Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮೇ 14ರ ದಿನಭವಿಷ್ಯ

| Updated By: ರಮೇಶ್ ಬಿ. ಜವಳಗೇರಾ

Updated on: May 13, 2024 | 6:31 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 14ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮೇ 14ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 14ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಒಂದೇ ರೀತಿಯ ಕೆಲಸದಿಂದ ಬೇಸರ ಆಗುವಂಥ ಸನ್ನಿವೇಶಗಳು ಉದ್ಭವಿಸಲಿವೆ. ನಿಮ್ಮಲ್ಲಿ ಕೆಲವರಿಗೆ, ಅದರಲ್ಲೂ ಉದ್ಯೋಗಸ್ಥರಾಗಿ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಈ ದಿನ ರಜಾ ತೆಗೆದುಕೊಂಡು ಬಿಡೋಣ ಅನ್ನಿಸಲಿದೆ. ಹಾಗೆ ರಜಾ ಹಾಕುವುದರಲ್ಲಿ ಏನೂ ತಪ್ಪಿಲ್ಲ. ಮನೆಯಲ್ಲಿ ಕುಟುಂಬಸ್ಥರ ಜತೆಗೆ ಹಳೇ ವಿಚಾರಗಳನ್ನು ಎಳೆದುಕೊಂಡು, ಮಾತಿಗೆ ಮಾತು ಬೆಳೆಸಬೇಡಿ. ಅದರಲ್ಲೂ ಮನೆಯ ಹಿರಿಯರಿಗೆ ಮನಸ್ಸಿಗೆ ನೋವಾಗುವಂಥ ಮಾತುಗಳನ್ನು ಆಡದಿರಿ. ನಿಮ್ಮ ಶಿಕ್ಷಣ, ಉದ್ಯೋಗ ಅಥವಾ ಬೇರೆ ಯಾವುದೇ ವಿಚಾರವನ್ನು ಇತರರ ಜತೆಗೆ ಹೋಲಿಸಿಕೊಂಡು, ನೀವು ಬೇಸರ ಮಾಡಿಕೊಂಡು, ಮನೆಯ ವಾತಾವರಣ ಹಾಳು ಮಾಡದಿರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಮಾತಿನಲ್ಲಿ ಒಂದು ಬಗೆಯ ಆಕರ್ಷಣೆ ಇರುತ್ತದೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧಗಳು ದೊರೆಯುವಂಥ ಸಾಧ್ಯತೆ ಇದೆ. ಈ ಹಿಂದೆ ನೀವು ಪಟ್ಟ ಕಷ್ಟದ ಫಲವಾಗಿ ದೊರೆತ ಯಶಸ್ಸನ್ನು ಗುರುತಿಸಿ, ನಿಮಗೆ ಉದ್ಯೋಗದ ಆಫರ್ ನೀಡಬಹುದು. ಸಂಬಳದ ವಿಚಾರದಲ್ಲಿ ಗಟ್ಟಿಯಾಗಿ ನಿಲುವನ್ನು ಇಟ್ಟುಕೊಳ್ಳಿ, ಬದಲಾಯಿಸಿಕೊಳ್ಳಲು ಹೋಗದಿರಿ. ಹೊಸ ಬಟ್ಟೆ, ಶೂ, ವಾಚ್ ಮೊದಲಾದವುಗಳನ್ನು ಖರೀದಿಸುವುದಕ್ಕಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಪುಷ್ಕಳವಾದ ಊಟ- ತಿಂಡಿಗಳನ್ನು ಸವಿಯುವಂಥ ಯೋಗ ನಿಮ್ಮ ಪಾಲಿಗಿದೆ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ಸಾಮಾಜಿಕ ಸ್ಥಾನ- ಮಾನಗಳನ್ನು ಹೆಚ್ಚು ಮಾಡಿಕೊಳ್ಳುವ ಕಡೆಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಕಾರು ಖರೀದಿಸುವುದಕ್ಕೆ ನಿರ್ಧರಿಸುವ ಸಾಧ್ಯತೆಗಳಿವೆ ಅಥವಾ ಇದಕ್ಕಾಗಿ ಅಡ್ವಾನ್ಸ್ ಪಾವತಿಸುವುದಕ್ಕೂ ಅವಕಾಶಗಳಿವೆ. ಹಳೆಯ ಪ್ರೇಮ ಸಂಬಂಧಗಳು ಅಥವಾ ಮುರಿದು ಬಿದ್ದ ಪ್ರೀತಿ- ಪ್ರೇಮ ವಿಚಾರಗಳು ಮತ್ತೆ ಚಿಗುರೊಡೆಯುವ ಅವಕಾಶಗಳಿವೆ. ಈ ದಿನ ಯಾವುದೇ ಮುಖ್ಯ ಕಾಗದ ಪತ್ರಗಳಿಗೆ ಸಹಿ ಹಾಕುವ ಮುನ್ನ ಸರಿಯಾಗಿ ಓದಿಕೊಳ್ಳಿ. ಒಂದು ವೇಳೆ ಆತುರದಲ್ಲಿ ಇದ್ದೀರಿ ಎಂದಾದಲ್ಲಿ ಸ್ವಲ್ಪ ಸಮಯವನ್ನು ಕೇಳಿ, ಓದಿ ಆ ನಂತರವೇ ಸಹಿ ಮಾಡುವುದು ಉತ್ತಮ. ಇಲ್ಲದಿದ್ದಲ್ಲಿ ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ದಮ್ಮಯ್ಯಗುಡ್ಡೆ ಹಾಕಿ ನಿಮ್ಮ ಬಳಿ ಕೆಲಸ ಮಾಡಿಸಿಕೊಳ್ಳುವುದಕ್ಕೆ ಕೆಲವರು ಪ್ರಯತ್ನಿಸಲಿದ್ದಾರೆ. ಇದು ಈ ಕ್ಷಣದ ಅಗತ್ಯ. ಹಣಕಾಸಿನ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೆ ನೇರಾನೇರವಾಗಿ ಮಾತನಾಡಿ. ಏಕೆಂದರೆ, ಈ ದಿನ ನೀವು ಹಣಕ್ಕೆ ಬೇಡಿಕೆ ಇಡುವ ಸ್ಥಿತಿಯಲ್ಲಿ ಇರುತ್ತೀರಿ. ವೃತ್ತಿನಿರತರು ಅದಕ್ಕೆ ಅಗತ್ಯ ಇರುವ ಎಲೆಕ್ಟ್ರಾನಿಕ್ ವಸ್ತುಗಳು ಅಥವಾ ಸಲಕರಣೆಗಳನ್ನು ಖರೀದಿ ಮಾಡುವಂಥ ಸಾಧ್ಯತೆ ಇದೆ. ಇವುಗಳನ್ನು ಕಡಿಮೆ ದುಡ್ಡಲ್ಲಿ ಖರೀದಿಸುವುದಕ್ಕೆ ಸ್ನೇಹಿತರು, ಸಂಬಂಧಿಕರು ಸಹಾಯ ಮಾಡುವುದಕ್ಕೆ ಸಾಧ್ಯತೆ ಇದೆ. ಅಥವಾ ಇದಕ್ಕೆ ಸಂಬಂಧಿಸಿದಂತೆ ಯಾರಾದರೂ ಪರಿಚಿತರು ಇದ್ದಾರಾ ಎಂಬುದನ್ನು ನೆನಪಿಸಿಕೊಳ್ಳಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಅನುಭವ, ಜ್ಞಾನ, ತಿಳಿವಳಿಕೆ ಏನೇನೂ ಅಲ್ಲ ಎಂಬ ರೀತಿಯಲ್ಲಿ ಮೇಲಧಿಕಾರಿಗಳ ವರ್ತನೆ ಇರಲಿದೆ. ಈ ದಿನ ಪ್ರಮುಖವಾದಂಥ ಭೇಟಿ, ಚರ್ಚೆಗಳು ಇದ್ದಲ್ಲಿ ಸಿದ್ಧತೆಯನ್ನು ಚೆನ್ನಾಗಿ ಮಾಡಿಕೊಳ್ಳಿ. ಇನ್ನು ನೀವು ಯಾರನ್ನು ಭೇಟಿ ಆಗುತ್ತೀರೋ ಅವರಿಗೆ ಹೆಚ್ಚು ಮಾತನಾಡುವುದಕ್ಕೆ ಅವಕಾಶವನ್ನು ನೀಡಿ. ಒಂದು ವೇಳೆ ಅಭಿಪ್ರಾಯ ಭೇದಗಳು ಇದ್ದಲ್ಲಿ ಅದನ್ನು ವಾಗ್ವಾದದ ಮಟ್ಟಕ್ಕೆ ತೆಗೆದುಕೊಂಡು ಹೋಗದಿರಿ. ಸೋದರ ಸಂಬಂಧಿಗಳು ನಿಮ್ಮ ಬಳಿ ನೆರವು ಕೇಳಿಕೊಂಡು ಬರುವಂಥ ಸಾಧ್ಯತೆಗಳಿವೆ. ಇನ್ನು ಮನೆ ನಿರ್ಮಾಣದಲ್ಲಿ ತೊಡಗಿರುವವರು ಬಜೆಟ್ ಕೈ ಮೀರಿ ಹೋಗುತ್ತದೆ ಎಂಬ ಕಾರಣಕ್ಕೆ ಕೆಲವು ಯೋಜನೆ- ಆಲೋಚನೆಗಳನ್ನು ಕೈ ಬಿಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ವ್ಯವಹಾರದ ವಿಚಾರವಾಗಿ ಹೂಡಿಕೆ ಮಾಡುವುದಕ್ಕೋ ಅಥವಾ ನೀವು ಈಗಾಗಲೇ ಮಾಡುತ್ತಿರುವ ವ್ಯಾಪಾರದಲ್ಲಿ ತಾವೂ ಪಾಲುದಾರರು ಆಗುವ ಉದ್ದೇಶಕ್ಕೋ ಕೆಲವರು ನಿಮ್ಮನ್ನು ಭೇಟಿ ಆಗಬಹುದು ಅಥವಾ ಫೋನ್ ಮೂಲಕ ಸಂಪರ್ಕಿಸುವ ಸಾಧ್ಯತೆಗಳಿವೆ. ಈ ವಿಚಾರದಲ್ಲಿ ಕುಟುಂಬಸ್ಥರ ಆಲೋಚನೆ ಒಂದು ಬಗೆಯಲ್ಲೂ ನಿಮ್ಮ ಚಿಂತನೆ ಇನ್ನೊಂದು ದಿಸೆಯಲ್ಲೂ ಸಾಗುವ ಕಾರಣಕ್ಕೆ ಗೊಂದಲ ಹೆಚ್ಚಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಕಣ್ಣಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈಗಾಗಲೇ ಇದ್ದಲ್ಲಿ ಅದು ಉಲ್ಬಣ ಆಗುವ ಅವಕಾಶಗಳಿವೆ. ಆದ್ದರಿಂದ ಕೂಡಲೇ ಸೂಕ್ತ ಔಷಧೋಪಚಾರಗಳನ್ನು ಮಾಡಿಕೊಳ್ಳುವುದು ಉತ್ತಮ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮ ಮನಸ್ಸಿಗೆ ಬಹಳ ಹತ್ತಿರವಾದವರು, ಪ್ರಿಯವಾದವರನ್ನು ಭೇಟಿ ಆಗುವ, ಉತ್ತಮ ಸಮಯ ಕಳೆಯುವಂಥ ಯೋಗ ನಿಮ್ಮ ಪಾಲಿಗೆ ಇದೆ. ನಿಮ್ಮಲ್ಲಿ ಕೆಲವರು ಈ ದಿನ ಹೋಟೆಲ್, ರೆಸ್ಟೋರೆಂಟ್, ಸಿನಿಮಾ ಅಥವಾ ಯಾವುದಾದರೂ ಮನರಂಜನೆಗಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ತಿಂಗಳಾ ತಿಂಗಳು ಆಗುವ ಖರ್ಚುಗಳು, ಸಾಲ ಮರುಪಾವತಿ ಇತ್ಯಾದಿಗಳ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳಲಿದ್ದೀರಿ. ಸ್ನೇಹಿತರ ಸಹಾಯದಿಂದ ಹೊಸ ವ್ಯಾಪಾರ- ವ್ಯವಹಾರದ ಬಗ್ಗೆ ಯೋಜನೆ ರೂಪಿಸುವಂಥ ಸಾಧ್ಯತೆ ಇದೆ. ದುರ್ಗಾದೇವಿಯ ದೇವಸ್ಥಾನಕ್ಕೆ ಅಥವಾ ಮನೆಯಲ್ಲಿ ದುರ್ಗಾ ದೇವಿಯ ವಿಗ್ರಹ ಇದ್ದರೆ ಅದಕ್ಕೆ ಹೂವನ್ನು ಸಮರ್ಪಣೆ ಮಾಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಈ ದಿನ ಒಂದು ಬಗೆಯ ಉತ್ಸಾಹ ನಿಮ್ಮಲ್ಲಿ ಇರಲಿದೆ. ನಿಮ್ಮ ದಿರಿಸು, ಒಡವೆ, ವಸ್ತುಗಳು ಪ್ರತಿಯೊಂದರಲ್ಲೂ ಬಹಳ ಒಪ್ಪ- ಓರಣವಾಗಿ ಸಿದ್ಧವಾಗಿ, ಕನಿಷ್ಠ ಪಕ್ಷ ನಿಮ್ಮ ಮನೆಯ ಹತ್ತಿರದ ಮಾಲ್ ಗಾದರೂ ಹೋಗಿಬರಲಿದ್ದೀರಿ. ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗಂತೂ ಬಹಳ ಸಂತಸದ ದಿನ ಇದಾಗಿರಲಿದೆ. ಪ್ರೀತಿಪಾತ್ರರಾದವರು ನಿಮಗೆ ಉಡುಗೊರೆಗಳನ್ನು ಕೊಡುವ ಸಾಧ್ಯತೆ ಸಹ ಇದೆ. ಇನ್ನು ಮ್ಯೂಚುವಲ್ ಫಂಡ್, ಷೇರುಗಳು ಇಂಥದ್ದರಲ್ಲಿ ಹೂಡಿಕೆ ಮಾಡಿದ್ದವರಿಗೆ ಲಾಭ ಬರುವಂಥ ಯೋಗ ಇದೆ. ಈ ದಿನದ ದ್ವಿತೀಯಾರ್ಧದಲ್ಲಿ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಅದರಲ್ಲೂ ಪಾರ್ಟಿಯೇ ಆಗಬಹುದು ಅಥವಾ ಅಂಥದ್ದೊಂದು ಸನ್ನಿವೇಶವಂತೂ ಇರಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮಗೆ ಈಗಿರುವ ಸಾಲಗಳನ್ನು ತೀರಿಸಿಕೊಳ್ಳುವುದಕ್ಕೆ ತೀವ್ರವಾಗಿ ಪ್ರಯತ್ನಿಸಲಿದ್ದೀರಿ ಅಥವಾ ಆಲೋಚಿಸಲಿದ್ದೀರಿ. ಈಗ ಮಾಡುತ್ತಿರುವ ಕೆಲಸದ ಜತೆಗೆ ಬೇರೆ ವ್ಯವಹಾರವನ್ನು ಆರಂಭಿಸುವ ಬಗ್ಗೆ ಆಲೋಚನೆ ಮಾಡುತ್ತೀರಿ. ಸ್ನೇಹಿತರು, ಸಂಬಂಧಿಕರು ಸಹ ನಿಮ್ಮ ಜತೆಗೆ ಸೇರಿಕೊಳ್ಳುವುದಾಗಿ ಕೇಳಿಕೊಳ್ಳಲಿದ್ದಾರೆ. ರಕ್ತದ ಸಮಸ್ಯೆ ಆಗಿ ಹುಣ್ಣು, ಕುರದಂಥದ್ದು ಆಗುವ ಸಾಧ್ಯತೆ ಇದೆ. ಆದ್ದರಿಂದ ಸಣ್ಣದಾಗಿ ಕಾಣಿಸಿಕೊಂಡರೂ ಕೂಡಲೇ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಿ. ಈಗಾಗಲೇ ಸಮಸ್ಯೆ ಇದೆ ಎಂದಾದಲ್ಲಿ, ಇನ್ನೂ ವೈದ್ಯರ ಬಳಿ ತೆರಳಿಲ್ಲ ಅಂತಾದರೆ ತಕ್ಷಣವೇ ಔಷಧೋಪಚಾರ ಮಾಡುವುದು ಕ್ಷೇಮ.

ಲೇಖನ- ಎನ್‌.ಕೆ.ಸ್ವಾತಿ