ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 2ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಹಳೆ ಪ್ರೇಮಿಯ ನೆನಪು ಈ ದಿನ ನಿಮ್ಮನ್ನು ಕಾಡಬಹುದು. ಯಾವುದೇ ಕೆಲಸವನ್ನು ಪೂರ್ಣ ಮನಸ್ಸಿನಿಂದ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ದೈಹಿಕವಾಗಿ ಶ್ರಮ ಪಡುವಂಥ ಕೆಲಸಗಳಲ್ಲಿ ತೊಡಗಿಕೊಂಡು, ನಿಮ್ಮ ಗಮನವನ್ನು ಬೇರೆಡೆ ತಿರುಗುವಂತೆ ಮಾಡಿಕೊಳ್ಳಿ. ಆಪ್ತರೆನಿಸಿಕೊಂಡವರ ಶಾಪಿಂಗ್ ಮಾಡುವುದಕ್ಕೆ ನಿಮ್ಮನ್ನು ಜತೆಗೆ ಬರುವಂತೆ ಕೇಳಬಹುದು. ಈ ವೇಳೆ ನೀವೂ ಒಂದಿಷ್ಟು ಖರೀದಿಗಾಗಿ ಹಣ ಖರ್ಚು ಮಾಡಲಿದ್ದೀರಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ರಾಜಕಾರಣಿಗಳಿಗೆ ಹೊಸ ಜವಾಬ್ದಾರಿಗಳು ವಹಿಸಿಕೊಳ್ಳಬೇಕಾಗುತ್ತದೆ. ಈ ಹಿಂದೆ ನೀವು ಪಟ್ಟ ಶ್ರಮಕ್ಕೆ ಈಗ ಫಲ ದೊರೆಯಲಿದೆ. ಜಾಹೀರಾತು ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರು ಅಥವಾ ಅದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ದೊಡ್ಡ ಮೊತ್ತದ ಆರ್ಡರ್ ಸಿಗಬಹುದು. ವಿದೇಶಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಸ್ಥಳ ಬದಲಾವಣೆ ಮಾಡುವಂಥ ಯೋಗ ಇದ್ದು, ವಿಪರೀತ ಬಿಜಿ ಆಗಿಬಿಡುತ್ತೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಯಾರಿಗೂ ಹೇಳಬೇಡಿ ಎಂದು ನೀವು ಹೇಳಿದ್ದ ಸಂಗತಿಯೊಂದು, ಅದೇ ವ್ಯಕ್ತಿಯಿಂದ ಹಲವರಿಗೆ ತಿಳಿಯುವಂತಾಗುತ್ತದೆ. ಮುಜುಗರದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಇನ್ನು ಕೆಲವರು ಮನೆಯ ನವೀಕರಣ, ದುರಸ್ತಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಬಹಳ ಹಿಂದೆ ಖರೀದಿ ಮಾಡಿದ್ದ ಆಸ್ತಿಯೊಂದಕ್ಕೆ ಈಗ ಅತ್ಯುತ್ತಮವಾದ ಬೆಲೆ ದೊರೆಯುತ್ತದೆ. ತಂದೆಯ ಸ್ನೇಹಿತರು ಸಹಾಯ ಕೇಳಿಕೊಂಡು ಬರಬಹುದು.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ವೃತ್ತಿ, ಉದ್ಯೋಗಕ್ಕೆ ಸಂಬಂಧಿಸಿದ ಕೋರ್ಸ್ ಸೇರ್ಪಡೆ ಆಗುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಇನ್ನಷ್ಟು ದಾಖಲಾತಿಗಳು ಬೇಕು ಎಂದು ಕೇಳಬಹುದು. ಮೊದಲ ಬಾರಿಗೆ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್ ಇಂಥದ್ದರಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂದಾದರೆ ಆನ್ ಲೈನ್, ವಾಟ್ಸಾಪ್ ಇಂಥವುಗಳ ಮೂಲಕ ಬರುವ ಸಲಹೆಗಳನ್ನು ನಂಬಿಕೊಂಡು ಹಣ ಹೂಡದಿರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಇತರರ ವೈಯಕ್ತಿಕ ವಿಷಯಗಳಲ್ಲಿ ವಿಪರೀತ ಆಸಕ್ತಿ ತೋರಿಸಬೇಡಿ. ಇದರಿಂದ ನಿಮಗೆ ಏನೋ ಲಾಭ ಇದೆ ಎಂದು ಭಾವಿಸುವ ಸಾಧ್ಯತೆ ಇದೆ. ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ದೇವತಾ ಆರಾಧನೆಗಳಿಗೆ ನಿಮಗೆ ಆಹ್ವಾನ ಬರಲಿದೆ. ಐಸ್ ಕ್ರೀಮ್, ಲಸ್ಸಿ ಇಂಥ ತಣ್ಣಗಿನ ಪದಾರ್ಥಗಳನ್ನು ಸೇವನೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಕಫ, ಶೀತದಂಥ ಅನಾರೋಗ್ಯ ಸಮಸ್ಯೆಗಳು ಎದುರಾಗಬಹುದು.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮ ಮಾತಿಗೆ ಮನ್ನಣೆ, ಗೌರವ ದೊರೆಯುವುದು ಹೆಚ್ಚಾಗುತ್ತದೆ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತಿನಂತೆ ಯಾರದೋ ಮಾತು ನಂಬಿಕೊಂಡು, ಆಪ್ತರ ಮೇಲೆ ಅನುಮಾನ ಮೂಡುವ ಮುನ್ನ ಮಾತುಕತೆಯಿಂದ ವಿಚಾರವನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸಿ. ಕ್ರೆಡಿಟ್ ಕಾರ್ಡ್ ಬಿಲ್, ಇಎಂಐ ಕಟ್ಟುವುದನ್ನು ನೀವೇ ಮರೆಯುತ್ತೀರೋ ಅಥವಾ ಏನೋ ಅನನುಕೂಲ ಆಗುತ್ತದೋ ಅದು ಸಮಸ್ಯೆಯಾಗಿ ಮಾರ್ಪಡಬಹುದು, ಗಮನಿಸಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಯಾವುದೇ ಮುಖ್ಯ ಕೆಲಸ ಈ ದಿನ ಇದ್ದರೆ, ಅದನ್ನು ಮುಂದೂಡಬಹುದು ಅಂತಾದಲ್ಲಿ ಈ ದಿನ ಮುಂದಕ್ಕೆ ಹಾಕಿ. ಸುಬ್ರಹ್ಮಣ್ಯ ಸ್ವಾಮಿ ಆರಾಧನೆಯನ್ನು ಮಾಡಿ. ಡೆಡ್ ಲೈನ್ ಒಳಗಾಗಿ ಕೆಲಸ ಮಾಡಿ ಮುಗಿಸುವ ಬಗ್ಗೆ ಗಮನ ನೀಡಿ. ನಿಮ್ಮ ಬಗ್ಗೆ ಇತರರು ತೋರಿಸುವ ಅನುಕಂಪ ಬಹಳ ಬೇಸರ ಉಂಟು ಮಾಡಲಿದೆ. ಇತರರ ನೆರವು ನಿಮಗೆ ಅಗತ್ಯ ಇಲ್ಲ ಎಂದು ಹೇಳಿಬಿಡಬೇಕು ಎಂಬಷ್ಟರ ಮಟ್ಟಿಗೆ ಸಿಟ್ಟು ಬರಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಕಮಿಷನ್ ವ್ಯವಹಾರಗಳನ್ನು ಮಾಡತ್ತಿರುವವರಿಗೆ ಈ ದಿನ ಉತ್ತಮವಾದ ಆದಾಯ ಇದೆ. ಅತಿಯಾದ ಆಲೋಚನೆಯಿಂದ ನಿಮಗೆ ಬರಬೇಕಾದ ಲಾಭದ ಪ್ರಮಾಣದಲ್ಲಿ ಕಡಿಮೆ ಆಗಬಹುದು. ಈ ದಿನದ ಒಂದಿಷ್ಟು ಸಮಯ ಇತರರ ಸಲುವಾಗಿ ಮೀಸಲಿಡುವಂಥ ಸ್ಥಿತಿ ನಿರ್ಮಾಣ ಆಗುತ್ತದೆ. ಹಳೇ ಪರಿಚಯ ಎಂದು ಹೇಳಿಕೊಂಡು ಕೆಲ ವ್ಯಕ್ತಿಗಳು ನಿಮ್ಮ ಬಳಿ ಅಲ್ಪಾವಧಿಗೆ ಸಾಲ ಕೇಳಿಕೊಂಡು ಬರಬಹುದು. ಈ ಸನ್ನಿವೇಶ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ಸ್ಥಿತಿಯನ್ನು ಅರಿತುಕೊಳ್ಳದೆ ಎಲ್ಲರೂ ಚುಚ್ಚು ಮಾತನಾಡುತ್ತಾರಲ್ಲಾ ಎಂದೆನಿಸುತ್ತದೆ. ಬಹಳ ಸಮಯದಿಂದ ಮುರಿಸಬಾರದು ಅಥವಾ ತೆಗೆದುಕೊಳ್ಳಬಾರದು ಎಂದುಕೊಂಡಿದ್ದ ಉಳಿತಾಯ ಅಥವಾ ಹೂಡಿಕೆಯನ್ನು ತೆಗೆದುಕೊಳ್ಳಬೇಕಾದ ಸ್ಥಿತಿ ಉದ್ಭವಿಸುತ್ತದೆ. ನಿಮ್ಮ ಪ್ರಾಮಾಣಿಕತೆ, ನೇರವಂತಿಕೆಯಿಂದ ನಷ್ಟ ಅನುಭವಿಸುವಂತಾಯಿತು ಎಂದು ಬಹಳವಾಗಿ ಅನ್ನಿಸುತ್ತದೆ. ಆದರೆ ಈಗಿನ ಪರಿಸ್ಥಿತಿ ತಾತ್ಕಾಲಿಕ ಮಾತ್ರ.
ಲೇಖನ- ಎನ್.ಕೆ.ಸ್ವಾತಿ