್ಲಿ ಬೇಡ.
ನಿಮಗೆ ಯಾವ ಕೆಲಸದಲ್ಲಿ ಪರಿಣತಿ ಇದೆಯೋ ಅದಕ್ಕೆ ತುಂಬಾ ಬೇಡಿಕೆ ಹೆಚ್ಚಾಗಲಿದೆ. ಹೊಸದಾಗಿ ಯಾರಾದರೂ ದೊಡ್ಡಮಟ್ಟದ ಆರ್ಡರ್ ಅಥವಾ ಕಾಂಟ್ರಾಕ್ಟ್ ತೆಗೆದುಕೊಂಡು ಬಂದರೆ ತಕ್ಷಣಕ್ಕೆ ಒಪ್ಪಿಕೊಳ್ಳಲು ಹೋಗಬೇಡಿ. ಸ್ವಲ್ಪ ಸಮಯ ತೆಗೆದುಕೊಂಡು ಆ ನಂತರ ನಾಲ್ಕು ಜನರನ್ನು ವಿಚಾರಿಸಿ ಆಮೇಲೆ ಒಪ್ಪಿಕೊಳ್ಳುವುದು ನಿಮಗೆ ಲಾಭಕರ. ಯಾರಾದರೂ ಈ ದಿನ ನಿಮ್ಮನ್ನು ವಿಪರೀತ ಹೊಗಳುತ್ತಿದ್ದಾರೆ ಎಂದ ಕ್ಷಣ ನೀವು ಪಿಗ್ಗಿ ಬಿಡಬೇಡಿ, ಏಕೆಂದರೆ ನಿಮ್ಮಿಂದ ಆಗಬೇಕಾದ ದೊಡ್ಡ ಮೊತ್ತದ ಕೆಲಸವನ್ನು ತುಂಬಾ ಕಡಿಮೆ ಮೊತ್ತಕ್ಕೆ ಮಾಡಿಸಿಕೊಳ್ಳಬಹುದು ಜಾಗ್ರತೆ. ನಿಮ್ಮಲ್ಲಿ ಕೆಲವರಿಗೆ ಈ ದಿನ ಎಲೆಕ್ಟ್ರಿಕಲ್ ವಾಹನವನ್ನು ಖರೀದಿಸುವ ಅಥವಾ ಬುಕ್ ಮಾಡುವ ಯೋಗ ಇದೆ. ಒಟ್ಟಿನಲ್ಲಿ ಹಲವು ಶುಭ ಬೆಳವಣಿಗೆಗಳನ್ನು ಈ ದಿನ ಕಾಣಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ