2024ರ ಹತ್ತನೇ ತಿಂಗಳಾದ ಅಕ್ಟೋಬರ್ನಲ್ಲಿ ಗ್ರಹಗತಿಗಳ ಬದಲಾವಣೆ ಆಗಲಿದೆ. ಸೂರ್ಯನು ನೀಚರಾಶಿಯಾದ ತುಲಾ ರಾಶಿಗೆ ಹೋಗುವನು. ಬುಧನೂ ಶತ್ರು ರಾಶಿಗೆ ಹೋಗುವನು. ಕುಜನು ಕೂಡ ಕರ್ಕಾಟಕ ರಾಶಿಯಲ್ಲಿ ಇದ್ದು ನೀಚನಾಗುವನು. ಶುಕ್ರನು ಮಿತ್ರರಾಶಿಯನ್ನು ಪ್ರವೇಶಿಸುವನು. ಗುರುವೂ ಶತ್ರು ರಾಶಿಯಲ್ಲಿ, ಶನಿಯು ಸ್ವರಾಶಿ ಮತ್ತು ವರ್ಗೋತ್ತಮದಲ್ಲಿ ಇರುವುದು ಮನುಷ್ಯರ ಶುಭಾಶುಭ ಚಿಂತನೆಗೆ ಯೋಗ್ಯವಾಗಿದೆ. ಭವಿಷ್ಯದ ಸೂಚನೆಯನ್ನು ಕೊಡುವ ಗ್ರಹಗಳು ಶುಭಫಲವನ್ನೇ ಕೊಡಲಿ ಸಕಲರಿಗೂ. ದುರ್ಗಾದೇವಿಯ ಆರಾಧನೆಯನ್ನು ಮುಂದಿನ ತಿಂಗಳಲ್ಲಿ ವಿಶೇಷವಾಗಿ ಮಾಡಿ, ಆಕೆಯ ದಿವ್ಯಾನುಗ್ರಹಕ್ಕೆ ಪಾತ್ರರಾಗಲು ಅನುಕೂಲವಾದ ಕಾಲವಾಗಿದೆ.
ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ತಿಂಗಳು ಶುಭಪ್ರದವಾಗಿರುವುದು. ರಾಶಿಯ ಅಧಿಪತಿ ನೀಚನಾಗಿ ಚತುರ್ಥದಲ್ಲಿ ಇರುವುದು ಮಾತೃಸುಖದಿಂದ ವಂಚಿತರಾಗುವಿರಿ. ಹಲವಾರು ಒತ್ತಡಗಳನ್ನು ನೀವು ತಡೆದುಕೊಳ್ಳಬೇಕಾಗುವುದು. ರವಿಯು ನೀಚನಾಗಿ ಸಪ್ತಮದಲ್ಲಿ ಇರುವುದರಿಂದ ಸಂಗಾತಿಯ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಬಂಧುಗಳು ನಿಮ್ಮ ಸಂಕಟಕ್ಕೆ ನೆರವಾಗುವುದಿಲ್ಲ. ಆರ್ಥಿಕತೆಯಲ್ಲಿ ತಾಳ್ಮೆಯಿಂದ ವ್ಯವಹರಿಸಿದರೆ ಉತ್ತಮ. ನೀವಾಗಿಯೇ ಯಾರ ಜೊತೆಗೂ ಕಲಹವನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ನಿರೀಕ್ಷಿತ ಸಮಯವು ಬರುವುದು ಎಂಬ ಆಸೆ ಇರಲಿದೆ. ಬಂಧನದಿಂದ ಮುಕ್ತವಾದ ಮನಸ್ಸು ನಿಮ್ಮದಾಗುವುದು. ಒಳ್ಳೆಯ ಕಾರ್ಯಗಳ ಕಡೆಗೆ ಗಮನವಿರಲಿ. ಕಾರ್ತಿಕೇಯನ ಪ್ರಾರ್ಥನೆಯನ್ನು ಪ್ರತಿ ದಿನ ಮಾಡಿ.
ರಾಶಿ ಚಕ್ರದ ಎರಡನೇ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಮಿಶ್ರ ಫಲ. ರಾಶಿಯಲ್ಲಿ ಗುರು, ತೃತೀಯದಲ್ಲಿ ಕುಜ. ಒಂದು ಸ್ವಲ್ಪ ಸಮಾಧಾನ, ನೆಮ್ಮದಿ ಸಿಕ್ಕಿತು ಎನ್ನುವಷ್ಟರಲ್ಲಿ ಮತ್ತೇನಾದರೂ ಸಮಸ್ಯೆ ಸಿಗುವುದು. ಸ್ನೇಹಿತರು ದೂರಾಗುವರು. ಶತ್ರುಗಳ ತಂತ್ರಗಾರಿಕೆ ಹೆಚ್ಚಾಗುವುದು. ಸರ್ಕಾರಿ ಉದ್ಯೋಗಿಗಳಿಗೆ ಸೌಲಭ್ಯಗಳು ಸರಿಯಾಗಿ ಸಿಗದು. ಬಂಧುಗಳ ಪ್ರೀತಿ ಸಿಗುವುದು. ಸಂಗಾತಿಯನ್ನು ನೀವು ಯಾವುದೋ ಲಾಭಕ್ಕೋಸ್ಕರ ಇಷ್ಟಪಡುವಿರಿ. ಮನಸ್ಸಿಲ್ಲದ ಮನಸ್ಸಿನಿಂದ ಉದ್ಯೋಗಕ್ಕೆ ತೆರಳುವಿರಿ. ಆದಾಯವನ್ನು ಸರಿಯಾಗಿಸಿಕೊಳ್ಳಿ. ಬರಬೇಕಾದ ಹಣವು ಸಮಯಕ್ಕೆ ಸರಿಯಾಗಿ ಬಾರದೇ ಹೋದೀತು. ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುವುದು. ಸೂರ್ಯನಾರಾಯಣನನ್ನು ಪ್ರಾತಃಕಾಲದಲ್ಲಿ ಉಪಾಸನೆ ಮಾಡಿ.
ಇದು ಅಕ್ಟೋಬರ್ ತಿಂಗಳಾಗಿದ್ದು, ರಾಶಿ ಚಕ್ರದ ಮೂರನೇ ರಾಶಿಯವರಿಗೆ ಅಶುಭ. ರಾಶಿಯ ಅಧಿಪತಿ ಷಷ್ಠಸ್ಥಾನಕ್ಕೆ ಹೋಗುವನು. ಶುಕ್ರನೂ ಈ ತಿಂಗಳ ಮಧ್ಯದಲ್ಲಿ ಅಲ್ಲಿಯೇ ಇರುವನು. ದ್ವೇಷ ಸ್ವಭಾವವು ಹೆಚ್ಚಾಗುವುದು. ಸೇಂಗಾ ನಡುವಣ ಕಲಹದಿಂದ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುವುದು. ಕುಟುಂಬದ ಪೂರ್ಣ ನೆಮ್ಮದಿಯು ನಿಮಗೆ ಸಿಗಲಾರದು. ನಿಮ್ಮ ಮಾತು ಸುಳ್ಳಾಗುವುದು. ನಂಬಿಕೆ ಬರುವಂತಹ ಮಾತುಗಳನ್ನು ಆಡಿದರೂ ನಂಬಿಕೆ ಬರುವುದು ಕಷ್ಟ. ಮಕ್ಕಳ ವಿಚಾರದಲ್ಲಿ ಉದ್ವೇಗ, ಬೇಸರವು ಇರುವುದು. ಶೈಕ್ಷಣಿಕವಾಗಿ ನೀವು ಹಿಂದುಳಿಯಬೇಕಾಗುವುದು. ಉದ್ಯೋಗವು ನಿಮಗೆ ಬೇಸರವನ್ನು ಉಂಟುಮಾಡಿ, ತ್ಯಜಿಸುವ ಮಾನಸಿಕತೆಯನ್ನು ಹೊಂದುವಿರಿ. ಲಕ್ಷ್ಮೀನಾರಾಯಣರನ್ನು ಪೂಜಿಸಿ. ಸತ್ಪಾತ್ರರಿಗೆ ದೋಷನಿವೃತ್ತಿಗೆ ದಾನ ಮಾಡಿ.
ಅಕ್ಟೋಬರ್ ತಿಂಗಳಲ್ಲಿ ನಿಮಗೆ ಶುಭಫಲವಿದ್ದರೂ ಅದನ್ನು ಅನುಭವಿಸಲು ಕಷ್ಟವಾಗುವುದು. ರಾಶಿಯಲ್ಲಿ ಕುಜನು ನೀಚನಾಗಿದ್ದ ಕಾರಣ ಮನಸ್ಸು ಅದಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುವುದು. ಸಿಟ್ಟು ಹೆಚ್ಚಾಗಲಿದೆ. ಯಾರ ಒಳ್ಳೆಯ ಮಾತನ್ನೂ ಕೇಳುವ ಸ್ಥಿತಿಯನ್ನು ನೀವು ದಾಟಿಹೋಗಿರುವಿರಿ. ತಂದೆಯ ಜೊತೆಗೆ ವೈಮನಸ್ಯ ಕಾಣಿಸುವುದು. ಕೃತಕತೆಯಿಂದ ನೀವು ಇರುವಿರಿ. ಅಷ್ಟಮದಲ್ಲಿ ಶನಿಯು ಆರೋಗ್ಯದ ಮೇಲೆ ನಿಮಗೆ ಕಾಳಜಿ ಇಲ್ಲದಂತೆ ಮಾಡುವನು. ನವಮದಲ್ಲಿ ರಾಹುವು ನಿಮ್ಮ ಯೋಗ್ಯತೆಯನ್ನು ಕಡಿಮೆ ಮಾಡುವನು. ನೀವು ಅಂದುಕೊಂಡಷ್ಟು ಸುಲಭವಾಗಿ ಯಾರೂ ಕೆಲಸವನ್ನು ಮಾಡಿಕೊಡರು. ಸುಬ್ರಹ್ಮಣ್ಯನ ದೇಗುಲಕ್ಕೆ ಹೋಗಿ ಪ್ರಾರ್ಥಿಸಿ.
ರಾಶಿ ಚಕ್ರದ ಐದನೇ ರಾಶಿಯವರಿಗೆ ಅಕ್ಟೋಬರ್ ತಿಂಗಳು ಮಿಶ್ರಫಲವನ್ನು ಕೊಡುವುದು. ರಾಶಿಯ ಅಧಿಪತಿ ತೃತೀಯದಲ್ಲಿ ಇದ್ದು ನೀಚನಾಗಿರುವನು. ನಿಮ್ಮ ಪೂರ್ವ ಯೋಜಿತ ಕಾರ್ಯಗಳು ಆರಂಭವೇ ಆಗದು. ಒಂದೊಮ್ಮೆ ಆಗಿದ್ದರೆ, ಅರ್ಧಕ್ಕೆ ಕಾರಣಾಂತರಗಳಿಂದ ನಿಲ್ಲುವುದು. ಕೌಟುಂಬಿಕ ಸೌಖ್ಯವು ನಿಮ್ಮ ದುಗುಡಗಳನ್ನು ಕಡಿಮೆ ಮಾಡುವುದು. ಸ್ನೇಹಿತರು ದೂರಾಗುವ ಸಾಧ್ಯತೆ ಇದೆ. ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಿ. ಮಾರಣಾಂತಿಕ ನೋವುಗಳು ನಿಮಗೆ ಆಗುವುದು. ಬಂಧುಗಳ ಗಮನಾಗಮನವು ಅಧಿಕವಾಗಿರುವುದು. ಉದ್ಯಮವನ್ನು ವಿಸ್ತರಿಸುವ ಬಗ್ಗೆ ಮಾರ್ಗದರ್ಶನ ಸಿಗಿವುದು. ಸೂರ್ಯಾಷ್ಟಕವನ್ನು ಪಠಿಸಿ, ಆರೋಗ್ಯವನ್ನು ಸ್ಥಿರವಾಗಿಸಿಕೊಳ್ಳಿ.
ಇದು ಅಕ್ಟೋಬರ್ ತಿಂಗಳಾಗಿದ್ದು ನಿಮಗೆ ಶುಭಫಲವು ಹೆಚ್ಚು ಇರುವುದು. ಬುಧನು ಈ ತಿಂಗಳಲ್ಲಿ ಸ್ವಕ್ಷೇತ್ರದಲ್ಲಿ ಇದ್ದು ಅನಂತರ ದ್ವಿತೀಯ ಸ್ಥಾನಕ್ಕೆ ಹೋಗುವನು. ಮಾತನ್ನು ಬಹಳ ಸುಂದರವಾಗಿ ಆಡುವಿರಿ. ಮಾತಿನಿಂದಲೇ ಕೆಲಸವನ್ನು ಸಾಧಿಸಿಕೊಳ್ಳುವಿರಿ. ದ್ವಿತೀಯದಲ್ಲಿ ಸೂರ್ಯನು ಆತ್ಮಬಲವನ್ನು ಕಡಿಮೆ ಮಾಡುವನು. ಯಾರ ಪ್ರೋತ್ಸವಿದ್ದರೂ ಒಳಗೇ ನಿಮಗೆ ಅಧೈರ್ಯ ಕಾಡುವುದು. ತಂತ್ರಜ್ಞರಿಗೆ ಸಂಕಟ ಬರುವುದು. ಸಂಗಾತಿಯ ಬಗ್ಗೆ ಪೂರ್ವಾಗ್ರಹ ಬುದ್ಧಿಯಿಂದ ಮಾತನಾಡುವಿರಿ. ನವಮದಲ್ಲಿರುವ ಗುರುವು ನಿಮ್ಮ ಸಂಕಟಗಳ ಪ್ರಮಾಣವನ್ನು ಕಡಿಮೆ ಮಾಡುವನು. ಒತ್ತಡದಿಂದ ಇದ್ದರೆ ಮಾತ್ರ ಕೆಲಸಗಳು ಮುಂದುವರಿಯುವುದು. ಯಾರ ಮುಂದೂ ಆತ್ಮಪ್ರಶಂಸೆ ಬೇಡ. ಸೀತಾಸಹಿತನಾದ ಕೋದಂಡರಾಮನ ಪ್ರಾಚೀನ ದೇವಾಲಯಕ್ಕೆ ಹೋಗಿ ಅರ್ಚಿಸಿ.
ಅಕ್ಟೋಬರ್ ತಿಂಗಳಲ್ಲಿ ಏಲನೇ ರಾಶಿಯವರಿಗೆ ಅಶುಭಫಲವು ಇರುವುದು. ನಿಮ್ಮ ರಾಶಿಯಲ್ಲಿ ರವಿಯು ನೀಚನಾಗಿರುವನು. ದ್ವಿತೀಯ ಹಾಗೂ ಸಪ್ತಮಾಧಿಪತಿಯು ದಶಮದಲ್ಲಿ ಇದ್ದಾನೆ. ರಾಶಿಯ ಅಧಿಪತಿ ದ್ವಿತೀಯದಲ್ಲಿ ಬುಧನ ಜೊತೆಯಾಗಿರುವನು. ಸಂಗಾತಿಯ ಕಾರಣದಿಂದ ಉದ್ಯೋಗದಲ್ಲಿ ತೊಂದರೆ ಬರುವುದು. ದೇಹಬಾಧೆಯಿಂದ ಈ ತಿಂಗಳು ಬಳಲಬೇಕಾಗುವುದು. ಪ್ರೇಮದಲ್ಲಿ ಇದ್ದರೆ ನಿಮಗೆ ಖರ್ಚು ಹೆಚ್ಚಾಗುವುದು. ಷಷ್ಠದಲ್ಲಿ ರಾಹವು ನಿಮ್ಮ ಶತ್ರುತ್ವ ಮನೋಭಾವವನ್ನು ಕಡಿಮೆ ಮಾಡುವನು. ಮಕ್ಕಳ ಕಾರಣದಿಂದ ವಿದೇಶಪ್ರವಾಸದ ಸಾಧ್ಯತೆ ಇದೆ. ಬೇಡದ ವಿಚಾರಗಳನ್ನು ಆಲೋಚಿಸಿ, ಸರಿಯಾದ ಆಯ್ಕೆ ಮಾಡದೇ ಹಣವನ್ನು ಕಳೆದುಕೊಳ್ಳುವಿರಿ. ಲಕ್ಷ್ಮೀ ನಾರಾಯಣರ ಪ್ರಸಾದವು ಸಿದ್ಧಿಸುವಂತೆ ಆರಾಧಿಸಿ.
ಈ ತಿಂಗಳಲ್ಲಿ ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಶುಭಾಶುಭ ಫಲ. ದಶಮಾಧಿಪತಿ ರವಿಯು ದ್ವಾದಶದಲ್ಲಿ ಇರುವುದು, ಅದರಲ್ಲಿಯೂ ಶತ್ರುಕ್ಷೇತ್ರದಲ್ಲಿ ಇದ್ದಾನೆ. ರಾಶಿಯ ಅಧಿಪತಿ ನವಮದಲ್ಲಿ ನೀಚನಾಗಿರುವನು. ಬುಧ ಹಾಗು ಶುಕ್ರರು ಈ ರಾಶಿಯನ್ನು ಪ್ರವೇಶಿಸುವರು. ದೈಹಿಕ ಅರೋಗ್ಯವು ಕುಂಠಿತವಾಗುವುದು. ಪ್ರೇಮಜೀವನವನ್ನು ಪ್ರವೇಶಿಸುವಿರಿ. ಸರ್ಕಾರದ ಅಧಿಕಾರಿಗಳಿಗೆ ಸಂಕಟವು ಬರುವುದು. ಮೇಲಿನವರು ನಿಮ್ಮನ್ನು ತಾತ್ಸಾರವಾಗಿ ಕಾಣುವರು. ಮಾನಸಿಕವಾಗಿ ಗಟ್ಟಿಯಾಗಬೇಕಾಗುವುದು. ಸಂತಾನಕ್ಕೆ ಸಂಬಂಧಿಸಿದಂತೆ ಔಷಧೋಪಚಾರವನ್ನು ವೈದ್ಯರ ಸಲಹೆಯನ್ನು ಪಡೆದು ಮಾಡಿರಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಸೋಲಾಗುವುದು. ಆದರೆ ಅದದ್ದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ನೆಮ್ಮದಿ ಇರುವುದು. ಗುರುವಿನ ಸ್ಥಳದಲ್ಲಿದ್ದು ಕಷ್ಟವನ್ನು ದೂರಮಾಡಿಕೊಳ್ಳುವಿರಿ.
ಅಕ್ಟೋಬರ್ ತಿಂಗಳಲ್ಲಿ ನಿಮಗೆ ಅಶುಭಗಳು ಅಧಿಕವಾಗಿ ಕಾಣಿಸುವುದು. ಕುಜನು ನೀಚನಾಗಿ ಅಷ್ಟಮದಲ್ಲಿ ಇರುವುದರಿಂದ ನಿಮಗೂ ಮಕ್ಕಳಿಗೂ ಉದರ ಹಾಗಯು ಶಿರೋಭಾಗದಲ್ಲಿ, ತೊಡೆಯಲ್ಲಿ ನೋವುಗಳು ಕಾಣಿಸುವುವು. ಧೈರ್ಯವು ಕಡಿಮೆಯಾಗುವುದು. ಎಲ್ಲ ವಿಚಾರದಲ್ಲಿಯೂ ಭಯಪಡುವಿರಿ. ಇನ್ನು ನವಮಾಧಿಪತಿಯು ನೀಚನಾಗಿ ಏಕಾದಶದಲ್ಲಿ ಇರುವನು. ತಂದೆಯ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯವು ಬರದು. ಬಂಧುಗಳಿಂದ ಒತ್ತಡವು ಬರುವುದು. ಉದ್ಯೋಗದಲ್ಲಿ ಬಿಡುವಿಲ್ಲದ ಕಾರ್ಯಗಳು ನಿಮಗೆ ಸಾಕೆನಿಸುವುದು. ನಿಮ್ಮನ್ನು ಕೆಲಸದಿಂದ ತೆಗೆಯುವ ಸಂದರ್ಭವೂ ಬರಬಹುದು. ತಪ್ಪುಗಳನ್ನು ಮಾಡದೇ ವಿನಯದಿಂದ ಮಡೆಯಬೇಕಾಗುವುದು. ಗುರು ಚರಿತ್ರೆಯು ನಿಮಗೆ ಮನೋಬಲವನ್ನು ಕೊಡುವುದು.
ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ಅಕ್ಟೋಬರ್ ತಿಂಗಳಲ್ಲಿ ಶುಭಾಶುಭಗಳು ಮಿಶ್ರವಾಗಿ ಸಿಗಲಿವೆ. ಮಕರದಲ್ಲಿ ಉಚ್ಚನಾಗಿರುವ ಕುಜ ಈ ತಿಂಗಳಿನ ನೀಚಸ್ಥಾನಕ್ಕೆ ಹೋಗಿದ್ದಾನೆ. ಸಂಗಾತಿಯ ಬಗ್ಗೆ ನಿಮಗೆ ಎಚ್ಚರಿಕೆ ಬೇಕು. ಸಂಗಾತಿಯಿಂದ ನಿಮಗೆ ಸಂಕಷ್ಟಗಳು ಬರುವುದು. ವಿದೇಶದಲ್ಲಿ ಇರುವವರಿಗೆ ಜಾಗರೂಕತೆ ಬೇಕು. ಸೂರ್ಯನು ನೀಚನಾದ ಕಾರಣ ನಿಮ್ಮ ಕಾರ್ಯಗಳು ವೇಗವಾಗಿ ಮುಕ್ತಯವಾಗದು. ಏನಾದರೂ ಒಂದೊಂದು ಕಾರಣದಿಂದ ಮುಂದೆ ಹೋಗುವುದು. ಬೋಧಕರಿಗೆ ಕೌಶಲವು ಸರಿಯಾಗಿ ಗೊತ್ತಾಗುವುದು. ಭೂಮಿಯ ವ್ಯವಹಾರದಲ್ಲಿ ಆಸ್ತಿಯನ್ನು ಕಳಿಸುವಿರಿ. ನಿಮ್ಮ ಕೆಲಸಕ್ಕೆ ಅಂದುಕೊಂಡಷ್ಟು ಯಶಸ್ಸು ಸಿಗದು. ಗುರುವು ನಿಮಗೆ ಅನುಕೂಲನಾಗಿರುವ ಕಾರಣ ಸಂಕಟ ಬಂದಾಗ ದಾರಿಗಳು ತಾನಾಗಿಯೇ ತೆರೆದುಕೊಳ್ಳುವುವು. ಸರಿಯಾದ ಆಯ್ಕೆಯನ್ನು ಮಾಡಿಕೊಂಡು ಮುನ್ನಡೆಯಿರಿ.
ಈ ತಿಂಗಳಲ್ಲಿ ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಮಿಶ್ರಫಲ. ಸಾಡೇ ಸಾಥ್ ನ ಮಧ್ಯದ ಅವಧಿಯಲ್ಲಿ ನೀಡಿದ್ದರೂ ಶನಿಯ ರಾಶಿಯೇ ಆಗಿದ್ದು ಅವನಿಂದ ನಿಮಗೆ ದುಃಖವೆನಿಸದರೂ ಪರಿಣಾಮ ಶುಭವಾಗಿಯೇ ಇರುವುದು. ಷಷ್ಠದಲ್ಲಿ ಕುಜನು ನೀಚನಾಗಿ ನಿಮ್ಮ ಶತ್ರುಗಳಿಂದ ಏನಾದರೂ ಕಿರಿಕಿರಿಯನ್ನು ಮಾಡಿಸುವನು. ದ್ವಿತೀಯ ಹಾಗೂ ಏಕಾದಶದ ಅಧಿಪತಿಯಾದ ಗುರುವು ಚತುರ್ಥದಲ್ಲಿ ಇರುವುದು ನಿಮಗೆ ಸ್ವಲ್ಪಮಟ್ಟಿಗೆ ಉಪಯೋಗವಿದೆ. ಆರ್ಥಿಕವಾಗಿ ದುರ್ಬಲರಾದರೂ ಒಂದಿಲ್ಲೊಂದು ರೀತಿಯಲ್ಲಿ ಹಣವು ನಿಮ್ಮ ಕೈಸೇರುವುದು. ಉದ್ಯೋಗದಲ್ಲಿ ನಿಮಗೆ ಗೊಂದಲಗಳು ಕಾಣಿಸಿಕೊಳ್ಳಬಹುದು. ನವಮದಲ್ಲಿ ಸೂರ್ಯನು ನೀಚನಾದ ಕಾರಣ ಯಾವುದೋ ದುರುದ್ದೇಶದಿಂದ ನಿಮಗೆ ಗೌರವಗಳು ಸಿಗುವುದು. ನೀವೇ ಗೌರವವನ್ನು ಕೇಳಿ ಪಡೆಯುವಿರಿ. ಶನಿಮಹಾತ್ಮನಿಗೆ ಶುದ್ಧ ತೈಲದ ದೀಪವನ್ನು ಬೆಳಗಿಸಿ.
ಅಕ್ಟೋಬರ್ ತಿಂಗಳಲ್ಲಿ ನಿಮಗೆ ಅಶುಭವು ಇರಲಿವೆ. ದ್ವಿತೀಯದ ಅಧಿಪತಿ ನೀಚನಾಗಿ ನಿಮ್ಮ ಕೌಟುಂಬಿಕ ಹಾಗೂ ಆರ್ಥಿಕ ವ್ಯವಸ್ಥೆಗೆ ತೊಂದರೆ ಕೊಡುವನು. ಒಂದೊಂದಾಗಿಯೇ ಬರುವ ಒತ್ತಡ, ಅನಿರೀಕ್ಷಿತ ಘಟನೆಗಳು ನಿಮ್ಮನ್ನು ಹೈರಾಣ ಮಾಡುವುದು. ಷಷ್ಠದ ಅಧಿಪತಿಯೂ ಅಷ್ಟಮದಲ್ಲಿ ನೀಚನಾಗಿರುವನು. ತಂದೆಯ ವಿಚಾರದಲ್ಲಿ, ಸರ್ಕಾರದ ಕಾರ್ಯಗಳು ಸರಿಯಾಗಿ ಆಗದೇ ಓಡಾಟಗಳನ್ನು ಹೆಚ್ಚು ಮಾಡಿಕೊಂಡು ಭ್ರಾಂತರಾಗುವಿರಿ. ಗುರುವೂ ಅನನುಕೂಲನಾಗಿದ್ದು ಈ ತಿಂಗಳು ಅಧಿಕ ಹಿನ್ನಡೆಯನ್ನು ಪಡೆಯುವಿರಿ. ತಾಯಿ ಕಡೆಯಿಂದ ಸಣ್ಣ ಸಹಕಾರ, ಧೈರ್ಯದ ಮಾತುಗಳು ನಿಮಗೆ ಸಿಕ್ಕಿ, ಭವಿಷ್ಯದಲ್ಲಿ ಗಟ್ಟಿಯಾಗುವ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಕುಲದೇವರ ಬಳಿ ಹೋಗಿ ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿ. ದಾರಿಯು ತಾನಾಗಿಯೇ ತೆರೆದುಕೊಳ್ಳುವುದು.
-ಲೋಹಿತ ಹೆಬ್ಬಾರ್, ಇಡುವಾಣಿ – 8762924271 (what’s app only)
Published On - 11:46 am, Wed, 25 September 24