ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 3ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮವರು ಯಾರು, ನಿಮ್ಮಿಂದ ಕೇವಲ ಅನುಕೂಲ ಪಡೆದುಕೊಂಡು, ಕಷ್ಡದ ಸಮಯದಲ್ಲಿ ದೂರ ನಿಲ್ಲುವವರು ಯಾರು ಎಂಬುದು ಈ ದಿನ ಗೊತ್ತಾಗುತ್ತದೆ. ಡಿಜಿಟಲ್ ಸ್ವತ್ತುಗಳಲ್ಲಿ ಹೂಡಿಕೆ ಮಾಡಿರುವವರು ಅದರಿಂದ ಸ್ವಲ್ಪ ಮೊತ್ತವನ್ನು ಹಿಂಪಡೆದುಕೊಳ್ಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಉದ್ಯೋಗಸ್ಥರಿಗೆ ಮಿಶ್ರ ಫಲಿತಾಂಶ ದೊರೆಯುವ ದಿನ ಇದಾಗಿರಲಿದೆ. ಮಹಿಳೆಯರು ಅಡುಗೆ ಮಾಡುವಾಗ ಚೂಪಾದ ವಸ್ತುಗಳನ್ನು ಬಳಸುವ ವೇಳೆ ಎಚ್ಚರಿಕೆಯಿಂದ ಇರಬೇಕು.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಗುರಿಯಿಟ್ಟು ಹೊಡೆದರೆ ಬೀಳದೆ ಇರುವುದು ಯಾವುದೂ ಇಲ್ಲ. ನಿಮ್ಮ ಏಕಾಗ್ರತೆ ಬಹಳ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಭವಿಷ್ಯದಲ್ಲಿ ಮಡೆಯಲಿರುವ ಅತಿದೊಡ್ಡ ಘಟನೆಯೊಂದರ ಸುಳಿವು ನಿಮಗೆ ಸಿಗಲಿದೆ. ಯಾರೂ ಊಹಿಸದ ರೀತಿಯಲ್ಲಿ ನಿಮ್ಮ ಕೆಲವು ನಡೆಗಳು ಈ ದಿನ ಇರಲಿವೆ. ದಿನದ ದ್ವಿತೀಯಾರ್ಧದಲ್ಲಿ ಮನರಂಜನೆ, ಹೋಟೆಲ್- ರೆಸ್ಟೋರೆಂಟ್ ಇಂಥವುಗಳಿಗೆ ಸ್ನೇಹಿತರು ಜತೆಗೆ ತೆರಳುವಂಥ ಯೋಗ ಇದೆ. ಹೊಸ ಮೊಬೈಲ್ ಫೋನ್, ಗ್ಯಾಜೆಟ್ ಖರೀದಿಸುವುದಕ್ಕೆ ಖರ್ಚು ಮಾಡಲಿದ್ದೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಮಹತ್ತರ ಒಪ್ಪಂದ ಅಥವಾ ವಿಚಾರಗಳಲ್ಲಿ ನಿಮ್ಮ ಅಭಿಪ್ರಾಯ, ನಿರ್ಧಾರಗಳಿಗೆ ಪ್ರಾಮುಖ್ಯ ಇರುತ್ತದೆ. ವಿವಾಹ ವಯಸ್ಕರಾಗಿದ್ದಲ್ಲಿ ಮದುವೆಗೆ ಪ್ರಯತ್ನ ಪಡುತ್ತಿದ್ದರೆ ಸೂಕ್ತ ಸಂಬಂಧವೊಂದು ಹುಡುಕಿಕೊಂಡು ಬರುವಂಥ ಯೋಗ ಇದೆ. ದಾಕ್ಷಿಣ್ಯಕ್ಕೆ ಸಿಲುಕಿ, ಯಾರದೇ ಸಾಲಕ್ಕೂ ಜಾಮೀನಾಗಿ ನಿಲ್ಲದಿರಿ. ಮನೆಯಲ್ಲಿ ಮುಖ್ಯ ಕಾಗದ- ಪತ್ರಗಳು ಸಮಯಕ್ಕೆ ಸರಿಯಾಗಿ ಸಿಗದೆ ಆತಂಕಕ್ಕೆ ಗುರಿ ಆಗಬಹುದು. ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸೆಲೆಕ್ಷನ್ ಇದ್ದಲ್ಲಿ ಯಶಸ್ಸಿನ ಸಾಧ್ಯತೆ ಹೆಚ್ಚು.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಸ್ವಂತ ವ್ಯವಹಾರ ಮಾಡುವಂಥವರಿಗೆ ಆದಾಯದ ಹರಿವು, ಆದಾಯದ ಮೂಲ ಎರಡೂ ಜಾಸ್ತಿ ಆಗಲಿದೆ. ಯಾರದೋ ಸ್ವಂತ ಲಾಭಕ್ಕಾಗಿ ನಿಮ್ಮ ಹೆಸರನ್ನು ಬಳಸಿಕೊಳ್ಳುವಂಥ ಅವಕಾಶಗಳಿವೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಕ್ವಾರಿ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ತಾತ್ಕಾಲಿಕ ಅಡೆತಡೆಗಳು ಎದುರಾಗಬಹುದು. ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಉತ್ತಮವಾದ ಸುದ್ದಿ ಹಾಗೂ ಬೆಳವಣಿಗೆ ಇದೆ. ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಶುಭ ವಾರ್ತೆ ಇದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಬಂಧುಗಳು, ಸ್ನೇಹಿತರ ಜತೆಗೆ ಉತ್ತಮವಾದ ಸಮಯ ಕಳೆಯುವ ಯೋಗ ಇದೆ. ಇದರ ಜತೆಗೆ ರುಚಿಕಟ್ಟಾದ ಭೋಜನವನ್ನು ಸವಿಯಲಿದ್ದೀರಿ. ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದ ವಸ್ತು ಅಥವಾ ವ್ಯಕ್ತಿ ಈ ದಿನ ನಿಮ್ಮ ಪಾಲಿಗೆ ದೊರೆಯುವ ಸಾಧ್ಯತೆ ಇದೆ. ಆಧ್ಯಾತ್ಮಿಕ ಜೀವನದಲ್ಲಿ ಇರುವವರಿಗೆ ಪ್ರಯತ್ನಗಳಲ್ಲಿ ಉತ್ತಮ ಯಶಸ್ಸು ದೊರೆಯಲಿದೆ. ಹೋಟೆಲ್ ವ್ಯವಹಾರಗಳನ್ನು ನಡೆಸುತ್ತಿರುವವರು ವ್ಯವಹಾರ ವಿಸ್ತರಣೆಗೆ ಮುಂದಾಗಲಿದ್ದೀರಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮ ಮಾತಿನ ಪ್ರಭಾವ, ಗೌರವ ಎರಡೂ ಹೆಚ್ಚಾಗಲಿದೆ. ಹೊಸಬರ ಎದುರಿಗೆ ನಿಮ್ಮ ಆದಾಯದ ಬಗ್ಗೆಯಾಗಲೀ ಅಥವಾ ನಿಮ್ಮ ವ್ಯವಹಾರದ ಗುಟ್ಟನ್ನಾಗಲೀ ಹಂಚಿಕೊಳ್ಳಬೇಡಿ. ಸಾವಯವ ಕೃಷಿ ಮಾಡುವಂಥವರಿಗೆ ಗೌರವ, ಸನ್ಮಾನ ಹಾಗೂ ಆದಾಯ ಹೆಚ್ಚಳ ಆಗುವಂಥ ಯೋಗ ಇದೆ. ಯಾವುದೇ ನಗರ ಅಥವಾ ಪಟ್ಟಣದ ಹೊರಭಾಗದಲ್ಲಿ ವಾಸ ಮಾಡುವಂಥವರು ಬೆಲೆ ಬಾಳುವ ವಸ್ತುಗಳ ಬಗ್ಗೆ ಹೆಚ್ಚು ಜಾಗ್ರತೆಯನ್ನು ವಹಿಸಿ. ನಿಮ್ಮ ಜವಾಬ್ದಾರಿಯನ್ನು ಇತರರಿಗೆ ವರ್ಗಾವಣೆ ಮಾಡಬೇಡಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಈ ದಿನ ಶಿಸ್ತು, ಸಮಯ ಪಾಲನೆಗೆ ಹೆಚ್ಚಿನ ಒತ್ತು ನೀಡಲಿದ್ದೀರಿ. ನಿಮ್ಮಿಂದ ಏನು ಮಾಡುವುದಕ್ಕೆ ಸಾಧ್ಯ ಹಾಗೂ ಏನನ್ನು ಮಾಡುವುದಕ್ಕೆ ಆಗುವುದಿಲ್ಲ ಎಂಬ ಬಗ್ಗೆ ಸ್ಪಷ್ಟವಾದ ಕಲ್ಪನೆ ನಿಮಗೆ ಇರಲಿದೆ. ಸ್ವಂತ ಖರ್ಚಿನಲ್ಲಿ ಇತರರ ಕೆಲಸ ಮಾಡಿ ಮುಗಿಸಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಬಂದದ್ದೆಲ್ಲ ಬರಲಿ, ಆ ಭಗವಂತನ ದಯೆ ಇರಲಿ ಎಂಬ ತತ್ವದಲ್ಲಿ ಮುಂದುವರಿಯಿರಿ, ಹೊಸ ಹೊಸ ಅನುಕೂಲಗಳು ನಿಮ್ಮ ಪಾಲಿಗೆ ಒದಗಿ ಬರಲಿದೆ. ಇತರರು ಆಗುವುದಿಲ್ಲ ಎಂದು ಕೈಬಿಟ್ಟ ಕೆಲಸವನ್ನು ನೀವು ಮಾಡಿ ಮುಗಿಸಲಿದ್ದೀರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮ ವರ್ತನೆ ಬಗ್ಗೆ ನಾನಾ ಜನರಿಂದ ಆಕ್ಷೇಪಗಳು ಕೇಳಿಬರುವ ಸಾಧ್ಯತೆ ಇದೆ. ಎಲ್ಲ ಸಮಯಕ್ಕೂ ನೇರವಂತಿಕೆ ಅಥವಾ ಮುಖಕ್ಕೆ ಹೊಡೆದಂತೆ ಮಾತನಾಡುವ ವರ್ತನೆ ಸರಿಹೋಗುವುದಿಲ್ಲ. ಆದ್ದರಿಂದ ಸಮಯಕ್ಕೆ ಸರಿಯಾಗಿ ವರ್ತಿಸುವುದನ್ನು ರೂಢಿಸಿಕೊಳ್ಳಿ. ಹೊಸ ವಾಹನವನ್ನು ಖರೀದಿಸಿರುವವರು ಇವತ್ತು ಒಂದು ದಿನ ಚಾಲನೆ ಮಾಡದಿರುವುದು ಉತ್ತಮ. ಒಂದು ವೇಳೆ ಅನಿವಾರ್ಯ ಆದಲ್ಲಿ ಸಾಧ್ಯವಾದಷ್ಟೂ ಎಚ್ಚರಿಕೆಯಿಂದ ಇರಬೇಕು. ವಾಹನದಲ್ಲಿ ಆಂಜನೇಯನ ಪುಟ್ಟ ವಿಗ್ರಹ ಅಥವಾ ಚಿತ್ರ ಇಟ್ಟುಕೊಳ್ಳಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಎಲ್ಲರ ಆಕ್ಷೇಪ, ಅನುಮಾನಗಳಿಗೆ ಸರಿಯಾದ ಉತ್ತರವನ್ನು ಈ ದಿನದ ನಿಮ್ಮ ಕಾರ್ಯ ಚಟುವಟಿಕೆ ನೀಡಲಿದೆ. ಸಾಧ್ಯವಾದಷ್ಟೂ ಈ ದಿನ ಶುದ್ಧ ನೀರು ಹಾಗೂ ಗುಣಮಟ್ಟದ ಆಹಾರ ಸೇವನೆ ಕಡೆಗೆ ಲಕ್ಷ್ಯ ನೀಡಿ. ಏಕೆಂದರೆ ಈ ದಿನ ಫುಡ್ ಪಾಯಿಸನ್ ಥರದ ಸಮಸ್ಯೆಗಳು ಕಾಡಬಹುದು. ಇನ್ನು ಈ ದಿನ ದುರ್ಗಾದೇವಿಯ ದೇವಸ್ಥಾನಕ್ಕೆ ಹೋಗಿ, ನಿಮ್ಮಿಂದ ಸಾಧ್ಯವಾದ ಸೇವೆಯನ್ನು ಮಾಡಿಸಿ. ಅಭಿಷೇಕ, ಅರ್ಚನೆ ಯಾವುದಾದರೂ ಪರವಾಗಿಲ್ಲ. ಇನ್ನು ಹತ್ತು ನಿಮಿಷವಾದರೂ ಧ್ಯಾನ ಮಾಡಿ.
ಲೇಖನ- ಎನ್.ಕೆ.ಸ್ವಾತಿ